ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಲಭೂಷಣ್‌ ಜಾಧವ್‌ ಹಿಂದೂಸ್ತಾನದ ಪುತ್ರ : ಸುಷ್ಮಾ ಸ್ವರಾಜ್

Last Updated 11 ಏಪ್ರಿಲ್ 2017, 10:58 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ, ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಕುಲಭೂಷಣ್‌ ಜಾಧವ್‌ ಅವರಿಗೆ ನ್ಯಾಯ ಒದಗಿಸಲು ಅಗತ್ಯ ನಡೆ ಸ್ವೀಕರಿಸಲಾಗುವುದು ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭರವಸೆ ನೀಡಿಡಿದ್ದಾರೆ.

ಪಾಕಿಸ್ತಾನದಲ್ಲಿ ಸೆರೆಯಲ್ಲಿರುವ ಕುಲಭೂಷಣ್‌ ಜಾಧವ್‌ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಖಂಡಿಸಿದ ಸುಷ್ಮಾ, ಪಾಕಿಸ್ತಾನವು ಮರಣ ದಂಡನೆ ಜಾರಿಗೊಳಿಸಲು ಮುಂದಾದರೆ ಉಭಯ ರಾಷ್ಟ್ರಗಳ ಮೈತ್ರಿ ಮೇಲೆ ಇದು ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕುಲಭೂಷಣ್‌ ಜಾಧವ್‌ ಅವರು ತಪ್ಪು ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ, ಪಾಕಿಸ್ತಾನ ಈಗ ಮಾಡಲು ಮುಂದಾಗಿರುವುದು ‘ಪೂರ್ವಯೋಜಿತ ಕೊಲೆ’ ಎಂದು ಸುಷ್ಮಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಜಾಧವ್ ಅವರು ಹಿಂದೂಸ್ತಾನದ ಪುತ್ರ, ಅವರನ್ನು ಕಾಪಾಡಲು ಭಾರತ ಸರ್ಕಾರ ಬದ್ಧವಾಗಿದೆ. ಒಂದು ವೇಳೆ ಪಾಕಿಸ್ತಾನ ಜಾಧವ್ ಅವರಿಗೆ ಮರಣದಂಡನೆ ವಿಧಿಸಿದರೆ, ಮುಂದಿನ ಪರಿಣಾಮಗಳನ್ನು ಪಾಕ್ ಎದುರಿಸಬೇಕಾಗುತ್ತದೆ ಎಂದು ಸುಷ್ಮಾ ಗುಡುಗಿದ್ದಾರೆ.

ಜಾಧವ್‌ ಅವರನ್ನು 2016ರ ಮಾರ್ಚ್‌ 3ರಂದು ಭದ್ರತಾ ಅಧಿಕಾರಿಗಳು ಬಲೂಚಿಸ್ತಾನದಲ್ಲಿ ಬಂಧಿಸಿದ್ದರು ಎಂದು ಪಾಕಿಸ್ತಾನ ಹೇಳುತ್ತಿದೆ. ಆದರೆ  ಅವರು ಪಾಕಿಸ್ತಾನಕ್ಕೆ ಹೇಗೆ ತಲುಪಿದರು ಮತ್ತು ಅವರು ಅಲ್ಲಿ ಹೇಗಿದ್ದರು ಎಂಬ ಬಗ್ಗೆ ನಂಬಿಕೆ ಬರುವ ಯಾವುದೇ ವಿವರಣೆಯನ್ನು ಪಾಕಿಸ್ತಾನ ನೀಡಿಲ್ಲ.

[related]

ಜಾಧವ್‌ ಅವರು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಎಂದು ಭಾರತ ದೃಢಪಡಿಸಿತ್ತು. ಆದರೆ ಸರ್ಕಾರದೊಂದಿಗೆ ಅವರಿಗೆ ಯಾವುದೇ ಸಂಪರ್ಕವಿಲ್ಲ ಎಂದು ಕೂಡ ಹೇಳಿತ್ತು.

‘ಭಾರತದ ಗುಪ್ತಚರ ಸಂಸ್ಥೆ ‘ರಾ’ ಪರವಾಗಿ ಬೇಹುಗಾರಿಕಾ ಕೆಲಸಗಳಲ್ಲಿ ತೊಡಗಿದ್ದ ಹಾಗೂ ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಕ್ಕಾಗಿ ಮರಣದಂಡನೆ ವಿಧಿಸಲಾಗಿದೆ. ಅವರ ವಿರುದ್ಧದ ಎಲ್ಲ ಆರೋಪಗಳೂ ಸಾಬೀತಾಗಿವೆ’ ಎಂದು ಪಾಕಿಸ್ತಾನದ ಸೇನೆ ಮುಖ್ಯಸ್ಥ ಜ. ಕಮರ್‌ ಜಾವೇದ್‌ ಬಾಜ್ವಾ ಹೇಳಿದ್ದಾರೆ.

ಸಂಸತ್ತಿನಲ್ಲಿ ಖಂಡನೆ:  ಕುಲಭೂಷಣ್‌ ಜಾಧವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಮರಣದಂಡನೆ ವಿಧಿಸಿರುವುದನ್ನು ಸಂಸತ್ತಿನಲ್ಲಿ ಖಂಡಿಸಲಾಗಿದೆ.

ಈ ವಿಷಯದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾದ ಜಾಧವ್ ಅವರನ್ನು ಮಾರ್ಚ್ 2016ರಂದು ಪಾಕಿಸ್ತಾನದ ಭದ್ರತಾ ಸಂಸ್ಥೆ ಅಪಹರಿಸಿತ್ತು. ಅಂದ ಹಾಗೆ ಭಾರತದ ಮಾನ್ಯತೆ ಪಡೆದ ಪಾಸ್‍ಪೋರ್ಟ್ ಹೊಂದಿರುವ ವ್ಯಕ್ತಿ ಬೇಹುಗಾರ ಆಗಲು ಹೇಗೆ ಸಾಧ್ಯ? ಎಂದು ಸಿಂಗ್ ಪ್ರಶ್ನಿಸಿದ್ದಾರೆ.

ಜಾಧವ್ ಅವರು ತೆಹರನ್‍ನಲ್ಲಿ ನೆಲೆಸಿದ್ದು, ಇರಾನ್‍ನ ವ್ಯಕ್ತಿಯೊಬ್ಬರ ಜತೆಗೂಡಿ ವ್ಯವಹಾರ ಮಾಡುತ್ತಿದ್ದಾರೆ. ಭಾರತ ಸರ್ಕಾರ ಜಾಧವ್ ಅವರನ್ನು ಕಾಪಾಡಲು ಬದ್ಧವಾಗಿದೆ ಎಂದು ಗೃಹ ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT