ಗಜೇಂದ್ರಗಡ

ಕೃಷಿ ಹೊಂಡದಿಂದ ಹೊರಸೂಸಿದ ನೀರು

ಭೂಮಿ ಕಾಯ್ದ ಹಂಚಿನಂತಾಗಿ, ಹನಿ ನೀರಿಗೂ ತತ್ವಾರ ಉಂಟಾದ ಈ ಬೇಸಿಗೆಯಲ್ಲಿಯೂ ಕೃಷಿ ಹೊಂಡದಲ್ಲಿ ನೀರಿನ ಝರಿಯೊಂದು ಹರಿದು ಈ ಭಾಗದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ

ಕೃಷಿ ಹೊಂಡದಿಂದ ಹೊರಸೂಸಿದ ನೀರು

ಗಜೇಂದ್ರಗಡ: ಭೂಮಿ ಕಾಯ್ದ ಹಂಚಿನಂತಾಗಿ, ಹನಿ ನೀರಿಗೂ ತತ್ವಾರ ಉಂಟಾದ ಈ ಬೇಸಿಗೆಯಲ್ಲಿಯೂ ಕೃಷಿ ಹೊಂಡದಲ್ಲಿ ನೀರಿನ ಝರಿಯೊಂದು ಹರಿದು ಈ ಭಾಗದ ಜನರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಪಟ್ಟಣದಿಂದ 4–5 ಕಿ.ಮೀ ದೂರದಲ್ಲಿರುವ ರಾಂಪೂರ ಪಂಚಾಯ್ತಿಗೆ ಸೇರಿದ ಹಿರೇಕೊಪ್ಪ ಗ್ರಾಮದಿಂದ ಅನತಿ ದೂರದಲ್ಲಿರುವ ಬರಡಾದ ಸುಮಾರು 7 ಎಕರೆ ಮಸಾರಿ ಹೊಲದಲ್ಲಿ ಈಗ ನೀರು ಕಾಣಿಸಿಕೊಂಡಿದೆ.

ಹಿರೇಕೊಪ್ಪ ಗ್ರಾಮದ ಶರಣಪ್ಪ ಬಳೂಟಗಿ ಕೃಷಿ ಇಲಾಖೆಯ ಸಹಕಾರದೊಂದಿಗೆ, ಮುಂದೆ ಮಳೆಯಾದಾಗ ನೀರು ನಿಲ್ಲುವಂತೆ ಮಾಡಲು ಸುಮಾರು 12 ದಿನಗಳ ಹಿಂದೆ ಕೃಷಿ ಹೊಂಡ ನಿರ್ಮಿಸಲು ಮುಂದಾದರು.

ಸಂಪೂರ್ಣವಾಗಿ ಬೆಣಚುಕಲ್ಲಿನಿಂದ ಕೂಡಿದ ಈ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಲು ಸುಮಾರು 10 ಅಡಿ ಆಳವನ್ನು ತೆಗೆಯುತ್ತಿರುವಂತೆ ಸಣ್ಣಗೆ ನೀರು ಜಿನುಗಹತ್ತಿತು. ಮೊದಮೊದಲು ಸಹಜವೆಂದು ಸುಮ್ಮನಾದಾಗ, ನೀರು ಬರುವುದು ಹೆಚ್ಚಾಯಿತು. ನೂರಾರು ಅಡಿ ಕೊಳವೆಬಾವಿ ಕೊರೆದರೂ ಬಾರದನೀರು, ಈ ಹೊಂಡದ ಕಲ್ಲು ಸಂದಿನಿಂದ ಒಸರಹತ್ತಿತು.

ಆರಂಭದಲ್ಲಿ  ನೀರು ನಿಧಾನವಾಗಿ ಹೊಂಡದ ಒಂದು ಬದಿಯಿಂದ ಸಂಗ್ರಹಗೊಳ್ಳತೊಡಗಿತು. ತಿಳಿಯಾದ ನೀರು ಹೊರಬರುತ್ತಿದ್ದಂತೆ ಸುತ್ತಲಿನ ಗ್ರಾಮದ ಜನರು ಸಂತಸಗೊಂಡು ಬಾಗಿನವನ್ನೂ ಕೂಡ ಅರ್ಪಿಸಿದರು. ತಾಲ್ಲೂಕಿನ ಅಧಿಕಾರಿಗಳು, ಸುತ್ತಲ ಗ್ರಾಮಸ್ಥರು ಗುಂಪಾಗಿ ಬಂದು ಇದನ್ನು ವೀಕ್ಷಿಸಿ, ನೀರನ್ನು ತುಂಬಿಕೊಂಡು ಹೋಗುತ್ತಿದ್ದಾರೆ ಈ ಕೃಷಿ ಹೊಂಡಕ್ಕೆ ರೋಣ ತಾಲ್ಲೂಕು ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ, ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ತಲಾಟಿ ಶಬ್ಬೀರ ನಿಶಾನದಾರ ಭಾನುವಾರ ಭೇಟಿ ನೀಡಿದರು.

‘ಕೃಷಿ ಹೊಂಡದ ಆಳ ಸುಮಾರು 20 ಅಡಿ ತೆಗೆದರೆ ಇನ್ನಷ್ಟು ನೀರು ಬರುತ್ತದೆ. ಬೆಣಚುಕಲ್ಲಿನ ಬದಿಯಲ್ಲಿ ತೆಗೆಯುತ್ತಿದ್ದ ಕಾರಣ ನೀರಿನ ಝರಿಯೊಂದು ಹೊರಬಂದಿದೆ. ಆದರೂ ಈ ಬೇಸಿಗೆಯಲ್ಲಿ ನೀರು ಬರುತ್ತಿರುವುದು ನಿಜಕ್ಕೂ ಪವಾಡವಾಗಿದೆ’ ಎಂದು ತಹಶೀಲ್ದಾರ್‌ ಶಿವಲಿಂಗಪ್ರಭು ವಾಲಿ ಹೇಳಿದರು.

‘ನಮ್ಮ ಜಮೀನಿನಲ್ಲಿ ಗಂಗಾ ಮಾತೆ ಮೂಡಿದ್ದಾಳೆ. ಎಲ್ಲರೂ ಈ ನೀರನ್ನು ಕುಡಿದರೂ ನಾನು ಆಕೆಯನ್ನು(ನೀರು) ಮಂಗಳವಾರ ಹುಣ್ಣಿಮೆ ದಿನ ಪೂಜೆ ಮಾಡಿ ಕುಡಿಯುತ್ತೇನೆ’ ಎಂದು ಶರಣಪ್ಪನ ಸಹೋದರ ಮಲ್ಲಪ್ಪ ಬಳೂಟಗಿಯವರ ಹೆಂಡತಿ ರುದ್ರಮ್ಮ ಬಳೂಟಗಿ ಹೇಳುತ್ತಾರೆ.ಗ್ರಾಮದ ಜನ, ಅವರ ದನಕರು, ಕುರಿ ಆಡುಗಳ ದಾಹವನ್ನು ತೀರಿಸಲು ಈ ಕೃಷಿ ಹೊಂಡವನ್ನು ಈಗ ಬಳಸುತ್ತಿದ್ದಾರೆ.

Comments