ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆದ ಮಕ್ಕಳ ರಕ್ಷಣಾಧಿಕಾರಿಗಳು

Last Updated 11 ಏಪ್ರಿಲ್ 2017, 11:38 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಕಾಲಿಕ ಮಧ್ಯಪ್ರವೇಶದಿಂದಾಗಿ ಬಾಲ್ಯ ವಿವಾಹವೊಂದನ್ನು ತಡೆಯಲಾಗಿದೆ.ಇಲ್ಲಿನ ಮದಾರಮಡ್ಡಿ ಸರ್ಕಾರಿ ಶಾಲೆ ಬಳಿಯ ರಾಮಪ್ಪ ಉಗರಗೋಳ ಎಂಬುವವರ ಮಗ ಬಸವರಾಜನೊಂದಿಗೆ ಸವದತ್ತಿ ತಾಲ್ಲೂಕಿನ ಉಗರಗೋಳ ಗ್ರಾಮದ ಬಾಲಕಿಯೊಂದಿಗೆ ನಿಶ್ಚಿತಾರ್ಥ ಮುಗಿದು, ಸೋಮವಾರ ವರನ ಸ್ವಗೃಹದಲ್ಲಿ ಮದುವೆ ನಡೆಯಬೇಕಿತ್ತು. 18 ವರ್ಷದೊಳಗಿನ ಬಾಲಕಿ ಜತೆ ಮದುವೆ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರು ವಧು–ವರನ ಪಾಲಕರಿಗೆ ತಿಳಿ ಹೇಳಿ ಮದುವೆ ನಿಲ್ಲಿಸುವಲ್ಲಿ ಸಫಲರಾಗಿದ್ದಾರೆ.ಏ.13ರ ಒಳಗೆ ವಧು–ವರರೊಂದಿಗೆ ರಕ್ಷಣಾ ಘಟಕಕ್ಕೆ ಖುದ್ದು ಹಾಜರಾಗುವಂತೆ ನೋಟಿಸ್‌ ನೀಡಲಾಗಿದೆ.

ವಧುವನ್ನು ಸ್ಥಳಾಂತರಿಸಿದರು: ಇನ್ನೊಂದು ಪ್ರಕರಣದಲ್ಲಿ ಭಾರತಿ ನಗರದ ಪಟ್ಟಣ ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರು ಅಲ್ಲಿಗೆ ದೌಡಾಯಿಸಿದರು.ಅಲ್ಲಿಗೆ ಭೇಟಿ ನೀಡುವ ಹೊತ್ತಿಗೆ ವಧುವನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎನ್ನುವ ಸಂಶಯ ವ್ಯಕ್ತವಾದ ಹಿನ್ನೆಲೆಯಲ್ಲಿ ರಕ್ಷಣಾ ಘಟಕದ ರಕ್ಷಣಾಧಿಕಾರಿ ಎಚ್.ಎಚ್.ಕುಕನೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಪ್ಪಿನಬೆಟಗೇರಿ ಗ್ರಾಮದ ಮಲ್ಲಪ್ಪ ಮಸೂತಿ ಅವರ ಹಿರಿಯ ಮಗ ಮರಬಸಪ್ಪ ಮಸೂತಿ ಜೊತೆಗೆ ಉಣಕಲ್‌ನ ವಧುವಿನೊಂದಿಗೆ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಇದೇ ವೇಳೆ ಕಿರಿಯ ಮಗ ಶ್ರೀಶೈಲನಿಗೂ ದುಬ್ಬದ ಮರಡಿ ಗ್ರಾಮದ ಬಾಲಕಿಯೊಂದಿಗೆ ಅಂದೇ ಮದುವೆ ಮಾಡಲು ನಿಶ್ಚಯಿಸಲಾಗಿತ್ತು ಎಂಬ ಮಾಹಿತಿ ಘಟಕಕ್ಕೆ ಲಭ್ಯವಾಗಿದೆ. ಈ ಬಗ್ಗೆ ಮಾಹಿತಿ ಬಿಟ್ಟುಕೊಡದ ಕುಟುಂಬ ವರ್ಗ ಹಿರಿಯ ಮಗನಿಗೆ ಮಾತ್ರ ಮದುವೆ ಮಾಡಲಾಗಿದೆ ಎಂದರು.

ಕೊನೆಗೆ ಶ್ರೀಶೈಲ ಹಾಗೂ ಆತನೊಂದಿಗೆ ಮದುವೆ ಮಾಡಲಾಗಿರುವ ವಧುವಿನ ಬಗ್ಗೆ ಮಾಹಿತಿ ಪಡೆದುಕೊಂಡ ರಕ್ಷಣಾ ಘಟಕದ ಅಧಿಕಾರಿಗಳು, ಏ.13 ರೊಳಗೆ ಮದುವೆ ಕುರಿತು ನಿಖರ ಪ್ರಮಾಣ ಪತ್ರ ಸಲ್ಲಿಸಬೇಕು ಮತ್ತು ವಧು-ವರನೊಂದಿಗೆ ಖುದ್ದಾಗಿ ಹಾಜರಾಗಬೇಕು ಎಂದು ನೋಟಿಸ್‌ ನೀಡಲಾಗಿದೆ.

‘ಬಾಲ್ಯ ವಿವಾಹ ನಡೆದಿರುವ ಸಂಶಯ ಇದ್ದು, ಈ ಬಗ್ಗೆ ಕುಟುಂಬ ವರ್ಗದವರು ಸಲ್ಲಿಸುವ ಮಾಹಿತಿ, ಅಗತ್ಯ ದಾಖಲಾತಿಗಳ ಮೇಲೆ ಇದು ನಿರ್ಧಾರ ಆಗಲಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆ ವೇಳೆ ನಿಂಗಪ್ಪ ಮಡಿವಾಳರ, ನೂರಜಾನ್ ಕಿಲ್ಲೇದಾರ್, ಶ್ವೇತಾ ಕಿಲ್ಲೇದಾರ, ಮೊಹಮ್ಮದ್‌ ಅಲಿ ತಹಶೀಲ್ದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT