ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಹಿತ, ‘ಒಳ್ಳೆಯತನ’ದ ಕನ್ನಡಕ!

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಒಮ್ಮೆ ಒಬ್ಬ ಗುರು ತನ್ನ ಶಿಷ್ಯರನ್ನು ಪರೀಕ್ಷಿಸಲು ನಿರ್ಧರಿಸಿದ. ಅವನು ಮಾಡಿದ್ದಿಷ್ಟೆ:
ಅರ್ಧ ನೀರು ತುಂಬಿದ ಬಟ್ಟಲನ್ನು ಶಿಷ್ಯರ ಮುಂದಿಟ್ಟ ಗುರು, ಅದರ ಬಗ್ಗೆ ಏನೂ ಹೇಳಲಿಲ್ಲ. ಅದನ್ನು ನೋಡಿದ ಒಬ್ಬಬ್ಬ ಶಿಷ್ಯನೂ ಒಂದೊಂದು ಬಗೆಯಲ್ಲಿ ಪ್ರತಿಕ್ರಿಯಿಸಿದ. ಕೆಲವರು ‘ಅರ್ಧಭಾಗ ಖಾಲಿ ಇದೆಯಲ್ಲಾ’ ಎಂದರೆ, ಇನ್ನು ಕೆಲವರು ‘ಅಬ್ಬಾ! ಅರ್ಧದಷ್ಟು ತುಂಬಿದೆಯಲ್ಲಾ’ ಎಂದರು. ಮತ್ತಷ್ಟು ಜನರು ಏನೂ ಹೇಳದೇ ನಿರ್ಲಿಪ್ತವಾಗಿಯೇ ಇದ್ದರು.

ಇದನ್ನೆಲ್ಲ ಗಮನಿಸಿದ ಗುರು ವಿವರಿಸಿದ್ದು ಹೀಗೆ:

‘‘ಅರ್ಧ ಬಟ್ಟಲನ್ನು ನೋಡಿ ನಿರ್ಲಿಪ್ತರಾಗಿರುವವರು ಸ್ಥಿತಪ್ರಜ್ಞರು. ಇಂಥವರಿಗೆ ಅರ್ಧ ಖಾಲಿ ಇದ್ದರೂ, ಅರ್ಧ ತುಂಬಿದ್ದರೂ ಏನೂ ವ್ಯತ್ಯಾಸವೇ ಆಗುವುದಿಲ್ಲ. ‘ಅರ್ಧ ಭಾಗ ಖಾಲಿ ಇದೆಯಲ್ಲ’ ಎಂದವರು ಅಲ್ಪತೃಪ್ತರು. ಕೊರತೆಯ ಕಡೆಗೇ ಅವರ ಗಮನ.  ಇವರು ಯಾವ ಪರಿಸ್ಥಿತಿಯನ್ನೂ ನಿಭಾಯಿಸಲು ಸಮರ್ಥರಾಗಿರುವುದಿಲ್ಲ. ಎಲ್ಲಾ ವಿಷಯಗಳಿಗೂ ಏನಾದರೊಂದು ಕಿರಿಪಿರಿ ಮಾಡುತ್ತಲೇ ಇರುತ್ತಾರೆ. ಇನ್ನು ‘ಅರ್ಧದಷ್ಟು ತುಂಬಿದೆ’ಯೆಂದು ಯೋಚಿಸುವ ಶಿಷ್ಯರು ತೃಪ್ತ ಮನೋಭಾವದವವರು. ತೃಪ್ತ ಮನಸ್ಥಿತಿ ಇದ್ದರೆ, ಪರಿಸ್ಥಿತಿ ಎಂಥದ್ದಾಗಿದ್ದರೂ ಅದನ್ನು ಸರಿದೂಗಿಸಿಕೊಂಡು ಹೋಗುವ ಛಾತಿ ಅವರಲ್ಲಿರುತ್ತದೆ.’’

ಗುರು ತನ್ನ ಶಿಷ್ಯರನ್ನು ಉದ್ದೇಶಿಸಿದ ಆಡಿದ ಮಾತು ನಮ್ಮ ಮನಸ್ಥಿತಿಯ ಅಳತೆಗೋಲೂ ಆಗಬಲ್ಲದು ಅಲ್ಲವೇ?

ಯಾವ ಸ್ಥಿತಿಯೂ ಸ್ಥಿರವಲ್ಲ. ಜೀವನವೆನ್ನುವುದು ಅಸ್ಥಿರವಾದ ದ್ರವ. ಸ್ಥಿರವಾದ ಘನವಲ್ಲ. ಪರಿಸ್ಥಿತಿ ಯಾವುದೇ ಆಗಿರಲಿ ಬದಲಾವಣೆ ನಿಶ್ಚಿತ. ನಡೆಯುವ ಪ್ರತಿಯೊಂದು ಘಟನೆಯೂ ನಾವು ನೋಡುವ ದೃಷ್ಟಿಕೋನದ ಮೇಲೆ ಅವಲಂಬಿತವಾಗಿರುತ್ತದೆ. ಎಂತಹ ಕೆಟ್ಟ ಸ್ಥಿತಿಯೇ ಆದರೂ ಅದರಲ್ಲಿ ಒಳ್ಳೆಯದನ್ನು ಹುಡುಕುವ ಸ್ವಭಾವವನ್ನು ಬೆಳೆಸಿಕೊಳ್ಳಬೇಕು. ಕೆಟ್ಟದರಲ್ಲೂ ಒಳ್ಳೆಯದನ್ನು ಗ್ರಹಿಸುವ ತರಬೇತಿಯನ್ನು ನಮ್ಮ ಮನಸ್ಸಿಗೆ ಕೊಡಬೇಕು. ಯಾವ ಪರಿಸ್ಥಿತಿಯೂ ಪೂರ್ತಿ ಕೆಟ್ಟದ್ದಾಗಿರುವುದಿಲ್ಲ. ನಾವು ಕೆಟ್ಟದ್ದು ಎಂದು ಕರೆಯುವ ಸನ್ನಿವೇಶದಲ್ಲೂ ಸಕಾರಾತ್ಮಕ ಅಂಶಗಳಿರುತ್ತವೆ. ಕೆಟ್ಟು ಹೋಗಿರುವ ಗಡಿಯಾರ ಕೂಡಾ  ದಿನಕ್ಕೆರಡು ಬಾರಿ ಸರಿಯಾದ ಸಮಯವನ್ನೇ ತೋರಿಸುತ್ತದೆ!

ಪರಿಸ್ಥಿತಿ, ಮನಸ್ಥಿತಿಯ ಕೈಗೊಂಬೆ

ಸಂದರ್ಭ ಯಾವುದೇ ಆಗಿದ್ದರೂ ಅದನ್ನು ನಿಭಾಯಿಸುವುದು ನಮ್ಮ ಯೋಚನಾಲಹರಿಯ ಮೇಲೆ ಆಧಾರವಾಗಿರುತ್ತದೆ. ಪ್ರತಿಯೊಬ್ಬರ ಯೋಚನೆಯೂ ವಿಭಿನ್ನವಾಗಿರುತ್ತದೆ. ಒಂದೇ ಪರಿಸ್ಥಿತಿಯ ಬಗ್ಗೆ ನಾಲ್ಕು ಜನರು ನಾಲ್ಕು ತರಹದ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ ಯೋಚನಾಶಕ್ತಿಯ ನಕ್ಷೆ ಮೇಲೇರುತ್ತಾ ಅಥವಾ ಕೆಳಗಿಳಿಯುತ್ತಾ ಸಾಗುತ್ತಿರುತ್ತದೆ. ಇದು ಆ ಸ್ಥಿತಿಯ ಬಗ್ಗೆ ಯೋಚನೆ ಮಾಡುವವರು ಆ ಸಂದರ್ಭವನ್ನು ಹೇಗೆ ನೋಡುತ್ತಾರೆ ಎಂಬುದನ್ನು ಅವಲಂಬಿಸಿರುತ್ತದೆ.

ಬೇರೆಯವರ ಪರಿಸ್ಥಿತಿಯ ಬಗ್ಗೆ ಮೂರನೆಯವರಾಗಿ ಮಾತನಾಡುವುದು ಸುಲಭ. ಆದರೆ ಅದೇ ಸ್ಥಿತಿಯಲ್ಲಿ ನಾವಿದ್ದಾಗ ಅದನ್ನು ಎದುರಿಸುವುದು ಕಷ್ಟ. ಇಂತಹ ಸನ್ನಿವೇಶದಲ್ಲಿಯೇ ಮನುಷ್ಯನ ಸಹನೆಯ ಪರೀಕ್ಷೆಯಾಗುವುದು. ಸದೃಢ ಮನಸ್ಕರಾಗಿ ಬಂದ ಪರಿಸ್ಥಿತಿಯನ್ನು ಎದುರಿಸುವುದೋ ಅಥವಾ ದುರ್ಬಲ ಮನಸ್ಕರಾಗಿ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುವುದೋ ಎಂಬ ಆಯ್ಕೆ ನಮ್ಮ ಮುಂದಿರುತ್ತದೆ. ಸಂದರ್ಭ ಒಳ್ಳೆಯದಾಗಲೀ ಕೆಟ್ಟದ್ದಾಗಲೀ, ಪರಿಸ್ಥಿತಿಯ ಕೈಗೊಂಬೆಯಾಗದೆ ಅದನ್ನು ಬಂದಂತೆ ಸ್ವೀಕರಿಸುವುದು ಜಾಣತನ.

ಧನಾತ್ಮಕ ಅಂಶದೆಡೆಗೆ ಗಮನ

ಎಂತಹ ಸನ್ನಿವೇಶವಾದರೂ ಅದರಲ್ಲಿರುವ ಧನಾತ್ಮಕ ಅಂಶಗಳನ್ನು ಮಾತ್ರ ಗುರುತಿಸಿ ಅದಕ್ಕೆ ಹೊಂದಿಕೊಳ್ಳುವುದು ಮುಖ್ಯ. ಯಾವುದೇ ಸ್ಥಿತಿಯಾದರೂ ಅದು ಅಪ್ರಯೋಜಕವಾಗಿರುವುದಿಲ್ಲ. ಪರಿಸ್ಥಿತಿ ಚೆನ್ನಾಗಿರಲಿ ಅಥವಾ ಇಲ್ಲದಿರಲಿ, ಅದರಲ್ಲಿರುವ ಋಣಾತ್ಮಕ ಅಂಶಗಳೆಡೆಗೆ ಗಮನ ಹರಿಸದೆ ಅದನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ.

ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಅದು ಇರುವ ಸ್ಥಿತಿಗಿಂತಲೂ ಹೆಚ್ಚಾಗಿ ನಮ್ಮ ಮನಸ್ಸು ಇನ್ನೂ ಕೆಟ್ಟ ಆಲೋಚನೆಗಳನ್ನು ಮಾಡುತ್ತಿರುತ್ತದೆ. ಇದರಿಂದ ಮನಸ್ಸು ಹಾಗೂ ಸನ್ನಿವೇಶ ಎರಡರ ಸ್ಥಿತಿಯೂ ಬಿಗಡಾಯಿಸುತ್ತದೆ. ಇಂತಹ ಸಂದರ್ಭದಲ್ಲಿ ಕೆಟ್ಟ ಆಲೋಚನೆಗಳ ಯೋಚನಾಲಹರಿಯನ್ನು ತುಂಡರಿಸಿ, ನಮಗಿಷ್ಟವಾದ ವಸ್ತು–ವಿಷಯಗಳ ಬಗ್ಗೆ ಯೋಚಿಸಲು ತೊಡಗಬೇಕು. ಹಾಗೆಯೇ ನಿಮಗಿಷ್ಟವಾದ ಕೆಲಸಗಳನ್ನು ಮಾಡಿ. ಅದು ನಿಮ್ಮ ದೈಹಿಕ ಕೆಲಸ ಮಾನಸಿಕ ಸ್ಥಿತಿಯ ಹೊರೆಯನ್ನು ಕಡಿಮೆ ಮಾಡುತ್ತದೆ.

ಪ್ರತಿಯೊಬ್ಬರಿಗೂ ಅವರದೇ ಆದ ಇಷ್ಟಾನಿಷ್ಟಗಳು ಇರುತ್ತವೆ. ಒಬ್ಬರಿಗೆ ಇಷ್ಟವಾದದ್ದು ಮತ್ತೊಬ್ಬರಿಗೆ ಕಷ್ಟವಾಗಬಹುದು. ಕಷ್ಟದ ಸ್ಥಿತಿಯಲ್ಲಿ ಅದರ ಬಗ್ಗೆ ಯೋಚಿಸಿ ಕೊರಗುವುದಕ್ಕಿಂತ, ಮನಸ್ಸೆಂಬ ಸಮುದ್ರದಲ್ಲಿ ಒಳ್ಳೆಯ ಯೋಚನೆಯೆಂಬ ಹಡಗನ್ನೇರಿ ಹೊರಟರೆ ಸಾಕು. ದಡ ತಲುಪುವುದರೊಳಗೆ ಎಂತಹಾ ಸ್ಥಿತಿಯೇ ಆಗಿರಲಿ ಅದು ಕಳೆದುಹೋಗಿರುತ್ತದೆ. ಯಾವ ಪರಿಸ್ಥಿತಿಯೂ ಶಾಶ್ವತವಲ್ಲವೆನ್ನುವುದನ್ನು ನಾವು ಅರಿತುಕೊಳ್ಳಬೇಕು.

ವಿವೇಚನೆಯೇ ಸಾಧನ

ಬೇಕೆಂದಾಗ ಒಳ್ಳೆಯ ಪರಿಸ್ಥಿತಿ ಅಥವಾ ಬೇಡವೆಂದಾಗ ಕೆಟ್ಟ ಪರಿಸ್ಥಿತಿ ಬರುವುದು ನಿಲ್ಲುವುದಿಲ್ಲ. ಕಾಲಚಕ್ರ ತಿರುಗುತ್ತಿರುವಂತೆಯೇ ಎಲ್ಲಾ ಸ್ಥಿತಿಗಳೂ ನಡೆಯುತ್ತಿರುತ್ತವೆ. ಸಂದರ್ಭ ಯಾವುದೇ ಆಗಿರಲಿ, ನಮ್ಮ ಭಾವನೆಗಳು ಹತೋಟಿಯಲ್ಲಿರಬೇಕು. ಅವು ನಮ್ಮ ಬುದ್ಧಿಯ ಮೇಲೆ ಸವಾರಿ ಮಾಡದಂತೆ ನೋಡಿಕೊಳ್ಳಬೇಕು. ವಿವೇಚನೆಯಿಂದ ಯೋಚಿಸಿ ಪರಿಸ್ಥಿತಿಯನ್ನು ಎದುರಿಸಬೇಕು. ಬುದ್ಧ ಹೇಳಿರುವಂತೆ – ಕೆಲವೊಂದು ಪರಿಸ್ಥಿತಿ ನಮ್ಮ ಶಾಂತಿ, ನೆಮ್ಮದಿ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದ್ದರೆ, ಆ ಸ್ಥಿತಿಯಿಂದ ದೂರವಿರುವುದು ಒಳ್ಳೆಯದು.

ಯೋಚನೆಗಳು ಯಾರಿಗೂ ತಪ್ಪಿದ್ದಲ್ಲ. ಚಿಕ್ಕ ಮಕ್ಕಳಿಗೂ  ಅವರದ್ದೇ ಆದ ಆಲೋಚನೆಗಳಿರುತ್ತವೆ. ನಮಗೆ ಮಕ್ಕಳ ಯೋಚನೆಗಳು ಬಾಲಿಶವಾಗಿ ಕಾಣುತ್ತವೆ. ಹಾಗೆಯೇ ನಮ್ಮ ಯೋಚನೆಗಳೂ ಸಹಾ ನಮಗಿಂತ ಪ್ರೌಢವಾಗಿ ಯೋಚಿಸುವವರಿಗೆ ಬಾಲಿಶವಾಗಿ ಕಾಣುತ್ತವಲ್ಲವೇ? ಕೆಲವೊಮ್ಮೆ ನಮ್ಮ ಯೋಚನೆಗಳು ನಮಗೇ ಕ್ಷುಲ್ಲಕವಾಗಿ ಕಾಣಬಹುದು.

ಪ್ರತಿಯೊಂದು ಘಟನೆಯೂ ಮುಗಿದುಹೋದ ನಂತರ ಇಷ್ಟೇನೇ ಅನ್ನಿಸಬಹುದು. ಪ್ರತಿಯೊಬ್ಬರ ಜೀವನದಲ್ಲೂ ಚಿತ್ರ–ವಿಚಿತ್ರವಾದ ಘಟನೆಗಳು ಬರುತ್ತಿರುತ್ತವೆ. ಆದರೆ ಅವನ್ನು ಆತ್ಮವಿಶ್ವಾಸದಿಂದ ಔಚಿತ್ಯಪೂರ್ಣವಾಗಿ ನಿರ್ವಹಿಸುವುದು ಮುಖ್ಯ. ಭಾವುಕರಾಗಿದ್ದಾಗ ಯಾವುದೇ ತರಹದ ತೀರ್ಮಾನವನ್ನೂ ಕೈಗೊಳ್ಳಬಾರದು. ಭಾವನೆಗಳು ಅದುಮಿ ಹಿಡಿದಷ್ಟೂ ಹೆಚ್ಚಾಗುತ್ತವೆ. ಸಾಧ್ಯವಾದರೆ ಆಪ್ತರೊಡನೆ ಹಂಚಿಕೊಳ್ಳುವುದು ಒಳ್ಳೆಯದು.
ನಮ್ಮ ಗಮನವನ್ನು ಸಮಸ್ಯೆಯ ಸುತ್ತವೇ ಗಿರಕಿ ಹೊಡೆಯುವುದನ್ನು ತಪ್ಪಿಸಬೇಕು. ಅದಕ್ಕೆ ಪರಿಹಾರ ಸಿಗುವತ್ತ ಆದಷ್ಟೂ ನಮ್ಮ ಗಮನವನ್ನು ಕೇಂದ್ರೀಕರಿಸಬೇಕು. ಉದಾಹರಣೆಗೆ, ಒಬ್ಬ ವ್ಯಕ್ತಿ ತಾನು ಮಾಡುತ್ತಿರುವ ಕೆಲಸವನ್ನು ಕಳೆದುಕೊಂಡಿರುತ್ತಾನೆ. ಅದು ಯಾಕೆ ಹೋಯಿತು? ಹೇಗೆ ಹೋಯಿತು? ಮುಂತಾಗಿ ಯೋಚಿಸಿ ಆಗಿಹೋಗಿರುವ ಘಟನೆಯ ಬಗ್ಗೆ ಎಷ್ಟೇ ತಲೆ ಬಿಸಿ ಮಾಡಿಕೊಂಡರೂ, ಕಳೆದುಹೋದ ಕಾಲ ಮತ್ತೆ ಬರುವುದಿಲ್ಲ. ಅದರ ಬದಲಿಗೆ ಅದೇ ಶಕ್ತಿಯನ್ನು, ಯುಕ್ತಿಯನ್ನು ಇನ್ನೊಂದು ಕೆಲಸ ಹುಡುಕುವತ್ತ ಹಾಕಿದರೆ ಆಯಿತು. ಕೆಲಸವೂ ಸಿಗುತ್ತದೆ ಮತ್ತು ಶಕ್ತಿಯ ವ್ಯಯವೂ ಆಗುವುದಿಲ್ಲ.

ಕೆಲವೊಮ್ಮೆ ಕೆಟ್ಟ ಪರಿಸ್ಥಿತಿಯಿಂದಲೇ ಒಳ್ಳೆಯದಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಪರಿಸ್ಥಿತಿಯ ಹಿಡಿತದಲ್ಲಿ ನಾವು ಸಿಕ್ಕಿಹಾಕಿಕೊಳ್ಳಬಾರದು. ಬದಲಿಗೆ ಅದನ್ನು ಹೇಗೆ ಸಂಭಾಳಿಸುವುದು ಎಂಬುದನ್ನು ಕಲಿಯಬೇಕು. ಯಾರಾದರೂ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಅವರನ್ನು ಹಿಡಿತದಲ್ಲಿಡಲು ನಮ್ಮಿಂದ ಸಾಧ್ಯವಿಲ್ಲ. ಆದರೆ ನಮ್ಮ ಭಾವನೆಗಳನ್ನು ಹಿಡಿದಿಡಲು ಸಾಧ್ಯವಿದೆಯಲ್ಲವೇ? ಕೆಲವೊಮ್ಮೆ ಕೇಳಿಯೂ ಸುಮ್ಮನಿರಲು ಆಗುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ಮಾತುಗಳನ್ನು ಕೇಳದಿದ್ದರೆ ಆಯಿತು. ಸಕಾರಾತ್ಮಕವಾಗಿ ಚಿಂತಿಸಿ, ತಪ್ಪು ನಮ್ಮದಿದ್ದರೆ ತಿದ್ದಿಕೊಳ್ಳೋಣ. ಇಲ್ಲವೇ ನಿರ್ಲಕ್ಷಿಸೋಣ.
ಪ್ರತಿಯೊಬ್ಬರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಮೊದಲು ನಮ್ಮಿಚ್ಛೆಯಂತೆ ನಡೆದು ನಮ್ಮ ಮೆಚ್ಚಿಗೆಯನ್ನು ಸಂಪಾದಿಸೋಣ. ನಮ್ಮನ್ನು ಇರುವಂತೆಯೇ ಒಪ್ಪಿಕೊಳ್ಳುವ ಜನರ ಮಧ್ಯೆ ಇರೋಣ. ಪ್ರಸ್ತುತ ಪರಿಸ್ಥಿತಿ ಯಾವುದೇ ಇರಲಿ, ಅದು ಸ್ಥಿರವಲ್ಲ. ನಮ್ಮ ಹಿರಿಯರು ಹೇಳುವಂತೆ – ಕೆಟ್ಟದರಲ್ಲೂ ಒಳ್ಳೆಯದನ್ನು ಕಾಣುವ ಮನೋಭಾವವನ್ನು ಬೆಳಸಿಕೊಳ್ಳೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT