ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ರಿಟರ್ನ್ಸ್‌ ಸರಳ ಪ್ರಕ್ರಿಯೆ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಆದಾಯ ತೆರಿಗೆ ವಿವರಗಳನ್ನು (ಐ.ಟಿ ರಿಟರ್ನ್ಸ್‌) ಸಲ್ಲಿಸುವುದು ಭಾರಿ ಕೌಶಲ್ಯದ ಕೆಲಸವೇನೂ ಅಲ್ಲ. ಅದೊಂದು ತುಂಬ ಸರಳ ಪ್ರಕ್ರಿಯೆ. ನಮ್ಮ ವಾರ್ಷಿಕ ಆದಾಯದ ವಿವರಗಳನ್ನು ನಾವೇ ಸಲ್ಲಿಸುವುದು ಹೆಚ್ಚು ಉಪಯುಕ್ತ. ಆ ಬಗ್ಗೆ ಕೆಲ ವಿವರಗಳನ್ನು ತಿಳಿದುಕೊಂಡಿದ್ದರೆ ಈ ಕೆಲಸ ಇನ್ನಷ್ಟು ಸುಲಭವಾಗುತ್ತದೆ.

ವೇತನ ಪಡೆಯುವ ಉದ್ಯೋಗಿಗಳಿಗೆ  ಪದೇ ಪದೇ ಎದುರಾಗುವ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.

1. ಹಣಕಾಸಿನ ವರ್ಷ ಮತ್ತು ಅಂದಾಜು  ವರ್ಷ ಎಂದರೇನು?

ಒಂದು ವರ್ಷದಲ್ಲಿ ನಾವು ಗಳಿಸುವ ಆದಾಯವೇ ಹಣಕಾಸು ವರ್ಷ (financial year).  ತೆರಿಗೆ ಉದ್ದೇಶಕ್ಕೆ ಆದಾಯವನ್ನು ಅಂದಾಜು ಮಾಡುವ ವರ್ಷವನ್ನು  assessment year ಎನ್ನುತ್ತಾರೆ.

ಆದಾಯ ಗಳಿಕೆಯ   ಹಣಕಾಸು ವರ್ಷವು (2016–17)  2016ರ ಏಪ್ರಿಲ್‌ನಿಂದ ಆರಂಭವಾಗಿ 2017ರ ಮಾರ್ಚ್‌ಗೆ  ಮುಕ್ತಾಯವಾಗುತ್ತದೆ. ಈ ಹಣಕಾಸು ವರ್ಷದ ತೆರಿಗೆಯನ್ನು  2017–18ರ ಅಂದಾಜು ವರ್ಷದಲ್ಲಿ  ಲೆಕ್ಕಹಾಕಲಾಗುವುದು.

2. ಒಟ್ಟು ಆದಾಯ ಮತ್ತು ತೆರಿಗೆಗೆ ಒಳಪಡುವ ಆದಾಯ ಎಂದರೇನು?

ಒಟ್ಟು ಸಂಬಳ ಮತ್ತು ಇತರ ಯಾವುದಾದರೂ ಆದಾಯಗಳನ್ನು ಒಳಗೊಂಡಿರುವುದು ಒಟ್ಟು ಆದಾಯವಾಗಿರುತ್ತದೆ. ಆದರೆ, ಯಾವ ಆದಾಯದ ಮೇಲೆ ತೆರಿಗೆಯನ್ನು ಪಾವತಿಸಲಾಗುವುದೋ ಅದು ತೆರಿಗೆಗೆ ಒಳಪಡುವ ಆದಾಯವಾಗಿರುತ್ತದೆ.

ಉದಾಹರಣೆಗೆ, ಉದ್ಯೋಗಿಯೊಬ್ಬ ನಿಗೆ 2016–17ನೇ ಸಾಲಿಗೆ ಸಂಬಳ ಮತ್ತು ಇತರ ಆದಾಯಗಳಿಂದ ₹ 10 ಲಕ್ಷ ದೊರೆಯುತ್ತದೆ ಎಂದು ಭಾವಿಸಿಕೊಳ್ಳೋಣ. ಈ ಮೊತ್ತದಲ್ಲಿ  ₹1.5 ಲಕ್ಷದಷ್ಟು ಹಣವನ್ನು  ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ, ಆಗ ಒಟ್ಟು ಆದಾಯ  ₹10ಲಕ್ಷ ಮತ್ತು ತೆರಿಗೆಗೆ ಒಳಪಡುವ ಆದಾಯ ₹8.5 ಲಕ್ಷವಾಗಿರುತ್ತದೆ.

3. ಯಾವೆಲ್ಲ  ಹೂಡಿಕೆಗಳು ಸೆಕ್ಷನ್‌ 80ಸಿ ಅಡಿಯಲ್ಲಿ ಆದಾಯ ಕಡಿತಕ್ಕೆ ಒಳಪಡುತ್ತವೆ?

ಉದ್ಯೋಗಿಗಳ ಭವಿಷ್ಯ ನಿಧಿಯ ಪಾಲು, ಜೀವ ವಿಮೆ ಪ್ರೀಮಿಯಂ, ಸಾರ್ವಜನಿಕ ಭವಿಷ್ಯ ನಿಧಿ, ಯುಲಿಪ್‌ ಪಾಲಿಸಿ, ಬ್ಯಾಂಕ್‌ಗಳ ನಿಶ್ಚಿತ ಠೇವಣಿಯಲ್ಲಿನ ಹೂಡಿಕೆ, ಷೇರುಗಳಿಗೆ ಸಂಬಂಧಿತ ಉಳಿತಾಯ ಯೋಜನೆ ನಿಧಿಗಳು, ರಾಷ್ಟ್ರೀಯ ಉಳಿತಾಯ ಯೋಜನೆಗಳು, ಗೃಹ ಸಾಲದ ಕಂತುಗಳು, ಮಕ್ಕಳ ಟ್ಯೂಷನ್‌ ಶುಲ್ಕ (ಇಬ್ಬರು ಮಕ್ಕಳಿಗೆ ಅನ್ವಯಿಸುತ್ತದೆ) ಸೆಕ್ಷನ್‌ 80ಸಿ (ಗರಿಷ್ಠ  ₹1.5ಲಕ್ಷದವರೆಗೆ) ಅನ್ವಯಿಸುತ್ತದೆ.

4. ಮನೆ ಬಾಡಿಗೆ ಭತ್ಯೆಗೆ (ಎಚ್‌ಆರ್‌ಎ)  ಸ್ವೀಕರಿಸಿದ ಮೊತ್ತವು ಮನೆಯ ಬಾಡಿಗೆಗೆ ಸರಿದೂಗುವುದೇ?

ಉದ್ಯೋಗಿಯು ಪಾವತಿಸುವ ಮನೆ ಬಾಡಿಗೆಯು ಕೆಲ ನಿಯಮಗಳಿಗೆ ಅನುಗುಣವಾಗಿ ಆದಾಯ ತೆರಿಗೆಯಿಂದ ವಿನಾಯಿತಿಗೆ ಒಳಪಟ್ಟಿರುತ್ತದೆ. ಈ ವಿನಾಯ್ತಿಯು ಇದು ಸೆಕ್ಷನ್‌ 10 (13ಎ)ರ ಅನ್ವಯ ವಾರ್ಷಿಕ ಆದಾಯ, ವಾರ್ಷಿಕ ಬಾಡಿಗೆ ಪಾವತಿ, ಮನೆ ಇರುವ ಪ್ರದೇಶ ಹಾಗೂ ವಾಸ್ತವದಲ್ಲಿ ಸ್ವೀಕರಿಸುವ ಎಚ್‌ಆರ್‌ಎ ಮೊತ್ತದ  ಮೇಲೆ ನಿರ್ಧರಿಸಲಾಗುತ್ತದೆ.

5. ಗೃಹ ಸಾಲಕ್ಕೆ  ಪಾವತಿಸುವ ಬಡ್ಡಿ ವಿನಾಯಿತಿಗೆ ಒಳಪಟ್ಟಿರುತ್ತದೆಯೇ?

1999ರ ಏಪ್ರಿಲ್‌ 1 ಮತ್ತು ಅದರ ನಂತರ ಸಾಲ ಪಡೆದು ಮನೆ  ನಿರ್ಮಿಸಿದ್ದರೆ  ಗೃಹ ಸಾಲದ ಮೇಲಿನ ₹2 ಲಕ್ಷದವರೆಗಿನ ಬಡ್ಡಿ ಪಾವತಿಯು  (ಮನೆಯು ಸ್ವಂತ ಬಳಕೆಗೆ ಇದ್ದರೆ) ತೆರಿಗೆ ವಿನಾಯ್ತಿಗೆ ಒಳಪಟ್ಟಿರುತ್ತದೆ.  

6. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ತೊಡಗಿಸುವ ಹಣ ಆದಾಯ ತೆರಿಗೆ ವಿನಾಯಿತಿಗೆ ಒಳಪಟ್ಟಿದೆಯೇ?

ಆದಾಯ ತೆರಿಗೆ ಇಲಾಖೆಯ 80ಸಿಸಿಡಿ ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪಾವತಿಸುವ ಹಣಕ್ಕೆ ವಿನಾಯಿತಿ ಪಡೆಯಬಹುದು. ಇದು  ವರ್ಷಕ್ಕೆ ₹50 ಸಾವಿರದವರೆಗೆ ಮಾತ್ರ ಪ್ರಯೋಜನಪಡೆದುಕೊಳ್ಳಬಹುದು. ಇದು ಸೆಕ್ಷನ್‌ 80ಸಿ ಜತೆಗೆ ಪಡೆಯುವ ಹೆಚ್ಚುವರಿ ವಿನಾಯಿತಿ ಆಗಿರುತ್ತದೆ.

7. ವೈದ್ಯಕೀಯ ವಿಮೆ ಪಾಲಿಸಿಗಳಿಗೆ ಪಾವತಿಸುವ ಪ್ರಿಮಿಯಂಗಳಿಗೆ ಎಷ್ಟು ಮೊತ್ತದವರೆಗೆ ವಿನಾಯಿತಿ ದೊರೆಯುತ್ತದೆ?

ಆರೋಗ್ಯ ವಿಮೆ ಪಾಲಿಸಿಗಳಿಗೆ  ₹25 ಸಾವಿರದವರೆಗೆ ಪಾವತಿಸುವ ಪ್ರಿಮಿಯಂಗೆ ಸೆಕ್ಷನ್‌ 80 ಡಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರು  ₹30 ಸಾವಿರದವರೆಗಿನ ಮೊತ್ತಕ್ಕೆ ವಿನಾಯಿತಿ ಪಡೆಯಬಹುದು.

8. ಉಳಿತಾಯ ಖಾತೆ (ಎಸ್‌ಬಿ) ಮತ್ತು ನಿಶ್ಚಿತ ಠೇವಣಿ (ಎಫ್‌ಡಿ) ಮೇಲೆ ದೊರೆಯುವ ಬಡ್ಡಿಯೂ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆಯೇ?

ಉಳಿತಾಯ ಖಾತೆಯ ಬಡ್ಡಿಯು  ₹10 ಸಾವಿರ ಮಿತಿ ದಾಟಿದ್ದರೆ ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ, ನಿಶ್ಚಿತ ಠೇವಣಿಯಲ್ಲಿ ಅಸಲು ಎಷ್ಟೇ ಇದ್ದರೂ ಬಡ್ಡಿಯ ಎಲ್ಲ ಮೊತ್ತವೂ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ.

9. ಉನ್ನತ ಶಿಕ್ಷಣಕ್ಕಾಗಿ ಪಡೆಯುವ ಶಿಕ್ಷಣದ ಸಾಲದ ಮೇಲೆ ಪಾವತಿಸುವ ಬಡ್ಡಿ ಆದಾಯ ತೆರಿಗೆಗೆ ಒಳಪಡುತ್ತದೆಯೇ?

ಸ್ವಂತಕ್ಕೆ ಅಥವಾ ಪತ್ನಿ, ಮಕ್ಕಳ ಉನ್ನತ ಶಿಕ್ಷಣ ಉದ್ದೇಶಕ್ಕೆ ಪಡೆಯುವ ಶಿಕ್ಷಣ ಸಾಲದ ಬಡ್ಡಿಗೆ ಸೆಕ್ಷನ್‌ 80 ಇ ಅಡಿಯಲ್ಲಿ ವಿನಾಯಿತಿ ನೀಡಲಾಗಿದೆ.

10. ಆದಾಯ ತೆರಿಗೆ ವಿವರ ಸಲ್ಲಿಸಲು ಯಾವ ಯಾವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು?

ಫಾರಂ 16, ಫಾರಂ 26ಎಎಸ್, ಬಡ್ಡಿ ಪ್ರಮಾಣಪತ್ರ, ಗೃಹ ಸಾಲ ಮತ್ತು ಶೈಕ್ಷಣಿಕ ಸಾಲ, ನಿಶ್ಚಿತ ಠೇವಣಿ ಮೇಲಿನ ಬಡ್ಡಿ ಕುರಿತಾದ ಪ್ರಮಾಣಪತ್ರ, ಬಾಡಿಗೆ ಪಾವತಿಯ ರಶೀದಿ (ವಾರ್ಷಿಕ ಬಾಡಿಗೆ  ₹1ಲಕ್ಷ ದಾಟಿದರೆ ಮನೆ ಮಾಲೀಕನ ಪ್ಯಾನ್‌), ಹೂಡಿಕೆಯ ವಿವರ, ಪ್ರಿಮಿಯಂ ರಶೀದಿಗಳು, ತೆರಿಗೆ ಪಾವತಿಸಿದ ರಶೀದಿಗಳು, ಬಾಡಿಗೆ ಆದಾಯದ ವಿವರಗಳು, ಬ್ಯಾಂಕ್‌ನಿಂದ ಪಡೆದ ಖಾತೆಯ ವಿವರ, ಐಎಫ್‌ಎಸ್‌ಸಿ ಕೋಡ್‌, ಖಾತೆ ಸಂಖ್ಯೆ ವಿವರಗಳು ಬಳಿಯಲ್ಲಿ ಇರಬೇಕು.

11. ಆದಾಯ ತೆರಿಗೆ ವಿವರ ಸಲ್ಲಿಸುವ ಪ್ರಕ್ರಿಯೆಗಳೇನು?

ಇಂಟರ್‌ನೆಟ್‌ ಬ್ಯಾಂಕಿಂಗ್‌ನಲ್ಲಿ ಪುಟವನ್ನು ತೆರೆಯಬೇಕು. ಅಲ್ಲಿ ಇ–ಫೈಲಿಂಗ್‌ ಕಿಂಡಿಯನ್ನು ತೆರೆಯಬೇಕು. ಫಾರಂ–16ರ ಅನ್ವಯದಂತೆ ವಿವರಗಳನ್ನು ಭರ್ತಿ ಮಾಡಬೇಕು.  ವಿವರಗಳನ್ನು ಪರಿಶೀಲಿಸಿದ ನಂತರ ‘ಸಬ್‌ಮಿಟ್‌’ ಬಟನ್‌ ಒತ್ತಬೇಕು. ‘ಆಧಾರ್‌’ ಸಂಖ್ಯೆ ಮೂಲಕವೂ ಪರಿಶೀಲಿಸಬಹುದು. ಬಳಿಕ ಆದಾಯ ವಿವರ ಸಲ್ಲಿಸಿದ ಪ್ರತಿಯನ್ನು ಪಡೆದು ಇಲಾಖೆಗೆ ಸಲ್ಲಿಸಬಹುದು. ಅಥವಾ ಆದಾಯ ತೆರಿಗೆ ಇಲಾಖೆಯ https://incometaxindiaefiling.gov.in/ ಅಂತರ್ಜಾಲ ತಾಣಕ್ಕೆ ತೆರಳಿ ಅಲ್ಲಿ ಕೊಟ್ಟಿರುವ ಸೂಚನೆಗಳನ್ನು ಪಾಲಿಸಬೇಕು.

ವಾದಿರಾಜ ಶರ್ಮಾ ವೈ. ಎಸ್‌.
(ಸಹಾಯಕ ಪ್ರಾಧ್ಯಾಪಕರು
ಮಣಿಪಾಲ್‌ ವಿಶ್ವವಿದ್ಯಾಲಯ ಬೆಂಗಳೂರು ಕ್ಯಾಂಪಸ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT