ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೀಕೃತ ರೈಲ್‌ಯಾತ್ರಿ, ಪರಿಸರ ಮಾಹಿತಿಯ ಆ್ಯಪ್‌ಗಳು

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಈ ವಾರದ  ಆ್ಯಪ್ ಮಾರುಕಟ್ಟೆಯಲ್ಲಿ ಜನ ಸಾಮಾನ್ಯರ ಬಳಕೆಗೆ ಸುಲಭವಾಗಿ ಲಭ್ಯವಾಗುವಂತಹ ಎರಡು ಆ್ಯಪ್‌ಗಳನ್ನು ಪರಿಚಯಿಸಲಾಗಿದೆ. ಒಂದು ರೈಲ್ವೆ ಇಲಾಖೆಯ ರೈಲ್ ಯಾತ್ರಿ ಆ್ಯಪ್. ಮತ್ತೊಂದು ಯುಟ್ಯೂಬ್ ಗೊ ಆ್ಯಪ್.  ಉಳಿದಂತೆ ಸಂಶೋಧನೆ ಮತ್ತು ಕಂಪೆನಿಯ ಪಾರದರ್ಶಕ ವಹಿವಾಟಿಗೆ ಅನುಕೂಲ ಕಲ್ಪಿಸಿಕೊಡುವ ಎರಡು ಹೊಸ ಆ್ಯಪ್‌ಗಳ ಕಿರುಪರಿಚಯ ಇಲ್ಲಿದೆ.

ರೈಲ್‌ಯಾತ್ರಿ ಆ್ಯಪ್‌ನಲ್ಲಿ  ಹೊಸ ವೈಶಿಷ್ಟ್ಯ

ರೈಲ್ವೆ ಇಲಾಖೆಯ ಜನಪ್ರಿಯ ರೈಲ್ ಯಾತ್ರಿ ಆ್ಯಪ್‌ನಲ್ಲಿ ಇದೀಗ ಮೊಬೈಲ್ ಸಂಪರ್ಕ ಜಾಲದ ವಿವರ ಒದಗಿಸುವ ಹೊಸ  ಸೌಲಭ್ಯ ಪರಿಚಯಿಸಲಾಗಿದೆ.

ಈ ಸೌಲಭ್ಯದ ಮೂಲಕ ರೈಲು ಪ್ರಯಾಣಿಕರು ಇನ್ನು ಮುಂದೆ ದೇಶದ ಎಲ್ಲ ರೈಲು ಮಾರ್ಗಗಳಲ್ಲಿನ ಮೊಬೈಲ್ ನೆಟ್‌ವರ್ಕ್‌ನ ಸಂಪರ್ಕ ಸಾಮರ್ಥ್ಯವನ್ನು  ಖಚಿತವಾಗಿ ಗುರುತಿಸಬಹುದು. 

ರೈಲು ಪ್ರಯಾಣದ ವೇಳೆ  ಕರೆ ಮಾಡಲು, ಬೇಕಾದ ಮಾಹಿತಿ, ಚಲನಚಿತ್ರ  ಡೌನ್‌ಲೋಡ್‌ ಮಾಡಿಕೊಳ್ಳಲು   ಯಾವ ಸಂದರ್ಭದಲ್ಲಿ ಮೊಬೈಲ್‌ ಸಂಪರ್ಕ ಸೂಕ್ತವಾಗಿರುತ್ತದೆ ಎನ್ನುವ ಮಾಹಿತಿಯು ಇಲ್ಲಿ ದೊರೆಯಲಿದೆ.

ದೂರ ಪ್ರಯಾಣದ ಸಂದರ್ಭದಲ್ಲಿ  ಮಾಹಿತಿ ಮತ್ತು ಮನರಂಜನೆಗೆ ಪ್ರಯಾಣಿಕರು ಮೊಬೈಲ್‌ ಅನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಆದರೆ, ಮಾರ್ಗ ಮಧ್ಯೆ ಮೊಬೈಲ್‌ ಸಂಪರ್ಕ ಸೌಲಭ್ಯ ಹೇಗೆ ಇರಲಿದೆ ಎನ್ನುವುದು ಇದುವರೆಗೆ ಗೊತ್ತಾಗುತ್ತಿರಲಿಲ್ಲ. ಇನ್ನು ಮುಂದೆ ಅಂತಹ ಸಮಸ್ಯೆ ಎದುರಾಗದು.

ನವೀಕರಿಸಲಾದ ರೈಲ್‌ಯಾತ್ರಿ ಆ್ಯಪ್‌ನಲ್ಲಿ ಮಾರ್ಗದಲ್ಲಿನ ನೆಟ್‌ವರ್ಕ್‌ ಕನೆಕ್ಟಿವಿಟಿಯನ್ನು  ಪರೀಕ್ಷಿಸಬಹುದಾಗಿದೆ.

ರೈಲ್‌ಯಾತ್ರಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿರುವ ಎಲ್ಲ ಹಳೆಯ ಬಳಕೆದಾರರು ಈ ಆ್ಯಪ್ ಅನ್ನು ಅಪ್ ಡೇಟ್ ಮಾಡಿಕೊಳ್ಳುವ ಮೂಲಕ ಈ ಸೇವೆ  ಬಳಸಬಹುದು.
ಗೂಗಲ್ ಪ್ಲೇಸ್ಟೋರ್: Railyatri app

ಪರಿಸರ ವಿಜ್ಞಾನ ಮಾಹಿತಿಗೆ ಬಯೋಟಾ ಆ್ಯಪ್

ಕೇರಳದ ಐಐಟಿಎಂ-ಕೆ ಸಂಸ್ಥೆಯು ಪರಿಸರ ವಿಜ್ಞಾನ ಅಧ್ಯಯನಕ್ಕಾಗಿ ಬಯೋಟಾ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್, ಪರಿಸರ ವಿಜ್ಞಾನ ಕ್ಷೇತ್ರದಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಆ್ಯಪ್ ವಿನ್ಯಾಸಕರು ತಿಳಿಸಿದ್ದಾರೆ.

ಐಐಟಿಎಂ-ಕೆ ಸಂಸ್ಥೆಯ ಸಿ.ವಿ. ರಾಮನ್ ಲ್ಯಾಬೊರೇಟರಿ ಮತ್ತು ಇಕಾಲಜಿ ವಿಭಾಗ ಬಯೋಟಾ ಆ್ಯಪ್ ಅನ್ನು ವಿನ್ಯಾಸ ಮಾಡಿದೆ. ಇದರಲ್ಲಿ ಸಸ್ಯಗಳು ಮತ್ತು ಪ್ರಾಣಿಗಳ ಮಾಹಿತಿ, ಅವುಗಳ ಕುಟುಂಬ ವರ್ಗ, ಆಹಾರ, ಸಸ್ಯಗಳ ಬೆಳವಣಿಗೆ ಮಾಹಿತಿ, ಸಸ್ಯ ಮತ್ತು ಪ್ರಾಣಿಗಳ ಚಿತ್ರ, ವಿಡಿಯೊಗಳು ಈ ಆ್ಯಪ್ ನಲ್ಲಿ ಇವೆ. ಗೂಗಲ್ ಮ್ಯಾಪ್ ನೆರವಿನಿಂದ ಕಾಡು ಮೇಡು, ಕೆರೆ, ಹಳ್ಳ ಕೊಳ್ಳ, ನದಿ, ಗಿರಿಧಾಮಗಳ ಮಾಹಿತಿಯನ್ನು ಪಡೆಯಬಹುದು.

ಈ ಆ್ಯಪ್ ಅನ್ನು ವಿದ್ಯಾರ್ಥಿಗಳು ಮತ್ತು ಸಂಶೋಧಕರ ಅಧ್ಯಯನಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗಿದೆ.  ಐಒಎಸ್ ಮಾದರಿಯ ಆ್ಯಪ್ ಇನ್ನು ಅಭಿವೃದ್ಧಿ ಹಂತದಲ್ಲಿದೆ.
ಗೂಗಲ್ ಪ್ಲೇಸ್ಟೋರ್: Biota app

ಎಂಸಿಎಲ್ ಮೊಬೈಲ್ ಆ್ಯಪ್

ಒಡಿಶಾದ ಮಹಾನಂದಿ ಕೋಲ್ ಲಿಮಿಟೆಡ್ (ಎಂಸಿಎಲ್) ಕಂಪೆನಿಯ ಖರ್ಚುವೆಚ್ಚಗಳನ್ನು ಆ್ಯಪ್ ಮೂಲಕ ತನ್ನ ಷೇರುದಾರರು, ಗುತ್ತಿಗೆದಾರರು ಮತ್ತು ಬಳಕೆದಾರರಿಗೆ ತಲುಪಿಸುವ ವ್ಯವಸ್ಥೆಗಾಗಿ ನೂತನ ಎಂಸಿಎಲ್  ಬಿಲ್ ಟ್ರ್ಯಾಕಿಂಗ್ ಆ್ಯಪ್ (Csr bill tracking app) ಅನ್ನು ಅಭಿವೃದ್ಧಿಪಡಿಸಿದೆ. ಗ್ರಾಹಕರು, ನೌಕರರು, ಷೇರುದಾರರು, ಗುತ್ತಿಗೆದಾರರಿಗೆ ಪಾರದರ್ಶಕ ಮತ್ತು ವಿಶ್ವಸಾರ್ಹತೆಯ ಮಾಹಿತಿ ನೀಡುವುದಕ್ಕಾಗಿ ಈ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.

ಕಂಪೆನಿಯ ಖರ್ಚು ವೆಚ್ಚ, ವೇತನ, ಲಾಭ, ನಷ್ಟಗಳ ಮಾಹಿತಿ ಈ ಆ್ಯಪ್‌ನಲ್ಲಿ ದೊರೆಯುತ್ತದೆ. ಕಂಪೆನಿಯ ಖರ್ಚಿನ ಬಿಲ್ಲನ್ನು ಹೂಡಿಕೆ ಮತ್ತು ಷೇರುದಾರರು ಈ ಆ್ಯಪ್ ಮೂಲಕ ನೋಡಬಹುದು. ಹೂಡಿಕೆದಾರರು ಮತ್ತು ಷೇರುದಾರರನ್ನು ಸೆಳೆಯುವ ಪ್ರಯತ್ನವಾಗಿ ಎಂಸಿಎಲ್ ಕಂಪೆನಿಯು ಈ ಆ್ಯಪ್ ವಿನ್ಯಾಸ ಮಾಡಿದೆ ಎಂದು ಹೇಳಲಾಗುತ್ತಿದೆ.

ಗೂಗಲ್ ಪ್ಲೇಸ್ಟೋರ್: Csr bill tracking app

ಮೊಬಿಕ್ವಿಕ್‌ ಮೂಲಕ ಸಿನಿಮಾ

ಮೊಬೈಲ್ ವಾಲೆಟ್‌ ಸಂಸ್ಥೆ ಮೊಬಿಕ್ವಿಕ್  ಇದೀಗ ಗೂಗಲ್ ಪ್ಲೇಸ್ಟೋರ್ ಸಹಯೋಗದಲ್ಲಿ ತನ್ನ ವಾಲೆಟ್ ಮೂಲಕ ಸಿನಿಮಾ ನೋಡುವ, ಪುಸ್ತಕ ಓದುವ ಮತ್ತು ಗೇಮ್ಸ್ ಆಡುವ ಸೌಕರ್ಯವನ್ನು ಕಲ್ಪಿಸಿದೆ.

ಹೌದು, ಇನ್ನು ಮುಂದೆ ಮೊಬಿಕ್ವಿಕ್‌ ವಾಲೆಟ್ ಬಳಕೆದಾರರು ಹಣಕಾಸು ವ್ಯವಹಾರದ ಜತೆಯಲ್ಲೇ ತಮ್ಮ ಇಷ್ಟದ ಸಿನಿಮಾಗಳನ್ನು ನೋಡಬಹುದಾಗಿದೆ. ಗೂಗಲ್ ಪ್ಲೇಸ್ಟೋರ್ ಸಹಕಾರದೊಂದಿಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಇಷ್ಟು ದಿನ ವ್ಯವಹಾರಕ್ಕೆ ಸೀಮಿತವಾಗಿದ್ದ ಮೊಬಿಕ್ವಿಕ್‌ ವಾಲೆಟ್ ಇದೀಗ ಮನರಂಜನಾ ತಾಣವಾಗಿಯೂ ಪರಿವರ್ತನೆಯಾಗಿದೆ. ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುವ ಉದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ.

ಗೂಗಲ್ ಪ್ಲೇಸ್ಟೋರ್: Mobikwik app

ಹೊಸ ಯುಟ್ಯೂಬ್ ಗೊ ಆ್ಯಪ್

ಭಾರತದ ಬಳಕೆದಾರರಿಗಾಗಿ ಯುಟ್ಯೂಬ್ ಟೀಂ ಹೊಸ ಯುಟ್ಯೂಬ್ ಗೊ ಆ್ಯಪ್ ಅಭಿವೃದ್ಧಿಪಡಿಸಿದೆ. ಕಡಿಮೆ ನೆಟ್ ವರ್ಕ್ ಇರುವ ಪ್ರದೇಶಗಳಲ್ಲೂ ಬಳಕೆದಾರರು ಯಾವುದೇ ಬಫರಿಂಗ್ ಇಲ್ಲದೆ ನಿರಾಂತಕವಾಗಿ ಯುಟ್ಯೂಬ್ ವಿಡಿಯೊಗಳನ್ನು ಈ ಆ್ಯಪ್ ಮೂಲಕ ವೀಕ್ಷಿಸಬಹುದು.

ಬಳಕೆದಾರರು ಯುಟ್ಯೂಬ್ ಗೊ ಆ್ಯಪ್ ಅನ್ನು ಡೌನ್್ಲೋಡ್ ಮಾಡಿಕೊಂಡು ಅದರ ಮೂಲಕ ವಿಡಿಯೊಗಳನ್ನು ವೀಕ್ಷಿಸಬಹುದು. ಮೂರು ವರ್ಷಗಳ ಹಿಂದೆ ಆಫ್‌ಲೈನ್‌ ತಂತ್ರಜ್ಞಾನವನ್ನು ಪರಿಚಯಿಸಿದ್ದ ಯುಟ್ಯೂಬ್ ತಂಡ ಅದರ  ನವೀಕೃತ ಸ್ವರೂಪದ  ಯುಟ್ಯೂಬ್ ಗೊ ಆ್ಯಪ್ ಅನ್ನು ವಿನ್ಯಾಸ  ಮಾಡಿದೆ.

ಕಡಿಮೆ ನೆಟ್‌ವರ್ಕ್ ಇರುವ ಗುಡ್ಡಗಾಡು ಅಥವಾ ಅರಣ್ಯ ಪ್ರದೇಶಗಳಲ್ಲಿ ನೆಲೆಸಿರುವ ಗ್ರಾಹಕರು ಈ ಸೌಲಭ್ಯ ಪಡೆದು ವಿಡಿಯೊಗಳನ್ನು ನೋಡಬಹುದು. ಲೈವ್ ಸ್ಟ್ರೀಮ್ ಅಥವಾ ಸೇವ್ ಮೋಡ್ ಮಾಡಿಕೊಂಡು ಯಾವಾಗಬೇಕಾದರು ವಿಡಿಯೊಗಳನ್ನು ವೀಕ್ಷಿಸಬಹುದು. ಇದಕ್ಕೆ ಹೆಚ್ಚಾಗಿ ಡಾಟಾ  ಬಳಕೆಯಾಗುವುದಿಲ್ಲ ಎಂದು ಯುಟ್ಯೂಬ್  ತಿಳಿಸಿದೆ.

ಗೂಗಲ್ ಪ್ಲೇಸ್ಟೋರ್: youtube go app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT