ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಶ್ರೀದೇವಿ, ಬೆಳಗಾವಿ

* ನಾನು ಶಿಕ್ಷಕಿ. ಸಂಬಳ ₹32,912  ಕಡಿತ ಕೆಜಿಐಡಿ ₹3000, ಎಲ್ಐಸಿ ₹1945, ಎನ್‌ಪಿಎಸ್ ₹3019, ಆರ್‌ಡಿ ₹1000, ಪಿಎಲ್ಐ ₹1945 ಈ ಮೊತ್ತ ಕಳೆದು ಬರುವ ₹22,003ಕ್ಕೆ ನಾನು ತೆರಿಗೆ ಕಟ್ಟಬೇಕೇ ತಿಳಿಸಿ. ನಾನು ನಿವೇಶನ ಕೊಂಡು ಮನೆ ಕಟ್ಟಿಸಬೇಕೆಂದಿದ್ದೇನೆ. ಎಷ್ಟು ಗೃಹಸಾಲ ದೊರೆಯಬಹುದು. ಸಾಲದ ಕಂತು, ಬಡ್ಡಿದರ ಇವುಗಳ ವಿಚಾರದಲ್ಲಿ ವಿವರವಾಗಿ ತಿಳಿಸಬೇಕಾಗಿ ವಿನಂತಿ. ನನಗೆ 21 ವರ್ಷ ಸೇವಾವಧಿ ಇದೆ.

ಉತ್ತರ: ಸೆಕ್ಷನ್ 80ಸಿ ಆಧಾರದ ಮೇಲೆ ಕೆ.ಜಿ.ಐ.ಡಿ., ಎಲ್.ಐ.ಸಿ., ಎನ್.ಪಿ.ಎಸ್. ಹಾಗೂ ಪಿ.ಎಲ್.ಐ. ಹೂಡಿಕೆ ಸಂಪೂರ್ಣ ಮೊತ್ತ ಒಟ್ಟು ಆದಾಯದಿಂದ ಕಳೆದು ಉಳಿದ ಮೊತ್ತಕ್ಕೆ ತೆರಿಗೆ ಸಲ್ಲಿಸಬೇಕು. ಆರ್.ಡಿ. ಹೂಡಿಕೆಯು ತೆರಿಗೆ ವಿನಾಯಿತಿಯೊಳಗೆ ಬರುವುದಿಲ್ಲ. ಕಡಿತ ಹಾಗೂ ನಿಮ್ಮ ಮನೆ ಖರ್ಚು ಕಳೆದು ನೀವು ಗರಿಷ್ಠ ₹12,000 ಉಳಿಸಬಹುದು. ನಿಮಗೆ ಗರಿಷ್ಠ ಗೃಹಸಾಲ ₹10 ಲಕ್ಷ ದೊರೆಯಬಹುದು. ಆದರೆ, ಈ ಹಣದಿಂದ ನಿವೇಶನ ಮನೆ ಮಾಡಲು ಸಾಧ್ಯವಿಲ್ಲ. ನೀವು ಉಳಿಸಬಹುದಾದ ಹಣದಲ್ಲಿ ₹10,000, 5 ವರ್ಷ ಆರ್.ಡಿ. ಮಾಡಿ,ವರ್ಷಗಳ ನಂತರ ಸ್ವಲ್ಪ ವೈಯಕ್ತಿಕ ಸಾಲ ಪಡೆದು ನಿವೇಶನ ಕೊಳ್ಳಿ. ಮುಂದೆ ಮನೆಕಟ್ಟಿಸಬಹುದು.

ಕನಕಲಕ್ಷ್ಮಿ.ಕೆ. ಬೆಂಗಳೂರು

* ನನಗೆ ಬಿಡಿಎ ದಿಂದ ಒಂದು ನಿವೇಶನ ಮಂಜೂರಾಗಿದೆ. ನಿವೇಶನದ ಒಟ್ಟು ಮೌಲ್ಯ ₹12 ಲಕ್ಷ. ಪ್ರಾರಂಭಿಕ ಕೊಡುಗೆ ₹60,000. ನನ್ನ ಬಳಿ ₹2 ಲಕ್ಷವಿದೆ. ಪ್ಯಾನ್ ಕಾರ್ಡು ಇದೆ. ಪದವೀಧರೆ. ನಾನು ಬಟ್ಟೆ ಹೊಲೆದು ಜೀವಿಸುತ್ತಿದ್ದೇನೆ. ಪತಿಗೆ ಸ್ವಂತ ಆಟೋ ಇದೆ. ನಾನು ಎಸ್‌ಸಿ ಪಂಗಡಕ್ಕೆ ಸೇರಿದವಳು. ಹಣ ಹೇಗೆ ಹೊಂದಿಸಲಿ ತಿಳಿಸಿ. ನಿವೇಶನ ಕೈಬಿಡುವುದೇ ಲೇಸು ಎಂದು ಕೆಲವರು ಹೇಳುತ್ತಾರೆ. ಮಾರ್ಗದರ್ಶನ ಮಾಡಿ.

ಉತ್ತರ: ಬಿ.ಡಿ.ಎ. ನಿವೇಶನ ಸಿಗುವುದು ಕಷ್ಟದ ಕೆಲಸ. ಮುಂದೆ ಯಾವಾಗ ನಿವೇಶನ ಹಂಚುತ್ತಾರೆ ಎನ್ನುವುದು ನಂಬಿಕೆ ಇಲ್ಲ. ಈಗ ಮಂಜೂರಾದ ನಿವೇಶನ ಕೈಬಿಡುವುದು ಸರಿ ಅಲ್ಲ ಎನ್ನುವುದು ನನ್ನ ವೈಯಕ್ತಿಕ ವಿಚಾರ. ಬ್ಯಾಂಕುಗಳಲ್ಲಿ ಸಾಲ ಕೊಡುವಾಗ ಸಾಲದ ಮರು ಪಾವತಿಸುವ ಸಾಮರ್ಥ್ಯ ನೋಡುತ್ತಾರೆ. ನೀವು ಕರ್ನಾಟಕ ಸರ್ಕಾರದ ಎಸ್‌ಸಿ ಮತ್ತು ಎಸ್‌ಟಿ ಕಾರ್ಫೋರೇಷನ್‌ನಲ್ಲಿ ವಿಚಾರಿಸಿ. ನಿಮ್ಮ ಆಸೆ ಆಕಾಂಕ್ಷೆ ಈಡೇರಲಿ.

ರಾಜು, ಭದ್ರಾವತಿ

* ನಾನು ಸರ್ಕಾರಿ ನೌಕರಿಯಿಂದ ನಿವೃತ್ತನಾಗಿ 3 ವರ್ಷ ಆಗಿದೆ. ನಮಗೆ ಎರಡು ಹೆಣ್ಣು ಮಕ್ಕಳು. ಇಬ್ಬರಿಗೂ ಮದುವೆಯಾಗಿದೆ. ನನಗೆ ಸ್ವಂತ ಮನೆ ಇದೆ. ತಿಂಗಳ ಪಿಂಚಣಿ ₹30,000. ನನ್ನ ಹೆಂಡತಿ ಹೆಸರಿನಲ್ಲಿ ₹18 ಲಕ್ಷ ಠೇವಣಿ ಇದೆ. ಅವಳಿಗೆ ತೆರಿಗೆ ಬರುತ್ತಿದೆಯೇ ಹಾಗೂ ಅವಳ ವಯಸ್ಸು 61. ನನ್ನ ಹೆಸರಿನಲ್ಲಿ ₹5 ಲಕ್ಷ ಠೇವಣಿ ಇದೆ. ನಾನು ಟ್ಯಾಕ್ಸ್ ರಿಟರ್ನ್ ತುಂಬುತ್ತಿದ್ದೇನೆ. ನನ್ನ ಹಾಗೂ ಪತ್ನಿಯ ಹೆಸರಿನಲ್ಲಿ ₹3 ಲಕ್ಷ ಪ್ರತಿಯೊಬ್ಬರಿಗೆ, ಆರೋಗ್ಯ ವಿಮೆ ಮಾಡಿ ₹14835 +14835 ಕಟ್ಟುತ್ತಿದ್ದೇವೆ. ಸೂಕ್ತ ಸಲಹೆ ನೀಡಿ.

ಉತ್ತರ: ನಿಮ್ಮ ಹೆಂಡತಿ ಹಿರಿಯ ನಾಗರಿಕರಾಗಿದ್ದು, ಅವರಿಗೆ ಬೇರಾವ ಆದಾಯವಿಲ್ಲದಿರುವುದರಿಂದ, ₹18 ಲಕ್ಷ ಠೇವಣಿಯ ಮೇಲೆ ಬರುವ ಬಡ್ಡಿಗೆ ಆದಾಯ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯವೂ ಇಲ್ಲ. ₹3 ಲಕ್ಷ ಬಡ್ಡಿ ಬರುವ ಅವರು ಆದಾಯ ತೆರಿಗೆಗೆ ಒಳಗಾಗುವುದಿಲ್ಲ. ನೀವು ಆರೋಗ್ಯ ವಿಮೆ (Hea* th Insurance) ಗೆ ಬರೇ ₹3 ಲಕ್ಷ (ಇಬ್ಬರಿಂದ ₹6 ಲಕ್ಷ) ಮೊತ್ತಕ್ಕೆ ಇಬ್ಬರಿಂದ ₹29670 ವಾರ್ಷಿಕವಾಗಿ ತುಂಬುತ್ತಿರುವುದು ಕೇಳಿ ಆಶ್ಚರ್ಯವಾಯಿತು. ನೀವು ಹಾಗೂ ನಿಮ್ಮ ಹೆಂಡತಿ 65 ವರ್ಷದೊಳಗಿರುವುದರಿಂದ ಸಿಂಡಿಕೇಟ್ ಬ್ಯಾಂಕ್‌ನ ಸಿಂಡ್ ಆರೋಗ್ಯ ಯೋಜನೆಯಲ್ಲಿ ₹5 ಲಕ್ಷ ಆರೋಗ್ಯ ವಿಮೆ ಮಾಡಿರಿ. ಇದು F* oater Po* icy ಆಗಿದ್ದು, ₹5ಲಕ್ಷ ವಿಮೆ ನಿಮ್ಮಿಬ್ಬರೊಳಗೆ ಯಾರೂ ಕೂಡಾ ಉಪಯೋಗಿಸಬಹುದು. ಇಲ್ಲಿ ನೀವು ಕೊಡಬೇಕಾದ ವಾರ್ಷಿಕ ಪ್ರೀಮಿಯಂ ಬರೇ ₹7423–00 ಇದರಿಂದ ವಾರ್ಷಿಕ ₹22,247  ಉಳಿಸುತ್ತೀರಿ. ಸಿಂಡ್ ಆರೋಗ್ಯ ವಿಮೆ ನಗದು ರಹಿತ (Cash * ess).  ಅಲ್ಲಿಯೇ ಆರೋಗ್ಯ ವಿಮೆ ಮಾಡಿರಿ.

ಹೆಸರು; ಊರು ಬೇಡ

* ನಿವೃತ್ತ ಸರ್ಕಾರಿ ನೌಕರ. ವಯಸ್ಸು 83. ಮಾಸಿಕ ಪಿಂಚಣಿ ₹24,500 ನಿವೃತ್ತಿ ವೇತನದಿಂದ ₹9 ಲಕ್ಷ ಬ್ಯಾಂಕ್ ಠೇವಣಿ ಇದೆ. ಒಂದು ಸಣ್ಣ ಮನೆಯಿಂದ ₹500 ಬಾಡಿಗೆ ಬರುತ್ತದೆ.  ನನಗೆ ತೆರಿಗೆ ಬರುತ್ತದೆಯೇ ತಿಳಿಸಿ.

ಉತ್ತರ: ನಿಮ್ಮ ವಾರ್ಷಿಕ ಪಿಂಚಣಿ ಮನೆ ಬಾಡಿಗೆ ಹಾಗೂ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ಸೇರಿಸಿ ₹5 ಲಕ್ಷ ಆಗುವ ತನಕ ನಿಮಗೆ ಆದಾಯ
ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯಕತೆಯೂ ಇಲ್ಲ. ತೆರಿಗೆ ಭಯ ಬಿಟ್ಟು ಹಾಯಾಗಿ ನಿಶ್ಚಿಂತೆಯಿಂದ ಬಾಳಿರಿ.

ಕುಸುಮಾ ವಸಂತ್, ರಾಜಾಜಿನಗರ, ಬೆಂಗಳೂರು.

* ನಾನು ಸ್ವಂತ ಡಿ.ಟಿ.ಪಿ. ಮಾಡುತ್ತಿದ್ದು, ತಿಂಗಳಿಗೆ ₹15–20 ಸಾವಿರ ಗಳಿಸುತ್ತೇನೆ. ನಿಮ್ಮ ಸಲಹೆಯಂತೆ ₹2000 ಆರ್.ಡಿ. ಕಟ್ಟಿ, ಒಂದು ಮನೆಯನ್ನು ಭೋಗ್ಯಕ್ಕೆ ಹಾಕಿಸಿಕೊಂಡಿದ್ದೇನೆ. ಉಳಿತಾಯ ಮಗನ ವಿದ್ಯಾಭ್ಯಾಸ ಮನೆ ಖರ್ಚಿಗೆ ಹೋಗುತ್ತದೆ. ನನ್ನ ಪತಿಯ ಉದ್ಯೋಗದಲ್ಲಿ ಭದ್ರತೆ ಇಲ್ಲ. ಒಟ್ಟಿನಲ್ಲಿ ಸದ್ಯ ಉಳಿತಾಯವಾಗುತ್ತಿಲ್ಲ. ಅತ್ತೆ ಮಾವ ತೀರಿಕೊಂಡಿದ್ದು, ಅವರು ನಿರ್ಮಿಸಿದ ಒಂದು ಮನೆ, ನನ್ನ ಮೈದುನನ ಸ್ವಾಧೀನದಲ್ಲಿದೆ. ಇದರಿಂದ ನಮಗೆ ಏನೂ ಪ್ರಯೋಜನವಿಲ್ಲ. ಹೀಗಾಗಿ ಮನೆಯ ಮೇಲೆ ಒಂದು ಮಹಡಿಯಾಗಿ, ಒಂದು ಮನೆ ಕಟ್ಟಿ ಒಂದು ವಾಸಕ್ಕೆ ಹಾಗೂ ಒಂದು ಬಾಡಿಗೆಗೆ ಎನ್ನುವ ನಿರ್ಣಯ ತೆಗೆದುಕೊಂಡಿದ್ದೇನೆ. ಇದಕ್ಕೆ ₹10–15 ಲಕ್ಷ ಸಾಲ ಸಿಗುತ್ತದೆ. ಇದೀಗ ನನ್ನ ಮನೆ ಮೇಲಿನ ಭೋಗ್ಯದ ₹5 ಲಕ್ಷವನ್ನು ವಾಪಸು ಪಡೆದು ಬ್ಯಾಂಕಿಗೆ ಕಟ್ಟಿ ಉಳಿದ 6–7 ಲಕ್ಷ ಸಾಲ ಮನೆ ಬಾಡಿಗೆಯಿಂದ ಕಟ್ಟುವ ಕನಸಿದೆ.  ಈ ಬಗ್ಗೆ ಸಲಹೆ ನೀಡಿ.

ಉತ್ತರ: ಓರ್ವ ಮಹಿಳೆ ಸ್ವಂತ ಉದ್ಯೋಗ ಮಾಡಿ, ಸ್ವಾವಲಂಬನೆಯಿಂದ ಸಂಸಾರ ನಡೆಸಿ, ಮಗ ಹಾಗೂ ಪತಿಯ ನಿರ್ವಹಣೆ ಯಶಸ್ವಿಯಾಗಿ ನಡೆಸುವ ನಿಮಗೆ ಅಭಿನಂದನೆಗಳು. ನಿಮ್ಮ ಮಾವನ ಆಸ್ತಿಯಲ್ಲಿ ನಿಮ್ಮ ಪತಿಗೆ ಸರಿಸಮಾನ ಹಕ್ಕು ಇದ್ದರೂ, ಅಲ್ಲಿ ಕೂಡಾ ನೀವು ಏನೂ ಪ್ರಯೋಜನ ಪಡೆಯುತ್ತಿಲ್ಲ. ನಿಮ್ಮ  ಪ್ಲ್ಯಾನ್ ತುಂಬಾ ಚೆನ್ನಾಗಿದೆ. ನೀವು ಸ್ವಂತ ಮನೆ ಕಟ್ಟುವಾಗ ಪಡೆಯುವ ಸಾಲದ ಸಿಂಹಪಾಲು, ನೀವು ಭೋಗ್ಯದ ಮನೆ ಬಿಡುವಾಗ ಸಿಗುವ ದೊಡ್ಡ ಮೊತ್ತದಿಂದ ಬಹುಪಾಲು ಸಾಲತೀರಿಸಿ. ಇದೇ ವೇಳೆ ಉಳಿದ ಸಾಲ, ನಿಮ್ಮ ಕಟ್ಟಲಿರುವ ಇನ್ನೊಂದು ಮನೆ ಬಾಡಿಗೆಯಿಂದ ಕಂತು ಮತ್ತು ಬಡ್ಡಿ ಸೇರಿಸಿ ಆದಷ್ಟು ಬೇಗ ತೀರಿಸಿ. ನೆಮ್ಮದಿಯಿಂದ ಬಾಳಿರಿ.
ನೀವು ಕೇಳಿದ ಪ್ರಶ್ನೆ ಹೊರತಾಗಿ ನಿಮಗೊಂದು ಉತ್ತಮ ಸಲಹೆ ನೀಡ ಬಯಸುತ್ತೇನೆ. ನಿಮ್ಮ ಮಗ ಪಿಯುಸಿ ಮುಗಿಸಿ ವೃತ್ತಿಪರ ಶಿಕ್ಷಣ ಪಡೆಯುವಾಗ ನಿಮ್ಮ ವಾರ್ಷಿಕ ಆದಾಯ ₹4.50 ಲಕ್ಷದೊಳಗಿರುವುದರಿಂದ ಕೇಂದ್ರ ಸರ್ಕಾರದ ‘ಬಡ್ಡಿ ಅನುದಾನಿತ ಸಾಲ’ ನಿಮ್ಮ ಮಗನಿಗೆ ದೊರೆಯುತ್ತದೆ. ಶಿಕ್ಷಣ ಅವಧಿಯಲ್ಲಿ ಬಡ್ಡಿ ಸಂಪೂರ್ಣ ಅನುದಾನಿತವಾಗಿದ್ದು, ಸಾಲದ ಕಂತು ಶಿಕ್ಷಣ ಮುಗಿದು ಕೆಲಸಕ್ಕೆ ಸೇರುವಾಗ ಪ್ರಾರಂಭವಾಗುತ್ತದೆ. ಇದರಿಂದ ಶಿಕ್ಷಣ ಅವಧಿಯಲ್ಲಿ ನಿಮಗೆ ಹಣದ ತಾಪತ್ರಯವಿರುವುದಿಲ್ಲ.  ನಿಮ್ಮ ಮಗನಿಗೆ ವೃತ್ತಿ ಪರ ಶಿಕ್ಷಣವನ್ನೇ ಕೊಡಿಸಿ. ರಾತ್ರಿ ಕಳೆದು ಹಗಲು ಬರುವಂತೆ, ನಿಮ್ಮ ಇಂದಿನ ಎಲ್ಲಾ ತಾಪತ್ರಯಗಳೂ ಮುಂದೆ ಬರೇ ಕನಸಾಗಿ ಪರಿಣಮಿಸಲಿ, 

ರಾಜಾರಾಮ, ತೀರ್ಥಹಳ್ಳಿ

* ನಾನು ನಿವೃತ್ತ ಸರ್ಕಾರಿ ನೌಕರ.  ತಿಂಗಳ ಪಿಂಚಣಿ ₹23,000 ಪಿತ್ರಾರ್ಜಿತ ಆಸ್ತಿ ಮಾರಿ ಇದೇ ಕಳೆದ ಆಗಸ್ಟ್‌ನಲ್ಲಿ ₹10 ಲಕ್ಷ ಬಂದಿದ್ದು ಆ ಹಣ ಎರಡು ವರ್ಷದ ಅವಧಿಗೆ ಬ್ಯಾಂಕ್ ಠೇವಣಿ ಮಾಡಿದ್ದೇನೆ. ನನಗೆ ಪಿತ್ರಾರ್ಜಿತ ಆಸ್ತಿಯಿಂದ ವಾರ್ಷಿಕ ₹3 ಲಕ್ಷ ವರಮಾನವಿದೆ. ನಾನು ತೆರಿಗೆ ವ್ಯಾಪ್ತಿಗೆ ಬರುತ್ತೇನೆಯೇ ತಿಳಿಸಿ.


ಉತ್ತರ: ನೀವು ಹಿರಿಯ ನಾಗರಿಕರಾದ್ದರಿಂದ ಪಿಂಚಣಿ ಹಾಗೂ ಬ್ಯಾಂಕ್ ಠೇವಣಿ ಮೇಲಿನ ಬಡ್ಡಿ ಸೇರಿಸಿ, ವಾರ್ಷಿಕ ಆದಾಯ ₹3 ಲಕ್ಷ  ದೊಳಗಿರುವಲ್ಲಿ ಮಾತ್ರ ತೆರಿಗೆ ಸಲ್ಲಿಸುವ ಅವಶ್ಯವಿಲ್ಲ. ಪ್ರಾಯಶ ನೀವು ಈ ಮಿತಿಯಲ್ಲಿದ್ದಂತೆ ಕಾಣುತ್ತದೆ. ಕೃಷಿ ವರಮಾನ ಆದಾಯ ತೆರಿಗೆ ಸೆಕ್ಷನ್ 10(1) ಆಧಾರದ ಮೇಲೆ ಹಾಗೂ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಸೆಕ್ಷನ್ 48 ಅನ್ವಯ, ಹಳ್ಳಿ ಕೃಷಿ ಜಮೀನು ಮಾರಾಟದಿಂದ ಬರುವ ಹಣ, ಇವೆರಡೂ ಆದಾಯ ತೆರಿಗೆ–ಕ್ಯಾಪಿಟಲ್‌ ಗೇನ್ ಟ್ಯಾಕ್ಸ್‌ನಿಂದ ವಿನಾಯಿತಿ ಪಡೆದಿದೆ.

ಹೆಸರು–ಊರು ಬೇಡ

* ನಾನು ನಿವೃತ್ತ ಸರ್ಕಾರಿ ನೌಕರ. ವಯಸ್ಸು 62. ಅಂಗವಿಕಲ. ನನ್ನ ಮಾಸಿಕ ಪಿಂಚಣಿ ₹15,000. ನಿವೃತ್ತಿಯಿಂದ ಬಂದ ಹಣ ಹಾಗೂ ಉಳಿತಾಯ ಸದ್ಯ ₹46.30 ಲಕ್ಷ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿ ಇರಿಸಿದ್ದೇನೆ. ತೀವ್ರತರ ಅಂಗವಿಕಲರಿಗೆ ₹1 ಲಕ್ಷ ತೆರಿಗೆ ವಿನಾಯಿತಿ ಇದೆ. ಇದು ಬ್ಯಾಂಕ್ ಬಡ್ಡಿಗೆ ಅನ್ವಯಿಸುವುದಿಲ್ಲ ಎನ್ನುತ್ತಾರೆ. ಇದು ಸರಿನಾ? ನಿವೃತ್ತಿಯಿಂದ ಬಂದ ಹಣದ ಬಡ್ಡಿಯನ್ನು ಆದಾಯವೆಂದು ಪರಿಗಣಿಸುತ್ತಾರಾ? ಇದಕ್ಕೆ ವಿನಾಯಿತಿ ಇದೆಯೇ? ಜಿ.ಪಿ.ಎಫ್. ಠೇವಣಿ ಬಡ್ಡಿಗೆ ತೆರಿಗೆಗೆ ಒಳಪಡುವುದಿಲ್ಲ ಎಂದು ಕೇಳಿದ್ದೇವೆ. ದಯಮಾಡಿ ಎಲ್ಲವನ್ನೂ ನನಗೆ ತಿಳಿಸಿಕೊಡಿರಿ.

ಉತ್ತರ: ನೀವು ಹಿರಿಯ ನಾಗರಿಕರು ಹಾಗೂ ನಿಮ್ಮ ಪ್ರಕಾರ ತೀವ್ರತರಹ ಅಂಗವಿಕಲರು. ನಿಮಗೆ ₹3 ಲಕ್ಷ + 1.25 ಲಕ್ಷ ತನಕ ಆದಾಯವಿರುವ ತನಕ ತೆರಿಗೆ ಬರುವುದಿಲ್ಲ. (ಸೆಕ್ಷನ್ 80ಯು) ನಿವೃತ್ತಿಯಿಂದ ಬಂದ ಹಣದ ಹಾಗೂ ನೀವು ಉಳಿತಾಯ ಮಾಡಿದ ಹಣದ ಬಡ್ಡಿ ಹಾಗೂ ಪಿಂಚಣಿ ಹಣ ಸೇರಿಸಿ ವಾರ್ಷಿಕ ₹4.25  ಲಕ್ಷ ದಾಟಿದಲ್ಲಿ, ಹಾಗೆ ದಾಟಿದ ಮೊತ್ತಕ್ಕೆ ತೆರಿಗೆ ಸಲ್ಲಿಸಲೇಬೇಕು.  ಜಿ.ಪಿ.ಎಫ್. ಬಡ್ಡಿಗೆ ತೆರಿಗೆ ಇಲ್ಲ. ಈ ಹಣ ನಿವೃತ್ತಿಯ ನಂತರ ಠೇವಣಿ ಇರಿಸಿದಾಗ ಆಲ್ಲಿ ಬರುವ ಬಡ್ಡಿಗೆ ತೆರಿಗೆ ಇದೆ. ತೆರಿಗೆ ಕಾನೂನನ್ನು ಸರ್ಕಾರ ನಿರ್ಧರಿಸುತ್ತಿದ್ದು, ಅದು ಸರಿ ಅಥವಾ ಸರಿಯಲ್ಲ ಎನ್ನುವ ಹಕ್ಕು ಯಾರಿಗೂ ಇರುವುದಿಲ್ಲ. ನೀವು ಹೆಚ್ಚಿನ ಮೊತ್ತದ ಠೇವಣಿ ಹೊಂದಿದ್ದು, ಆದಾಯ ತೆರಿಗೆಗೆ ಒಳಪಡುವುದರಿಂದ ತೆರಿಗೆ ರಿಟರ್ನ್ ಕೂಡಾ ತುಂಬ ಬೇಕಾಗುತ್ತದೆ. ತೆರಿಗೆ ಸಲಹೆಗಾರರು ಅಥವಾ ಚಾರ್ಟರ್ಡ್ ಅಕೌಂಟೆಂಟ್ ಭೇಟಿ ಮಾಡಿ ತಪ್ಪದೇ 31–7–2017 ರೊಳಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ.

ರಮ್ಯಾ, ಊರ ಬೇಡ

* ನನ್ನ ವಯಸ್ಸು 28. ಪತಿಯ ವಯಸ್ಸು 35. ಪತಿಗೆ ಖಾಸಗಿ ಉದ್ಯೋಗ, ಸ್ವಂತ ಮನೆ ಇದೆ. ಎಲ್ಲ ಖರ್ಚು ಕಳೆದು ಉಳಿತಾಯ ₹8,000. ಎಂಟು ತಿಂಗಳ ಹೆಣ್ಣು ಮಗು ಇದೆ. ಈವರೆಗೆ ಯಾವುದೇ ಉಳಿತಾಯವಿಲ್ಲ. ಮದುವೆ ಆಗಿ ಎರಡು ವರ್ಷವಾಗಿದೆ. ನಮ್ಮ ಮೂರು ಜನರಿಗೆ ಅನ್ವಯವಾಗುವ ಉತ್ತಮ ಉಳಿತಾಯ ಯೋಜನೆ ತಿಳಿಸಿ. ಹಾಗೆಯೇ RP* F, ಆರೋಗ್ಯ ವಿಮೆ ಯಶಸ್ವಿ ಯೋಜನೆ ಅಥವಾ ಬೇರಾವುದೇ ಆರೋಗ್ಯ ವಿಮೆ ಉತ್ತಮವೇ ಹಾಗೂ ಆರೋಗ್ಯ ವಿಮೆ ಅವಶ್ಯಕವೇ ತಿಳಿಸಿ.

ಉತ್ತರ: ನೀವು ಇದುವರೆಗೆ ಏನೂ ಉಳಿತಾಯ ಮಾಡದಿರುವ ಕಾರಣ ತಿಳಿಯಲಿಲ್ಲ. ಜೀವವಿಮೆ ಇಲ್ಲವಾದಲ್ಲಿ ಕನಿಷ್ಠ ₹5 ಲಕ್ಷ ಜೀವನ ಆನಂದ ಎನ್ನುವ ಎಲ್‌.ಐ.ಸಿಯವರ ಪಾಲಿಸಿ ಮಾಡಿರಿ. ಚಿಕ್ಕ ಕಂದನ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಕನಿಷ್ಠ ₹12 ಸಾವಿರ ತುಂಬಿ. ಇದೇ ವೇಳೆ ನಿಮ್ಮ ಹಾಗೂ ಗಂಡನ ಹೆಸರಿನಲ್ಲಿ ಜಂಟಿಯಾಗಿರುವ ₹5 ಸಾವಿರ ಆರ್‌.ಡಿ. 10 ವರ್ಷಗಳ ಅವಧಿಗೆ ಮಾಡಿ. ಸದ್ಯದ ಪರಿಸ್ಥಿತಿಯಲ್ಲಿ ಯಾವುದಾದರೂ ಸಹಕಾರಿ ಸಂಸ್ಥೆಯಲ್ಲಿ ಸದಸ್ಯತ್ವ ಪಡೆದು ಯಶಸ್ವಿನಿ ಆರೋಗ್ಯ ವಿಮೆ ಮಾಡಿ. ಹಾಗೂ ಬೇರಾವ ಆರೋಗ್ಯ ವಿಮೆ ಅವಶ್ಯಕವಿಲ್ಲ. ಯಶಸ್ವಿನಿ ಹೊರುತುಪಡಿಸಿ ಉಳಿದ ವಿಮೆ ತುಂಬಾ ದುಬಾರಿ. ಹಾಗೂ 40 ವರ್ಷ ದಾಟಿದ ನಂತರ ಮಾಡಬಹುದು. ಮೇಲಿನಂತೆ   ಪ್ಲ್ಯಾನ್‌ ಮಾಡಿ ನಡೆದುಕೊಂಡರೆ ನಿಮಗೆ ಉತ್ತಮ ಭವಿಷ್ಯವಿರುತ್ತದೆ.

ಲಕ್ಷ್ಮೀಕಾಂತ, ಗುಬ್ಬಿ ತಾಲ್ಲೂಕು, ತುಮಕೂರು

* ನಾನು ದ್ವಿಚಕ್ರವಾಹನದ ಮೆಕ್ಯಾನಿಕ್‌. ಎಸ್‌.ಸಿ. ಜಾತಿಗೆ ಸೇರಿದವನು. ಗ್ಯಾರೇಜು ಪ್ರಾರಂಭಿಸಲು ಸಾಲಬೇಕಾಗಿದೆ.

ಉತ್ತರ: ನೀವು ತುಮಕೂರಿನ ಡಿಸ್ಟ್ರಿಕ್ಟ್‌ ಇಂಡಸ್ಟ್ರೀಸ್‌ ಸೆಂಟರ್‌ನಲ್ಲಿ ಸ್ವಂತ ಉದ್ಯೋಗ ದ್ವಿಚಕ್ರವಾಹನ ಗ್ಯಾರೇಜ್‌ ಮಾಡಲು ವಿವರಣೆ ಕೇಳಿರಿ. ಅಲ್ಲಿ ಮಾಹಿತಿ ಹಾಗೂ ತರಬೇತಿ ಕೂಡಾ ದೊರೆಯುತ್ತದೆ. ಇಲ್ಲಿ ಸರ್ಟಿಫಿಕೇಟು ಪಡೆದು, SC & ST Finance Corporation ಮುಖಾಂತರ ಸಾಲ ಪಡೆಯಿರಿ. ಬಡ್ಡಿದರ ಕಡಿಮೆ ಹಾಗೂ ಅನುದಾನ (ಸಬ್ಸಿಡಿ) ಎರಡೂ ಸಿಗುತ್ತದೆ. ನಿಮ್ಮ ಪರಿಸರಕ್ಕೆ ಈ ಮಾರ್ಗವೇ ಉತ್ತಮ. ಸಾಲಪಡೆದು ಸಕಾಲಕ್ಕೆ ತೀರಿಸಿ ದ್ವಿಚಕ್ರದಿಂದ ನಾಲ್ಕು ಚಕ್ರವಾಹನ ದುರಸ್ತಿ ಮಾಡುವ ಸಾಮರ್ಥ್ಯ  ನಿಮಗೆ ದೊರೆಯಲಿ ಎಂದು ಆಶಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT