ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಚೆಲ್ಲಿ ಚುನಾವಣೆ ಗೆಲ್ಲುವ ವೋಟಿನ ಆಟಕ್ಕೆ ತಡೆಯೊಡ್ಡಿ

Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಭಾರತದ ಮುಖ್ಯವಾಹಿನಿ ರಾಜಕೀಯ ಪಕ್ಷಗಳು ಪರಸ್ಪರ ಸೈದ್ಧಾಂತಿಕವಾಗಿ ಭಿನ್ನ ನಿಲುವುಗಳನ್ನು ತಳೆಯುತ್ತವೆ. ಒಂದು ಪಕ್ಷ ಒಪ್ಪಿದ್ದನ್ನು ಮತ್ತೊಂದು ಪಕ್ಷ ಶತಾಯಗತಾಯ ವಿರೋಧಿಸುತ್ತದೆ.

ಚುನಾವಣಾ ಸುಧಾರಣೆಗಳು, ರಾಜಕೀಯ ಪಕ್ಷಗಳು ಪಡೆಯುವ ದೇಣಿಗೆಯ ಪಾರದರ್ಶಕತೆಯ ವಿಚಾರ ಬಂದಾಗ ಎಲ್ಲಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೂ ಇಲ್ಲವಾಗಿ ಅಪಾರದರ್ಶಕ ವ್ಯವಸ್ಥೆಯನ್ನು ಕೆಲವು ಸಂದರ್ಭಗಳಲ್ಲಿ ಪರೋಕ್ಷವಾಗಿ ಬೆಂಬಲಿಸುತ್ತವೆ.

ತಮಿಳುನಾಡಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಒಂದೇ ವರ್ಷದ ಅವಧಿಯಲ್ಲಿ ‘ವೋಟಿಗಾಗಿ ನೋಟು’ ಕಾರಣಕ್ಕಾಗಿ ಮತದಾನವನ್ನು ರದ್ದುಪಡಿಸಲಾಗಿದೆ. ಇದು ದೇಶದ ಎಲ್ಲಾ ರಾಜಕೀಯ ಪಕ್ಷಗಳ ಆತ್ಮವನ್ನು ಕಲಕಬೇಕಾಗಿದ್ದ ವಿಚಾರ.
 
ಆದರೆ ಇದರ ಬಗ್ಗೆ ಯಾವ ದೊಡ್ಡ ಹೇಳಿಕೆಯೂ ಈ ತನಕ ಹೊರಬಿದ್ದಿಲ್ಲ ಎಂಬುದೇ ಚುನಾವಣಾ ವ್ಯವಸ್ಥೆಯನ್ನು ಹಾಳುಗೆಡಹುವಲ್ಲಿ ನಮ್ಮ ರಾಜಕೀಯ ಪಕ್ಷಗಳು ವಹಿಸಿರುವ ಪಾತ್ರವನ್ನು ಸೂಚಿಸುತ್ತಿರುವಂತಿದೆ. ಒಂದು ದಶಕದ ಅವಧಿಯಲ್ಲಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ಮುಖ್ಯ ತೀರ್ಪುಗಳನ್ನು ನೀಡಿದೆ.

ಕಳೆದ 25 ವರ್ಷಗಳ ಅವಧಿಯಲ್ಲಿ  ರಾಜಕೀಯ ಪಕ್ಷಗಳ ಆಂತರಿಕ ಪ್ರಜಾಪ್ರಭುತ್ವವನ್ನು ಖಾತರಿಪಡಿಸುವ ಮತ್ತು ಅವುಗಳ ಸಂಪನ್ಮೂಲ ಕ್ರೋಡೀಕರಣ ಮತ್ತು ವೆಚ್ಚವನ್ನು ಪಾರದರ್ಶಕಗೊಳಿಸುವುದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗ, ಕಾನೂನು ಆಯೋಗ, ಆಡಳಿತ ಸುಧಾರಣಾ ಆಯೋಗಗಳು ಹಲವು ಸಲಹೆಗಳನ್ನು ನೀಡಿವೆ.
 
ಆದರೆ ಇವುಗಳಲ್ಲಿ ಹೆಚ್ಚಿನವು ಕಾರ್ಯರೂಪಕ್ಕೆ ಬಂದಿಲ್ಲ. ಬಂದಿರುವ ಕೆಲವು ಮೂಲ ಆಶಯವನ್ನು ಪ್ರತಿಬಿಂಬಿಸುತ್ತಿಲ್ಲ. ಇದರ ಪರಿಣಾಮ ಈಗ ಚುನಾವಣೆಗಳಲ್ಲಿ ಕಾಣಿಸುತ್ತಿದೆ. ಮಾಧ್ಯಮಗಳ ವ್ಯಾಪ್ತಿ ಮತ್ತು ದಟ್ಟಣೆಗಳೆರಡೂ ಹೆಚ್ಚಾಗಿರುವುದರಿಂದ ಚುನಾವಣಾ ಅಕ್ರಮಗಳು ಈಗ ಮೊದಲಿಗಿಂತ ಸುಲಭವಾಗಿ ಬಯಲಾಗುತ್ತಿವೆ.
 
ಇದರ ಪರಿಣಾಮವೆಂಬಂತೆ ತಮಿಳುನಾಡಿನ ಆರ್.ಕೆ.ನಗರ ಕ್ಷೇತ್ರದ ಉಪ ಚುನಾವಣೆಯನ್ನು ರದ್ದುಪಡಿಸಲಾಗಿದೆ. ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆಯ ಉಪ ಚುನಾವಣೆಗಳಲ್ಲಿಯೂ ಗಮನಾರ್ಹ ಪ್ರಮಾಣದಲ್ಲಿ ಹಣದ ಹೊಳೆ ಹರಿದಿದೆ ಎಂಬ ಆರೋಪಗಳಿವೆ.
 
ಆದರೆ ಮತದಾನವನ್ನು ರದ್ದುಪಡಿಸಲು ಬೇಕಿರುವಷ್ಟು ಪುರಾವೆಗಳು ಚುನಾವಣಾ ಆಯೋಗಕ್ಕೆ ದೊರೆತಿಲ್ಲ ಎಂಬ ಏಕೈಕ ಕಾರಣದಿಂದ ಇಲ್ಲಿ ಮತದಾನ ನಡೆದಿದೆ ಎಂಬುದು ವಾಸ್ತವ. ಕಾಶ್ಮೀರದಲ್ಲಿ ನಡೆದ ಉಪಚುನಾವಣೆಗಳ ಕಥೆ ಮತ್ತೊಂದು ಬಗೆಯದು. ಕೇವಲ ಶೇಕಡ 7ರಷ್ಟು ಮತದಾನವಷ್ಟೇ ಇಲ್ಲಿ ನಡೆದಿದೆ. ಮತದಾನದ ಅವಧಿಯಲ್ಲಿ ನಡೆದ 200ಕ್ಕೂ ಹೆಚ್ಚಿನ ಹಿಂಸಾತ್ಮಕ ಪ್ರತಿಭಟನೆಗಳು ಎಂಟು ಮಂದಿಯನ್ನು ಬಲಿ ತೆಗೆದುಕೊಂಡಿವೆ.
 
ಈ ಎಲ್ಲಾ ಘಟನೆಗಳು ಚುನಾವಣಾ ಸುಧಾರಣೆಯ ಅಗತ್ಯದ ಕುರಿತಂತೆ ಹೇಳುತ್ತಿರುವಂತೆಯೇ ಉಪ ಚುನಾವಣೆಗಳ ಮಿತಿಯನ್ನೂ ತೋರಿಸಿಕೊಡುತ್ತಿವೆ. ಕರ್ನಾಟಕದಲ್ಲಿ ಉಪಚುನಾವಣೆಗಳು ನಡೆದ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಯ ಅವಧಿ ಒಂದು ವರ್ಷವೂ ಪೂರ್ಣವಾಗಿ ಇರುವುದಿಲ್ಲ. ಈ ಅವಧಿಗೆ ಅಲ್ಲೊಬ್ಬರು ಜನಪ್ರತಿನಿಧಿ ಇಲ್ಲದೇ ಇದ್ದರೂ ಯಾವುದೇ ತೊಂದರೆ ಇರಲಿಲ್ಲ.
 
ಒಂದು ಕ್ಷೇತ್ರದಲ್ಲಿ ಉಪಚುನಾವಣೆಗೆ ಕಾರಣವಾದದ್ದು ಒಬ್ಬ ವ್ಯಕ್ತಿಯ ತಥಾಕಥಿತ ‘ಮರ್ಯಾದೆ’  ಅಥವಾ ಪ್ರತಿಷ್ಠೆ ಮಾತ್ರ. ಇದಕ್ಕಾಗಿ ಸಾರ್ವಜನಿಕ ಹಣ, ಸಮಯ ಎಲ್ಲವೂ ಏಕೆ ವ್ಯಯವಾಗಬೇಕು? ಇಂಥ ಸಂದರ್ಭಗಳನ್ನು ಪ್ರಾಯೋಗಿಕವಾಗಿ ವಿಶ್ಲೇಷಿಸುವ ಅಗತ್ಯವಿದೆ. ಒಟ್ಟು ಅವಧಿಯ ಅರ್ಧಕ್ಕಿಂತ ಕಡಿಮೆ ಸಮಯ ಮಾತ್ರ ಉಳಿದಿರುವಾಗ ಉಪ ಚುನಾವಣೆಯನ್ನು ನಡೆಸದೇ ಇರುವ ಸಾಧ್ಯತೆಯೊಂದರ ಬಗ್ಗೆ ಚುನಾವಣಾ ಆಯೋಗ ಚಿಂತಿಸಬೇಕಾಗಿದೆ.
 
ಕಾಶ್ಮೀರದಲ್ಲಿ ಚುನಾವಣೆಗಳನ್ನು ನಡೆಸಲು ತೋರುವ ಧೈರ್ಯವನ್ನೇ ಅಲ್ಲಿನ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದರಲ್ಲಿಯೂ ಸರ್ಕಾರ ತೋರಿಸಬೇಕು. ಇಲ್ಲವಾದರೆ ಚುನಾವಣೆ ಎಂಬುದು ಕೇವಲ ತೋರಿಕೆಯ ವ್ಯವಹಾರವಾಗಿಬಿಡುತ್ತದೆ. ದುರಂತವೆಂದರೆ ಈ ಎಲ್ಲವೂ ಮುಖ್ಯವಾಹಿನಿಯ ಎಲ್ಲಾ ರಾಜಕೀಯ ಪಕ್ಷಗಳಿಗೆ ಗೊತ್ತಿದೆ. ಆದರೆ ಮುಖಂಡರು ಯಾರೂ ಈ ಬಗ್ಗೆ ಮಾತಾಡುವುದಿಲ್ಲ.
 
ಏಕೆಂದರೆ ರಾಜಕಾರಣದ ನೆಲೆಯಿರುವುದೇ ಈ ಬಗೆಯ ಅಪಾರದರ್ಶಕ ಚುನಾವಣಾ ವ್ಯವಸ್ಥೆಯಲ್ಲಿ. ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರ್ಕಾರ ಚುನಾವಣೆಯನ್ನು ಎದುರಿಸಿದ್ದೇ ಯುಪಿಎ ಅವಧಿಯ ಭ್ರಷ್ಟಾಚಾರವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ವಿದೇಶಿ ದೇಣಿಗೆ ಸ್ವೀಕಾರದ ವಿಷಯದಲ್ಲಿ ಮಾಡಿರುವ ತಪ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ತೋರಿಸಿತ್ತು.
 
ಇದನ್ನು ನಿವಾರಿಸಿಕೊಳ್ಳಲು ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆಗೆ ಪೂರ್ವಾನ್ವಯವಾಗುವಂತೆ ತಿದ್ದುಪಡಿಗಳನ್ನು ತಂದದ್ದು ಎನ್‌ಡಿಎ ಸರ್ಕಾರವೇ. ಈ ವರ್ಷ ಕೊನೆಯ ಕ್ಷಣದಲ್ಲಿ ಹಣಕಾಸು ಮಸೂದೆಗೆ ಹಲವು ತಿದ್ದುಪಡಿಗಳನ್ನು ತಂದು ಸುದೀರ್ಘ ಸಂಸದೀಯ ಚರ್ಚೆಗಳಿಗೂ ಅನುವು ಮಾಡಿಕೊಡದೆ ವಾಣಿಜ್ಯ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ಎಣೆಯೇ ಇಲ್ಲದೆ ಹಣ ಹೂಡಲು ಅವಕಾಶ ಮಾಡಿಕೊಟ್ಟಿತು.
 
ಪಾರದರ್ಶಕತೆ ಎಂಬುದು ರಾಜಕೀಯ ಪಕ್ಷಗಳಿಗೆ ಕೇವಲ ಭಾಷಣದ ವಿಚಾರ. ಚುನಾವಣಾ ಸುಧಾರಣೆಗೆ ನ್ಯಾಯಾಲಯಗಳ ಮಧ್ಯ ಪ್ರವೇಶವೇ ಅಗತ್ಯವಾಗುತ್ತಾ ಹೋಗುತ್ತಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗಿನಿಂದ ಶಿಥಿಲವಾಗುತ್ತಿರುವುದರ ಸೂಚನೆ ಎಂಬುದನ್ನು ನಾವು ಮನಗಂಡು ಕಾರ್ಯಪ್ರವೃತ್ತರಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT