ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮರಾವತಿ’ ಅತ್ಯುತ್ತಮ, ಅಚ್ಯುತ–ಶ್ರುತಿ ಶ್ರೇಷ್ಠರು

ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ
Last Updated 11 ಏಪ್ರಿಲ್ 2017, 20:16 IST
ಅಕ್ಷರ ಗಾತ್ರ

ಬೆಂಗಳೂರು: 2016ನೇ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಪೌರ ಕಾರ್ಮಿಕರ ತವಕ ತಲ್ಲಣಗಳ ಚಿತ್ರಣದ ‘ಅಮರಾವತಿ’ ವರ್ಷದ ಅತ್ಯುತ್ತಮ ಚಿತ್ರ ಪ್ರಶಸ್ತಿ (ನಿರ್ಮಾಪಕ ಮತ್ತು ನಿರ್ದೆಶಕರಿಬ್ಬರಿಗೂ ತಲಾ ₹1 ಲಕ್ಷ ನಗದು ಹಾಗೂ 50 ಗ್ರಾಂ ಚಿನ್ನದ ಪದಕ) ಯನ್ನು ಮುಡಿಗೇರಿಸಿಕೊಂಡಿದ್ದು , ಈ ಚಿತ್ರಕ್ಕೆ ವಿವಿಧ ವಿಭಾಗಗಳಲ್ಲಿ ಮೂರು ಪ್ರಶಸ್ತಿಗಳು ಸಂದಿವೆ.

‘ಅಮರಾವತಿ’ ಚಿತ್ರದ ನಟನೆಗಾಗಿ ಅಚ್ಯುತ್‌ ಕುಮಾರ್‌ ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್‌  ಮನಸುಗಳು’ ಸಿನಿಮಾದ ನಟನೆಗಾಗಿ ಶ್ರುತಿ ಹರಿಹರನ್‌ ಅತ್ಯುತ್ತಮ ನಟಿ ಪ್ರಶಸ್ತಿ  ಪಡೆದುಕೊಂಡಿದ್ದಾರೆ (₹ 20 ಸಾವಿರ ನಗದು ಮತ್ತು 100 ಗ್ರಾಂ ಬೆಳ್ಳಿ ಪದಕ).

ಮಂಗಳವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಧ ವಿಭಾಗಗಳಲ್ಲಿನ ಪ್ರಶಸ್ತಿ ಪಟ್ಟಿಯನ್ನು ಬಿಡುಗಡೆ ಮಾಡಿದರು. ‘ಇದೇ ತಿಂಗಳ 24ರಂದು ಡಾ. ರಾಜಕುಮಾರ್‌ ಜನ್ಮದಿನದಂದು ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು’ ಎಂದು ಅವರು ತಿಳಿಸಿದರು.

ಕವಿತಾ ಲಂಕೇಶ್‌ ನೇತೃತ್ವದಲ್ಲಿ ಎಂಟು ಜನ ಸದಸ್ಯರ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಯು ಪ್ರಶಸ್ತಿ ಕಣದಲ್ಲಿದ್ದ 126 ಸಿನಿಮಾಗಳನ್ನು ವೀಕ್ಷಿಸಿ 25 ವಿಭಾಗಗಳಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಕವಿತಾ ಲಂಕೇಶ್‌, ‘ಮುಂದಿನ ವರ್ಷದಿಂದ ನಿರ್ಣಾಯಕರು ಮಕ್ಕಳ ಸಿನಿಮಾ ನೋಡುವಾಗ, ಅವರೊಟ್ಟಿಗೆ ನಾಲ್ಕೈದು ಸರ್ಕಾರಿ ಶಾಲಾ ಮಕ್ಕಳೂ ಸಿನಿಮಾ ನೋಡುವ ಅವಕಾಶ ಕಲ್ಪಿಸಬೇಕು. ಅವರ ಪ್ರತಿಕ್ರಿಯೆಯನ್ನೂ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ ಎಂದು ಚೇತನ್‌ ಮುಂಡಾಡಿ ನಿರ್ದೇಶನದ ‘ಮದಿಪು’ ಚಿತ್ರವನ್ನು ಗುರುತಿಸಲಾಗಿದೆ.
ಕೆ.ಶಿವರುದ್ರಯ್ಯ ನಿರ್ದೇಶನದ ‘ಮೂಡ್ಲ ಸೀಮೆಯಲಿ’ ಸಿನಿಮಾ ‘ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ’ ಎಂದು ಪರಿಗಣಿತವಾಗಿದೆ. ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ‘ಜೀರ್‌ ಜಿಂಬೆ’ಗೆ ನೀಡಲಾಗಿದ್ದು,  ವರ್ಷದ ಅತ್ಯುತ್ತಮ ಮನರಂಜನಾ ಚಿತ್ರಕ್ಕೆ ನೀಡಲಾಗುವ ‘ನರಸಿಂಹರಾಜು ಪ್ರಶಸ್ತಿ’ಯನ್ನು ರಿಷಭ್‌ ಶೆಟ್ಟಿ ನಿರ್ದೇಶನದ ‘ಕಿರಿಕ್‌ ಪಾರ್ಟಿ’ ಚಿತ್ರ ಪಡೆದುಕೊಂಡಿದೆ. ‘ರಾಮಾ ರಾಮಾ ರೇ’ ಸಿನಿಮಾದ ನಿರ್ದೇಶನಕ್ಕಾಗಿ ‘ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನುಡಿ. ಸತ್ಯಪ್ರಕಾಶ್‌ ಅವರಿಗೆ ನೀಡಲಾಗಿದೆ.

ನಿರೀಕ್ಷಿಸಿರಲಿಲ್ಲ: ‘ಪ್ರಶಸ್ತಿ ಪ್ರಕಟ ಆಗುತ್ತಿದೆ ಎಂಬುದೇ ಗೊತ್ತಿರಲಿಲ್ಲ. ನಿರೀಕ್ಷೆಯಂತೂ ಇರಲೇ ಇಲ್ಲ. ಹಿಂದೆ ‘ಹೆಜ್ಜೆಗಳು’ ಚಿತ್ರಕ್ಕೆ ಪೋಷಕ ನಟ ಪ್ರಶಸ್ತಿ ಬಂದಿತ್ತು. ಆದರೆ ‘ಅಮರಾವತಿ’ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದ್ದು ಹೆಚ್ಚು ವಿಶೇಷ. ಪ್ರಶಸ್ತಿಗಳು ಯಾವಾಗಲೂ ನಮಗೆ ಜವಾಬ್ದಾರಿಯುತವಾಗಿ ಅಭಿನಯಿಸಿ ಎಂದು ಎಚ್ಚರಿಸುತ್ತಲೇ ಇರುತ್ತವೆ. ಪ್ರತಿ ಪಾತ್ರ, ಪ್ರತಿ ಕಥೆ ಹೊಸತೇ ಆಗಿರುವುದರಿಂದ ಪ್ರತಿ ಬಾರಿಯೂ ನಮ್ಮನ್ನು ನಾವು ನಿರೂಪಿಸಿಕೊಳ್ಳುತ್ತಲೇ ಇರಬೇಕು’ ಎಂದು ಅಚ್ಯುತ್‌ಕುಮಾರ್‌ ಪ್ರತಿಕ್ರಿಯಿಸಿದರು. 

‘ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ. ನನಗೆ ಪ್ರಶಸ್ತಿ ಸಿಗುತ್ತದೆ ಎಂಬ ನಿರೀಕ್ಷೆಯೇ ಇರಲಿಲ್ಲ. ನಾಲ್ಕು ವರ್ಷಗಳಿಂದ ಉದ್ಯಮದಲ್ಲಿದ್ದರೂ ಯಾವತ್ತೂ ಪ್ರಶಸ್ತಿಯ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡಿಲ್ಲ. ನನ್ನಲ್ಲಿರುವ ನಟಿಯನ್ನು ಸಂಪೂರ್ಣವಾಗಿ ಹೊರತಂದ ಚಿತ್ರ ‘ಬ್ಯೂಟಿಫುಲ್ ಮನಸುಗಳು’. ನನ್ನೆಲ್ಲ ನಟನಾರೂಢಿಗಳನ್ನು ಮುರಿದ ಸಿನಿಮಾ ಇದು’ ಎಂದು ಶ್ರುತಿ ಹರಿಹರನ್ ಹೇಳಿದರು
ವಾರ್ತಾ ಇಲಾಖೆ ನಿರ್ದೇಶಕ ಎನ್‌. ಆರ್‌. ವಿಶುಕುಮಾರ್‌ ಮತ್ತು ಆಯ್ಕೆ ಸಮಿತಿ ಸದಸ್ಯರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಈ ತಿಂಗಳಲ್ಲೇ ಜಾರಿ: ಸಿದ್ದರಾಮಯ್ಯ
ಇತ್ತೀಚೆಗೆ ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್‌ನಲ್ಲಿ ಹವಾನಿಯಂತ್ರಕ ಚಾಲನೆಮಾಡದ ವಿಷಯಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ‘ಸರ್ಕಾರ ಕೆಲವೊಂದು ನಿಯಮಗಳನ್ನು ಮಾಡಿದೆ. ಅದನ್ನು ಪಾಲಿಸಬೇಕು. ಪಾಲಿಸದಿದ್ದಲ್ಲಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಟಿಕೆಟ್‌ ದರ ₹200ಕ್ಕೆ ನಿಗದಿಪಡಿಸಿರುವುದು ಇದೇ ತಿಂಗಳಿಂದ ಜಾರಿಗೆ
ಬರಲಿದೆ’ ಎಂದೂ ಅವರು ತಿಳಿಸಿದರು.

ಎರಡೇ ಲಕ್ಷಕ್ಕೆ ಸಿನಿಮಾ!: ‘ಈ ವರ್ಷದಿಂದ 125 ಸಿನಿಮಾಗಳಿಗೆ ಸಹಾಯಧನ ನೀಡುತ್ತಿದ್ದೇವೆ’ ಎಂದು ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಾಗ, ‘ಇದರಿಂದ ಸಬ್ಸಿಡಿಯ ಆಸೆಗೆ ಸಿನಿಮಾ ಮಾಡುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ’ ಎಂಬ ಮಾತು ಕೇಳಿಬಂತು. ಅದನ್ನು ಕೇಳಿ ಸಿಎಂ ‘ಬರೀ ಸಬ್ಸಿಡಿ ಹಣದಿಂದಲೇ ಸಿನಿಮಾ ಮಾಡಬಹುದಾ?’ ಎಂದು ಅಚ್ಚರಿಯಿಂದ ಪ್ರಶ್ನಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ಕವಿತಾ ಲಂಕೇಶ್‌, ‘ಎರಡು ಲಕ್ಷಕ್ಕೂ ಸಿನಿಮಾ ಮಾಡಿ ಸಬ್ಸಿಡಿ ತೆಗೆದುಕೊಳ್ಳುವವರಿದ್ದಾರೆ ಸರ್‌’ ಎಂದಾಗ ಸಿದ್ದರಾಮಯ್ಯ ಇನ್ನಷ್ಟು ಅಚ್ಚರಿ ವ್ಯಕ್ತಪಡಿಸಿದರು.

***
ಈ ಪ್ರಶಸ್ತಿಯಾದರೂ ಚಿತ್ರದ ಬಗ್ಗೆ ಪೌರ ಕಾರ್ಮಿಕರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ಸ್ಫೂರ್ತಿಯಾಗಲಿ ಎಂದುಕೊಳ್ಳುತ್ತೇನೆ.

ಬಿ.ಎಂ. ಗಿರಿರಾಜ್
‘ಅಮರಾವತಿ’ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT