ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು ಯೋಜನೆ ಅವೈಜ್ಞಾನಿಕ: ಲೋಕೇಶ್ವರ ಟೀಕೆ

Last Updated 12 ಏಪ್ರಿಲ್ 2017, 4:50 IST
ಅಕ್ಷರ ಗಾತ್ರ

ತಿಪಟೂರು: ನೊಣವಿನಕೆರೆಯಿಂದ ನಗರಕ್ಕೆ ನಿರಂತರ ಕುಡಿಯುವ ನೀರು ಪೂರೈಸುವ ₹ 400 ಕೋಟಿ ವೆಚ್ಚದ ಯೋಜನೆ ಅವೈಜ್ಞಾನಿಕ ಎಂದು ಜೆಡಿಎಸ್ ಮುಖಂಡ ಲೋಕೇಶ್ವರ ಟೀಕಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೊಣವಿನಕೆರೆ ಕೆರೆಯಿಂದ ಸಾವಿರಾರು ಎಕರೆ ಜಮೀನಿಗೆ ನೀರು ಪೂರೈಕೆ ಆಗುತ್ತಿದೆ’ ಎಂದರು.

‘ನೊಣವಿನಕೆರೆ ನಂಬಿ 1,336 ಎಕರೆ ಪ್ರದೇಶದ ರೈತರು ಜೀವನ ಸಾಗಿಸುತ್ತಿದ್ದಾರೆ. 24/7 ಕುಡಿಯುವ ನೀರಿನ ಯೋಜನೆಗೆ ಇಲ್ಲಿಂದ ನೀರು ತರುವುದು ಅವೈಜ್ಞಾನಿಕವಾಗಿದೆ. ರೈತರ ವಿರೋಧ ಕಟ್ಟಿಕೊಂಡು ನೂರಾರು ಕೋಟಿ ಹಣ ವ್ಯಯ ಮಾಡಬಾರದು. ಶಾಸಕರ ಏಕಮುಖ ತೀರ್ಮಾನ ಒಳ್ಳೆಯದಲ್ಲ.

ಈಗಾಗಲೇ ಹಿಂದಿನ ಶಾಸಕರ ಅವಧಿಯಲ್ಲಿ ನಗರದ ಕೆರೆ ಅಭಿವೃದ್ಧಿ ಹೆಸರಿನಲ್ಲಿ ₹ 4.5 ಕೋಟಿ ದುರುಪಯೋಗವಾಗಿದೆ. ಹೂಳು ಎತ್ತದೆ ಹಣ ಖರ್ಚಾಗಿದೆ. ಕೆರೆ ನೀರಿಲ್ಲದೆ ಒಣಗಿದೆ. ಆದರೂ ನಗರಸಭೆ ಪ್ರತಿ ತಿಂಗಳು ₹ 1.5 ಲಕ್ಷ ವಿದ್ಯುತ್ ಬಿಲ್‌ ಭರಿಸುತ್ತಿದೆ.

ಈ ಕೆರೆಯನ್ನು ಬಳಸಿಕೊಂಡು 24/7 ಯೋಜನೆ ರೂಪಿಸಿದ್ದರೆ ಅನುಕೂಲವಾಗುತ್ತಿತ್ತು. ರೈತರ ವಿರೋಧ ಕಟ್ಟಿಕೊಂಡು ಗ್ರಾಮಸಭೆ ನಡೆಸದೆ ರಹಸ್ಯವಾಗಿ ಕೆಲಸ ಮಾಡುವುದನ್ನು ಶಾಸಕರು ಬಿಡಬೇಕು’ ಎಂದರು.

‘ಎಪಿಎಂಸಿ ಚುನಾವಣೆ ನಡೆದು ತಿಂಗಳು ಕಳೆದರೂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ನಗರಸಭೆ ಸ್ಥಾಯಿ ಸಮಿತಿಗೆ ಅಧ್ಯಕ್ಷರಿಲ್ಲ. ತಹಶೀಲ್ದಾರ್ ನೇಮಕಗೊಂಡಿಲ್ಲ. ಚಿಕ್ಕನಾಯಕನಹಳ್ಳಿ, ತಿಪಟೂರು ಹಾಗೂ ಗಂಡಸಿ ರಸ್ತೆ ರಿಪೇರಿ ಆಗಿಲ್ಲ. ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ.
ನಗರದ ಡಿಪೊ ಬಳಿ ಚರಂಡಿ ನೀರು ಕೆರೆಗೆ ಹರಿಯುತ್ತಿದೆ. ಗಾಂಧಿನಗರದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ವೈದ್ಯರಿಲ್ಲ’ ಎಂದು ದೂರಿದರು.

ಮುಖಂಡ ಶಿವಸ್ವಾಮಿ ಮಾತನಾಡಿ, ‘ರಾಜ್ಯ ಸರ್ಕಾರದಿಂದ ಬರ ಪರಿಹಾರಕ್ಕೆ ₹ 680 ಕೋಟಿ ಬಿಡುಗಡೆಯಾಗಿದೆ. ಆದರೆ ರೈತರಿಗೆ ಸರಿಯಾಗಿ ಪಾವತಿಸಿಲ್ಲ’ ಎಂದು ಆರೋಪಿಸಿದರು. ನೋಟು ನಿಷೇಧದಿಂದ ಬಂದ ಲಾಭವನ್ನು ಕೇಂದ್ರ ಸರ್ಕಾರ ರೈತರಿಗೆ ನೀಡಬೇಕು ಎಂದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಎನ್.ಸಿ.ರಮೇಶ್ ಮಾತನಾಡಿ, ‘ಹಳೇ ಕಾಮಗಾರಿಗೆ ₹ 68 ಲಕ್ಷ ಬಿಡುಗಡೆ ಆಗುವವರೆಗೂ ಎಪಿಎಂಸಿ ಅಧ್ಯಕ್ಷರ ನೇಮಕ ಮಾಡಲು ಶಾಸಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಆಪಾದಿಸಿದರು.

ತಾ.ಪಂ ಸದಸ್ಯ ನಾಗರಾಜು, ಎಪಿಎಂಸಿ ನಿರ್ದೇಶಕರಾದ ತರಕಾರಿ ನಾಗರಾಜು, ಟಿ.ಎಸ್.ಬಸವರಾಜು, ಬೋರ್‌ವೆಲ್ ಮಧು, ನಗರಸಭಾ ಸದಸ್ಯರಾದ ಸೊಪ್ಪುಗಣೇಶ್, ಯದುನಂದನ್, ಮುಖಂಡ ತಿಮ್ಮೇಗೌಡ, ರೈತ ಜಗದೀಶ್, ಮೀನುಗಾರರ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT