ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಾನಮುಕ್ತ ಗ್ರಾಮ’ ರೂಪಿಸಲು ಶ್ರಮಿಸಿ

ದಲಿತ ದೌರ್ಜನ್ಯ ತಡೆ ನಿಯಂತ್ರಣ ಜಾಗೃತಿ ಸಮಿತಿ ಸಭೆಯಲ್ಲಿ ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ
Last Updated 12 ಏಪ್ರಿಲ್ 2017, 5:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅಬಕಾರಿ ಇಲಾಖೆಯ ಅಧಿಕಾರಿಗಳು ಇತರ ಇಲಾಖೆಯವರ ಸಹಕಾರದೊಂದಿಗೆ ಗ್ರಾಮಗಳನ್ನು ಪಾನ ಮುಕ್ತಗೊಳಿಸಲು ಕಾರ್ಯಕ್ರಮ ರೂಪಿಸಬೇಕು’ ಎಂದು ಉಪ ವಿಭಾಗಾಧಿಕಾರಿ ಬಿ.ಶಿವಸ್ವಾಮಿ ಸೂಚನೆ ನೀಡಿದರು.

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಉಪ ವಿಭಾಗ ಮಟ್ಟದ ದಲಿತ ದೌರ್ಜನ್ಯ ತಡೆ ನಿಯಂತ್ರಣ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ದಲಿತ ಕಾಲೋನಿಗಳಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದ್ದು, ಇದರಿಂದಾಗಿ ದಲಿತ ಕುಟುಂಬಗಳು ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿವೆ’ ಎಂದು ಸಭೆಯಲ್ಲಿದ್ದ ಅನೇಕ ಸಾರ್ವಜನಿಕರು ಮತ್ತು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು.

‘ಅಬಕಾರಿ ಇಲಾಖೆಯವರು ಪ್ರತಿ ತಾಲ್ಲೂಕಿನಲ್ಲಿ ಕನಿಷ್ಠ ಐದು ಗ್ರಾಮಗಳನ್ನು ‘ಪಾನಮುಕ್ತ ಗ್ರಾಮ’ಗಳನ್ನಾಗಿ ರೂಪಿಸಬೇಕು. ಅದಕ್ಕಾಗಿ ಸ್ತ್ರೀ ಶಕ್ತಿ ಸಂಘಗಳು ಮತ್ತು ಅಂಗನವಾಡಿ ಕಾರ್ಯಕರ್ತರ ಸಹಯೋಗದಲ್ಲಿ ಅರಿವು ಮೂಡಿಸುವ ಜಾಥಾಗಳನ್ನು ಆಯೋಜಿಸಬೇಕು. ಆ ಮೂಲಕ ಜನರಲ್ಲಿ  ಕುಡಿತದ ದುಷ್ಪರಿಣಾಮ ಕುರಿತು ತಿಳುವಳಿಕೆ ಮೂಡಿಸುವ ಕೆಲಸ ಮಾಡಬೇಕು’ ಎಂದು ಶಿವಸ್ವಾಮಿ ತಿಳಿಸಿದರು.

‘ಗ್ರಾಮೀಣ ಪ್ರದೇಶಗಳ ಕಿರಾಣಿ ಅಂಗಡಿಗಳಲ್ಲಿ ಚಿಲ್ಲರೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ದೂರುಗಳು ಕೇಳಿಬರುತ್ತಿವೆ. ಇದಕ್ಕೆ ತಕ್ಷಣ ಕಡಿವಾಣ ಹಾಕಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ದಲಿತ ದೌರ್ಜನ್ಯ ತಡೆ ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣಗಳನ್ನು ಖುದ್ದು ಡಿವೈಎಸ್ಪಿಗಳು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಪಟ್ಟಿ ಸಲ್ಲಿಸಬೇಕು. ಶಿಕ್ಷೆಯ ಪ್ರಮಾಣ ಹೆಚ್ಚಾಗುವ ರೀತಿಯಲ್ಲಿ ಆರೋಪಪಟ್ಟಿ ಸಿದ್ಧಪಡಿಸಬೇಕು.

ಇಂತಹ ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ದೌರ್ಜನ್ಯಕ್ಕೆ ಒಳಗಾದವರಿಗೆ ಒಂದು ತಿಂಗಳ ಒಳಗೆ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಆಶ್ರಯ ಯೋಜನೆಯಡಿ ನಿವೇಶನ ರಹಿತ ದಲಿತರಿಗೆ ಸೂರು ಒದಗಿಸಲು ಮತ್ತು ದಲಿತರಿಗೆ ಸ್ಮಶಾನಕ್ಕೆ ಜಾಗ ನೀಡಲು ಕ್ರಮಕೈಗೊಳ್ಳಬೇಕು. ಅದಕ್ಕಾಗಿ ಪ್ರತಿ ಗ್ರಾಮದಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಗುರುತಿಸಿ, ತಕ್ಷಣವೇ ನನಗೆ ಪ್ರಸ್ತಾವ ಕಳುಹಿಸಿ ಕೊಡಬೇಕು’ ಎಂದು ಸಭೆಯಲ್ಲಿದ್ದ ತಹಶೀಲ್ದಾರ್‌ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್ ಮಾತನಾಡಿ, ‘ದಲಿತ ದೌರ್ಜನ್ಯ ತಡೆ ನಿಯಂತ್ರಣ ಜಾಗೃತಿ ಸಮಿತಿ ಸಭೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಅಧಿಕಾರಿಗಳು ಒತ್ತಡ ಬಂದಾಗಲಷ್ಟೇ ಕಾಟಾಚಾರಕ್ಕೆ ಸಭೆ ಆಯೋಜಿಸುತ್ತಿದ್ದಾರೆ. ಇದಾಗಬಾರದು. ಜತೆಗೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನೀಗಾ ಇಡುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ದಲಿತರಿಗೆ ಭೂಮಿ, ನಿವೇಶನ, ಶಿಕ್ಷಣ ಒದಗಿಸುವ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮುಖ್ಯ ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಅದು ಆಗುತ್ತಿಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ದಲಿತರಿಗೆ ಮೂಲಭೂತ ಸೌಲಭ್ಯಗಳು, ಸರ್ಕಾರಿ ಯೋಜನೆಗಳ ನೆರವು, ಭದ್ರತೆ ದೊರೆಯುತ್ತಿಲ್ಲ. ಸ್ವಾವಲಂಬಿಗಳಾಗಿ ಬಾಳಬೇಕಾದವರು ವಂಚನೆಗೊಳಗಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಧಿಕಾರಿಗಳು ಇನ್ನಾದರೂ ಮುತುವರ್ಜಿ ವಹಿಸಿಕೊಂಡು ಕೆಲಸ ಮಾಡಬೇಕಿದೆ. ಎಲ್ಲಾ ಇಲಾಖೆಗಳು ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ದಲಿತರು ಏಳಿಗೆ ಹೊಂದಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ದಲಿತರಿಗೆ ಮೀಸಲಿಟ್ಟ ಅನುದಾನಗಳ ಬಳಕೆಯಾಗುವುದಿಲ್ಲ. ಸಮಸ್ಯೆಗಳಿಗೆ ಪರಿಹಾರಗಳು ಸಿಗುವುದಿಲ್ಲ’ ಎಂದರು.

ಕಳೆದ ಸಭೆಯ ಅನುಪಾಲನಾ ವರದಿಯನ್ನು ಪೊಲೀಸ್ ಮತ್ತು ಅಬಕಾರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಮಂಡಿಸಿದರು. ಜಾಗೃತಿ ಸಮಿತಿ ಸದಸ್ಯರಾದ ಮುನಯ್ಯ, ಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಡಿ.ನರಸಿಂಹಮೂರ್ತಿ, ಅರುಂಧತಿ ಅಶ್ವತ್ಥಪ್ಪ, ಸತೀಶ್, ಡಿವೈಎಸ್ಪಿಗಳಾದ ಎಂ.ಎಲ್.ಪುರುಷೋತ್ತಮ್ ಮತ್ತು ಕೃಷ್ಣಮೂರ್ತಿ, ಎಲ್ಲಾ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಉಪಸ್ಥಿತರಿದ್ದರು.

*
ತಹಶೀಲ್ದಾರರು ಪ್ರತಿ ಶನಿವಾರ ಕಡ್ಡಾಯವಾಗಿ ಬಗರ್‌ ಹುಕುಂ ಸಮಿತಿ ಸಭೆ ನಡೆಸಬೇಕು. ದಲಿತರ ಅರ್ಜಿಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಿ ಹಕ್ಕುಪತ್ರ ವಿತರಿಸಬೇಕು.
-ಬಿ.ಶಿವಸ್ವಾಮಿ, ಉಪ ವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT