ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ಕ್ಯಾಸ್ಟಿಂಗ್‌ನಲ್ಲಿ ವೀಕ್ಷಣೆಗೆ ಅವಕಾಶ

Last Updated 12 ಏಪ್ರಿಲ್ 2017, 5:43 IST
ಅಕ್ಷರ ಗಾತ್ರ

ಮೈಸೂರು: ಕುತೂಹಲ ಮೂಡಿಸಿರುವ ನಂಜನಗೂಡು ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಪ್ರಕ್ರಿಯೆಯನ್ನು ವೆಬ್‌ ಕ್ಯಾಸ್ಟಿಂಗ್‌ ಮಾಡಲಾಗುತ್ತಿದ್ದು, ದೆಹಲಿಯಲ್ಲಿರುವ ಚುನಾವಣಾ ಆಯೋಗದ ಅಧಿಕಾರಿಗಳು ಅಂತರ್ಜಾಲದಲ್ಲಿ ನೇರ ಪ್ರಸಾರ ವೀಕ್ಷಿಸಲು ಅನುವುಮಾಡಿಕೊಡಲಾಗುತ್ತಿದೆ.

ನಂಜನಗೂಡು ಪಟ್ಟಣದಲ್ಲಿರುವ ಜೆಎಸ್‌ಎಸ್‌ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಎಣಿಕೆ ಆರಂಭವಾಗಲಿದ್ದು, 12 ಗಂಟೆಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.
ಮತ ಎಣಿಕೆಗಾಗಿ 1 ಕೊಠಡಿಯಲ್ಲಿ 14 ಟೇಬಲ್‌ ಬಳಸಲಾಗುತ್ತಿದ್ದು, ಮೊದಲ ಬಾರಿ ಪ್ರತಿ ಟೇಬಲ್‌ನ ವಿಡಿಯೊ ಚಿತ್ರೀಕರಣ ಮಾಡಲು ತೀರ್ಮಾನಿಸಲಾಗಿದೆ. 16 ಸುತ್ತುಗಳ ಮತ ಎಣಿಕೆ ನಡೆಯಲಿದೆ. ಮೊದಲು 1ರಿಂದ 14 ಮತಗಟ್ಟೆಗಳ ಮತ ಎಣಿಕೆ ಮಾಡಲಾಗುತ್ತದೆ.

ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೆಬ್‌ ಕ್ಯಾಸ್ಟಿಂಗ್‌ ಮಾಡಲು ಮುಂದಾಗಿದ್ದೇವೆ. ಅದಕ್ಕಾಗಿ ಕೊಠಡಿಯಲ್ಲಿ ಮೂರು ದಿಕ್ಕಿನಲ್ಲಿ ಮೂರು ಕ್ಯಾಮೆರಾ ಜೋಡಿಸ ಲಾಗುವುದು. ಅಭ್ಯರ್ಥಿಗಳು ಹಾಗೂ ಮಾಧ್ಯಮದವರು ನೇರ ಪ್ರಸಾರ ವೀಕ್ಷಿಸಲು ಅನುವು ಮಾಡಿಕೊಡ ಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಿ.ರಂದೀಪ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಸೇರಿದಂತೆ 11 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,56,315 ಮತಗಳು (ಶೇ 76.45) ಚಲಾವಣೆ ಆಗಿವೆ. 236 ವಿದ್ಯುನ್ಮಾನ ಮತಯಂತ್ರ ಹಾಗೂ 236 ವಿವಿ ಪ್ಯಾಟ್‌ (ಮತ ಖಾತರಿ ವ್ಯವಸ್ಥೆ) ಯಂತ್ರಗಳನ್ನು ಪ್ರತ್ಯೇಕವಾಗಿ ಭದ್ರತಾ ಕೊಠಡಿಯಲ್ಲಿ ಇಡಲಾಗಿದ್ದು, ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದೆ. ಪ್ರತಿ ಎಣಿಕೆ ಟೇಬಲ್‌ಗೆ ತಲಾ ಒಬ್ಬ ಮೇಲ್ವಿಚಾರಕ, ಎಣಿಕೆ ಸಿಬ್ಬಂದಿ, ವೀಕ್ಷಕ ಹಾಗೂ ವಿಡಿಯೊ ಕ್ಯಾಮೆರಾಮನ್‌ ಇರುತ್ತಾರೆ.

‘ಇದೇ ಮೊದಲ ಬಾರಿಗೆ ಮತ ಖಾತರಿ ಸೌಲಭ್ಯದ ವಿವಿ ಪ್ಯಾಟ್‌ ಬಳಸಲಾಗಿದೆ. ಮೊದಲು ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಅನುಮಾನ ವ್ಯಕ್ತಪಡಿಸಿ ಮನವಿ ಸಲ್ಲಿಸಿದರೆ ಮಾತ್ರ ವಿವಿ ಪ್ಯಾಟ್‌ ಯಂತ್ರಗಳನ್ನು ತೆರೆಯಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT