ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಗಾಳಿ ಸಹಿತ ಮಳೆ; ಮರಗಳು ಧರೆಗೆ

Last Updated 12 ಏಪ್ರಿಲ್ 2017, 6:02 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನಾದ್ಯಂತ ಮಂಗಳವಾರ ಸಂಜೆ ಬಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೂರಾರು ತೆಂಗು, ಅಡಿಕೆ ಹಾಗೂ ರಸ್ತೆಬದಿಯ ಮರಗಳು  ನೆಲಕ್ಕುರುಳಿವೆ. ಕೆಲ ಮನೆಗಳ ಮೇಲ್ಚಾವಣಿ ಹಾರಿಹೋಗಿವೆ.

ತಾಲ್ಲೂಕಿನ ಮಡುವಿನಕೋಡಿ ಗ್ರಾಮದ ಎಂ.ಬಿ.ಶಶಿಧರ್ ಎಂಬುವವರ ತೋಟದಲ್ಲಿ ತೆಂಗಿನ ಮರಗಳು ಬುಡಸಮೇತ ನೆಲಕ್ಕುರುಳಿವೆ. ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಹೊಸಹೊಳಲು ಬಳಿ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿದ್ದರಿಂದ ಹೊಸಹೊಳಲು ಹಾಗೂ ಕೆ.ಆರ್.ಪೇಟೆ ಪಟ್ಟಣದ ಒಂದು ಭಾಗಕ್ಕೆ ರಾತ್ರಿ ಎಂಟು ಗಂಟೆಯವರೆವಿಗೂ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿತ್ತು. 

ಚಂದಗೋನಹಳ್ಳಿಯಮ್ಮ ಕ್ಷೇತ್ರದಲ್ಲಿ ನಿರ್ಮಿಸಲಾಗಿದ್ದ ಸುಮಾರು 20ಕ್ಕೂ ಅಧಿಕ  ತಾತ್ಕಾಲಿಕ ಊಟದ ಶೆಡ್‌ಗಳ ತಗಡಿನ ಮತ್ತು ಸಿಮೆಂಟ್ ಶೀಟಿನ ಚಾವಣಿಗಳು ಹಾರಿ ಹೋಗಿದ್ದು ಊಟಕ್ಕೆ ಕುಳಿತಿದ್ದ ಹಲವು ಮಂದಿಗೆ ಶೀಟುಗಳು ಬಡಿದು ಗಾಯಗಳಾಗಿವೆ.

ದೇವರ ಹರಕೆ ಪರ ಮಾಡುತ್ತಿದ್ದ ವೇಳೆ ಸಾಲಿಗ್ರಾಮದ ದೇವಮ್ಮ ಎಂಬುವವರ ಎರಡು ವರ್ಷದ ಮಗುವನ್ನು ಸೀರೆಯಲ್ಲಿ ಕಟ್ಟಿದ್ದ ತೊಟ್ಟಿಲು, ಮಗು ಬಿರುಗಾಳಿಯ ರಭಸಕ್ಕೆ ಸುಮಾರು 50 ಮೀಟರ್ ದೂರಕ್ಕೆ ಹಾರಿ ಬಿದ್ದಿತು. ದೇವರ ದರ್ಶನಕ್ಕೆ ಬಂದಿದ್ದ ಹೊಳೆನರಸೀಪುರದ ರವಿಕುಮಾರ್ ಎಂಬುವವರು ಮಗುವನ್ನು  ರಕ್ಷಣೆ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಬಿರುಗಾಳಿ, ಮಳೆಗೆ ಮನೆಗಳಿಗೆ ಹಾನಿ

ಶ್ರೀರಂಗಪಟ್ಟಣ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ 4 ಮನೆಗಳು ಜಖಂಗೊಂಡಿವೆ.ಗ್ರಾಮದ ಜವರೇಗೌಡ ಎಂಬುವವರ ಮನೆಯ ಚಾವಣಿ ಸಂಪೂರ್ಣ ಹಾರಿ ಹೋಗಿದೆ. ಕಲ್ನಾರ್‌ ಶೀಟುಗಳ ಜತೆಗೆ ಕಬ್ಬಿಣದ ಕಂಬಿಗಳೂ ಮುರಿದು ಬಿದ್ದಿವೆ. ಮುಂದಿನ ವಾರ ನಡೆಯಲಿರುವ ಮಗಳ ಮದುವೆಗೆ ಜವರೇಗೌಡ ಮನೆಯನ್ನು ದುರಸ್ತಿ ಮಾಡಿಸಿದ್ದರು. ಈಗ ಮನೆಯಲ್ಲಿ ವಾಸ ಮಾಡದ ಸ್ಥಿತಿ ಉಂಟಾಗಿದೆ. ಮನೆಯಲ್ಲಿದ್ದ ಧವಸ, ದಾನ್ಯ ಬಟ್ಟೆ, ಪಾತ್ರೆಗಳು ಹಾನಿಗೀಡಾಗಿವೆ.

ಇದೇ ಗ್ರಾಮದ ಹರೀಶ್‌ ಅವರ ಕಲ್ನಾರ್‌ ಶೀಟಿನ ಮನೆಯ ಚಾವಣಿ ಕೂಡ ಬಿರುಗಾಳಿಗೆ ಭಾಗಶಃ ಹಾನಿಯಾಗಿದೆ. ಸಿ.ಎಂ.ಕುಮಾರಸ್ವಾಮಿ, ಸಿ.ಡಿ.ಸೋಮಣ್ಣ ಎಂಬುವವರ ಹೆಂಚಿನ ಮನೆಗಳು ಕೂಡ ಹಾನಿಗೀಡಾಗಿವೆ.

ಚನ್ನಹಳ್ಳಿ ಗ್ರಾಮಕ್ಕೆ ಸಮೀಪ ಇರುವ ಹಕ್ಕಿಪಿಕ್ಕಿ ಜನರ ಕಾಲೊನಿಯಲ್ಲಿ ಬಿರುಗಾಳಿಗೆ 14 ಟೆಂಟ್‌ಗಳು ಮುರಿದುಬಿದ್ದಿವೆ.  ದಿನಬಳಕೆ ವಸ್ತುಗಳು ನಾಶವಾಗಿವೆ. ತಾಲ್ಲೂಕಿನ ಗಡಿಭಾಗದ ಮೊಗರಹಳ್ಳಿ ಬಳಿ ಬೀಡುಬಿಟ್ಟಿದ್ದ ಹಕ್ಕಿಪಿಕ್ಕಿ ಜನಾಂಗದ 107 ಕುಟುಂಬಕ್ಕೆ ತಾಲ್ಲೂಕು ಆಡಳಿತ ಮೂರು ತಿಂಗಳ ಹಿಂದೆ ಟೆಂಟ್‌ಗಳನ್ನು ನಿರ್ಮಿಸಿ ಆಶ್ರಯ ನೀಡಿತ್ತು. ಸರ್ಕಾರದಿಂದ ನಿರ್ಮಿಸಿರುವ ಟೆಂಟ್‌ಗಳು ಕಳಪೆಯಿಂದ ಕೂಡಿವೆ ಎಂದು ಹಕ್ಕಿಪಿಕ್ಕಿ ಜನರು ದೂರಿದ್ದಾರೆ.

ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್‌.ಕಾಳೇಗೌಡ, ಗ್ರಾಮ ಪಂಚಾಯಿತಿ ಮಹದೇವಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ವರ್‌, ಅಧ್ಯಕ್ಷ ಜಗದೀಶ್‌,  ನಿಂಗಶೆಟ್ಟಿ, ಕಂದಾಯ ನಿರೀಕ್ಷ ದೊಡ್ಡಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಎಸ್‌.ಕಾಳೇಗೌಡ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT