ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು, ಬೆಳೆಗೂ ತೊಂದರೆ

Last Updated 12 ಏಪ್ರಿಲ್ 2017, 6:13 IST
ಅಕ್ಷರ ಗಾತ್ರ

ಮಂಡ್ಯ: ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೆ, ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳುವ ಸವಾಲು ಮತ್ತೊಂದೆಡೆ. ಇವರೆಡಕ್ಕೂ ಬೇಕಾದ ವಿದ್ಯುತ್‌ ಸಮಸ್ಯೆಯಿಂದ ಜನರು ಕಂಗೆಟ್ಟು ಹೋಗಿದ್ದಾರೆ.ಅನಿಯಮಿತ ವಿದ್ಯುತ್‌ ಸರಬರಾಜಿನಿಂದಾಗಿ ಸಮಸ್ಯೆಯ ತೀವ್ರತೆ ಹೆಚ್ಚಾಗಿದೆ. ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಇಲ್ಲ ಎನ್ನುತ್ತಲೇ ಅನಧಿಕೃತವಾಗಿ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಪರಿಣಾಮ ಜನರ ಪರದಾಟ ಹೆಚ್ಚಾಗಿದೆ.

ಅಸರ್ಮಪಕ ವಿದ್ಯುತ್‌ ಸರಬರಾಜು ವ್ಯವಸ್ಥೆ ಸರಿಪಡಿಸಬೇಕು ಎಂದು ಆಗ್ರಹಿಸಿ ಮಂಡ್ಯದ ‘ಸೆಸ್ಕ್‌’ ಕಚೇರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ‘ಸೆಸ್ಕ್‌’ ಕಚೇರಿಗಳ ಮುಂದೆ ಗ್ರಾಮಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ.ಅನಿಯಮಿತ ವಿದ್ಯುತ್‌ ಸರಬರಾಜಿ ನಿಂದಾಗಿ ವಿದ್ಯುತ್‌ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ಸುಟ್ಟ ವಿದ್ಯುತ್‌ ಪರಿವರ್ತಕಗಳನ್ನು ನಿಗದಿತ ಅವಧಿಯಲ್ಲಿ ಬದಲಾವಣೆ ಮಾಡುವುದಿಲ್ಲ. ಹಾಗಾಗಿ, ಕುಡಿಯುವ ನೀರಿಗೂ ಪರದಾಡ ಬೇಕಾದ ಸ್ಥಿತಿ ಎದುರಾಗುತ್ತಿದೆ.

ಕುಡಿಯುವ ನೀರು ಸರಬರಾಜು ಮಾಡುವ ವಿದ್ಯುತ್‌ ಪರಿವರ್ತಕ ಸುಟ್ಟರೆ 24 ಗಂಟೆಗಳಲ್ಲಿ ಸರಿ ಪಡಿಸಿಕೊಡಬೇಕು ಎಂದಿದೆ. ಆದರೆ, ಕೆಲವೆಡೆ ವಾರವಾದರೂ ಬದಲಾಯಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್‌ ಇಲ್ಲದ್ದರಿಂದ ನೀರು ಸರಬರಾಜು ನಿಂತು ಜನರು ಪರದಾಡುವಂತಾಗುತ್ತಿದೆ.ಬರದ ಮಧ್ಯೆಯೂ ಕೆಲವರು ಕೊಳವೆಬಾವಿಯನ್ನು ನಂಬಿಕೊಂಡು ಕಬ್ಬು, ಭತ್ತ, ರೇಷ್ಮೆ, ತರಕಾರಿಯಂತಹ ಬೆಳೆಗಳನ್ನು ಬೆಳೆದಿದ್ದಾರೆ. ಇನ್ನೂ ಕೆಲವರು ಸಾವಿರಾರು ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಯಿಸಿ ಬೆಳೆ ಬೆಳೆದಿದ್ದಾರೆ.

ನೀರಾವರಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಮೂರು ಗಂಟೆ, ರಾತ್ರಿ ವೇಳೆ ಮೂರು ಗಂಟೆ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಷ್ಟು ವಿದ್ಯುತ್‌ ದೊರೆಯದ್ದರಿಂದ ಬೆಳೆಗಳಿಗೆ ನೀರು ಹಾಯಿಸುವುದೇ ಕಷ್ಟವಾಗಿದೆ ಎನ್ನುತ್ತಾರೆ ರೈತ ದೇವರಾಜು.

ಮೂರು ಗಂಟೆಗಳ ಕಾಲ ಸತತವಾಗಿ ವಿದ್ಯುತ್‌ ಸರಬರಾಜು ಮಾಡುವುದಿಲ್ಲ. ಹಾಗಾಗಿ, ಒಂದು ಗಂಟೆ ಸರಬರಾಜು ಮಾಡಿ ಕೆಲಕಾಲ ನಿಲ್ಲಿಸಿ ಬಿಡುತ್ತಾರೆ. ಆ ಮೇಲೆ ಮತ್ತೆ ಆರಂಭಿಸುತ್ತಾರೆ. ಆಗ ಮೊದಲಿನಿಂದಲೇ ನೀರು ಹರಿಸಬೇಕಾಗುವುದರಿಂದ ತೊಂದರೆ ಯಾಗುತ್ತದೆ ಎಂದು ಸಾತನೂರು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಈಚೆಗೆ ಮಂಡ್ಯದಲ್ಲಿರುವ ‘ಸೆಸ್ಕ್‌’ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದರು.

ಬೆಳೆ ಉಳಿಸಿಕೊಳ್ಳಲು ಸಾಲ ಮಾಡಿ ಕೊಳವೆಬಾಯಿಯನ್ನು ಕೊರೆಯಿಸಿದ್ದೇವೆ. ಈಗ ಸರಿಯಾಗಿ ವಿದ್ಯುತ್‌ ನೀಡದಿದ್ದರೆ, ಬೆಳೆ ಹಾಳಾಗುತ್ತದೆ. ಹೀಗಾದರೆ ಸಾಲ ತೀರಿಸುವುದು ಹೇಗೆ ಎಂಬ ಪ್ರಶ್ನೆ ಆ ಗ್ರಾಮಗಳ ರೈತರನ್ನು ಕಾಡುತ್ತಿದೆ.

ಮದ್ದೂರು ತಾಲ್ಲೂಕಿನ ವೈದ್ಯನಾಥ ಪುರದಲ್ಲಿ ಐದು ದಿನಗಳಿಂದ ವಿದ್ಯುತ್‌ ಇಲ್ಲ. ಗ್ರಾಮ ಕತ್ತಲಲ್ಲಿ ಮುಳುಗಿದೆ ಎಂದು ಗ್ರಾಮಸ್ಥರು ಈಚೆಗೆ ಪ್ರತಿಭಟನೆ ಮಾಡಿದ್ದನ್ನು ಸ್ಮರಿಸಿಕೊಳ್ಳಬಹುದು. ವಿವಿಧ ತಾಲ್ಲೂಕುಗಳಲ್ಲಿಯೂ ಇಂತಹ  ಪ್ರತಿಭಟನೆಗಳು ನಡೆಯುತ್ತಿವೆ.ನಿಯಮಿತವಾಗಿ ವಿದ್ಯುತ್‌ ದರ ಏರಿಸುವ ಕೆಲಸವನ್ನು ಮಾಡಲಾಗುತ್ತದೆ. ಆದರೆ, ನಿಯಮಿತವಾಗಿ ವಿದ್ಯುತ್‌ ಸರಬರಾಜು ಮಾಡಲು ಆಗುತ್ತಿಲ್ಲ ಏಕೆ ಎಂಬುದು ಜನರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT