ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಳ್ಳವನೇ ಭೂಮಿಯ ಒಡೆಯನೆಂಬ ‘ತಂತ್ರ’

Last Updated 12 ಏಪ್ರಿಲ್ 2017, 6:47 IST
ಅಕ್ಷರ ಗಾತ್ರ

ಮೈಸೂರು: ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಉಳುವವನೇ ಭೂಮಿಯ ಒಡೆಯ ಎಂಬುದರ ಬದಲಾಗಿ, ಉಳ್ಳವನೇ ಭೂಮಿಯ ಒಡೆಯ ಎಂಬ ಸೂತ್ರವನ್ನು ಪಠಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ರಾಷ್ಟ್ರದಾದ್ಯಂತ ಒಗ್ಗಟ್ಟಿನಿಂದ ಪ್ರತಿಭಟಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಸಲಹೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿಯು ಕಲಾಮಂದಿರದ ಮನೆಯಂಗಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ಜಿಲ್ಲಾ ಸಮ್ಮೇಳ ನವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕವನ್ನು ಮೊದಲು ಗೊಂಡಂತೆ ದೇಶದ ಹಲವು ರಾಜ್ಯಗಳಲ್ಲಿ ಭೂಸುಧಾರಣೆಗೆ  ಮೊದಲ ಆದ್ಯತೆಯನ್ನು ನೀಡಲಾಯಿತು. ಉಳುವವನೇ ಭೂಮಿಯ ಒಡೆಯ ಎನ್ನುವ ಪರಿಕಲ್ಪನೆಯನ್ನು ಜಾರಿಗೆ ತರಲಾಯಿತು. ಆದರೆ, ಈಗ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಉಳ್ಳವನೇ ಭೂಮಿಯ ಒಡೆಯ ಎಂಬ ನಿಲುವು ತೆಗೆದುಕೊಳ್ಳುತ್ತಿದೆ. ಕೃಷಿ ಭೂಮಿ ಭೋಗ್ಯ ಕಾಯ್ದೆಯನ್ನು ರಚಿಸಲು ಮುಂದಾಗಿದೆ. ಇದು ದೇಶ ಕಂಡ ದೊಡ್ಡ ದುರಂತಗಳಲ್ಲಿ ಒಂದು ಎಂದು ಅವರು ವಿಷಾದದಿಂದ ಹೇಳಿದರು.

ಎನ್‌ಡಿಎ ಚುನಾವಣಾ ಪ್ರಣಾಳಿಕೆಯಲ್ಲಿ ಸ್ವಾಮಿನಾಥನ್‌ ವರದಿ ಜಾರಿಗೊಳಿಸುವ ಭರವಸೆಯನ್ನು ನೀಡಲಾಗಿತ್ತು. ಮೋದಿಯವರು ತಮ್ಮ ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಈ ಬಗ್ಗೆ ಉದ್ದುದ್ದ ಭಾಷಣಗಳನ್ನು ಮಾಡಿದ್ದರು. ಆದರೆ, ಪ್ರಧಾನಿಯಾದ ನಂತರ ರೈತರಿಗೆ ದ್ರೋಹ ಬಗೆಯಲು ಅವರು ಪಣತೊಟ್ಟಂತಿದೆ. ರೈತರ ಆದಾಯವನ್ನು ಕಸಿದುಕೊಂಡು, ಅವರನ್ನು ಸುಲಿಗೆಗೆ ಒಳಪಡಿಸಿ, ಮೋಸ ಮಾಡುವ ಕುತಂತ್ರ ಹೂಡಿದ್ದಾರೆ ಎಂದು ಹರಿಹಾಯ್ದರು.

ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಳ: ಬಿಜೆಪಿ ಆಡಳಿತದಲ್ಲಿ ಇರುವ ರಾಜ್ಯಗಳಲ್ಲೇ ರೈತರ ಆತ್ಮಹತ್ಯೆಯ ಪ್ರಮಾಣ ಹೆಚ್ಚಿರುವುದು ದೇಶದಲ್ಲಿ ಎನ್‌ಡಿಎ ನೇತೃತ್ವದ ಸರ್ಕಾರ ರೈತ ವಿರೋಧಿ ಎನ್ನುವುದಕ್ಕೆ ಸಾಕ್ಷಿ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಆತ್ಮಹತ್ಯೆಯ ಪ್ರಮಾಣ ಶೇ 30ರಷ್ಟು ಹೆಚ್ಚಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಮಧ್ಯಪ್ರದೇಶ ರೈತರ ಆತ್ಮಹತ್ಯೆ ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿವೆ. ಇಲ್ಲೆಲ್ಲಾ ಬಿಜೆಪಿಯೇ ಅಧಿಕಾರದಲ್ಲಿ ಇರುವುದು ಎಂದು ವ್ಯಾಖ್ಯಾನಿಸಿದರು.

ಕೃಷಿ ಉತ್ಪನ್ನಗಳಿಗೆ ನೀಡುವ ಬೆಂಬಲ ಬೆಲೆ ಹೆಚ್ಚಿಸಬೇಕು. ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸಬೇಕು ಎಂಬ ರೈತ ಸಂಘಟನೆಗಳ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಕವಡೆಕಾಸಿನ ಬೆಲೆ ಇಲ್ಲ. ವಿದೇಶಗಳಿಂದ ಕೃಷಿ ಉತ್ಪನ್ನಗಳನ್ನು ಆಮದು ಮಾಡಿ ಕೊಳ್ಳಲು ಆದ್ಯತೆ ನೀಡಲಾಗುತ್ತಿದೆ. ಒಬ್ಬ ಕಚೇರಿ ಸಹಾಯಕನಿಗೆ ಬರುವಷ್ಟು ಆದಾಯವೂ ರೈತನೊಬ್ಬನಿಗೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಸಂಚಾಲಕ ಕೆ.ಬಸವರಾಜು ಅಧ್ಯಕ್ಷತೆವಹಿಸಿದ್ದರು. ವಿಮಾ ನಿಗಮ ನೌಕರರ ಸಂಘದ ಅಧ್ಯಕ್ಷ ಎನ್‌.ವಿಜಯಕುಮಾರ್‌, ಸಿಐಟಿಯು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT