ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ವಿ.ವಿ; ₹ 14 ಕೋಟಿ ಅವ್ಯವಹಾರ ಪತ್ತೆ!

Last Updated 12 ಏಪ್ರಿಲ್ 2017, 6:56 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯದಲ್ಲಿ 1989ರಿಂದ ಇಲ್ಲಿವರೆಗೆ ನೀಡಿರುವ ಗುತ್ತಿಗೆ ಕಾಮಗಾರಿಗಳಲ್ಲಿ₹ 14 ಕೋಟಿ ಅವ್ಯವಹಾರವಾಗಿರುವುದು ಇಲ್ಲಿ ಮಂಗಳವಾರ ನಡೆದ ವಿಧಾನಮಂಡಲದ ಕಾಗದಪತ್ರಗಳ ಸಮಿತಿ ಸಭೆಯಲ್ಲಿ ಪತ್ತೆಯಾಯಿತು.ಇಷ್ಟೊಂದು ದೊಡ್ಡ ಪ್ರಮಾಣದ ಅವ್ಯವಹಾರ ನಡೆದಿರುವುದು ಕಾಗದ ಪತ್ರಗಳಲ್ಲಿ ಸ್ಪಷ್ಟವಾಗಿ ನಮೂದಾ ಗಿದ್ದರೂ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್ ಕಿಡಿಕಾರಿದರು.

ಹಲವರಿಗೆ ಮುಂಗಡ ಹಣವನ್ನು ನಿಗದಿತ ದಿನಕ್ಕಿಂತ ಮುಂಚಿತವಾಗಿ ಪಾವತಿಸಲಾಗಿದ್ದರೆ, ಮತ್ತೆ ಕೆಲವರಿಗೆ ನಿಗದಿತ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಪಾವತಿ ಮಾಡಲಾಗಿದೆ. ಇದು ಮೇಲ್ನೋಟಕ್ಕೆ ಸಣ್ಣ ತಪ್ಪು ಎಂದು ಅನ್ನಿಸಬಹುದು. ಆದರೆ, ಅಷ್ಟು ಮೊತ್ತ ನಿಗದಿತ ದಿನದವರೆಗೆ ವಿ.ವಿ ಬಳಿ ಇದ್ದಿದ್ದರೆ ಬಡ್ಡಿ ಬರುತ್ತಿತ್ತಲ್ಲವೇ ಎಂದು ವಿ.ವಿ.ಯ ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು ಎನ್ನಲಾಗಿದೆ.

ಇದೇ ವೇಳೆ ಸಮಿತಿಯ ಇತರ ಸದಸ್ಯರು 1989ರಿಂದ ಇಲ್ಲಿವರೆಗೆ ವೆಚ್ಚ ಮಾಡಿರುವ ₹ 120 ಕೋಟಿ ಮೊತ್ತಕ್ಕೆ ಲೆಕ್ಕಪತ್ರ ನೀಡದಿರುವುದನ್ನು ಪತ್ತೆ ಹಚ್ಚಿದರು. ಕಾಗದಪತ್ರಗಳು ಸರಿಯಾಗಿ ಸಿಗುತ್ತಿಲ್ಲ. ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಅಧಿಕಾರಿಗಳ ಉತ್ತರವನ್ನು ಒಪ್ಪದ ಅವರು, ಮೂರು ತಿಂಗಳಲ್ಲಿ ಕಾಗದ ಪತ್ರ ಸಲ್ಲಿಸಬೇಕು. ಜತೆಗೆ, ₹ 14 ಕೋಟಿ ಅವ್ಯವಹಾರ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರ ರಿಂದ ಬಡ್ಡಿ ಸಮೇತ ವಸೂಲು ಮಾಡಲು ಸೂಚಿಸಿದರು ಎನ್ನಲಾಗಿದೆ.

ಕೆಎಸ್‌ಒಯು ಕ್ರಮದ ವಿರುದ್ಧ ಅತೃಪ್ತಿ: ಲೇಖನ ಸಾಮಗ್ರಿ ಖರೀದಿಯಲ್ಲಿ ₹ 8 ಕೋಟಿಯಷ್ಟು ನಡೆದಿದ್ದ ಅವ್ಯವ ಹಾರದಲ್ಲಿ ಕೇವಲ ₹ 4 ಕೋಟಿಯಷ್ಟು ಮಾತ್ರ ವಸೂಲು ಮಾಡಿರುವುದಕ್ಕೆ ವಿಧಾನಮಂಡಲದ ಕಾಗದಪತ್ರಗಳ ಸಮಿತಿ ಸದಸ್ಯರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು. ವಿ.ವಿ.ಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬಡ್ಡಿರಹಿತವಾಗಿ ಅರ್ಧದಷ್ಟು ಮೊತ್ತವನ್ನು ವಸೂಲು ಮಾಡಿರುವುದು ಸರಿಯಲ್ಲ ಎಂದು ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್ ಕಿಡಿಕಾರಿದರು ಎನ್ನಲಾಗಿದೆ.

₹ 2.50 ವೆಚ್ಚವಾಗುವ ಒಂದು ಅಂಕಪಟ್ಟಿಗೆ ಕೊಟ್ಟಿದ್ದು ₹ 36. ಅಗತ್ಯವಿದ್ದ 1 ಲಕ್ಷ ಅಂಕಪಟ್ಟಿಗಳಿಗೆ ಬದಲಾಗಿ ಇವರು ಕೊಂಡುಕೊಂಡಿದ್ದು ಬರೋಬರಿ 18 ಲಕ್ಷ ಅಂಕಪಟ್ಟಿಗಳು. ಕೇವಲ ಲೇಖನ ಸಾಮಗ್ರಿಯಲ್ಲೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವುದನ್ನು ಕಳೆದ ಸಭೆಯಲ್ಲೇ ಪತ್ತೆ ಹಚ್ಚಿ, ಸೂಚನೆ ನೀಡಿದ್ದರೂ ಯಾವುದೇ ತೆಗೆದು ಕೊಳ್ಳದೇ ಇರುವುದಕ್ಕೆ ಸಮಿತಿಯ ಇತರ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸದ್ಯ, ಬಾಕಿ ಇರುವ ₹ 4 ಕೋಟಿಯನ್ನು ಬಡ್ಡಿ ಸಮೇತ ಹಾಗೂ ವಸೂಲು ಮಾಡಿರುವ ₹ 4 ಕೋಟಿಗೆ ಬಡ್ಡಿಯನ್ನು ಮೂರು ತಿಂಗಳಲ್ಲಿ ವಸೂಲು ಮಾಡಬೇಕು ಎಂದು ಸಮಿತಿಯು ಸೂಚಿಸಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನದಲ್ಲೂ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಸರಿಯಲ್ಲ ಎಂದು ಸದಸ್ಯರು ಹೇಳಿದ್ದಾರೆ. ಕಳೆದ ಬಾರಿ ನಡೆದ ಸಭೆಯಲ್ಲಿ 4 ಸಾವಿರ ವಿದ್ಯಾರ್ಥಿಗಳಿಗೆ ₹ 22 ಲಕ್ಷ ಪಾವತಿ ಮಾಡದಿರುವುದು ಗಮನಕ್ಕೆ ಬಂದಿತ್ತು.

ಅದರಲ್ಲಿ ಈ ಬಾರಿ ಇನ್ನೂ ಕೆಲವು ವಿದ್ಯಾರ್ಥಿಗಳಿಗೆ ಪಾವತಿಯಾಗ ದಿರುವುದು ಸರಿಯಲ್ಲ. ಶೀಘ್ರ ಎಲ್ಲರಿಗೂ ವಿದ್ಯಾರ್ಥಿವೇತನ ಪಾವತಿಸಬೇಕು ಎಂದು ಸೂಚಿಸಿದ್ದಾರೆ.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಶಾಂತನಗೌಡರ್, ಕೃಷ್ಣಾರೆಡ್ಡಿ, ಮುನಿರಾಜು ಹಾಗೂ ರಘು ಆಚಾರ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್, ಜಂಟಿ ಕಾರ್ಯದರ್ಶಿ ಕಾಳಯ್ಯ, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೋಮಶೇಖರ್, ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT