ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ ರದ್ದಾಗಬೇಕಿತ್ತು: ಎಚ್‌ಡಿಕೆ

Last Updated 12 ಏಪ್ರಿಲ್ 2017, 8:23 IST
ಅಕ್ಷರ ಗಾತ್ರ

ರಾಮನಗರ: ‘ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆಗಳಲ್ಲಿ ಹಣದ ಹೊಳೆಯೇ ಹರಿದಿದ್ದು, ಚುನಾವಣಾ ಆಯೋಗವು ಎರಡೂ ಚುನಾವಣೆಗಳನ್ನು ಮೊದಲೇ ರದ್ದು ಪಡಿಸಬೇಕಿತ್ತು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಉದ್ಯೋಗ ಮೇಳವನ್ನು ಉದ್ಘಾಟಿಸಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು.

‘ತಮಿಳುನಾಡಿನ ಉಪ ಚುನಾವಣೆಯಲ್ಲಿ ಅಲ್ಲಿನ ಮತದಾರರಿಗೆ ₹80–85 ಕೋಟಿ ಹಂಚಲಾಗಿದೆ ಎಂಬ ಆರೋಪದ ಮೇಲೆ ಚುನಾವಣಾ ಆಯೋಗವು ಚುನಾವಣೆಯನ್ನೇ ರದ್ದು ಪಡಿಸಿದೆ. ನಮ್ಮ ರಾಜ್ಯದಲ್ಲಿನ ಎರಡೂ ಕ್ಷೇತ್ರಗಳಲ್ಲೂ ಈ ಸಂದರ್ಭ ಸರ್ಕಾರಿ ಅಧಿಕಾರಿಗಳ ಕಾರುಗಳಲ್ಲೇ ಹಣ ಪತ್ತೆಯಾಗಿದೆ. ರಾಜ್ಯವು ಹಿಂದೆಂದೂ ಕಂಡರಿಯದಂತಹ ಪ್ರಮಾಣದಲ್ಲಿ ಈ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ’ ಎಂದು ಅವರು ದೂರಿದರು.

‘ರಾಜ್ಯದ 224 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯೂ ಸಿದ್ಧಗೊಳ್ಳುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸುತ್ತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಸೂಕ್ತ ಸಮಯದಲ್ಲಿ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದಾರೆ. ಸರ್ಕಾರ ರಚನೆಗೆ ಬೇಕಾದ 113 ಸ್ಥಾನ ಗೆಲ್ಲುವುದು ನಮ್ಮ ಗುರಿ’ ಎಂದರು.

ಪಕ್ಷ ಸಣ್ಣದು: ಬಂಡಾಯ ಶಾಸಕ ಜಮೀರ್‌ ಅಹಮ್ಮದ್ ಮತ್ತೆ ಜೆಡಿಎಸ್ ಕಡೆಗೆ ಒಲವು ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಬಂಡಾಯ ಶಾಸಕರು ನಮ್ಮ ಪಕ್ಷಕ್ಕಿಂತ ದೊಡ್ಡವರು. ಹೀಗಾಗಿ ಅವರು ಮತ್ತೆ ನಮ್ಮಲ್ಲಿಗೆ ಬರುವುದನ್ನು ಬಿಟ್ಟು ದೊಡ್ಡ ಪಕ್ಷದತ್ತವೇ ಹೋಗಲಿ.

ಯಾರು ಅವರ ದಿಕ್ಕು ತಪ್ಪಿಸಿದ್ದರೋ ಈಗ ಅವರೇ ಕೈ ಹಿಡಿಯಬೇಕು’ ಎಂದು ಸಚಿವ ಡಿ,ಕೆ. ಶಿವಕುಮಾರ್ ವಿರುದ್ಧ ಅವರು ಹರಿಹಾಯ್ದರು. ಮಾಗಡಿಯೂ ಸೇರಿದಂತೆ ಬಂಡಾಯ ಶಾಸಕರ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸೂಕ್ತ ಸಂದರ್ಭದಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.

ಚನ್ನಪಟ್ಟಣ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ ‘ಕಾರ್ಯಕರ್ತರು ಅನಿತಾ ಸ್ಪರ್ಧೆ ಬಗ್ಗೆ ಒತ್ತಾಯ ಮಾಡುತ್ತಿರಬಹುದು. ಆದರೆ ಅಲ್ಲಿನ ಕಾರ್ಯಕರ್ತರಲ್ಲೇ ಸಮರ್ಥರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗುವುದು. ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಚುನಾವಣೆಗೆ ಸ್ಪರ್ಧಿಸಲಿದ್ದಾರೆ’ ಎಂದು ಪುನರುಚ್ಚರಿಸಿದರು.

ಪ್ರತಿಮೆ ಸ್ಥಾಪನೆಗೆ ಸಹಮತ:  ‘ರಾಮನಗರದ ಜಿಲ್ಲಾ ಕಚೇರಿ ಸಂಕೀರ್ಣದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯ ವಿಚಾರ ಈವರೆಗೂ ನನ್ನ ಗಮನಕ್ಕೆ ಬಂದಿರಲಿಲ್ಲ. ಅಂಬೇಡ್ಕರ್‌ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಸರ್ಕಾರವು ಅವರ ಮೂರ್ತಿ ಸ್ಥಾಪನೆಗೆ ಕೂಡಲೇ ಕ್ರಮ ವಹಿಸಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT