ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ವರ್ಗಗಳಿಗೆ ಹೆಚ್ಚು ಅನುದಾನ

ಸವಿತಾ ಸಮಾಜ, ತಾಲ್ಲೂಕು ವಾದ್ಯಗಾರರ ಸಮಿತಿಯ ವಿಶೇಷ ಸಭೆ
Last Updated 12 ಏಪ್ರಿಲ್ 2017, 8:25 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸಿದ್ದು, ಹಲವಾರು ಸೌಲಭ್ಯ ನೀಡುತ್ತಿದೆ. ಈ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಹಿಂದುಳಿದ ಜನಾಂಗದವರು ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ದೊಡ್ಡಬಳ್ಳಾಪುರ ತಾಲ್ಲೂಕು ಸವಿತಾ ಸಮಾಜ ಮತ್ತು ತಾಲ್ಲೂಕು ವಾದ್ಯಗಾರರ ಸಮಿತಿ ವತಿಯಿಂದ ಮಂಗಳವಾರ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ತ್ಯಾಗರಾಜ ಹಾಗೂ ಪುರಂದರದಾಸರ ಆರಾಧನಾ ಮಹೋತ್ಸವ ಹಾಗೂ ವಿಶೇಷ ನಾದಸ್ವರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿವಿಧ ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ತಲಾ ₹ 15 ಕೋಟಿ ನೀಡಿದೆ. ಮೊರಾರ್ಜಿ ದೇಸಾಯಿ ವಸತಿ ನಿಲಯ ಮೊದಲಾದ  ನಿಲಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಮಾತನಾಡಿ, ಕಲೆಗೆ ಮನಸೋಲದ ಮಾನವರಿಲ್ಲ ಎಂದೇ ಹೇಳಬಹುದು. ಆದರೆ ನಿಜವಾದ ಕಲಾಪೋಷಕರಾಗಿ  ಕಲೆಗೆ ಉತ್ತೇಜನ ನೀಡುವ ಕಲಾಭಿಮಾನಿಗಳಿಂದ ಇಂದು ನಮ್ಮ ಪಾರಂಪರಿಕ ಕಲೆ ಅಸ್ತಿತ್ವದಲ್ಲಿದೆ ಎಂದರು.

ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ನರಸಿಂಹಯ್ಯ ಮಾತನಾಡಿ, ಸಂಗೀತ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರಿರುವ ಸವಿತಾ ಸಮಾಜ ಸಾಮಾಜಿಕವಾಗಿ ಮನ್ನಣೆ ಪಡೆಯುವಲ್ಲಿ ಹಿನ್ನಡೆಯುತ್ತಿದೆ ಎಂದು ಅವರು ವಿಷಾದಿಸಿದರು.

ಸಮಾರಂಭದಲ್ಲಿ ಹಿರಿಯ ನಾದಸ್ವರ ಹಾಗೂ ಸಂಗೀತ ಕಲಾವಿದರನ್ನು ಸನ್ಮಾನಿಸಲಾಯಿತು. ತಾ.ಪಂ ಅಧ್ಯಕ್ಷ ಶ್ರೀವತ್ಸ, ನಗರಸಭೆ ಅಧ್ಯಕ್ಷ ಕೆ.ಬಿ.ಮುದ್ದಪ್ಪ,ಉಪಾಧ್ಯಕ್ಷೆ ಜಯಲಕ್ಷ್ಮೀ ನಟರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಮಲ್ಲೇಶ್‌, ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ನಗರಸಭೆ ಮಾಜಿ ಅಧ್ಯಕ್ಷ ಜೆ.ರಾಜೇಂದ್ರ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಕೆ.ಜಿ.ಅಶೋಕ್, ತಾ.ಕನ್ನಡಪಕ್ಷದ ಅಧ್ಯಕ್ಷ ಎಂ.ಸಂಜೀವ್ ನಾಯಕ್,ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂಗರಾಜು,  ಸವಿತಾ ಸಮಾಜದ ತಾ.ಅಧ್ಯಕ್ಷ ಸತ್ಯನಾರಾಯಣ್, ಗೌ.ಅಧ್ಯಕ್ಷ ಟಿ.ಜಿ.ಮಂಜುನಾಥ್,ವಾದ್ಯಗಾರರ ಸಂಘದ ಅಧ್ಯಕ್ಷ ಮುನಿರಾಜು, ಮುಖಂಡರಾದ ರಾಮಾಂಜಿನಪ್ಪ, ಕೃಷ್ಣಮೂರ್ತಿ, ಶಿವಕುಮಾರ್ ಮತ್ತಿತರರು ಭಾಗವಹಿಸಿದ್ದರು.

ರಾತ್ರಿಯಿಡೀ ಪಸರಿಸಿದ ನಾದಸ್ವರದ ಕಂಪು: ನಗರದ ನೆಲದಾಂಜನೇಯ ಸ್ವಾಮಿ ದೇವಾಲಯ ಬಳಿಯ ಆಸ್ಪತ್ರೆ ವೃತ್ತದಲ್ಲಿ ನಡೆದ  ಶ್ರೀತ್ಯಾಗರಾಜಸ್ವಾಮಿ ಹಾಗೂ ಪುರಂದರದಾಸರ ಆರಾಧನೆಯ ಅಂಗವಾಗಿ ರಾತ್ರಿಯಿಡೀ ಏರ್ಪಡಿಸಿದ್ದ ವಿಶ್ವವಿಖ್ಯಾತ ಕಲಾವಿದರ ವಿಶೇಷ ನಾದಸ್ವರ ಕಛೇರಿ ಸೇರಿದ್ದ ಸಹಸ್ರಾರು ಸಭಿಕರನ್ನು ಭಾವಪರವಶರನ್ನಾಗಿಸಿತು.

ಮೊದಲ ವಿಶೇಷ ನಾದಸ್ವರ ಕಛೇರಿಯಲ್ಲಿ ವಿದ್ವಾನ್ ಆರ್.ವಿ.ಎಸ್.ಶ್ರೀಕಾಂತ್, ವಿದ್ವಾನ್ ಕಂದುಕೂರ್ ಕೆ.ಮನೋಹರ್ (ಡೋಲು), ವಿದ್ವಾನ್ ಕೆ.ಮುನಿಕುಮಾರ್ ಕಾಳಹಸ್ತಿ, ವಿದ್ವಾನ್ ಬಿ.ಎಸ್.ರಮೇಶ್ ಬಾಬು ನಾದಸ್ವರ  ನುಡಿಸಿದರು.

ರಾತ್ರಿ 1 ರಿಂದ ನಡೆದ ಎರಡನೇ ವಿಶೇಷ ನಾದಸ್ವರ ಕಛೇರಿಯಲ್ಲಿ ವಿದ್ವಾನ್ ಸ್ವಾಮಿ ಮಲೈ ಸಿ.ಗುರುನಾಥನ್, ವಿದ್ವಾನ್  ಧಾರಾಪುರಂ ವಿ.ಎಂ.ಗಣೇಶ್(ಡೋಲು ವಾದನ), ವಿದ್ವಾನ್‌ಶ್ಟಿ.ಪಿ.ಎಸ್ ರಾಮನಾಥನ್, ವಿದ್ವಾನ್ ಪಾತಮಂಗಲಂ ಪಿ.ಜಿ.ಯುವರಾಜ್ ನಾದಸ್ವರ ನುಡಿಸಿದರು.

*
ನಮ್ಮ ದೇಶದ ಇತಿಹಾಸದಲ್ಲಿ ಅಶೋಕ ನಮ್ಮ ಸಮುದಾಯದ ವ್ಯಕ್ತಿಯಾಗಿದ್ದಾನೆ. ಅಂತೆಯೇ ಅಪ್ರತಿಮ ಸಂಗೀತಗಾರರು ನಮ್ಮ ಸಮುದಾಯದಲ್ಲಿದ್ದಾರೆ.
-ಪ್ರೊ.ನರಸಿಂಹಯ್ಯ,
ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT