ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಾಶಯದಲ್ಲಿ ನೀರಿದ್ದರೂ ಪೂರೈಕೆಗೆ ಸಮಸ್ಯೆ

33 ಹಳ್ಳಿಗಳಿಗೆ ಕುಡಿಯುವ ನೀರು–ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕ ಗರಂ
Last Updated 12 ಏಪ್ರಿಲ್ 2017, 8:31 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಮಂಚನಬೆಲೆ ಜಲಾಶಯದಿಂದ ₹10.50 ಕೋಟಿ ವೆಚ್ಚದಲ್ಲಿ 33 ಹಳ್ಳಿಗಳಿಗೆ ಕುಡಿಯುವ ನೀರು  ಸರಬರಾಜು ಯೋಜನೆಯನ್ನು ಕಳೆದ 4ವರ್ಷಗಳ ಹಿಂದೆಯೇ ಪ್ರಾರಂಭಿಸಲಾಗಿತ್ತು.  ಅಧಿಕಾರಿಗಳ  ದಿವ್ಯ ನಿರ್ಲಕ್ಷ್ಯದಿಂದ ಹಳ್ಳಿಗಳಿಗೆ ನೀರು ಸರಬರಾಜು ಮಾಡಿಲ್ಲ ಎಂದು ಶಾಸಕ  ಎಚ್‌.ಸಿ.ಬಾಲಕೃಷ್ಣ  ತಿಳಿಸಿದರು.

ತಾಲ್ಲೂಕಿನ ಮಂಚನಬೆಲೆ  ಜಲಾಶಯಕ್ಕೆ  ಸೋಮವಾರ ಭೇಟಿ ನೀಡಿ ಕುಡಿಯುವ ನೀರಿನ ಕಾಮಗಾರಿ ಪರಿಶೀಲಿಸಿ ಅವರು ಮಾತನಾಡಿದರು,
ಜಿಲ್ಲಾ ಪಂಚಾಯಿತಿ ಸದಸ್ಯರು ಇಲ್ಲಿಗೆ ಭೇಟಿ ಕೊಟ್ಟು ನೀರಿನ ಸಮಸ್ಯೆಯನ್ನು ಪರಿಶೀಲಿಸಿದ್ದಾರೆಯೇ ಹೊರತು ಕಾಮಗಾರಿ ಅನುಷ್ಠಾನಗೊಳಿಸಿಲ್ಲ.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಿದೆ. ಜಲಾಶಯದಲ್ಲಿ ನೀರು ಇದೆ. ಬಳಸಲು ಆಗಿಲ್ಲ. ಒಂದು ತಿಂಗಳಲ್ಲಿ 33 ಹಳ್ಳಿಗಳಿಗೂ ನೀರು ಬಿಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ  ಎಚ್ಚರಿಕೆ ನೀಡಿದರು.

‘ಮಂಚನಬೆಲೆ ನೀರನ್ನು ರಾಮನಗರಕ್ಕೆ ಹರಿಸಿ ಎಂದು ಹೇಳುವುದಕ್ಕೆ ಜಿಲ್ಲಾಧಿಕಾರಿಗೆ ಏನು ಸಂಬಂಧವಿದೆ. ಸ್ಥಳೀಯ ಶಾಸಕರ ಜೊತೆ, ಸ್ಥಳೀಯ ರೈತರ ಜೊತೆ ಮಾತನಾಡಿ ಜಲಾಶಯದ ನೀರು ಬಿಡಬೇಕು, ಏಕಾಏಕಿ ನೀರು ಬಿಡಿ ಎಂದು ಹೇಳಿದ ಕೂಡಲೇ ನೀರು ಬಿಟ್ಟರೆ ಕ್ಷೇತ್ರದ ಶಾಸಕನಾಗಿ ಈ ಭಾಗದ ಜನಕ್ಕೆ ಏನು ಉತ್ತರ ಕೊಡಬೇಕು’ ಎಂದು ಕೇಳಿದರು.

ಇನ್ನು ಮುಂದೆ ಜಲಾಶಯದಿಂದ ಒಂದು ಹನಿ ನೀರು ಬಿಡಬೇಕಾದರೆ ಸ್ಥಳೀಯ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು, 2 ವರ್ಷಕ್ಕೆ ಕುಡಿಯುವ ನೀರು ಬಿಟ್ಟು ಉಳಿದ ನೀರನ್ನು ಮಾತ್ರ ಜಲಾಶಯದಿಂದ ಬಿಡಬೇಕು, ಸೂಚನೆ ಇಲ್ಲದೆ ಜಲಾಶಯದ ನೀರನ್ನು ಬಿಟ್ಟರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಜಲಾಶಯದ ಸಹಾಯಕ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಹಾಗೂ ಸಹಾಯಕ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನಮಗೆ ಕುಡಿಯಲು ನೀರಿನ ಸಮಸ್ಯೆಯಿದೆ, ಯಾವುದೇ ಕಾರಣಕ್ಕೂ ರಾಮನಗರ, ಕನಕಪುರಕ್ಕೆ ವ್ಯವಸಾಯಕ್ಕೆ ಬಳಕೆ ಮಾಡಲು ಮಂಚನಬೆಲೆ ನೀರನ್ನು ಬಿಡುವುದಿಲ್ಲ. ಕುಡಿಯಲು ಮಾತ್ರ ಬಿಡುತ್ತೇವೆ.

ಈಗ ಇರುವ ನೀರಿನ ಸ್ಥಿತಿ 0.6 ಟಿಎಂಸಿ ಇದ್ದು ಇನ್ನು 2 ವರ್ಷ ಮಳೆ ಬಾರದಿದ್ದರೂ ಮಾಗಡಿ ಪಟ್ಟಣ ಹಾಗೂ 33 ಹಳ್ಳಿಗಳಿಗೂ ನೀರು ಬಳಕೆ ಮಾಡಿಕೊಳ್ಳಬಹುದು. ಮಂಚನಬೆಲೆ ಜಲಾಶಯದಿಂದ ಬಿಡದಿ ಪಟ್ಟಣಕ್ಕೆ ನೀರನ್ನು ಬಿಡಲು ಈಗಾಗಲೇ ಕಾಮಗಾರಿ ಸಿದ್ಧಪಡಿಸಿದ್ದು ಅತ್ಯಂತ ಶೀಘ್ರದಲ್ಲಿ  ಅಲ್ಲಿಗೂ ಕುಡಿಯುವ ನೀರನ್ನು  ಹರಿಸಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌,  ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಲೋಕೇಶ, ರಂಗನಾಥ್, ಬಸವರಾಜು, ಪ್ಯಾರಾಜಾನ್, ಜಲಾಶಯದ ಸಹಾಯಕ ಎಂಜಿನಿಯರ್‌ ಶ್ರೀನಿಧಿ, ಎಇಇ ದೇವದಾಸ್, ಜೆಇ ಹೇಮಾನಾಯಕ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT