ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾರಿ ಮಾಲೀಕರ ಸಂಘದ ವಿರುದ್ಧ ಅಸಮಾಧಾನ

Last Updated 12 ಏಪ್ರಿಲ್ 2017, 10:07 IST
ಅಕ್ಷರ ಗಾತ್ರ

ಗಂಗಾವತಿ: ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಸಂಘಟನೆಯನ್ನು ಅಪೋಶನಕ್ಕೆ ತೆಗೆದುಕೊಂಡು ಉದ್ದೇಶ ಪೂರ್ವಕ ತಮ್ಮ ವ್ಯಾಪಾರ ವಹಿವಾಟಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಅಸಮಾಧಾನಗೊಂಡ ವಿವಿಧ ಸಂಘಟನೆಯ ಪದಾಧಿಕಾರಿಗಳು ನಗರದಲ್ಲಿ ತುರ್ತು ಸಭೆ ನಡೆಸಿ ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಚನ್ನಬಸವತಾತ ದೇವಸ್ಥಾನದಲ್ಲಿ ಮಂಗಳವಾರ ಅಕ್ಕಿ ಗಿರಣಿ ಮಾಲೀಕರು, ಲಾರಿ ಮಾಲೀಕರು, ದಲ್ಲಾಳಿ ವರ್ತಕರು ಮೊದಲಾದ ಸಂಘಟನೆಗಳ ಪದಾಧಿಕಾರಿಗಳು ಸಭೆ ಸೇರಿ ಈ ಬಗ್ಗೆ ಚರ್ಚೆ ನಡೆಸಿದರು.

ಏ.8ರ ವರೆಗೆ ಲಾರಿ ಮಾಲೀಕರ ಮುಷ್ಕರವಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಲಾರಿ ಮಾಲೀಕರಿಗೆ ಬೆಂಬಲ ನೀಡಿದ್ದೇವೆ. ಏ.8ರ ಬಳಿಕ ಮುಷ್ಕರ ಹಿಂದಕ್ಕೆ ಪಡೆಯಲಾಗಿದೆ. ಆದರೆ, ನಗರದಲ್ಲಿ ಮಾತ್ರ ಮುಷ್ಕರ ಮುಂದುವರಿಸುವ ಮೂಲಕ ಸಂಘಟನೆಯ ಪದಾಧಿಕಾರಿಗಳು ವ್ಯಾಪಾರಸ್ಥರಿಗೆ ಸಮಸ್ಯೆ ತಂದೊಡ್ಡಿದ್ದಾರೆ ಎಂದು ವರ್ತಕರು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಹೊರಗಿನಿಂದ ಬಂದ ಲಾರಿಗಳಿಗೆ ಸರಕು ತುಂಬದಂತೆ ಹೆದರಿಸುವ ಮೂಲಕ ಅಕ್ಕಿ ಗಿರಣಿ ಮಾಲೀಕರಿಗೆ ಲಾರಿ ಮಾಲೀಕರ ಸಂಘದ ಕೆಲವರು ಬೆದರಿಕೆ ಹಾಕಿದ್ದಾರೆ. ಇದು ಕಾನೂನು ಬಾಹಿರವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಎಪಿಎಂಸಿಯಲ್ಲಿ ಸ್ಥಳೀಯ ಲಾರಿಗಳನ್ನು ನಿಲ್ಲಿಸಲು ಟರ್ಮಿನಲ್ ಸ್ಥಾಪಿಸಲಾಗಿದೆ. ಆದರೆ ಹೊರಗಿನ ಲಾರಿಗಳನ್ನು ಅಕ್ರಮವಾಗಿ ತಂದಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿ ಎಪಿಎಂಸಿಯಿಂದ ಕಾರಣ ಕೇಳಿ ನೋಟಿಸ್ ನೀಡಿ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಪಿಎಂಸಿ ಸದಸ್ಯ ಶರಣೇಗೌಡ ಹೇಳಿದರು.

ಎಪಿಎಂಸಿ ಟರ್ಮಿನಲ್ ದುರುಪಯೋಗಪಡಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ಹಾಗೂ ಸರ್ಕಾರಕ್ಕೆ ದೂರು ನೀಡಲು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮಾರುಕಟ್ಟೆಯ ವಸ್ತುಸ್ಥಿತಿ ಅರಿತು ರಾಜೀ ಮಾಡಿಕೊಂಡು ಸಹಕಾರ ನೀಡಿದರೆ ಸಮಸ್ಯೆ ಇತ್ಯರ್ಥವಾಗಲಿದೆ. ಇಲ್ಲವಾದಲ್ಲಿ ಎಲ್ಲ ಆಯಾಮದ ಪರ್ಯಾಯಕ್ಕೂ ತಾವು ಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ಸಭೆ ಸೇರಿದ ಮುಖಂಡರು ತಿಳಿಸಿದರು.

ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ನೆಕ್ಕಂಟಿ ಸೂರಿಬಾಬು, ಶರಣೇಗೌಡ ಹೊಸಳ್ಳಿ, ಚಿಲಕೂರಿ ಸೂರ್ಯನಾರಾಯಣ, ಧ್ಯಾನ್‌ಚಂದ್ ಮೂತಾ, ಲಿಂಗನಗೌಡ ಅಯೋಧ್ಯ, ಮಂಟಪ್ಪ ನಾಡಗೌಡ, ಮಸ್ಕಿ ಸಿದ್ದಣ್ಣ, ಗುರುಸಿದ್ದನಗೌಡ ನಾಗಲಿಕರ, ಕೊಳ್ಳಿ ಬಸವರಾಜ, ಮಲ್ಲನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT