ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರ ಕಡೆಗಣನೆಗೆ ಆಕ್ರೋಶ; ಚಲನಚಿತ್ರ ಪ್ರಶಸ್ತಿ ಆಯ್ಕೆ ವಿರುದ್ಧ ಅಸಮಾಧಾನ

Last Updated 12 ಏಪ್ರಿಲ್ 2017, 16:13 IST
ಅಕ್ಷರ ಗಾತ್ರ

ಬೆಂಗಳೂರು: 2016ನೇ ಕ್ಯಾಲೆಂಡರ್‌ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾದ ಬೆನ್ನಲ್ಲೇ ಅಸಮಾಧಾನವೂ ಕಾಣಿಸಿಕೊಂಡಿದೆ. ಹಲವು ಅರ್ಹ ಚಿತ್ರಗಳನ್ನು ಮತ್ತು ಕಲಾವಿದರನ್ನು ಪ್ರಶಸ್ತಿಗೆ ಪರಿಣಿಸಿಲ್ಲ ಎಂದು ಚಿತ್ರರಂಗದದವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನೀರ್‌ ದೋಸೆ’ ನಿರ್ದೇಶಕ ವಿಜಯಪ್ರಸಾದ್‌ ಎಂ.ಸಿ. ಫೇಸ್‌ಬುಕ್‌ ಪುಟದಲ್ಲಿ ತಮ್ಮ ‘ನೀರ್‌ ದೋಸೆ’ ಚಿತ್ರಕ್ಕೆ ಪ್ರಶಸ್ತಿ ಬರದಿರುವುದರ ಬಗ್ಗೆ ವ್ಯಂಗ್ಯವಾಗಿ ಬರೆದಿದ್ದಾರೆ.

‘ನೀರ್ ದೋಸೆ ‘ತಗಡು’ ಚಿತ್ರವೆಂದು ಕೆಲವರ ದೃಷ್ಟಿಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ನಮ್ಮ ಕಣ್ಣು ತೆರೆಸಿದ ಪ್ರಶಸ್ತಿ ಸಮಿತಿಯ ವೃಂದದವರಿಗೆ ಪ್ರಣಾಮಗಳು’ ಎಂದು ಅವರು ಬರೆದುಕೊಂಡಿದ್ದಾರೆ. ವಿಜಯಪ್ರಸಾದ್‌ ಅವರ ಅನಿಸಿಕೆಯನ್ನು ಅನುಮೋದಿಸಿ ಸಾಕಷ್ಟು ಜನರು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.
ಈ ಕುರಿತು ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗಲೂ ಅವರು ಪ್ರಶಸ್ತಿ ಆಯ್ಕೆಯ ಕುರಿತು ಅಸಮಾಧಾನ ಹಂಚಿಕೊಂಡರು.

ಬೆವರಿಗೆ ಬೆಲೆ ಸಿಗಬೇಕು: ‘ವೈಯಕ್ತಿಕವಾಗಿ ನನಗೆ ಪ್ರಶಸ್ತಿ ಬಂದಿಲ್ಲ ಎಂಬ ಕೊರಗಷ್ಟೇ ಅಲ್ಲ ಇದು. ಬೆವರಿಗೆ ಬೆಲೆ ಸಿಗಬೇಕು. ಅದು ಬಲಿಯಾಗಬಾರದು ಎಂಬುದಷ್ಟೇ ನನ್ನ ಇಂಗಿತ’ ಎನ್ನುವ ವಿಜಯಪ್ರಸಾದ್‌ ಅವರ ಪ್ರಕಾರ ‘ಮುಲಾಜು–ಪ್ರಭಾವಗಳಿಗೆ ಸಿಕ್ಕಿಹಾಕಿಕೊಳ್ಳದೇ, ಪೂರ್ವಗ್ರಹವಿಲ್ಲದೇ ಪ್ರಶಸ್ತಿಗಳಿಗೆ ಚಿತ್ರಗಳನ್ನು ಆಯ್ಕೆ ಮಾಡಿದ್ದರೆ ಪ್ರಶಸ್ತಿಪಟ್ಟಿ ಬೇರೆಯಾಗಿರುತ್ತಿತ್ತು.’

‘‘ನಮ್ಮ ಚಿತ್ರ ‘ನೀರ್‌ ದೋಸೆ’ ಒಂದು ಪ್ರಶಸ್ತಿಗೂ ಅರ್ಹವಲ್ಲ ಎನ್ನುವುದನ್ನು ಒಪ್ಪಿಕೊಳ್ಳಲಾಗದು. ನನಗೆ ವೈಯಕ್ತಿಕವಾಗಿ ಪ್ರಶಸ್ತಿ ಬಂದಿಲ್ಲ ಎಂಬುದರ ಬಗ್ಗೆ ನಾನೇನೂ ಪ್ರಶ್ನಿಸುವುದಿಲ್ಲ. ಆದರೆ ದತ್ತಣ್ಣ ಅವರಿಗೆ ಪ್ರಶಸ್ತಿ ಕೊಡದಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದುವರೆಗೆ ಸಾಂಪ್ರದಾಯಿಕ ಪಾತ್ರಗಳನ್ನೇ ಮಾಡುತ್ತ ಬಂದ ಅವರು, ‘ನೀರ್‌ ದೋಸೆ’ ಸಿನಿಮಾದಲ್ಲಿ ಮಡಿವಂತಿಕೆಯನ್ನು ಬಿಟ್ಟು ಬೇರೆ ದಾರಿ ತುಳಿದಿದ್ದಾರೆ. ಪ್ರಬುದ್ಧವಾಗಿಯೂ ಅಭಿನಯಿಸಿದ್ದಾರೆ. ಅವರ ನಟನೆ ಪ್ರಶಸ್ತಿಗೆ ಪರಿಗಣನೆಯಾಗಿಲ್ಲ ಎಂಬುದು ನೋವನ್ನುಂಟು ಮಾಡುತ್ತದೆ’ ಎನ್ನುತ್ತಾರೆ ಅವರು.
‘ನೀರ್‌ ದೋಸೆ’ ನಾಯಕಿ ಹರಿಪ್ರಿಯ ಕೂಡ ಅತ್ಯುತ್ತಮ ನಟಿ ಪ್ರಶಸ್ತಿಗೆ ಅರ್ಹಳಾಗಿದ್ದಳು ಎನ್ನುವುದು ಅವರ ಅನಿಸಿಕೆ.

‘ಅತ್ಯುತ್ತಮ ಮನರಂಜನಾ ಚಿತ್ರ ಎಂದು ‘ಕಿರಿಕ್‌ ಪಾರ್ಟಿ’ ಚಿತ್ರಕ್ಕೆ ಪ್ರಶಸ್ತಿ ಕೊಟ್ಟಿದ್ದಾರೆ. ಆದರೆ ನಮ್ಮ ‘ನೀರ್‌ ದೋಸೆ’ ಚಿತ್ರವನ್ನೂ ಜನ ಮೆಚ್ಚಿದ್ದಾರೆ. ಒಳ್ಳೆಯ ಗಳಿಕೆಯ ಜೊತೆಗೆ, ‘ಕಿರಿಕ್‌ ಪಾರ್ಟಿ’ಗಿಂತ ಗಾಢವಾದ ಕಥೆ, ಸೂಕ್ಷ್ಮ ಸಂದೇಶ ‘ನೀರ್‌ ದೋಸೆ’ನಲ್ಲಿವೆ. ವಾಸ್ತವತೆಗೆ ಹತ್ತಿರವಾದ ಬದುಕಿನ ಚಿತ್ರಣವಿದೆ. ಆ ದೃಷ್ಟಿಯಿಂದ ನಮ್ಮ ಸಿನಿಮಾಗೆ ಮನರಂಜನಾ ಚಿತ್ರ ಪ್ರಶಸ್ತಿಯನ್ನು ಕೊಡಬಹುದಿತ್ತು’’ ಎಂದೂ ಹೇಳುತ್ತಾರೆ.

ಅನಂತ್‌ನಾಗ್‌ ಅವರಿಗೂ ಪ್ರಶಸ್ತಿ ಸಿಕ್ಕಿಲ್ಲ ಎನ್ನುವುದು ವಿಜಯಪ್ರಸಾದ್‌ ಅವರಿಗೆ ಇನ್ನಷ್ಟು ಆಶ್ಚರ್ಯವನ್ನುಂಟು ಮಾಡಿದೆ.
‘‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾದಲ್ಲಿ ಅನಂತ್‌ನಾಗ್‌ ಅದ್ಭುತವಾಗಿ ಅಭಿನಯಿಸಿದ್ದಾರೆ. ಅವರ ಪ್ರತಿಭೆಯೂ ಆಯ್ಕೆ ಸಮಿತಿಗೆ ಕಾಣಲಿಲ್ಲವೇ?’ ಎಂದು ಪ್ರಶ್ನಿಸುವ ಅವರು, ‘‘ಯು ಟರ್ನ್‌’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾಗಳು ಯಾವುದೇ ಪ್ರಶಸ್ತಿ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ನಿಜವಾಗಲೂ ಅರ್ಹರಿಗೆ ಸಿಕ್ಕಿದ್ದು ಎಂದರೆ ‘ರಾಮಾ ರಾಮಾ ರೇ’ ನಿರ್ದೇಶಕ ಡಿ. ಸತ್ಯಪ್ರಕಾಶ್‌ ಅವರಿಗೆ ಮಾತ್ರ’’ ಎನ್ನುತ್ತಾರೆ.

ಪ್ರಾಮಾಣಿಕ ಪ್ರಯತ್ನಕ್ಕೆ ಏನು ಬೆಲೆ?
‘ಆಯ್ಕೆ ಸಮಿತಿ ಪ್ರಾಮಾಣಿಕವಾಗಿ ಕೆಲಸ ಮಾಡಿಲ್ಲ’ ಎಂದು ನೇರವಾಗಿಯೇ ಆರೋಪ ಮಾಡುತ್ತಾರೆ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದ ನಿರ್ದೇಶಕ ಇಂದ್ರಬಾಬು.
‘ಒಂದು ಒಳ್ಳೆಯ ಸಂಗತಿಯನ್ನು ಹೇಳಲಿಕ್ಕೆ ಹೋದರೆ ನಮ್ಮನ್ನು ನೋಡಿ ನಗುತ್ತಾರೆ. ಪ್ರಾಮಾಣಿಕವಾಗಿ ದುಡಿದವರು ಹಾಸ್ಯಾಸ್ಪದ ಆಗುತ್ತಿದ್ದೇವೆ’ ಎಂಬುದು ಅವರ ನೋವು.

‘‘ಭೀಷ್ಮ ಸಹಾನಿಯವರ ಕೃತಿಯನ್ನು ತಂದು ‘ಕಬೀರ’ನನ್ನು ಕನ್ನಡದಲ್ಲಿ ಅನಾವರಣ ಮಾಡಿದ ನನಗೆ ಏನು ಸಿಕ್ಕಿತು? ಪ್ರಶಸ್ತಿ ಪಡೆಯಲಿಕ್ಕೆ ಅಂತಲೇ ಸಿನಿಮಾ ಮಾಡಿದವನಲ್ಲ ನಾನು. ಐದು ವರ್ಷ ತಪಸ್ಸು ಮಾಡಿ ಬಹಳ ಪ್ರಾಮಾಣಿಕವಾಗಿ ಮಾಡಿದ ಸಿನಿಮಾ ‘ಸಂತೆಯಲ್ಲಿ ನಿಂತ ಕಬೀರ’. ‘ಕಬೀರ’ದಲ್ಲಿ ಗೋಪಾಲ ವಾಜಪೇಯಿ ಸಾಹಿತ್ಯ ಕೆಟ್ಟದಾಗಿತ್ತಾ? ಇಸ್ಮಾಯಿಲ್‌ ದರ್ಬಾರ್‌ ಕೆಟ್ಟದಾಗಿ ಸಂಗೀತ ಸಂಯೋಜಿಸಿದ್ದರಾ? ಶಿವರಾಜ್‌ ಕುಮಾರ್‌, ಭಾಗೀರಥಿ ಬಾಯಿ ಕದಂ ಅವರೆಲ್ಲ ಕೆಟ್ಟದಾಗಿ ಅಭಿನಯಿಸಿದ್ದರಾ?   ಈ ಶ್ರಮವನ್ನು ಗುರ್ತಿಸಿ ಗೌರವಿಸುವಷ್ಟು ಕನಿಷ್ಠ ಸೌಜನ್ಯ ಇಲ್ಲ ಎಂದರೆ ಏನು ಮಾಡಲು ಸಾಧ್ಯ? ’ ಎಂದು ಬೇಸರದಿಂದ ನುಡಿಯುತ್ತಾರೆ.


ರಿಯಲ್‌ ಎಸ್ಟೇಟ್‌ಗಿಂತ, ನೈಟ್‌ಕ್ಲಬ್‌ ಮಾಡುವುದಕ್ಕಿಂತ ಪ್ರಶಸ್ತಿ ಸಿನಿಮಾಗಳನ್ನು ಮಾಡುವುದೇ ಕನ್ನಡದಲ್ಲಿ ಬಹಳ ಸುಲಭ ದಂಧೆಯಾಗಿದೆ. ಇದನ್ನೆಲ್ಲ ನೋಡಿದರೆ ಅಸಹ್ಯ ಅನಿಸುತ್ತದೆ.
–ಇಂದ್ರಬಾಬು, ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT