ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕುರ್‌

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಹಲವು ಕಾರಣಗಳಿಗೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮಹತ್ವದ ಸ್ಥಾನ ಗಳಿಸಿಕೊಂಡಿರುವ ಸಿನಿಮಾ ‘ಅಂಕುರ್‌’. ಇದು ಬಿಡುಗಡೆಯಾಗಿದ್ದು 1974ರಲ್ಲಿ. ಭಾರತದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಶ್ಯಾಮ್‌ ಬೆನಗಲ್ ಅವರ ನಿರ್ದೇಶನದ ಮೊದಲ ಸಿನಿಮಾ ಇದು. ಹಾಗೆಯೇ ಅನಂತ್‌ನಾಗ್‌ ಮತ್ತು ಶಬಾನಾ ಅಜ್ಮೀ ಅವರಂಥ ಪ್ರಖರ ಕಲಾವಿದರನ್ನು ಪರಿಚಯಿಸಿದ ಸಿನಿಮಾ ಕೂಡ ಹೌದು.

ಮನುಷ್ಯ ಸ್ವಭಾವಗಳನ್ನು ಅವನೇ ರೂಪಿಸಿಕೊಂಡ ಜಾತಿ, ವರ್ಗ, ಅಂತಸ್ತು, ಸಂಪ್ರದಾಯಗಳಂಥ ಸಾಮಾಜಿಕ ರಿವಾಜುಗಳ ಚೌಕಟ್ಟಿನೊಳಗಿಟ್ಟು ಪರೀಕ್ಷಿಸುವುದು ಶ್ಯಾಮ್‌ ಬೆನಗಲ್‌ ಅವರ ಬಹುತೇಕ ಸಿನಿಮಾಗಳ ಮೂಲ ಲಕ್ಷಣ. ‘ಅಂಕುರ್‌’ ಸಿನಿಮಾ ಕೂಡ ಸಾಮಾಜಿಕವಾಗಿ ಪರಿಗಣಿತವಾದ ನೈತಿಕ–ಅನೈತಿಕಗಳ ವಿಂಗಡಣೆಯ ಸಾಚಾತನವನ್ನು ಪ್ರಶ್ನಿಸುತ್ತದೆ ಮತ್ತು ಪರೀಕ್ಷಿಸುತ್ತದೆ.

ಸಿನಿಮಾದ ನಾಯಕಿ ಲಕ್ಷ್ಮಿ, ತನ್ನ ಕಿವುಡ–ಮೂಗ ಗಂಡನೊಂದಿಗೆ ಹಳ್ಳಿಯೊಂದರಲ್ಲಿ ಜಮೀನುದಾರರೊಬ್ಬರ ತೋಟದಲ್ಲಿ ಕೆಲಸಗಾರಳಾಗಿದ್ದಾಳೆ. ದಲಿತ ಸಮುದಾಯದ ಅವಳಿಗೆ ಬದುಕಿನಲ್ಲಿನ ದೊಡ್ಡ ಕೊರತೆ ಮಕ್ಕಳಿಲ್ಲದಿರುವುದು. ತಾಯಿಯಾಗುವ ಹಂಬಲ ಅವಳ ಒಳಗೊಳಗೇ ದಹಿಸುತ್ತಿದೆ. ಇತ್ತ ಕಥಾನಾಯಕ ಸೂರ್ಯ ಆಧುನಿಕ ಶಿಕ್ಷಣ ಪಡೆದಿರುವವನು. ಹೈದರಾಬಾದ್‌ನಲ್ಲಿ ಶಿಕ್ಷಣ ಪಡೆದು ಹಳ್ಳಿಗೆ ಮರಳಿದವನು. ಅವನಿಗಿನ್ನೂ ಶಿಕ್ಷಣ ಮುಂದುವರಿಸಲು ಆಸೆ. ಆದರೆ ಅದಕ್ಕೆ ತಂದೆಯ ಒಪ್ಪಿಗೆ ಇಲ್ಲ. ಮಗ ಮನೆಯಲ್ಲಿಯೇ ಇದ್ದು ತೋಟವನ್ನು ನೋಡಿಕೊಂಡಿರಲಿ ಎಂಬುದು ಅವರ ಇಂಗಿತ. ತಂದೆಗೆ ಎದುರಾಡುವ ಧೈರ್ಯವಿಲ್ಲದೇ ಅನಿವಾರ್ಯವಾಗಿ ಸೂರ್ಯ ಮನೆಯಲ್ಲಿಯೇ ಉಳಿಯುತ್ತಾನೆ. ಸೂರ್ಯನ ತಂದೆಗೆ ಕೌಸಲ್ಯಾ ಹೆಣ್ಣಿನೊಂದಿಗೆ ಸಂಬಂಧವಿರುತ್ತದೆ. ಅವಳಿಗೆ ಪ್ರತಾಪ್‌ ಎಂಬ ಮಗನೂ ಇದ್ದಾನೆ. ತನ್ನ ಜಮೀನಿನಲ್ಲಿ ಫಲವತ್ತಾದ ಭಾಗವನ್ನು ಅವರಿಗೆ ನೀಡಿ ಉಳಿದ ಜಮೀನನ್ನು ಸೂರ್ಯನಿಗೆ ನೋಡಿಕೊಳ್ಳಲು ಬಿಡುತ್ತಾನೆ.

ತೋಟದಲ್ಲಿನ ಹಳೆಯ ಮನೆಯಲ್ಲಿ ಬಂದು ವಾಸ ಮಾಡುವ ಸೂರ್ಯನಿಗೆ ಸಹಾಯ ಮಾಡಲು ಲಕ್ಷ್ಮಿ ಮತ್ತು ಅವಳ ಗಂಡ ಕಿಷ್ಣಯ್ಯ ಇರುತ್ತಾರೆ. ಸೂರ್ಯ ಜಾತಿ ವ್ಯವಸ್ಥೆಯನ್ನು, ಅದರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ವಿರೋಧಿಸುವವನು. ಲಕ್ಷ್ಮಿ ಕೈಯಲ್ಲಿಯೇ ಕಾಫಿ ಮಾಡಿಸಿಕೊಂಡು ಕುಡಿಯಬಲ್ಲವನು. ಸೂರ್ಯನಿಗೆ ಬಾಲ್ಯವಿವಾಹವಾಗಿದ್ದರೂ ಹೆಂಡತಿ ತವರಿನಲ್ಲಿಯೇ ಇದ್ದಾಳೆ. ತನ್ನ ಮನೆಗೆಲಸದ ಲಕ್ಷ್ಮಿಯ ಜತೆ ಸೂರ್ಯನಿಗೆ ಪ್ರೇಮವುಂಟಾಗುತ್ತದೆ. ಅದು ದೇಹಸಂಪರ್ಕಕ್ಕೂ ಎಡೆಮಾಡಿಕೊಡುತ್ತದೆ. ಆದರೆ ಸೂರ್ಯನ ಹೆಂಡತಿ ಸರೂ ಬಂದ ಮೇಲೆ ಲಕ್ಷ್ಮಿಯನ್ನೂ ದೂರ ಮಾಡುತ್ತಾಳೆ. ಅಷ್ಟರಲ್ಲಾಗಲೇ ಲಕ್ಷ್ಮಿ ಸೂರ್ಯನಿಂದ ಗರ್ಭಿಣಿಯಾಗಿರುತ್ತಾಳೆ.

ನಿರ್ದೇಶಕ ಶ್ಯಾಮ್‌ ಬೆನಗಲ್‌ ಬರೀ ಶೋಷಣೆಯ ಕಥೆಯನ್ನಷ್ಟೇ ಹೇಳಿ ಸುಮ್ಮನಾಗುವುದಿಲ್ಲ. ಶಿಕ್ಷಣ ಈ ಜಾತಿ ವ್ಯವಸ್ಥೆಯನ್ನು ತೊಡೆದುಹಾಕುತ್ತದೆ ಎಂಬ ಭ್ರಮೆಯನ್ನು ಪ್ರಶ್ನಿಸುತ್ತಾರೆ. ಈ ಮಿಥ್ಯೆಯನ್ನು ಹಲವು ಆಯಾಮಗಳಲ್ಲಿ ಒಡೆದುಹಾಕುತ್ತಾರೆ. ಲಕ್ಷ್ಮಿಯನ್ನು ಮೋಹಿಸುವ ಕಾಲದಲ್ಲಿ ಜಾತಿ ವ್ಯವಸ್ಥೆಯನ್ನು ನಿರಾಕರಿಸುವವನಂತೇ ಕಾಣುವ ಸೂರ್ಯ ನಂತರದಲ್ಲಿ ಮತ್ತದೇ ಪಾಳೇಗಾರಶಾಹಿಯ ಪ್ರತಿನಿಧಿಯೇ ಆಗಿಬಿಡುತ್ತಾನೆ. ಲಕ್ಷ್ಮಿ ಅಕ್ಷರಶಃ ನಿರ್ಗತಿಕಳಾಗುತ್ತಾಳೆ. ಹೀಗೆ ಮನುಷ್ಯನ ಆದರ್ಶಗಳು, ಸಿದ್ಧಾಂತಗಳೆಲ್ಲ ಮುಗ್ಧರನ್ನು ವಂಚಿಸುವ ಸಮಯಸಾಧಕ ಸಾಧನವೂ ಆಗಿಬಿಡುವ ವಿಪರ್ಯಾಸವನ್ನು ‘ಅಂಕುರ್‌’ ಮನೋಜ್ಞವಾಗಿ ಬಿಚ್ಚಿಡುತ್ತದೆ. ಅನಂತ್‌ನಾಗ್‌ ಮತ್ತು ಶಬಾನಾ ಅಜ್ಮಿ ಪ್ರಬುದ್ಧ ನಟನೆ ಈ ಸಿನಿಮಾದ ಆತ್ಮ.
ಹಾಗೆಯೇ ವನರಾಜ್‌ ಭಾಟಿಯಾ ಅವರ ಸಂಗೀತವೂ, ಗೋವಿಂದ ನಿಹಲಾನಿ ಛಾಯಾಗ್ರಹಣವೂ ‘ಅಂಕುರ್‌’ಗೆ ಸಮರ್ಥ ಆವರಣ ಒದಗಿಸಿವೆ. ‘ಅಂಕುರ್‌’ ಸಿನಿಮಾವನ್ನು goo.gl/EozcqS ಕೊಂಡಿ ಬಳಸಿ ಯೂ ಟ್ಯೂಬ್‌ನಲ್ಲಿ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT