ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಮಣರ ಸನ್ನಿಧಿಯಲ್ಲಿ

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಭಾರತದ ಅಧ್ಯಾತ್ಮ ನಾಯಕರ ಸಾಲಿನಲ್ಲಿ ರಮಣಮಹರ್ಷಿಗಳದು ವಿಶಿಷ್ಟವಾದ ಹೆಸರು. ತಮ್ಮನ್ನು ಭೇಟಿಯಾದವರಲ್ಲಿ ಅಪಾರ ಕರುಣೆಯನ್ನೂ ಮಾನವಪ್ರೇಮವನ್ನೂ ಉದ್ದೀಪಿಸಿದ ಅಪೂರ್ವ ಮಾನವತಾವಾದಿ ಅವರು. ಆತ್ಮಸಾಕ್ಷಾತ್ಕಾರ ಮಾರ್ಗದ ಹುಡುಕಾಟಕ್ಕೆ ಪ್ರೇರಣೆ ನೀಡುತ್ತಿದ್ದ ಅವರು, ತಮಿಳುನಾಡಿನ ಪುಟ್ಟಗ್ರಾಮ ತಿರುಚ್ಚಳಿಯವರು. ತಾರುಣ್ಯದಲ್ಲಿ ಹುಟ್ಟು–ಸಾವುಗಳ ಜಿಜ್ಞಾಸೆಗೆ ಒಳಗಾಗಿ, ಬದುಕಿನ ಅರ್ಥ ಹುಡುಕಿಕೊಂಡು ತಿರುವಣ್ಣಾಮಲೆಗೆ ಹೋಗಿ ನೆಲೆಸಿದರು. ಅಲ್ಲಿ ಅವರ ಅಧ್ಯಾತ್ಮ ಸಾಧನೆ ಮುಂದುವರೆಯಿತು. ದೇಶದ ವಿವಿಧ ಭಾಗಗಳಿಂದ ರಮಣರನ್ನು ಹುಡುಕಿಕೊಂಡು ವಿವಿಧ ಹಿನ್ನೆಲೆಯ ಜನ ಆಶ್ರಮಕ್ಕೆ ಬರುತ್ತಿದ್ದರು. ಅವರೊಂದಿಗೆ ರಮಣರು ನಡೆಸಿದ ಸಂವಾದಗಳನ್ನು ಕುರಿತು ಕೆಲವು ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲೊಂದು: ‘ರಮಣಾಶ್ರಮದ ಪತ್ರಗಳು: ರಮಣರ ಸನ್ನಿಧಿಯಲ್ಲಿ ನಡೆದ ಘಟನೆಗಳ ವಿವರಣೆ’. ಸೂರಿ ನಾಗಮ್ಮನವರ ಈ ತೆಲುಗು ಕೃತಿಯನ್ನು ಡಾ. ಕೆ.ಎ. ನಾರಾಯಣನ್ ಕನ್ನಡಕ್ಕೆ ತಂದಿದ್ದಾರೆ. 1991ರಲ್ಲಿ ಬೆಂಗಳೂರಿನ ‘ರಮಣ ಮಹರ್ಷಿ ಸೆಂಟರ್ ಫಾರ್ ಲರ್ನಿಂಗ್’ ಪ್ರಕಟಿಸಿರುವ ಈ ಕೃತಿ ರಮಣರ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ಅನುಕೂಲಕರವಾದ ಟಿಪ್ಪಣಿಪುಸ್ತಕದಂತಿದೆ. ಗುರುಗಳ ಕರುಣೆಗೆ ಪಾತ್ರರಾಗಿ ಒಂದಷ್ಟು ಕಾಲ ರಮಣಾಶ್ರಮದಲ್ಲಿ ನೆಲೆಸಿದ್ದ ನಾಗಮ್ಮನವರು, ರಮಣರ ಸನ್ನಿಧಿಯಲ್ಲಿ ಪ್ರತಿದಿನ ನಡೆಯುತ್ತಿದ್ದ ಚರ್ಚೆ–ಸಂವಾದಗಳನ್ನು ಸಂಗ್ರಹಿಸಿ ಅಕ್ಷರರೂಪದಲ್ಲಿ ದಾಖಲಿಸಿದ್ದಾರೆ. ಈ ಬರಹಗಳನ್ನು ಅವರು ತಮ್ಮ ಅಣ್ಣನಿಗೆ ಪತ್ರರೂಪದಲ್ಲಿ ಬರೆದಂತೆ ರೂಪಿಸಿದ್ದಾರೆ. ನಾಗಮ್ಮನವರು ಪ್ರತಿದಿನವೂ ತಾವು ದಾಖಲಿಸುತ್ತಿದ್ದ ವಿವರಗಳನ್ನು ರಮಣರಿಗೆ ತೋರಿಸಿ, ಅವರ ಅನುಮೋದನೆ ಪಡೆಯುತ್ತಿದ್ದರು. ಹಾಗಾಗಿ ಈ ಬರಹಗಳು ಹೆಚ್ಚು ಅಧಿಕೃತವಾದವು. ಈ ಬರಹಗಳ ಸಂಕಲನ ‘ಶ್ರೀ ರಮಣಾಶ್ರಮ ಲೇಖಲು’ ಹೆಸರಿನಲ್ಲಿ ತೆಲುಗಿನಲ್ಲಿ ಮೊದಲು ಪ್ರಕಟಗೊಂಡಿದೆ. 44 ಪತ್ರಗಳನ್ನು ಒಳಗೊಂಡಿರುವ ಪುಸ್ತಕ – ಮೋಕ್ಷ, ಮೌನಮುದ್ರೆ, ನಿರಾಡಂಬರ, ವೈರಾಗ್ಯ, ನೆನಪು, ಮರೆವು, ಮಹಾತ್ಮಗಾಂಧಿಯವರ ನಿರ್ಯಾಣ, ಭಕ್ತಿ, ಗುರುಕೃಪೆ– ಹೀಗೆ ತನ್ನ ವಸ್ತುವೈವಿಧ್ಯದಿಂದ ಗಮನಸೆಳೆಯುತ್ತದೆ. ರಮಣರನ್ನು ಅರಿಯಲು ಹಾಗೂ ಮಾನವಧರ್ಮದ ಬಗ್ಗೆ ನಂಬಿಕೆಯುಳ್ಳ ಎಲ್ಲರೂ ಗಮನಿಸಬೇಕಾದ ಈ ಪುಸ್ತಕವನ್ನು goo.gl/rBrYts ಕೊಂಡಿ ಬಳಸಿ ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT