ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಮನೆಯಲಿ ದೊಡ್ಡಯಾನ

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಿಡುವೇ ಸಿಗದಷ್ಟು ಕೆಲಸ. ದಿನಗಳು ಉರುಳುವುದೂ ಗೊತ್ತಾಗುತ್ತಿರಲಿಲ್ಲ. ಮುಂಜಾವು, ಮುಸ್ಸಂಜೆ ಸೊಬಗನ್ನೇ ಸವಿಯಲು ಸಮಯವಿಲ್ಲ. ಆದರೂ ದೇಶ ಸುತ್ತುತ್ತಾ ಪ್ರಕೃತಿಯ ಮಡಿಲಲ್ಲಿ ನಲಿಯುವ ಆಸೆ ಮಾತ್ರ ಈ ಇಬ್ಬರನ್ನೂ ಬಿಟ್ಟಿರಲಿಲ್ಲ.

ಹೀಗೆ ನೌಕರಿ, ಮನೆಯಲ್ಲೇ ಕಳೆದುಹೋಗುತ್ತಿದ್ದ ಬದುಕಿನಿಂದ ಬೇಸತ್ತ ಲಾಸ್ ಏಂಜಲೀಸ್‌ನ ಗಿಲಾಮ್ ಹಾಗೂ ಜೆನ್ನಾ ಸ್ಪೆಸಾರ್ಡ್‌, ಒಂದು ದಿನ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮ್ಮ ಬಯಕೆಯ ಬೆನ್ನಟ್ಟಲು ತೀರ್ಮಾನಿಸಿದರು.

ಗಿಲಾಮ್ ಛಾಯಾಗ್ರಾಹಕ, ಜೆನ್ನಾ ಬರಹಗಾರ್ತಿ. ಹಾಗಾಗಿ ಪ್ರವಾಸದ ಪ್ರತಿ ಕ್ಷಣವನ್ನೂ ದಾಖಲಿಸಬೇಕು ಎಂದುಕೊಂಡರು. ಜೊತೆಗೆ ತಮ್ಮ ಪ್ರವಾಸ ವಿಶೇಷವಾಗಿರಬೇಕು, ಅರ್ಥಗರ್ಭಿತ ಸಂದೇಶವೂ ಇರಬೇಕೆಂದು ಬಯಸಿದ ಇವರಿಗೆ ಸಹಾಯಕ್ಕೆ ಬಂದಿದ್ದು ‘ಸರಳ ಜೀವನ’ ಪರಿಕಲ್ಪನೆ. ಪ್ರವಾಸದ ಪ್ರತಿ  ಮಜಲೂ ಸರಳ ಜೀವನ ಪರಿಕಲ್ಪನೆಯನ್ನೇ ಸಾರಬೇಕು ಎಂದು ತಾವೇ ಪುಟ್ಟ ಮನೆ ನಿರ್ಮಿಸಿ ಅದರಲ್ಲೇ ಪ್ರವಾಸ ಮಾಡಬೇಕೆಂದು ನಿರ್ಧರಿಸಿದರು. ತಮ್ಮ ಫೋರ್ಡ್‌ ಎಫ್ 250 ಟರ್ಬೊ ಡೀಸೆಲ್ ಕ್ರ್ಯೂ ಕ್ಯಾಬ್‌ಗೆ ಹೊಂದಿಕೊಂಡಂತೆ ಮರದ ಪುಟ್ಟ ಮನೆಯೊಂದನ್ನು ವಿನ್ಯಾಸಗೊಳಿಸಲು ಆರಂಭಿಸಿದರು.
135 ಚದರ ಅಡಿ ಅಳತೆಯ ಮನೆಯಲ್ಲಿ 60 ಅಡಿ ಅಳತೆಯ ಅಟ್ಟವಿಟ್ಟು, ಪ್ರತಿ ಜಾಗವನ್ನೂ ಅತಿ ಅಚ್ಚುಕಟ್ಟಾಗಿ ರೂಪಿಸಿದರು. ಜೀವನಕ್ಕೆ ಅತಿ ಅಗತ್ಯವಾದ ಸಾಮಗ್ರಿಗಳು ಮಾತ್ರ ಇರುವಂತೆ ನೋಡಿಕೊಂಡರು. ಸ್ಟೌ, ಮೂವಿ ಪ್ರೊಜೆಕ್ಟರ್, ಪೋರ್ಟಬಲ್ ಸೋಲಾರ್ ಸಿಸ್ಟಂ, ಸಂಗೀತ ಸಾಧನಗಳು, ಅಗತ್ಯ ಪೀಠೋಪಕರಣಗಳು, ಅಡುಗೆ ಸಾಮಗ್ರಿಗಳು ಮನೆಯ ಮುಖ್ಯ ವಸ್ತುಗಳು. ಅಟ್ಟದಲ್ಲಿ ಬೆಡ್ ರೂಂ, ಪುಟ್ಟ ಟಾಯ್ಲೆಟ್, ಹಾಲ್, ಹೀಗೆ ಮನೆ ಎನ್ನಿಸಿಕೊಳ್ಳಲು ಅಗತ್ಯವಾದ ಅಂಶಗಳೆಲ್ಲವೂ ಇರುವಂತೆ ವಿನ್ಯಾಸಗೊಳಿಸಿದರು. ಹಾಗೂ ಹೀಗೂ ಎಲ್ಲ ಉಳ್ಳ ಗಟ್ಟಿಯಾದ ಸುಂದರ ಮನೆ ರೂಪುಗೊಂಡಿತು. ‘ಟೈನಿ ಹೌಸ್, ಗೈಂಟ್ ಜರ್ನಿ’ ಎಂದು ಮನೆಗೆ ಹೆಸರಿಟ್ಟು ಮೊದಲೇ ಹಾಕಿಕೊಂಡ ಯೋಜನೆಯಂತೆ ಉತ್ತರ ಅಮೆರಿಕದ ಸುತ್ತಮುತ್ತ ಒಂದು ವರ್ಷ ಓಡಾಡುವುದೆಂದ ತೀರ್ಮಾನಿಸಿ 2015ರಲ್ಲಿ ತಮ್ಮ ಪ್ರಯಾಣ ಆರಂಭಿಸಿದರು. ಅಮೆರಿಕದ 30ಕ್ಕೂ ಹೆಚ್ಚು ನಗರಗಳನ್ನು ಹಾಗೂ ಕೆನಡಾದ ಐದು ನಗರಗಳನ್ನು ಸುತ್ತಿದರು. 25,000 ಮೈಲುಗಳನ್ನು ಇದೇ ಪುಟ್ಟ ಮನೆಯ ಗಾಡಿಯಲ್ಲೇ ಪೂರೈಸಿದ್ದಾರೆ.

ಒಂದು ವರ್ಷ, ಪ್ರಯಾಣದಲ್ಲಿ ಕಂಡ ಅನುಭವಗಳನ್ನು, ನಗರಗಳನ್ನು, ಪ್ರಕೃತಿಯ ಸುಂದರ ತಾಣಗಳನ್ನು, ಭೇಟಿ ಮಾಡಿದ ಜನರನ್ನು, ಭಿನ್ನ ಜೀವನಶೈಲಿಗಳನ್ನು, ಸರಳ ಜೀವನ ಪರಿಕಲ್ಪನೆಯಲ್ಲಿ ಬದುಕುತ್ತಿರುವ ಜನರನ್ನು, ಅದಕ್ಕೆ ಅವರು ಅನುಸರಿಸುತ್ತಿರುವ ಮಾರ್ಗಗಳನ್ನು ಇವರು ತಮ್ಮ ಬರಹ ಹಾಗೂ ಛಾಯಾಗ್ರಹಣದ ಮೂಲಕ ದಾಖಲಿಸಿದ್ದಾರೆ. ಕಿರುಚಿತ್ರವೊಂದನ್ನೂ ರೂಪಿಸಿದ್ದಾರೆ.

‘ಈ ಪ್ರವಾಸದಲ್ಲಿ ಜೀವನದ ಹಲವು ಅನುಭವಗಳನ್ನು ಪಡೆದೆವು. ‘ಲಿವ್ ಟೈನಿ, ಟ್ರಾವೆಲ್ ಬಿಗ್’ ನಮ್ಮ ಮೂಲಮಂತ್ರ. ಈ ಪಯಣದಲ್ಲಿ ಪ್ರಕೃತಿಯ ಮಡಿಲಲ್ಲಿ ನಲಿದೆವು. ನಗರ, ಹಳ್ಳಿ, ಪ್ರಕೃತಿ ಈ ಮೂರರ ಬದುಕಿನ ವ್ಯತ್ಯಾಸವನ್ನೂ ಕಂಡೆವು. 2017ಕ್ಕೆ ಇನ್ನಷ್ಟು ಯೋಜನೆಗಳಿವೆ’ ಎಂದು ಖುಷಿ ತುಂಬಿಕೊಂಡು ಹೇಳಿಕೊಂಡಿದ್ದಾರೆ ಜೆನ್ನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT