ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬರುತಿದೆ ಹೊಸ ರೂಪ ಹೊತ್ತು ಸುಜುಕಿ ಸ್ವಿಫ್ಟ್‌

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಮಾರುತಿ ಸುಜುಕಿ ಸ್ವಿಫ್ಟ್‌ ಕಾರು ಬಿಡುಗಡೆಯಾಗಿ 10 ವರ್ಷ ದಾಟಿದೆ ಎಂದರೆ ಅದರ ಪ್ರಸಿದ್ಧಿ ಬಗ್ಗೆ ಹೆಚ್ಚು ಹೇಳುವ ಅಗತ್ಯ ಬರುವುದಿಲ್ಲ. ಭಾರತದ ಅತಿ ಪ್ರಸಿದ್ಧ ಕಾರುಗಳ ಪೈಕಿ ಮಾರುತಿ ಸುಜುಕಿಯ ಸ್ವಿಫ್ಟ್‌ ಮುಂಚೂಣಿಯಲ್ಲಿದೆ. ಜಪಾನ್‌ನ ಸುಜುಕಿ ಸಂಸ್ಥೆಯು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಸ್ವಿಫ್ಟ್‌ ಭಾರತದಲ್ಲಿ ಅತಿ ಮುಖ್ಯವಾದ ಮಾರುಕಟ್ಟೆಯನ್ನು ಹೊಂದಿರುವುದು, ಅದು ಇಲ್ಲೇ ಅತಿ ಪ್ರಸಿದ್ಧ ನೆಲೆ ಹೊಂದಿದೆ ಎನ್ನುವುದಕ್ಕೂ ಸಾಕ್ಷಿಯಾಗಿದೆ.

2005ರಲ್ಲೇ ಸ್ವಿಫ್ಟ್ ಭಾರತದಲ್ಲಿ ಬಿಡುಗಡೆ ಹೊಂದಿತು. ಅಂದಿನ ಕಾಲಕ್ಕೆ ಅತಿ ವಿಶೇಷ ಹಾಗೂ ಭವಿಷ್ಯತ್‌ ವಿನ್ಯಾಸವನ್ನು ಈ ಕಾರು ಹೊಂದಿದೆ ಎನ್ನುವುದು ಹೆಗ್ಗಳಿಕೆಯ ವಿಚಾರವಾಗಿತ್ತು. ಅಂತೆಯೇ, ಸ್ವಿಫ್ಟ್‌ ಅತಿ ನಯವಾದ ಎಂಜಿನ್‌, ಶಕ್ತಿಶಾಲಿ ಸಾಮರ್ಥ್ಯ ಹಾಗೂ ಅತ್ಯುತ್ತಮ ಮೈಲೇಜ್ ಅನ್ನೂ ಹೊಂದಿದ್ದ ಕಾರಣ ಜನಮನ ಗೆಲ್ಲುವುದು ಅದಕ್ಕೆ ಕಷ್ಟವೂ ಆಗಲಿಲ್ಲ. ಅಲ್ಲದೇ, ಅದರ ಬೆಲೆಗೆ ಅತ್ಯುತ್ತಮ ಐಶಾರಾಮ ಹಾಗೂ ಗಡಸುತನವನ್ನು ಸ್ವಿಫ್ಟ್‌ ಹೊಂದಿದ್ದ ಕಾರಣ, ದೇಶದ ಹ್ಯಾಚ್‌ಬ್ಯಾಕ್‌ಗಳ ಪೈಕಿ ಸ್ವಿಫ್ಟ್‌ ಅಗ್ರಸ್ಥಾನ ಗಳಿಸಿತು. ಮಾರುತಿ ಸುಜುಕಿಯ ಹ್ಯಾಚ್‌ಬ್ಯಾಕ್‌ಗಳ ಪೈಕಿ ಅಂದಿನ ಕಾಲಕ್ಕೆ ‘ಮಾರುತಿ ಸುಜುಕಿ 800’, ‘ಆಲ್ಟೊ’ ಹಾಗೂ ‘ಸ್ವಿಫ್ಟ್‌’ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾರಾಟದಲ್ಲಿ ಮೊದಲ ಸ್ಥಾನ ಗಳಿಸಿದ್ದದ್ದು ದಾಖಲೆ. ಈಗ ‘ಮಾರುತಿ ಸುಜುಕಿ 800’ ಉತ್ಪಾದನೆ ಇಲ್ಲವಾದ್ದರಿಂದ ದಾಖಲೆಯ ಪ್ರಶ್ನೆ ಇಲ್ಲ. ಆದರೆ, ‘ಆಲ್ಟೊ’ ಹಾಗೂ ‘ಸ್ವಿಫ್ಟ್‌’ ಈಗಲೂ ಮಾರಾಟದಲ್ಲಿ ಮೊದಲ ಸ್ಥಾನವನ್ನೇ ಹೊಂದಿವೆ.
ಇದೇ ಕಾರಣಕ್ಕೆ ಇವೆರಡೂ ಕಾರುಗಳು ಅತಿ ಹೆಚ್ಚು ಬಾರಿ ಮಾರ್ಪಾಟಿಗೆ ಒಳಪಟ್ಟಿವೆ. ಅದರಲ್ಲೂ ಆಲ್ಟೊ ಕಾರು ಕನಿಷ್ಠವೆಂದರೂ ನಾಲ್ಕು ಬಾರಿ ಮಾರ್ಪಾಟಾಗಿದೆ. ಅಂತೆಯೇ, ‘ಸ್ವಿಫ್ಟ್‌’ ಸಹಾ. ಈಗ ಸ್ವಿಫ್ಟ್‌ ತನ್ನ ನಾಲ್ಕನೇ ಮಾರ್ಪಾಟನ್ನು ಮುಗಿಸಿಕೊಂಡಿದ್ದು, ಹೊಸ ರೆಕ್ಕೆಪುಕ್ಕಗಳೊಂದಿಗೆ, ಮತ್ತಷ್ಟು ಆಕರ್ಷಕವಾಗಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. 2017ರ ಮಧ್ಯಭಾಗದಲ್ಲಿ ಹೊಸ ‘ಸ್ವಿಫ್ಟ್‌’ ಮಾರಾಟಕ್ಕೆ ಲಭ್ಯವಾಗಲಿದೆ.

ಏನೇನು ಬದಲಾವಣೆ: ಮಾರುತಿ ಸುಜುಕಿಯ ಮಾರ್ಪಾಟುಗಳ ವಿಶೇಷವೆಂದರೆ, ಮಾರ್ಪಾಟುಗಳು ಕೇವಲ ಆಲಂಕಾರಿಕವಾಗಿರುವುದಿಲ್ಲ. ಅಂದರೆ, ಕಾರಿನ ವಿನ್ಯಾಸದಲ್ಲಿ ದೈಹಿಕ ಬದಲಾವಣೆಗಳು, ಎಂಜಿನ್‌ನಲ್ಲಿ ಬದಲಾವಣೆ, ತಂತ್ರಜ್ಞಾನಗಳ ಸೇರ್ಪಡೆ ಆಗಿರುತ್ತದೆ. ಇದು ಈ ಹಿಂದೆ ‘ಸ್ವಿಫ್ಟ್‌’ಗೂ ಅನ್ವಯಿಸಿತ್ತು. ಈಗಲೂ ಕೇವಲ ‘ಕಾಸ್ಮೆಟಿಕ್‌’ ಬದಲಾವಣೆಗೆ ಒಳಗಾಗದೇ, ಅನೇಕ ಉತ್ತಮ ಮಾರ್ಪಾಟುಗಳಿಗೆ ಕಾರು ಒಳಗಾಗಿದೆ.

ಜಿನೀವಾದಲ್ಲಿ ಈಚೆಗಷ್ಟೇ ನಡೆದ ಮೋಟಾರ್‌ ಶೋನಲ್ಲಿ 2017ರ ಹೊಸ ಮಾದರಿಯನ್ನು ಸುಜುಕಿ ಪ್ರದರ್ಶಿಸಿದೆ. ವಿಶೇಷವೆಂದರೆ, ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಆದರೆ, ಮೂಲ ರೂಪವನ್ನು ಉಳಿಸಿಕೊಳ್ಳಲಾಗಿದೆ. 5ರಿಂದ 8 ಲಕ್ಷ ರೂಪಾಯಿ ದರದೊಳಗೆ ಸಿಗಲಿರುವ ಈ ಕಾರು, ಮತ್ತೆ ಜನರ ಮನಸೂರೆಗೊಳ್ಳಲಿದೆ ಎನ್ನುವುದು ವಾಹನತಜ್ಞರ ಅಭಿಪ್ರಾಯ. ಏಕೆಂದರೆ, ಅದು ಹೊಸ ಉತ್ತಮ ಲಕ್ಷಣಗಳನ್ನು ಹೊಸ ಸ್ವಿಫ್ಟ್‌ ಹೊಂದಿರಲಿದೆ.

ಎಂಜಿನ್‌ನಲ್ಲಿ ಅಂತಹ ದೊಡ್ಡ ವ್ಯತ್ಯಾಸವೇನಿಲ್ಲ. ಕೊಂಚ ಶಕ್ತಿ ಹಾಗೂ ಮೈಲೇಜ್‌ ಅನ್ನು ಹೆಚ್ಚಿಸಲಾಗಿದೆ. ಪೆಟ್ರೋಲ್‌ ಅವತರಣಿಕೆಯಲ್ಲಿ 1.2 ಲೀಟರ್‌ ಎಂಜಿನ್‌, 83 ಬಿಎಚ್‌ಪಿ ಶಕ್ತಿ ಹಾಗೂ 115 ಎನ್‌ಎಂ ಟಾರ್ಕ್‌್ ಇರಲಿದೆ. ಡೀಸೆಲ್‌ ಅವತರಣಿಕೆಯಲ್ಲಿ 74 ಬಿಎಚ್‌ಪಿ ಶಕ್ತಿ ಹಾಗೂ 190 ಎನ್‌ಎಂ ಟಾರ್ಕ್‌ ಇರಲಿದೆ. ಪೆಟ್ರೋಲ್‌ಗೆ ಹೋಲಿಸಿದರೆ, ಡೀಸೆಲ್‌ ಕಾರು ಕೊಂಚ ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ. ಆದರೆ, ಮೂರ್ನಾಲ್ಕು ಕಿಲೋಮೀಟರ್‌ ಹೆಚ್ಚು ಮೈಲೇಜ್‌ ಅನ್ನು ಅದು ನೀಡುತ್ತದೆ. ಇವೆಲ್ಲವೂ ಬಹುತೇಕ ಹಳೆಯ ಅವತರಣಿಕೆಯಂತೆಯೇ ಇವೆ. ಪೆಟ್ರೋಲ್‌ ಕಾರು ಎ.ಸಿ ಸಮೇತ 19 ಕಿಲೋಮೀಟರ್‌ ಮೈಲೇಜ್‌ ನೀಡುತ್ತದೆ. ಡೀಸೆಲ್ ಕಾರು 23 ಕಿಲೋಮೀಟರ್ ಮೈಲೇಜ್‌ ನೀಡುತ್ತದೆ. ಆದರೆ, ಪೆಟ್ರೋಲ್‌ ಎಂಜಿನ್‌ನ ನಾಜೂಕುತನ, ಶಕ್ತಿ ಸಾಮರ್ಥ್ಯ ಡೀಸೆಲ್‌ ಎಂಜಿನ್‌ ಬಳಸಿದರೆ ಇರುವುದಿಲ್ಲ.

ಹೊಸ ಕಾರಿನ ವಿಶೇಷ ಎಂಬಂತೆ ‘ಸಿವಿಟಿ’ (ಕಂಟಿನ್ಯೂಯಸ್ಲೀ ವೇರಿಯಬಲ್‌ ಟ್ರಾನ್ಸ್‌ಮಿಷನ್‌) ಅವಕಾಶ ನೀಡಲಾಗುತ್ತಿದೆ. ಹೀಗೆಂದರೆ, ಪರಿಪೂರ್ಣ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌್. ಈಗ ಇರುವಂತೆ ‘ಎಎಂಟಿ’ (ಆಟೊಮ್ಯಾಟಿಕ್‌ ಮ್ಯಾನ್ಯುಯಲ್‌ ಟ್ರಾನ್ಸ್‌ಮಿಷನ್‌) ಇರುವುದಿಲ್ಲ. ಕಂಪ್ಯೂಟರ್‌ ನಿಯಂತ್ರಿತ ಸಾಧನವೊಂದು ಮ್ಯಾನ್ಯುಯಲ್‌ ಗಿಯರ್‌ಗಳನ್ನು ಬದಲಾಯಿಸುತ್ತ ಇರುತ್ತದೆ. ಆದರೆ, ‘ಸಿವಿಟಿ’ಯಲ್ಲಿ ಇರುವುದೇ ಒಂದು ಗಿಯರ್‌. ಅದು ವಿಭಿನ್ನ ವೇಗಗಳಲ್ಲಿ ವಿಭಿನ್ನವಾಗಿ ತಿರುಗುತ್ತ ಕಾರಿನ ವೇಗವನ್ನು ನಿಯಂತ್ರಿಸುತ್ತಾ ಇರುತ್ತದೆ. ಮಾರುತಿ ಪಾಲಿಗೆ ಇದು ಉತ್ತಮ ತಂತ್ರಜ್ಞಾನ. ‘ಸ್ವಿಫ್ಟ್‌’ನಲ್ಲಿ ಇದರ ಬೆಲೆಗೆ ಈ ತಂತ್ರಜ್ಞಾನ ಸಿಗುವುದಾದರೆ, ಅತ್ಯುತ್ತಮ ಸೌಲಭ್ಯ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ.

ಏನೇನು ಸೌಲಭ್ಯ, ವೈಶಿಷ್ಟ್ಯ

ಬಾಹ್ಯ ವಿನ್ಯಾಸದಲ್ಲಿ ಕೆಲವು ಮುಖ್ಯ ಬದಲಾವಣೆಗಳಿವೆ. ವಿಶೇಷ ವಿನ್ಯಾಸವುಳ್ಳ ವಿಶಾಲವಾದ ಎಂಜಿನ್‌ ಗ್ರಿಲ್‌, ಆಟೊಮ್ಯಾಟಿಕ್‌ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು, ಹಾಲೋಜಿನ್‌ ಫಾಗ್‌ ಲ್ಯಾಂಪ್‌ಗಳು, ಫ್ಲೋಟಿಂಗ್‌ ರೂಫ್‌ ಇರಲಿದೆ. ಹಿಂಭಾಗದಲ್ಲಿ ಕಾರಿನ ಒಳಗೆ ಸೇರಿಕೊಂಡಂತೆ ಇರುವ ದೀಪಗಳು, ವೈಪರ್‌ ಹಾಗೂ ವಾಷರ್‌, ಬಂಪರ್‌ನಲ್ಲಿ ಫಾಗ್‌ಲ್ಯಾಂಪ್‌ ಇರಲಿದೆ. ಸಿ–ಪಿಲ್ಲರ್‌ಗೆ ಹೊಂದಿಕೊಂಡಂತೆ ಬಾಗಿಲುಗಳ ಹ್ಯಾಂಡಲ್‌ ಇರಲಿದೆ. ಮಿಕ್ಕಂತೆ ಹಲವು ಕಾಸ್ಮೆಟಿಕ್‌ ವಿನ್ಯಾಸ ಇರಲಿದೆ. ಒಳಭಾಗದ ಬದಲಾವಣೆಗಳೂ ಮೆಚ್ಚುವಂತಿವೆ. ಸಂಪೂರ್ಣ ಹೊಸ ಸ್ಟೀರಿಂಗ್‌ ವ್ಹೀಲ್‌ ಇರಲಿದೆ.
ಮಧ್ಯಭಾಗದಲ್ಲಿ ಹೊಸ ಎ.ಸಿ ಕಿಂಡಿಗಳು, ಹೊಸ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌, ಆಟೊಮ್ಯಾಟಿಕ್‌ ಕ್ಲೈಮೇಟ್‌ ಕಂಟ್ರೋಲ್‌ ಸೌಲಭ್ಯ ಹೊಸ ಸೇರ್ಪಡೆ. ಹೊಸ ಟಚ್‌ ಸ್ಕ್ರೀನ್‌ ಇರುವ ಧ್ವನಿ ವ್ಯವಸ್ಥೆ ಇರಲಿದ್ದು, ಅದರಲ್ಲಿ ನ್ಯಾವಿಗೇಷನ್‌, ಸಂಗೀತ, ದೃಶ್ಯ, ಹಿಂಭಾಗದ ಕ್ಯಾಮೆರಾ, ಧ್ವನಿ ಆಜ್ಞೆ ನೀಡುವಿಕೆಯಂತಹ ಸೌಲಭ್ಯ ನೀಡಲಾಗಿದೆ. ಡ್ಯಾಷ್‌ಬೋರ್ಡ್, ಡೋರ್‌ ಪೆನಲ್ ಹಾಗೂ ನೆಲದ ಹಾಸನ್ನು ಹೆಚ್ಚು ಸ್ಪೋರ್ಟಿಯಾಗಿ ನೀಡಲಾಗಿದೆ.

ಸುರಕ್ಷೆ, ಆರಾಮಕ್ಕೂ ಒತ್ತು: ಮುಂಭಾಗದಲ್ಲಿ ಮ್ಯಾಕ್‌ಫರ್ಸನ್‌ ಸ್ಟ್ರಟ್‌ ಕಾಯಿಲ್ ಸ್ಪ್ರಿಂಗ್‌ ಸಸ್ಪೆನ್‌ಷನ್‌ ಹಾಗೂ ಹಿಂಭಾಗದಲ್ಲಿ ಟಾರ್ಷನ್‌ ಬೀಮ್‌ ಕಾಯಿಲ್‌ ಸ್ಪ್ರಿಂಗ್‌ ಸಸ್ಪೆನ್‌ಷನ್‌ ಇದ್ದು ಅತ್ಯುತ್ತಮ ಐಶಾರಾಮ ಸಿಗಲಿದೆ. ಕಾರಿನ ಎಲ್ಲ ಚಕ್ರಗಳಿಗೂ ಡಿಸ್ಕ್‌ ಬ್ರೇಕ್‌ ನೀಡುತ್ತಿರುವುದು ಇದೇ ಮೊದಲು. ಹಾಗಾಗಿ, ಅತ್ಯುತ್ತಮ ಸುರಕ್ಷೆಯೂ ‘ಸ್ವಿಫ್ಟ್‌’ನಲ್ಲಿ ಸಿಗುತ್ತದೆ.

ಕೊಂಚ ಚಿಕ್ಕ ಕಾರು: ಹಳೆಯ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 10 ಮಿಲಿಮೀಟರ್‌ನಷ್ಟು ಗಿಡ್ಡವಾಗಿದೆ. ಆದರೆ ಎತ್ತರ 30 ಮಿಲಿಮೀಟರ್‌ ಹೆಚ್ಚಾಗಿದೆ. ವ್ಹೀಲ್‌ಬೇಸ್‌ ಅನ್ನು 20 ಎಂಎಂ ಹೆಚ್ಚಿಸಲಾಗಿದೆ. ಹಾಗಾಗಿ, ಒಳಗೆ ಕೂರುವವರಿಗೆ ಹೆಚ್ಚು ಸ್ಥಳಾವಕಾಶ ಸಿಗಲಿದೆ. ಹೊಸ ಕಾರಿನ ವಿಶೇಷವೆಂದರೆ, 100 ಕೆ.ಜಿ ತೂಕ ಕಡಿಮೆಯಾಗಿದೆ. ಅಂದರೆ, ಹೆಚ್ಚು ಮೈಲೇಜ್‌ ಕಾರಿಗೆ ಸಿಗಲಿದೆ. ದೃಢವಾದ, ಕಡಿಮೆ ತೂಕದ ಲೋಹ ಬಳಕೆ ಈ ಬದಲಾವಣೆಗೆ ಕಾರಣ.

‘ಹುಂಡೈ ಗ್ರ್ಯಾಂಡ್‌ ಐ–10’, ‘ಫೋರ್ಡ್‌ ಫಿಗೊ’ ಹಾಗೂ ಫೋಕ್ಸ್‌ವೇಗನ್ ಪೋಲೊಗೆ 2017ರ ಹೊಸ ಕಾರು ಸ್ಪರ್ಧೆ ನೀಡಲಿದೆ. ತನ್ನದೇ ಹಳೆಯ ಮಾದರಿ ಕಾರಿಗೆ ಸ್ಪರ್ಧೆ ಒಡ್ಡಿಕೊಂಡಂತೆ ಇರುವ ಹೊಸ ‘ಸ್ವಿಫ್ಟ್‌ 2017’ ಮತ್ತೆ ಕಾರು ಪ್ರಿಯರ ಹೃದಯ ಗೆಲ್ಲುವ ನಿರೀಕ್ಷೆಯಂತೂ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT