ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ, ಸಂಘಟನೆ ಮತ್ತು ಹೋರಾಟ

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಸಮಾನತೆ ಅಂಶಗಳಿಂದ ಸ್ಫೂರ್ತಿ ಪಡೆದು ಮಹಾರಾಷ್ಟ್ರದಲ್ಲಿ ಶಿಕ್ಷಣ ಸಮಾನತೆಯ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವವರು ಶಾಹೀನ್ ಮಿಸ್ತ್ರಿ. ಮುಂಬೈ ನಿವಾಸಿಯಾದ ಇವರು ‘ಟೀಚ್ ಇಂಡಿಯಾ’ ಮತ್ತು ‘ಆಕಾಂಕ್ಷ ಫೌಂಡೇಶನ್’ ಎಂಬ  ಸ್ವಯಂ ಸೇವಾ ಸಂಸ್ಥೆ ಕಟ್ಟಿಕೊಂಡು ಶಿಕ್ಷಣ ಸೇವೆಯಲ್ಲಿ ನಿರತರಾಗಿದ್ದಾರೆ.

ಶಾಹೀನ್ ಹುಟ್ಟಿದ್ದು ಸಂಪ್ರದಾಯಬದ್ಧ ಪಾರ್ಸಿ ಕುಟುಂಬದಲ್ಲಿ. ಚಿಕ್ಕವಳಿದ್ದಾಗಲೇ ಕೊಳೆಗೇರಿ ಪ್ರದೇಶಗಳಿಗೆ ತೆರಳಿ ಅಲ್ಲಿನ ಬಡ ಮಕ್ಕಳಿಗೆ ಇಂಗ್ಲಿಷ್ ಮತ್ತು ಗಣಿತ ಹೇಳಿಕೊಡುತ್ತಿದ್ದರು. ಶಾಹೀನ್ ಅವರ ಈ ನಡೆಯನ್ನು ಮನೆಯವರು ವಿರೋಧಿಸಿದ್ದರು. ಮನೆಯವರ ಕಣ್ಣುತಪ್ಪಿಸಿ ಬಡ ಮಕ್ಕಳಿಗೆ ಪಾಠ ಮಾಡುವ ಕಾಯಕವನ್ನು ಶಾಹೀನ್, ಮುಂಬೈನಲ್ಲಿ ಇರುವವರೆಗೂ ಮುಂದುವರಿಸಿದ್ದರು. ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿ, ಅಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೆದು ಭಾರತಕ್ಕೆ ಮರಳಿದರು. ಕೆಲ ವರ್ಷ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ ಆ ಕೆಲಸ ಅವರ ಮನಸ್ಸಿಗೆ ನೆಮ್ಮದಿ ನೀಡಲಿಲ್ಲ. ಬಡಮಕ್ಕಳ ಶಿಕ್ಷಣಕ್ಕಾಗಿ ಏನಾದರೂ ಮಾಡಬೇಕು ಎಂಬ ಆಕಾಂಕ್ಷೆ ಜಾಗೃತವಾಗಿಯೇ ಇತ್ತು.

ಬಡಮಕ್ಕಳಿಗೆ ಗುಣಮಟ್ಟ ಮತ್ತು ಕೌಶಲ್ಯಭರಿತ ಶಿಕ್ಷಣ ನೀಡುವ ಸಲುವಾಗಿ 1990ರಲ್ಲಿ ಆಕಾಂಕ್ಷ ಫೌಂಡೇಶನ್ ಸ್ಥಾಪಿಸಿದರು. ಅದರ ಮೂಲಕ ಮುಂಬೈ ಮತ್ತು ಪುಣೆಯಲ್ಲಿರುವ ಕೊಳೆಗೇರಿ ಮಕ್ಕಳ ಮನೆಗಳಿಗೆ ತೆರಳಿ ಪಾಠ ಮಾಡುವ ಯೋಜನೆ ಆರಂಭಿಸಿದರು. ಈ ಶೈಕ್ಷಣಿಕ ಸೇವೆಗಾಗಿಯೇ ಇಂದು ನೂರಾರು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ವಾಣಿಜ್ಯಿಕ ಉದ್ದೇಶವಿಲ್ಲದೆ ಶಾಹೀನ್ ಈ ಸಂಸ್ಥೆ ನಡೆಸುತ್ತಿದ್ದಾರೆ. 2008ರಲ್ಲಿ ಗ್ರಾಮೀಣ ಮಕ್ಕಳ ಶಿಕ್ಷಣದ ಅಭ್ಯುದಯಕ್ಕಾಗಿ ‘ಟೀಚ್ ಇಂಡಿಯಾ’ ಎಂಬ ಸಂಸ್ಥೆ ತೆರೆದಿದ್ದಾರೆ. ಆ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ದೇಶದ ಸತ್‌ಪ್ರಜೆಗಳನ್ನಾಗಿ ರೂಪಿಸುವುದೇ ನನ್ನ ಜೀವಮಾನದ ಗುರಿ ಎಂದು ಶಾಹೀನ್ ಹೇಳುತ್ತಾರೆ. http://www.akanksha.org/

**

ಸುನಿತಾ ಕೃಷ್ಣನ್ 
ದೇಶದಲ್ಲಿ ಮಾನವ ಕಳ್ಳಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ. ಇಂತಹ ಪ್ರಕರಣಗಳ ವಿರುದ್ಧ ದನಿ ಎತ್ತಿ ಸುಮಾರು 10000 ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸಿರುವ ಸುನಿತಾ ಕೃಷ್ಣನ್ ಕಥೆ ಇದು.

ಸುನೀತಾ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ಚಿಕ್ಕ ವಯಸ್ಸಿಗೇ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ದಲಿತ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ನೃತ್ಯ ಕಲಿಸುವುದು, ಅಂಗವಿಕಲ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ಬೆಂಗಳೂರಿನಲ್ಲಿ ಪರಿಸರ ವಿಜ್ಞಾನ ಪದವಿ, ಮಂಗಳೂರಿನಲ್ಲಿ ಎಂಎಸ್‌ ಡಬ್ಲ್ಯೂ ಸ್ನಾತಕೋತ್ತರ ಪದವಿ ಹಾಗೂ ಸಮಾಜಕಾರ್ಯ ವಿಷಯದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ‘ಪ್ರಜ್ವಲಾ ಫೌಂಡೇಶನ್’ ಸ್ಥಾಪಿಸುವ ಮೂಲಕ  ಲೈಂಗಿಕ ವೃತ್ತಿಯಲ್ಲಿ ನಿರತರಾಗಿರುವವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುತ್ತಿದ್ದಾರೆ.

ಪ್ರಜ್ವಲಾ ಫೌಂಡೇಶನ್’ ಬೆಂಗಳೂರು, ಮುಂಬೈ, ಪುಣೆ, ಚೆನ್ನೈ ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ಕೆಲಸ ಮಾಡುತ್ತಿದೆ. ಸುಮಾರು 200ಕ್ಕೂ ಹೆಚ್ಚು ಕಾರ್ಯಕರ್ತರು ಲೈಂಗಿಕ ವೃತ್ತಿನಿರತ ಮಹಿಳೆಯರ ರಕ್ಷಣೆಯಲ್ಲಿ ತೊಡಗಿದ್ದಾರೆ. ಮಹಿಳೆಯರನ್ನು ರಕ್ಷಿಸುವ ಸಂದರ್ಭದಲ್ಲಿ ಸುನಿತಾ ಅವರ ಮೇಲೆ ಹಲವು ಬಾರಿ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಕೆಲವರು ಸುಳ್ಳು ಕೇಸುಗಳನ್ನು ದಾಖಲಿಸಿ ಜೈಲಿಗೂ ಕಳುಹಿಸಿದ್ದಾರೆ. ತಾಳ್ಮೆಯಿಂದ ಕಷ್ಟಗಳನ್ನು ಎದುರಿಸಿ ನೊಂದ ಮಹಿಳೆಯರಿಗೆ ಹೊಸ ಬದುಕು ಕಟ್ಟಿಕೊಡುವಲ್ಲಿ ಸುನಿತಾ ನಿರತರಾಗಿದ್ದಾರೆ.

ಲೈಂಗಿಕ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರನ್ನು ರಕ್ಷಿಸುವುದು ಪ್ರಜ್ವಲಾ ಫೌಂಡೇಶನ್‌ನ ಮೊದಲ ಆದ್ಯತೆಯಾಗಿದೆ. ನಂತರ ಆ ಸಂತ್ರಸ್ತ ಮಹಿಳೆಯರ ಮನಪರಿವರ್ತನೆ ಮಾಡಿ ಸರ್ಕಾರ ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ನೆರವಿನಿಂದ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲಾಗುತ್ತಿದೆ. ಈ ವೃತ್ತಿಯಲ್ಲಿದ್ದ  ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಇಂದು ಗೌರವಯುತವಾಗಿ ಬದುಕುತ್ತಿದ್ದಾರೆ ಎಂದು ಸುನಿತಾ ಹೇಳುತ್ತಾರೆ.  ಅವರ ಸಾಮಾಜಿಕ ಸೇವೆಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.

**

ಕೀರ್ತಿ ಭಾರತಿ
ಎಲ್ಲಿ ಅಜ್ಞಾನ ತಾಂಡವವಾಡುತ್ತಿರುತ್ತದೆಯೋ ಅಲ್ಲಿ ಬಾಲ್ಯವಿವಾಹ, ಮೌಢ್ಯತೆ, ಕಂದಾಚಾರಗಳು ಜೀವಂತವಾಗಿರುತ್ತವೆ. ಶಿಕ್ಷಣದಿಂದ ಮಾತ್ರ ಇಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಬಹುದು ಎಂದು ಸಾಮಾಜಿಕ ನ್ಯಾಯದ ಹರಿಕಾರ ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಅಂಬೇಡ್ಕರ್ ಅವರ ತತ್ವಗಳಿಂದ ಪ್ರಭಾವಿತರಾಗಿ ಸಮಾಜದ ಕೊಳೆಯಾಗಿರುವ ಮಾನವ ಕಳ್ಳಸಾಗಣೆ ಮತ್ತು ಬಾಲ್ಯವಿವಾಹ ಪದ್ಧತಿ ವಿರುದ್ಧ ಹೋರಾಟ ನಡೆಸುತ್ತಿರುವ ಯುವ ಸಾಧಕಿ ಕೀರ್ತಿ ಭಾರತಿ ಅವರ ಕಥೆ ಇದು.

29 ವರ್ಷದ ಕೀರ್ತಿ ಭಾರತಿ ರಾಜಸ್ತಾನದವರು. ಕುಗ್ರಾಮವೊಂದರಲ್ಲಿ ಜನಿಸಿದ ಅವರು ಬಾಲ್ಯದಲ್ಲಿ ತಮ್ಮ ಸುತ್ತಮುತ್ತ ನಡೆಯುತ್ತಿದ್ದ ಕೌಟುಂಬಿಕ ಕಲಹಗಳನ್ನು ಕಂಡು ಸಾಕಷ್ಟು ನೊಂದಿದ್ದರು. ಮನೆಯಲ್ಲಿ ನಡೆಯುತ್ತಿದ್ದ ಗಲಾಟೆಗಳಿಂದ ಬೇಸತ್ತು ಒಂದು ಹಂತದಲ್ಲಿ ಆತ್ಮಹತ್ಯೆಗೂ ಭಾರತಿ ಯತ್ನಿಸಿದ್ದರು. ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಸೇರಿ, ಕಷ್ಟಗಳ ನಡುವೆಯೇ ಪದವಿ ಪಡೆದು ಹುಟ್ಟೂರಿಗೆ ಮರಳಿದರು. ತನ್ನ ಊರಿನ ಸುತ್ತ ಮುತ್ತಲ ಗ್ರಾಮಗಳಲ್ಲಿ ನಡೆಯುತ್ತಿದ್ದ  ಬಾಲ್ಯವಿವಾಹ ಮತ್ತು ಮಾನವ ಕಳ್ಳಸಾಗಣೆ ವಿರುದ್ಧ ಪ್ರತಿಭಟನೆಗೆ ಮುಂದಾದರು. ಇದರಿಂದ ಸ್ಥಳೀಯರ ವಿರೋಧ ಕಟ್ಟಿಕಂಡು ಮತ್ತೆ ಊರು ತೊರೆಯಬೇಕಾಯಿತು.

ಜೋಧಪುರಕ್ಕೆ ವಲಸೆ ಬಂದ ಭಾರತಿ, ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟ ಮುಂದುವರಿಸಿದರು. ಸಾಮಾಜಿಕ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ನೆರವು ಪಡೆದು ಬಾಲ್ಯ ವಿವಾಹ ಮತ್ತು ಮಹಿಳೆಯರ ಕಳ್ಳಸಾಗಾಣಿಕೆಯನ್ನು ತಡೆದರು. ಈ ಹಂತದಲ್ಲಿ ಅವರಿಗೆ ಎದುರಾಗಿದ್ದು ಸಂತ್ರಸ್ತ ಬಾಲಕಿಯರು ಮತ್ತು ಮಹಿಳೆಯರ ಪುನರ್ವಸತಿ ಸಮಸ್ಯೆ! ಇದರ ಪರಿಹಾರಾರ್ಥವಾಗಿ ಹುಟ್ಟಿದ್ದೇ ‘ಸಾರತಿ’ ಎಂಬ ಸ್ವಯ ಸೇವಾ ಸಂಸ್ಥೆ. ಪ್ರಸ್ತುತ ಈ ಸಂಸ್ಥೆ ವತಿಯಿಂದ 6000 ಮಕ್ಕಳು ಮತ್ತು 5000ಕ್ಕೂ ಹೆಚ್ಚು ಮಹಿಳೆಯರು ಪುನರ್ವಸತಿ ಪಡೆದುಕೊಂಡಿದ್ದಾರೆ.

ಜನಾದೇಶ ಪಡೆದ ಸರ್ಕಾರಗಳು ಮಾಡದ ಸಾಮಾಜಿಕ ಕೆಲಸವನ್ನು ಭಾರತಿ ಮಾಡುತ್ತಿದ್ದಾರೆ. ಅವರ ನಡೆ ಮತ್ತು ಸಾಧನೆ ಇಂದಿನ ಯುವ ಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದೆ.
www.saarthitrust.com‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT