ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ದೇಶದ ಮೊತ್ತಮೊದಲ ಕ್ಯಾಶ್‌ಲೆಸ್‌–ಕಾರ್ಡ್‌ಲೆಸ್‌ ಕ್ಯಾಂಪಸ್!

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಗಳೂರಿನ ಸುರತ್ಕಲ್‌ನ ‘ಎನ್‌ಐಟಿಕೆ’ (ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ – ಕರ್ನಾಟಕ) ಕ್ಯಾಂಪಸ್‌ನಲ್ಲೀಗ ದುಡ್ಡಿನ ಝಣಝಣ ಸದ್ದು ಕೇಳಿಸುವುದಿಲ್ಲ. ಹಾಗೆಂದು ಇಲ್ಲಿ ಬರೀ ನೋಟಿನ ವ್ಯವಹಾರ ಎನ್ನುವಂತಿಲ್ಲ. ಕ್ಯಾಂಪಸ್‌ ಈಗ ಹೆಚ್ಚೂಕಡಿಮೆ ನೋಟು–ನಾಣ್ಯ ಮುಕ್ತ! ಅಲ್ಲೀಗ ಕ್ಯಾಶ್‌ಲೆಸ್‌, ಕಾರ್ಡ್‌ಲೆಸ್‌ ವ್ಯವಹಾರಕ್ಕೆ ಆದ್ಯತೆ.

‘ಎನ್‌ಐಟಿಕೆ’ ವಿದ್ಯಾರ್ಥಿಗಳೀಗ ಕ್ಯಾಂಪಸ್‌ನಲ್ಲಿನ ಅಂಗಡಿಗಳಿಗೆ ತೆರಳುವಾಗ ಪರ್ಸು, ಕಾರ್ಡು ಅಥವಾ ಮೊಬೈಲ್ ಕೊಂಡೊಯ್ಯಬೇಕಿಲ್ಲ. ಕೇವಲ ‘ಪಾಸ್‌ವರ್ಡ್‌’ ಮೂಲಕವೇ ಅಂಗಡಿಗಳಲ್ಲಿ ವ್ಯವಹಾರ ನಡೆಸುವ ವಿನೂತನ ಪರಿಕಲ್ಪನೆ ಅಲ್ಲಿ ಸಾಕಾರಗೊಂಡಿದೆ. ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ದೈವಿಕ್‌ ಜಿ.ಜೆ. ಈ  ಹೊಸ ಪರಿಕಲ್ಪನೆಯ ರೂವಾರಿ. ‘ಚೇಂಜ್‌ಪೇ’ ಎಂಬ ಅವರ ಹೊಸ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು ಈಗ ನೋಟು, ನಾಣ್ಯಗಳನ್ನು ಮರೆತು ಕ್ಯಾಂಪಸ್‌ನ ಅಂಗಡಿಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ.

ದೈವಿಕ್‌ ತುಮಕೂರಿನವರು. ‘ಎನ್‌ಐಟಿಕೆ’ಯಲ್ಲಿ ಅವರು ಕಲಿಯುತ್ತಿರುವುದು ‘ಗಣಿಗಾರಿಕೆ’ ವಿಷಯವಾದರೂ, ಬದುಕಿಗೆ ಅಗತ್ಯವಾದ ಎಲ್ಲ ಸಂಗತಿಗಳ ಬಗ್ಗೆಯೂ ಅವರದು ತೆರೆದಕಣ್ಣು. ಬಿ.ಟೆಕ್‌ ಮೂರನೇ ವರ್ಷದ  ವಿದ್ಯಾರ್ಥಿಯಾದ ಅವರಿಗೆ ಡೆಬಿಟ್ಟು, ಕ್ರೆಡಿಟ್ಟು, ರುಪೇ, ವಿಸಾ ಕಾರ್ಡ್‌ಗಳ ಬಗ್ಗೆ ಇನ್ನಿಲ್ಲದ ಆಸಕ್ತಿ. ಎಲ್ಲರ ಬಳಿಯೂ ಇರುವ ಈ ಕಾರ್ಡ್‌ಗಳ ರಾಶಿಯಿಂದ ತಪ್ಪಿಸಿಕೊಳ್ಳುವುದು ಹೇಗೆ? ಒಮ್ಮೆ ಕಾಲೇಜಿನ ‘ಸ್ಟೂಡೆಂಟ್‌ ಎಂಟರ್‌ಪ್ರೆನ್ಯುರ್‌ ಸೆಲ್‌’ (ಎಸ್‌ಇಸಿ) ಸಭೆಯಲ್ಲಿ – ಕಾರ್ಡ್‌ಗಳ ಮೂಲಕ ವ್ಯವಹರಿಸುವುದು ಪ್ರಸ್ತುತ ಜನಪ್ರಿಯಗೊಳ್ಳುತ್ತಿರುವ ಅಭ್ಯಾಸ; ಆದರೆ, ಕಾರ್ಡ್‌ಗಳೇ ಇಲ್ಲದೇ ಅಂಗಡಿಗಳಲ್ಲಿ ವ್ಯವಹಾರ ನಡೆಸಿದರೆ ಹೇಗೆ ಎಂಬ ಮಾತು ಬಂತು. ಆಗ ಶುರುವಾಯಿತು ದೈವಿಕ್‌ರ ಹುಡುಕಾಟ.

2016ರ ಜುಲೈ ತಿಂಗಳಲ್ಲಿ ಅವರ ಹುಡುಕಾಟ ಒಂದು ನಿರ್ದಿಷ್ಟ ರೂಪು ಪಡೆಯಿತು. ಕೇವಲ ‘ಪಾಸ್‌ವರ್ಡ್‌’ ಮೂಲಕ ಹಣದ ವ್ಯವಹಾರ ಮಾಡುವ ‘ಚೇಂಜ್‌ ಪೇ’ ಎನ್ನುವ ಈ ಪರಿಕಲ್ಪನೆಯದು. ಕ್ಯಾಶ್‌ಲೆಸ್‌, ಕಾರ್ಡ್‌ಲೆಸ್‌ ವ್ಯವಹಾರಕ್ಕೆ ದೈವಿಕ್‌ ತಮ್ಮ ಕಾಲೇಜು ಕ್ಯಾಂಪಸ್‌ ಅನ್ನೇ ಪ್ರಯೋಗಾಲಯವನ್ನಾಗಿ ಮಾಡಿಕೊಂಡರು. ಈಗ ‘ಎನ್‌ಐಟಿಕೆ’ ಇಡೀ ದೇಶದಲ್ಲಿಯೇ ಮೊದಲ ಕ್ಯಾಶ್‌ಲೆಸ್‌, ಕಾರ್ಡ್‌ಲೆಸ್‌ ಕ್ಯಾಂಪಸ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಏನಿದು ಚೇಂಜ್‌ಪೇ?
‘ಚೇಂಜ್‌ ಪೇ’ ಎನ್ನುವುದು ಒಂದು ಆ್ಯಪ್. ಕ್ಯಾಶ್‌ಫ್ರೀ ಮತ್ತು ಮೊಬೈಲ್ ಫ್ರೀ ವಿಧಾನದಲ್ಲಿ ‘ಚೇಂಜ್‌ಪೇ’ ಪ್ರಿ ಪೇಯ್ಡ್‌ ಸರ್ವಿಸ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಮೂರು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತದೆ (ಪಿನ್, ಫೇಷಿಯಲ್ ರೆಕಗ್ನಿಷನ್, ಬಯೋಮೆಟ್ರಿಕ್ಸ್). ಈ ಮೂರು ಹಂತಗಳೇ ಇಡೀ ಪ್ರಕ್ರಿಯೆಗೆ ಸುರಕ್ಷಿತ ಆವರಣವನ್ನು ಕಲ್ಪಿಸಿವೆ. ಅಂಗಡಿಯಲ್ಲಿ ಒಂದು ಚಿಕ್ಕ ಉಪಕರಣ ಅಳವಡಿಸಿಕೊಂಡು, ‘ಚೇಂಜ್ ಪೇ’ಯ ಲಾಭ ಪಡೆಯಬಹುದು.

ನಗದು ರಹಿತ, ಕಾರ್ಡ್ ರಹಿತ ಮತ್ತು ಮೊಬೈಲ್ ರಹಿತ ಪಾವತಿ ಪದ್ಧತಿ ಇದು. ಖರೀದಿಸುವವರಿಗೂ, ಮಾರುವವರಿಗೂ ಇದು ಸುಲಭ ಮಾರ್ಗ. ಗ್ರಾಹಕರು ಹಣ ಪಾವತಿಸಲು ಏನನ್ನೂ ಮಾರುಕಟ್ಟೆಗೆ ಕೊಂಡೊಯ್ಯಬೇಕಿಲ್ಲ. ತಮ್ಮ ಬ್ಯಾಂಕ್ ಅಕೌಂಟ್ ಅನ್ನು ಯಾವುದೇ ಕಡೆಯಿಂದಲೂ ನಿರ್ವಹಿಸಬಹುದು. ಮನೆ ಮಂದಿಯೆಲ್ಲ ಒಂದೇ ಅಕೌಂಟ್‌ ನಿರ್ವಹಿಸುವ ಅವಕಾಶ ಇರುವುದರಿಂದ, ಮನೆಯ ಖರ್ಚು ವೆಚ್ಚವನ್ನು ಸಮಗ್ರವಾಗಿ ಎಲ್ಲರೂ ಪರಿಶೀಲಿಸಬಹುದು. ಎಲ್ಲರೂ ಪ್ರತ್ಯೇಕ ಪಾಸ್‌ವರ್ಡ್ ಕೂಡ ಪಡೆಯಬಹುದಾಗಿದೆ.

‘ಚೇಂಜ್‌ ಪೇ’ ನಿರ್ವಹಣೆ ಸರಳವಾಗಿದೆ. ‘ಅಂಗಡಿಯಲ್ಲಿ ತಮ್ಮ ಅಕೌಂಟ್‌ ನಂಬರ್‌ ಹೇಳಿದಾಗ, ಅಲ್ಲಿರುವ ಉಪಕರಣದಲ್ಲಿ ಗ್ರಾಹಕನ ಭಾವಚಿತ್ರ ಕಾಣಿಸುತ್ತದೆ. ಭಾವಚಿತ್ರ ತಾಳೆಯಾಗದೇ ಇದ್ದರೆ ಅಂಗಡಿಯಾತ ವ್ಯವಹಾರ ಮುಂದುವರೆಸುವುದಿಲ್ಲ. ಆದ್ದರಿಂದ ಇದು ತುಂಬ ಸುರಕ್ಷಿತ ವಿಧಾನವೂ ಹೌದು’ ಎನ್ನುತ್ತಾರೆ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ಮೂರನೇ ವರ್ಷದ ವಿದ್ಯಾರ್ಥಿ ಆಂಧ್ರಪ್ರದೇಶದ ರೇವಂತ್‌. ಅವರು ಈಗ ‘ಚೇಂಜ್‌ಪೇ ವ್ಯವಸ್ಥೆ’ಯ ಬಳಕೆದಾರರಲ್ಲೊಬ್ಬರು.

ಎಲ್ಲ ವ್ಯವಹಾರಗಳೂ ದಾಖಲು
‘ಚೇಂಜ್‌ ಪೇ’ ಮೂಲಕ ನಡೆಸುವ ಪ್ರತಿಯೊಂದು ವ್ಯವಹಾರವೂ ದಾಖಲಾಗುತ್ತದೆ. ಹಾಗಾಗಿ, ಯಾರೂ ಅಂಗಡಿಯವನ ಬಳಿ ‘ಬಿಲ್ ಕೊಡಿ’ ಎಂದು ಕೇಳುವ ಅಗತ್ಯ ಇರುವುದಿಲ್ಲ. ಇದರಿಂದ ತೆರಿಗೆ ಸೋರಿಕೆಯನ್ನೂ ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಬಹುದು. 

ಗ್ರಾಹಕ ಕ್ಯಾಶ್ ಮೂಲಕ ವ್ಯವಹಾರ ನಡೆಸುವ ಸಂದರ್ಭದಲ್ಲಿ ಚಿಲ್ಲರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಅಂಗಡಿಗಳಲ್ಲಿ ಮಾರಾಟಗಾರರ ಬಳಿ ಸೂಕ್ತ ಚಿಲ್ಲರೆ ಇಲ್ಲದೆಹೋದಾಗ, ಅವರು ಚಾಕೊಲೇಟ್ ಅಥವಾ ಗ್ರಾಹಕನಿಗೆ ಅಗತ್ಯ ಇಲ್ಲದ ವಸ್ತುಗಳನ್ನು ನೀಡಿ ಕಳುಹಿಸುವ ಸಂದರ್ಭಗಳೇ ಹೆಚ್ಚು. ಇನ್ನೂ ಕೆಲವರು ಚಿಲ್ಲರೆ ಬಾಕಿ ಇಟ್ಟು, ಮುಂದಿನ ಸಾರಿ ಸರಿದೂಗಿಸೋಣ ಎಂದು ಹೇಳುವುದಿದೆ. ಇಂಥ ಸಮಸ್ಯೆಗಳಿಗೆಲ್ಲ ‘ಚೇಂಜ್ ಪೇ’ ಆ್ಯಪ್ ಪರಿಹಾರವಾಗಿದೆ.
ಬೆಳಿಗ್ಗೆ ವಾಕಿಂಗ್‌ ಹೋದಾಗ ಏನಾದರೂ ಖರೀದಿಸಬೇಕೆಂದಿದ್ದಾಗ ‘ಪರ್ಸ್‌ ತಂದಿಲ್ಲ’ ಎಂದೋ, ‘ಕಾರ್ಡ್‌ ಮರೆತೆವು’ ಎಂದೋ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಕೇವಲ ಒಂದು ನಂಬರ್‌ ಮೂಲಕ ವ್ಯವಹಾರ ನಡೆಸಬಹುದು ಎನ್ನುವುದು ‘ಚೇಂಜ್‌ಪೇ’ ಬಳಕೆದಾರರ ಖುಷಿಯ ಪ್ರತಿಕ್ರಿಯೆ.

ಹುಡುಕಾಟದ ಸುಖ!
ತುಮಕೂರಿನ ‘ಗುಬ್ಬಿ ಶ್ರೀನಿವಾಸ ಪಿಯು ಕಾಲೇಜ್‌’ನ ಜಿ.ಎಂ. ಜಯದೇವಪ್ಪ ಮತ್ತು ಕುಸುಮಾ ದಂಪತಿಗಳ ಮಗ ದೈವಿಕ್‌. ಚಿಕ್ಕಂದಿನಿಂದಲೂ ಸರ್ಕಿಟ್‌ಗಳನ್ನು ಮಾಡುವುದು ಹಾಗೂ ವಿಜ್ಞಾನದ ಪ್ರಯೋಗಗಳನ್ನು ಮನೆಯಲ್ಲಿಯೇ ಮಾಡುವುದೆಂದರೆ ಅವರಿಗೆ ತುಂಬ ಉತ್ಸಾಹ. ಎಂಟನೇ ತರಗತಿಯಲ್ಲಿಯೇ ವಿಜ್ಞಾನ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಪಡೆದಿದ್ದಾರೆ.

‘ನನಗೆ ವಿಜ್ಞಾನ ಇಷ್ಟ ಎನ್ನುವುದಕ್ಕಿಂತ ಸಮಸ್ಯೆಯನ್ನು ಬಗೆಹರಿಸುವುದು ಎಂದರೆ ತುಂಬಾ ಇಷ್ಟ. ನಮ್ಮ ಸಾಧನೆಗಳು ಸಾಮಾಜಿಕವಾಗಿ ಹೆಚ್ಚಿನ ಜನರ ಸಮಸ್ಯೆಯನ್ನು ಬಗೆಹರಿಸುವಂತಿರಬೇಕು. ಹಾಗಾಗಿ ಯಾವುದೇ ವಿಷಯದ ಬಗ್ಗೆ ಹೆಚ್ಚು ಆಳಕ್ಕಿಳಿಯುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೆ...’ ಎನ್ನುತ್ತಾರೆ ದೈವಿಕ್.

ಮನೆಯಲ್ಲಿ ನನಗೆ ತುಂಬು ಪ್ರೋತ್ಸಾಹವಿದೆ. ನಾನು ಮಾಡುವ ಯಾವುದೇ ಸಂಶೋಧನೆ, ಕುತೂಹಲದ ಕೆಲಸಗಳಿಗೆ ಮನೆಯಲ್ಲಿ ಯಾರೂ ಅಡ್ಡಿಮಾಡುವುದಿಲ್ಲ. ನನ್ನ ಸ್ವಭಾವವೇ ಇಂತಹುದು ಎಂಬುದನ್ನು ಅಪ್ಪ–ಅಮ್ಮ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಪದವಿ ಓದುವಾಗ ‘ಉದ್ಯಮ ಶುರು ಮಾಡುತ್ತೇನೆ’ ಎಂದು ಯಾರಾದರೆ ಹೇಳಿದರೆ, ಮನೆಯಲ್ಲಿ ವಿರೋಧ ಎದುರಾಗುವುದು ಸಹಜ. ಆದರೆ ನನ್ನ ಮನೆಯಲ್ಲಿ ಪ್ರೋತ್ಸಾಹ ಸಿಕ್ಕಿದೆ. ‘ಚೇಂಜ್‌ ಪೇ’ಯ ನೋಂದಣಿಗೆ ₹2.5 ಲಕ್ಷ ಹಣವನ್ನು ಮನೆಯಲ್ಲಿಯೇ ಕೊಟ್ಟರು. ಇದು ನನಗೆ ದೊರೆತ ದೊಡ್ಡ ಬೆಂಬಲ...’ ಎನ್ನುತ್ತಾರೆ ದೈವಿಕ್‌.

ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳಿಗೆ ಹಣವನ್ನು ಹೊಂದಿಸಿಕೊಳ್ಳುವುದು ಕಷ್ಟ. ಹೆಚ್ಚಿನ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಈ ರೀತಿಯ ಆವಿಷ್ಕಾರಗಳಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳು ಕಾಲೇಜಿನಿಂದ ದೊರೆಯುವ ಪ್ರೋತ್ಸಾಹಧನಕ್ಕೆ ಕಾಯುತ್ತಾರೆ. ಸರ್ಕಾರ ಉತ್ಸಾಹಿ ವಿದ್ಯಾರ್ಥಿಗಳನ್ನು ಸಂಶೋಧನೆಗೆ ಇನ್ನಷ್ಟು ಪ್ರೋತ್ಸಾಹಿಸಬೇಕು ಎಂದು ದೈವಿಕ್ ಹೇಳುತ್ತಾರೆ.

ಸರ್ಕಾರದ ಮಾನ್ಯತೆಯ ನಿರೀಕ್ಷೆ
ದೇಶದ ಎಲ್ಲ ‘ಎನ್‌ಐಟಿ’ಗಳಲ್ಲಿ ಇಂತಹ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಪರಿಶೀಲನೆ ನಡೆಸುವಂತೆ ‘ಎನ್‌ಐಟಿಕೆ’ ಆಡಳಿತ ಮಂಡಳಿ, ದೆಹಲಿಯ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇಲ್ಲಿ ನಡೆದ ಈ ಪ್ರಯೋಗ ಯಶಸ್ವಿಯಾಗಿದ್ದು, ಈ ಮಾದರಿಯನ್ನು ಎಲ್ಲೆಡೆ ಬಳಕೆ ಮಾಡಬಹುದು ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.

ದೈವಿಕ್ ಜಿ.ಜೆ. ಜೊತೆಗೆ ಮಧುಕರ್ ಕೆ., ಚೇತನ್ ಜೈದೀಪ್ ಮತ್ತು ಜೀವನ್ ಅವರು ಕೂಡ ಈ ಡಿಜಿಟಲ್ ವ್ಯಾಲೆಟ್‌ ತಯಾರಿಕೆಯಲ್ಲಿ ಕೈಜೋಡಿಸಿದ್ದಾರೆ. ಇದೀಗ ಈ ಸಂಶೋಧನೆಗೆ ತಾತ್ಕಾಲಿಕ ಪೇಟೆಂಟ್ ಕೂಡ ಸಿಕ್ಕಿದೆ.

‘ಚೇಂಜ್‌ ಪೇಯ ಪರಿಷ್ಕೃತ ಆವೃತ್ತಿ ಕೂಡ ಈಗಾಗಲೇ ಸಿದ್ಧವಾಗಿದೆ. ಬ್ಯಾಂಕ್‌ಗಳನ್ನು ಲಿಂಕ್‌ ಮಾಡುವ ಮೂಲಕ ಪರಿಷ್ಕೃತ ವರ್ಶನ್‌ ಬಿಡುಗಡೆ ಮಾಡುವುದು ಸಾಧ್ಯವಾದರೆ ಅದೊಂದು ಅದ್ಭುತ ವ್ಯವಸ್ಥೆ ಆಗಲಿದೆ’ ಎಂದು ಕಂಪ್ಯೂಟರ್‌ ಸೈನ್ಸ್‌ ವಿದ್ಯಾರ್ಥಿ ಸಹದೇವ ಪೈ ಅಭಿಪ್ರಾಯಪಡುತ್ತಾರೆ. ಅವರು ಕಳೆದೊಂದು ತಿಂಗಳಿಂದ ಈ ಆ್ಯಪ್‌ ಬಳಸುತ್ತಿದ್ದಾರೆ. 

ಪ್ರಸ್ತುತ ‘ಎನ್‌ಐಟಿಕೆ’ ಕ್ಯಾಂಪಸ್‌ನಲ್ಲಿ 5 ಅಂಗಡಿಗಳಿವೆ. ಒಂದು ಅಂಗಡಿಯಲ್ಲಿ ಪೇಟಿಎಂ ಇದೆ. ಉಳಿದ ಅಂಗಡಿಗಳಲ್ಲಿ ‘ಚೆಂಜ್‌ ಪೇ’ ಬಳಸಲಾಗುತ್ತಿದೆ.

**

ಚೇಂಜ್‌ಪೇ ‘ಡಿಜಿಟಲ್‌ ವ್ಯಾಲೆಟ್‌’ 500 ಹಾಗೂ 1000 ರೂಪಾಯಿ ನೋಟುಗಳು ಅಮಾನ್ಯಗೊಳ್ಳುವ ಮುಂಚೆಯೇ ಹುಟ್ಟಿದ ಪರಿಕಲ್ಪನೆ. ಕೇಂದ್ರವು ಡಿಜಿಟಲ್‌ ವ್ಯವಸ್ಥೆಗೆ ಪ್ರೋತ್ಸಾಹ ನೀಡುತ್ತಿರುವುದರಿಂದ ನನ್ನ ಪ್ರಯತ್ನಕ್ಕೆ ಅನುಕೂಲವೂ ಆಗಬಹುದು. ಹೆಚ್ಚು ಸ್ಪರ್ಧೆಯೂ ಎದುರಾಗಬಹುದು.
–ದೈವಿಕ್ ಜಿ.ಜೆ. ವಿದ್ಯಾರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT