ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವತಿ ಮತ್ತು ಮುಸ್ಲಿಂ ಜಾತಿಗಳ ಪ್ರತಿರೋಧ

Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಡಾ. ಮುಜಾಪ್ಫರ್‌ ಅಸ್ಸಾದಿ
ಉತ್ತರಪ್ರದೇಶದ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಪಕ್ಷದ  ಸೋಲು, ಅದರಲ್ಲೂ ಮುಸ್ಲಿಂ ಅಭ್ಯರ್ಥಿಗಳ ದಯನೀಯ ಸೋಲು ಅಲ್ಪಸಂಖ್ಯಾತರೊಳಗಿದ್ದ ಜಾತಿ ಉಪೇಕ್ಷೆಯ ಪ್ರತಿರೋಧವೇ? ಅಥವಾ ಮಸ್ಲಿಮರ ಕುರಿತಾದ ಮಿಥ್ಯೆಯೊಂದರ ಫಲಶ್ರುತಿಯೇ?
 
ಮಾಯಾವತಿ ಮುಸ್ಲಿಮರಿಗೆ 97 ಟಿಕೆಟ್‌ಗಳನ್ನು ಹಂಚಿದ್ದರು. ಅಲ್ಲಿಗೆ ಕಳೆದ ಚುನಾವಣೆಗಿಂತ 12 ಟಿಕೆಟ್‌ಗಳು ಹೆಚ್ಚಿಗೆ ಸಿಕ್ಕಿದ್ದವು. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಅತಿಹೆಚ್ಚು ಟಿಕೆಟ್‌ಗಳನ್ನು ಹಂಚಿದ್ದು ಹಿಂದುಳಿದ ವರ್ಗಗಳಿಗೆ, ತದನಂತರ ದಲಿತರಿಗೆ.
 
ಟಿಕೆಟ್ ಹಂಚುವ ಮೊದಲು, ಮುಸ್ಲಿಮರು ಸಾರಾಸಗಟಾಗಿ  ಸಮಾಜವಾದಿ ಪಕ್ಷದ ಬೆಂಬಲಿಗರು ಎಂಬಂತಹ ವಾದಗಳನ್ನು ತೇಲಿ ಬಿಡಲಾಗಿತ್ತು. ದಲಿತರು-ಮುಸ್ಲಿಮರ ನಡುವಿನ ಸಮೀಕರಣ ಇಂದಿನ ಸಂದರ್ಭದ ತುರ್ತು ಅಗತ್ಯ. ಅದಕ್ಕಾಗಿ ಮಹಾಡ್ ಚಳವಳಿಗೆ ಮುಸ್ಲಿಮರು ನೀಡಿದ ಬೆಂಬಲ, ಅಂಬೇಡ್ಕರ್‌ ಅವರು ಚುನಾವಣೆಯಲ್ಲಿ ಗೆಲ್ಲಲು ಮುಸ್ಲಿಮರು ನೀಡಿದ ಕೊಡುಗೆಯನ್ನು ನೆನಪಿಸಬೇಕು.
 
ಆದರೆ ಇಲ್ಲಿ ಬಿಎಸ್‌ಪಿ ಒಂದು ತಪ್ಪು ಕೂಡ ಮಾಡಿತ್ತು. ಅದೇನೆಂದರೆ, ಅದು ಟಿಕೆಟ್ ಹಂಚುವ ಸಂದರ್ಭದಲ್ಲಿ ಮುಸ್ಲಿಮರೊಳಗಿದ್ದ ಜಾತಿಯ ವಿಭಿನ್ನತೆಯನ್ನು ನೋಡಲಿಲ್ಲ. ಬಿಎಸ್‌ಪಿ ತಳಸಮುದಾಯವನ್ನು ಪ್ರತಿನಿಧಿಸಿದರೂ, ಅಲ್ಪಸಂಖ್ಯಾತರಲ್ಲಿದ್ದ ತಳಸಮುದಾಯಗಳನ್ನು ನೋಡಲೇ ಇಲ್ಲ. 
 
ಮುಸ್ಲಿಮರ ರಾಜಕೀಯ ನಡೆ ಕುರಿತಾದ ಕಥನಗಳು ಹೊಸವೇನಲ್ಲ. ಅವರೆಲ್ಲರೂ ಕಾಂಗ್ರೆಸ್‌ಗೋ ಅಥವಾ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೋ ಮತಬ್ಯಾಂಕ್‌ ಎಂದು ತತ್‌ಕ್ಷಣದಲ್ಲಿ ತೀರ್ಮಾನಿಸಲಾಗುತ್ತದೆ. ಅವರ ಮತಗಳಿಲ್ಲದೇ ಚುನಾವಣೆ ಗೆಲ್ಲಬಹುದು, ಸರ್ಕಾರ ರಚಿಸಬಹುದೆಂಬ ತೀರ್ಮಾನಕ್ಕೂ ಬರಲಾಗುತ್ತದೆ.
 
ಭಾರತದ ಸಂದರ್ಭದಲ್ಲೇ ಇನ್ನೊಂದು ಮುಖ್ಯವಾದ ಕಥನವಿದೆ. ಅದು ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯದ ನಡುವಿರುವ ಸಂಬಂಧ. ಅವೆರಡೂ ಒಂದಕ್ಕೊಂದು ಬೆಸೆದುಕೊಂಡಿರುವ ಕಾರಣ ಅದರಲ್ಲಿ ವಿಭಿನ್ನತೆ ಇರಲು ಸಾಧ್ಯವಿಲ್ಲ, ಅದರಲ್ಲೂ ಜಾತಿಗಂತೂ ಅದು ಖಂಡಿತಾ ದಾರಿ ಮಾಡಿಕೊಡುವುದಿಲ್ಲ, ಯಾಕೆಂದರೆ ಅದು ‘ಉಮ್ಮಾ’ ತತ್ವದ ಮೇಲೆ ನಿಂತಿರುವ ಕಾರಣ ಎಲ್ಲಾ ರೂಪದ ವಿಭಿನ್ನತೆಯನ್ನು ಅಳಿಸಿಹಾಕುತ್ತದೆ ಎಂಬ ಭಾವನೆ ಇಲ್ಲಿ ಗಟ್ಟಿಯಾಗಿ ಕೆಲಸ ಮಾಡಿತ್ತು.
 
ಇದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಾತಿ ಭಾರತದ ವಾಸ್ತವ. ಅದು ಮುಸ್ಲಿಂ ಸಮುದಾಯದೊಳಗೂ ಹಾಸುಹೊಕ್ಕಾಗಿರುವುದು ಅಷ್ಟೇ ಸತ್ಯ. ಭಾರತದ ಮುಸ್ಲಿಮರಲ್ಲಿ ಜಾತಿಗಳನ್ನು ಮೊದಲು ಗುರುತಿಸಿದ್ದು 14ನೇ ಶತಮಾನದಲ್ಲಿ ಜಿಯಾವುದ್ದೀನ್ ಬರನಿ.
 
ಅವನು ಮೂರು ಜಾತಿಗಳನ್ನು ತನ್ನ ಪುಸ್ತಕ ‘ಫತ್ವ ಇ ಜಹನಮದಾರಿ’ಯಲ್ಲಿ ಗುರುತಿಸಿದ್ದ. ಟರ್ಕಿ, ಅರಬ್ ಇತ್ಯಾದಿ ಮೂಲಗಳಿಂದ ಭಾರತಕ್ಕೆ ಬಂದು ನೆಲೆ ನಿಂತವರು ಅಶ್ರಫ್‌ಗಳು. ಇವರು ಮೇಲ್ಜಾತಿಗಳೆಂದು ಬರನಿ ವಾದಿಸುತ್ತಾನೆ.

ಎರಡನೇ ಜಾತಿಗಳೆಂದರೆ ಅಜ್ಲಫ್‌ಗಳು. ಇವರು ಮೂಲತಃ ಮಧ್ಯಮ ಜಾತಿ, ಹಿಂದುಳಿದ ಜಾತಿಗಳಿಂದ ಮತಾಂತರಗೊಂಡವರು. ಕೊನೆಯದಾಗಿ, ಅಜ್ರಲ್ಸ್- ದಲಿತ ಮುಸ್ಲಿಮರು ದಲಿತ ಜಾತಿಗಳಿಂದ ಮತಾಂತರಗೊಂಡವರು.

ಅಶ್ರಫ್‌ಗಳಲ್ಲಿ ನಾಲ್ಕು ಉಪ ಜಾತಿಗಳಿವೆ- ಸೈಯ್ಯದ್ (ಮೂಲತಃ ಪ್ರವಾದಿ ಕುಟುಂಬದಿಂದ ಬಂದವರು), ಶೇಖ್‌ (ಅರಬ್ ಚರಿತ್ರೆಯವರು), ಪಠಾಣ್ (ಆಫ್ಘಾನಿಸ್ತಾನದ ಕಡೆಯಿಂದ ಬಂದವರು), ಮೊಘಲರು. ಇವರ ಸಂಖ್ಯೆ ಹೆಚ್ಚಿಲ್ಲ. ಅತಿಹೆಚ್ಚು ಇರುವುದು ಹಿಂದುಳಿದ ಜಾತಿಗಳಿಂದ ಬಂದ ಅಜ್ಲಫ್‌ಗಳು- ಮೂಲತಃ ರಜಪೂತ ಜಾತಿಗಳಿಂದ ಬಂದವರು.
 
ದಲಿತ ಮುಸ್ಲಿಂ ವರ್ಗವನ್ನು 1930ರ ಸುಮಾರಿಗೆ ಅಂಬೇಡ್ಕರ್ ಗುರುತಿಸಿದ್ದರು. ಇತ್ತೀಚೆಗೆ ಬಂದ ಸಾಚಾರ್ ವರದಿ, ರಂಗನಾಥ ಮಿಶ್ರ ಸಮಿತಿ ಕೂಡ ಈ ವಾದ ಮುಂದಿಟ್ಟಿದ್ದವು. ಮಂಡಲ್ ಆಯೋಗ ಮುಸ್ಲಿಮರಲ್ಲಿ ಬಹಳಷ್ಟು ಹಿಂದುಳಿದ, ದಲಿತ ಜಾತಿಗಳಿರುವುದನ್ನು ಗುರುತಿಸಿತ್ತು.
 
ವಾಸ್ತವವಾಗಿ  ಮಂಡಲ್ ಆಯೋಗದ ತೀರ್ಮಾನದ ಪೂರ್ವದಲ್ಲಿಯೇ ಕರ್ನಾಟಕದಲ್ಲಿ ಜಾತಿಗಳ ಲೆಕ್ಕಾಚಾರವಿತ್ತು. 1970ರ ದಶಕದಲ್ಲಿ ಹಾವನೂರು ಸಮಿತಿ ಇದನ್ನೇ ಪ್ರತಿಪಾದಿಸಿತ್ತು. ಒಟ್ಟಾರೆಯಾಗಿ ಅಶ್ರಫೇತರರನ್ನು ಪಾಸ್ಬಂದ್‌ಗಳೆಂದು ಕರೆಯಲಾಗುತ್ತಿದೆ.
 
ಅವರ ಸಂಖ್ಯೆಯೇ ಹೆಚ್ಚುಕಡಿಮೆ ಶೇ 90ರಷ್ಟಿದೆ. ಉತ್ತರಪ್ರದೇಶದಲ್ಲಿ ಅವರ ಪ್ರಮಾಣ ಶೇ 80ರಷ್ಟಿದೆ. ಮುಜಫ್ಫರ್‌ಪುರ ಗಲಭೆಯಲ್ಲಿ  ಹೆಚ್ಚು ಸಂತ್ರಸ್ತರಾದವರು ಅವರೇ. ದಾದ್ರಿ ಘಟನೆಯಲ್ಲಿ ಬಲಿಯಾದ ಇಖ್ಲಾಕ್‌ ಕೂಡ ಅಶ್ರಫೇತರ ಪಾಸ್ಬಂದಿಯಾಗಿದ್ದ. 
 
ಇಂದು ಪ್ರತೀ ರಾಜ್ಯದಲ್ಲಿ ಮುಸ್ಲಿಮರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಬರುತ್ತಾರೆ. ವಿಚಿತ್ರವೆಂದರೆ ಈಗ ಅಶ್ರಫೇತರರಲ್ಲಿ ರಾಜಕೀಯ ಪ್ರಜ್ಞೆ ತೀವ್ರವಾಗಿ ಬೆಳೆಯುತ್ತಿದೆ. ಬಿಹಾರದಲ್ಲಿ ಈಗಾಗಲೇ ಆಲ್ ಇಂಡಿಯಾ ಪಾಸ್ಬಂದ್ ಮಹಜ್ ಸಂಘಟನೆ ಇದೆ. ಉತ್ತರ ಪ್ರದೇಶದಲ್ಲಿ ‘ವೋಟ್ ಹಮಾರ ಫತ್ವ ತುಮ್ಹಾರ’ ಎಂಬ ಘೋಷಣೆಯಲ್ಲಿ ಪಾಸ್ಬಂದಿಗಳು ಒಕ್ಕೂಟಗಳನ್ನು ರಚಿಸಿದ್ದಾರೆ.
 
ಇಸ್ಲಾಂ ಜಾತಿಯನ್ನು ಒಪ್ಪದಿದ್ದರೂ, ಭಾರತದಲ್ಲಿ ಇಸ್ಲಾಂ ಬೇರೂರುವಾಗ ಅದು ಸಂಪೂರ್ಣವಾಗಿ ಜಾತಿ ಇಲ್ಲದ ಧರ್ಮವನ್ನು ಸ್ಥಾಪಿಸಲು ಸಾಧ್ಯವಾಗಲೇ ಇಲ್ಲ.  ಮುಸ್ಲಿಮರಲ್ಲಿ ಗೋತ್ರಗಳಿವೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಯಾಕೆಂದರೆ ಜಾತಿ ಸಂಕೀರ್ಣದ ಇನ್ನೊಂದು ಆಯಾಮವೇ ಗೋತ್ರ ಪದ್ಧತಿ. ಮುಸ್ಲಿಮರಲ್ಲಿ ಗೋತ್ರದ ಕುರಿತು ವರ್ಣನೆ ಸಿಗುವುದು 19ನೇ ಶತಮಾನದ ಜನಗಣತಿಯ ಸಂದರ್ಭದಲ್ಲಿ.
 
ಮುಸ್ಲಿಮರಲ್ಲಿ ಕೂಡ ಹಿಂದೂಗಳಂತೆ ಮೇಲ್ಜಾತಿಯ ಸ್ಥಾನಮಾನಕ್ಕೆ ತಗಾದೆಗಳು ನಡೆದದ್ದೂ ಇದೆ. ಮತಾಂತರದ ನಂತರವೂ ಅತ್ಯಂತ ಮೇಲ್ಜಾತಿಯ (ಸೈಯ್ಯದ್) ಸ್ಥಾನಮಾನ ಸಿಗದಿದ್ದಾಗ, ಕೆಳಜಾತಿಗಳು ತಮ್ಮನ್ನು ತಾವು ಕ್ಷತ್ರಿಯ ಅಥವಾ ಶೇಖ್‌ ಜಾತಿಗಳೆಂದು ಬಿಂಬಿಸಿಕೊಂಡಿದ್ದನ್ನು ಇತಿಹಾಸದಲ್ಲಿ ನೋಡಬಹುದು. ಇದಕ್ಕೆ ಅನ್ಸಾರಿಗಳು ಉತ್ತಮ ಉದಾಹರಣೆ.
 
1930ರ ಸುಮಾರಿಗೆ ಅತಿ ಹೆಚ್ಚು  ಸಂಖ್ಯೆಯಲ್ಲಿದ್ದ ಜಲಾರಿ- ನೇಕಾರ ಮುಸ್ಲಿಮರು ತಮ್ಮನ್ನು ಮೋಮಿನ್ ಅನ್ಸಾರಿಗಳೆಂದು ಕರೆದುಕೊಳ್ಳತೊಡಗಿದ್ದರು. ವಿಚಿತ್ರವೆಂದರೆ ಇದೇ ನೇಕಾರ ಜಾತಿಯ ಮುಸ್ಲಿಮರು ಎಲ್ಲರಿಗಿಂತ ಮೊದಲೇ ರಾಜಕೀಯವಾಗಿ ಒಗ್ಗೂಡಿದ್ದರು.
 
1920ರ ದಶಕದಲ್ಲಿಯೇ ಅಖಿಲ ಭಾರತ ಮೋಮಿನ್ ಸಮ್ಮೇಳನ ಸಡೆಸಿದ್ದರು. 1939ರಲ್ಲಿಯೇ ತಮಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಕೇಳಿದ್ದರು. ಈ ಜಾತಿಗಳೊಂದಿಗೆ ಒಗ್ಗೂಡಿದವರು ಖುರೇಷಿಗಳು (ಮಾಂಸ ವ್ಯಾಪಾರಿಗಳು), ಇದೀಸ್ (ಟೇಲರ್‌ಗಳು) ರಯೀನ್‌ಗಳು (ತರಕಾರಿ ಮಾರುವವರು). ಆದಕಾರಣ ಉತ್ತರ ಭಾರತದ ಮುಸ್ಲಿಂ ಜಾತಿ ರಾಜಕಾರಣ ಹೊಸತೇನಲ್ಲ.
 
1901ರ ಜನಗಣತಿ ಎರಡು ಕಾರಣಕ್ಕೆ ಮಹತ್ವದ್ದಾಗುತ್ತದೆ. ಒಂದನೆಯದಾಗಿ, ಇದು ನೂರಾರು ಜಾತಿಗಳನ್ನು ಗುರುತಿಸಿತ್ತು ಮತ್ತು ನಿರ್ಮಿಸಿತ್ತು. ಅಲ್ಲದೆ ಗೋತ್ರಗಳನ್ನು ಕೂಡ ಗುರುತಿಸಿತ್ತು. ವಸಾಹತುಶಾಹಿಗೆ ಈ ಜಾತಿಗಳ ಗುರುತಿಸುವಿಕೆ ಅವಶ್ಯಕವಾಗಿತ್ತು. ಅದಕ್ಕೆ ಜಾತಿ ವಿಸ್ಮೃತಿಗಳಿದ್ದ ಸಮುದಾಯಗಳು ಬೇಕಾಗಿರಲಿಲ್ಲ. ಇದೇ ಕಾರಣಕ್ಕಾಗಿ ಜಾತಿ ಪ್ರಜ್ಞೆ ಹಾಗೇ ಉಳಿದುಕೊಂಡಿತು. 
 
ವಸಾಹತುಶಾಹಿ ಪ್ರಕಾರ, ಅಂದಿನ ದಿನಗಳಲ್ಲಿ ಮುಸ್ಲಿಂ ಜಾಟರಲ್ಲಿ ಅತಿ ಹೆಚ್ಚು ಗೋತ್ರಗಳಿದ್ದವು. ಜಾಟರಲ್ಲಿರುವ ಗೋತ್ರಗಳೆಂದರೆ ದಮ್ಯಯಲ್, ಅರ್ಯಲ್ಸ್, ಕಲ್‌ಯಲ್ಸ್, ರನ್ಯಲ್ಸ್, ತತಾಲ್ಸ್, ಧೂರ್, ಜಾಲ್, ಪಾಜಾಲ್ ಇತ್ಯಾದಿ. ಈ ಗೋತ್ರಗಳು ತಮ್ಮ ಇತಿಹಾಸವನ್ನು  ಕಟ್ಟುವಾಗ ಋಷಿ ಮೂಲಗಳಿಗೆ ಹೋಗುತ್ತಿರಲಿಲ್ಲ ಎಂಬುದು ಸೋಜಿಗ.
 
1901ರ ಜನಗಣತಿಯು ಮುಸ್ಲಿಮರಲ್ಲಿ  ಹೆಚ್ಚುಕಡಿಮೆ 790 ಜಾತಿಗಳನ್ನು ಗುರುತಿಸಿತ್ತು. ಇವುಗಳಲ್ಲಿ ಹೆಚ್ಚಿನವು ತಮ್ಮ ಮೂಲವನ್ನು ಜಾಟರಲ್ಲಿ ಅಥವಾ ರಜಪೂತರಲ್ಲಿ ನೋಡಿಕೊಂಡಿದ್ದವು. ಕಾಶ್ಮೀರದ ಹೆಚ್ಚಿನ ಮುಸ್ಲಿಮರು ಮೂಲತಃ ಸಾರಸ್ವತ ಬ್ರಾಹ್ಮಣರು.
 
ಅವರಲ್ಲಿ ಈಗಲೂ ಭಟ್, ಮಟ್ಟು, ರಾತರ್, ಲೊನ್, ಸರ್ಪು, ಹಂಡೂ, ಆಗಮ, ಅತಲ್ ಎಂಬಂಥ ಉಪನಾಮಗಳನ್ನು ಹೊಂದಿರುವವರು ಸಿಗುತ್ತಾರೆ. ಇವರದೆಲ್ಲ ಮೇಲ್ಜಾತಿಗಳು. ವಟ್ಟಲ್, ವಾಗೆಸ್ ಇತ್ಯಾದಿಗಳು ಕೆಳಜಾತಿಗಳು. ಉತ್ತರಪ್ರದೇಶದ ಅದರಲ್ಲೂ ಮುಜಫ್ಫರ್‌ಪುರ, ಶಾಮ್ಲಿ ಮುಂತಾದೆಡೆ ಹರಡಿರುವ ಮೂಲೆ ಅಥವಾ ಜಾಟರು ಮುಸ್ಲಿಮರಾದದ್ದೇ ಸೂಫಿ ಪರಂಪರೆಯ ಪ್ರಭಾವದಿಂದ.

ಮತಾಂತರದ ನಂತರವೂ ಈ ಜಾತಿ ಹಿಂದೂ ಸಂಸ್ಕೃತಿಯನ್ನು ಬಿಟ್ಟುಕೊಡದೇ ಇರುವುದಕ್ಕೆ  ನಿದರ್ಶನಗಳಿವೆ.  ಇವರಲ್ಲೂ ಖಾಪ್ ಪಂಚಾಯತ್ ಇದೆ. ಸ್ವಗೋತ್ರ ಮದುವೆ  ನಿಷಿದ್ಧ.
 
ಭಾರತಕ್ಕೆ ಕಾಲಿರಿಸಿದ ಸೂಫಿ ಪಂಥವು ನೂರಾರು ಜಾತಿಗಳನ್ನು ಒಳಗೊಳ್ಳುತ್ತಾ ವಿಶಿಷ್ಟ ಜಾತಿಗಳನ್ನು ಇತಿಹಾಸದಲ್ಲಿ ನಿರ್ಮಿಸಿದ್ದು ಅಷ್ಟೇ ಸತ್ಯ. ಬಹಳಷ್ಟು ಸೂಫಿಗಳು ಹತ್ತು ಹಲವು ಜಾತಿಗಳನ್ನು ಸಾರಾಸಗಟಾಗಿ ಮತಾಂತರ ಮಾಡಿದ್ದಕ್ಕೆ ಇತಿಹಾಸದಲ್ಲಿ ನಿದರ್ಶನಗಳು ಸಿಗುತ್ತವೆ.
 
ಮತಾಂತರದ ನಂತರವೂ ತಮ್ಮ ಮತಾಂತರ ಪೂರ್ವದ ಹಿಂದೂ ಸಂಸ್ಕೃತಿಯನ್ನು ಈಗಲೂ ಜೀವಂತವಿರಿಸಿದ್ದಾರೆ. ಇದನ್ನು ಕರ್ನಾಟಕದ ಭಟ್ಕಳದಲ್ಲಿ ನೆಲೆನಿಂತಿರುವ ನವಾಯತರಲ್ಲೂ ನೋಡಬಹುದು. ಕರ್ನಾಟಕದ ನವಾಯತರು ಮತಾಂತರ ಪೂರ್ವದಲ್ಲಿ ಜೈನರಾಗಿದ್ದರು.
 
ಇಷ್ಟೆಲ್ಲಾ ಆದರೂ ಜಾತಿಗಳಲ್ಲಿ ಗೊಂದಲಗಳಿವೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶದಲ್ಲಿರುವ ಬಯನ್, ಚೌಹಾಣ್, ನೂನ್, ಗುಮನ್ ದಾಹ ಗೋತ್ರ ಮುಸ್ಲಿಮರು ಕೆಲವೊಮ್ಮೆ ತಮ್ಮನ್ನು ರಜಪೂತರೆಂದು, ಕೆಲವೊಮ್ಮೆ ಜಾಟರೆಂದು ವಾದಿಸುತ್ತಾರೆ.
 
ಕೆಲವರು ತಮ್ಮ ಮೂಲವನ್ನು ಸಿಖ್ ಧರ್ಮದಲ್ಲಿ ನೋಡುತ್ತಾರೆ. ಮುಸ್ಲಿಮರಲ್ಲಿ ತಮ್ಮನ್ನು ಸೂರ್ಯವಂಶಿಗಳು, ಚಂದ್ರವಂಶಿಗಳೆಂದು ಹೇಳಿಕೊಳ್ಳುವ ಸಮುದಾಯಗಳು ಕೂಡ ಇವೆ. 
 
ವಿಚಿತ್ರವೆಂದರೆ ಇಸ್ಲಾಂ ಧರ್ಮಕ್ಕೆ ಮೊದಲು ಮತಾಂತರಗೊಂಡವರೆಂದರೆ ಜಾಟರು. ಬಹಳಷ್ಟು ‘ಖಾನ್’ಗಳು ಮೂಲತಃ  ರಜಪೂತರು. ಮತಾಂತರದ ನಂತರವೂ ಅವರು ಹಿಂದೂ ಹಬ್ಬಗಳಾದ ದೀಪಾವಳಿ, ಹೋಳಿ, ರಕ್ಷಾ ಬಂಧನ್ ಆಚರಿಸುವುದು ಸರ್ವೇ ಸಾಮಾನ್ಯ.
 
ಸೂಫಿ ಪಂಥ ಕೆಲವು ಅಸ್ಪಷ್ಟ ಜಾತಿಗಳನ್ನು ಭಾರತದಲ್ಲಿ ನಿರ್ಮಿಸಿದ್ದು ನಿಜ. ಒಂದು  ಅಸ್ಪಷ್ಟ ಜಾತಿಯೆಂದರೆ, ರಾಜಸ್ತಾನ, ಉತ್ತರಪ್ರದೇಶ ಹಾಗೂ ಹರಿಯಾಣದಲ್ಲಿ ಹರಡಿರುವ ಮಿಯೋಗಳು. ಇವರನ್ನು ಮೂಲೆಗಳೆಂದು ಉತ್ತರಪ್ರದೇಶದಲ್ಲಿ ಕರೆಯಲಾಗುತ್ತದೆ. ಮೂಲತಃ ಹಿಂದೂ ರಜಪೂತರಾದರೂ ಅವರಲ್ಲಿ ಗೊಂದಲವಿದೆ.
 
ಹತ್ತು ಹಲವು ವಿವಿಧ ಗೋತ್ರಗಳಿವೆ. 12 ಮತ್ತು 17ನೇ ಶತಮಾನದಲ್ಲಿ ಇಸ್ಲಾಂಗೆ ಮತಾಂತರ ಹೊಂದಿದ ಮಿಯೋಗಳಲ್ಲಿ ಹಿಂದೂ  ಮಿಶ್ರಿತ ಮುಸ್ಲಿಂ ಹೆಸರು ಸರ್ವೇ ಸಾಮಾನ್ಯ. ಇವರಲ್ಲಿ ಹಿಂದೂ ಸಂಸ್ಕೃತಿ ಇವತ್ತಿಗೂ ಅಷ್ಟೇ ಗಟ್ಟಿಯಾಗಿದೆ. ಮುಸ್ಲಿಮರೆಂದು ಹೇಳಿಕೊಂಡರೂ ಅವರ ಮನೆ ದೇವರು ಕೃಷ್ಣ ಮತ್ತು ರಾಮ. ಕೆಲವು ಮಿಯೋಗಳು ತಮ್ಮ ಮೂಲವನ್ನು ಅರ್ಜುನನಲ್ಲೂ ಹುಡುಕುತ್ತಾರೆ. ಇಷ್ಟೆಲ್ಲಾ ಹೇಳಲು ಕಾರಣವಿದೆ.

ಉತ್ತರಪ್ರದೇಶದ ಜಾಟ್ ಮುಸ್ಲಿಮರು ಒಂದು ಕಾಲಕ್ಕೆ ಚರಣ್ ಸಿಂಗ್‌ರ ಬೆಂಬಲಿಗರಾಗಿದ್ದರು. ಈಗಲೂ ಅಜಿತ್ ಸಿಂಗ್ ಅವರ ನಾಯಕ. ಪಾಸ್ಬಂದಿಗಳಿಗೆ, ಹಿಂದುಳಿದ ಜಾತಿಯ ಮುಸ್ಲಿಮರಿಗೆ ಮಾಯಾವತಿ ನಾಯಕರಾಗಬಹುದಿತ್ತು. ಅದು ಆಗಲೇ ಇಲ್ಲ. ಮುಜಫ್ಫರ್‌ಪುರ ಗಲಭೆ ನಂತರ ರಾಜಕೀಯವಾಗಿ, ಸಾಮಾಜಿಕವಾಗಿ ಮುಸ್ಲಿಂ ಹಿಂದುಳಿದ ಜಾತಿಗಳು ಅದರಲ್ಲೂ ಪಾಸ್ಬಂದಿಗಳು ತಲ್ಲಣಗೊಂಡಿದ್ದರು.
 
ಮಾಯಾವತಿ ಈ ತಲ್ಲಣಗಳನ್ನು ಅರ್ಥಮಾಡಿಕೊಳ್ಳಲಿಲ್ಲವೆಂದೇ ಹೇಳಬೇಕು. ಕೆಳಜಾತಿಗಳನ್ನು ಪ್ರತಿನಿಧಿಸುವ ಮಾಯಾವತಿ ಮುಸ್ಲಿಮರಲ್ಲಿ  ಜಾತಿ ಸಮೀಕರಣವನ್ನು ಅರ್ಥ ಮಾಡಿಕೊಳ್ಳಲಿಲ್ಲ. ಟಿಕೆಟ್ ಹಂಚುವಾಗ ಮತ, ಧರ್ಮದ ಆಧಾರವನ್ನೇ ಮಾನದಂಡವಾಗಿ ಇಟ್ಟುಕೊಂಡರು. ಅಲ್ಪಸಂಖ್ಯಾತರಲ್ಲಿ ಅಲ್ಪಸಂಖಾತರಾಗಿದ್ದ ಮೇಲ್ಜಾತಿ ಮುಸ್ಲಿಮರು ಹೆಚ್ಚಿನ ಟಿಕೆಟ್ ಪಡೆದುಕೊಳ್ಳಲು ಯಶಸ್ವಿಯಾದರು.
 
ಭ್ರಮನಿರಸನಗೊಂಡ ಮುಸ್ಲಿಂ ಕೆಳಜಾತಿಗಳು ಮಾಯಾವತಿಯವರ ವಿರುದ್ಧ ತಿರುಗಿಬಿದ್ದವು. ವಾಸ್ತವವಾಗಿ ಉತ್ತರ ಪ್ರದೇಶದ ಕೋಮು ರಾಜಕಾರಣದಲ್ಲಿ ಅತಿಹೆಚ್ಚು ಬಲಿಯಾದದ್ದು ಹಿಂದುಳಿದ ಜಾತಿಗಳು- ಗೋಹತ್ಯೆ, ಕೋಮುಗಲಭೆ, ಲವ್ ಜಿಹಾದ್ ರಾಜಕಾರಣದಲ್ಲಿ ಖುರೇಷಿಗಳು ಮತ್ತು ಇತರ ಪಾಸ್ಬಂದಿಗಳು ಬಲಿಯಾದರು. ಮಾಯಾವತಿ ಈ ಜಾತಿಗಳ ಪರವಾಗಲೀ  ಕೋಮುವಾದದ ಕುರಿತಾಗಲೀ ಧ್ವನಿ ಎತ್ತಲಿಲ್ಲ.
 
ಚುನಾವಣಾ ಸೋಲು ಒಂದೆಡೆ ದಲಿತ, ಹಿಂದುಳಿದ ಜಾತಿಗಳ ಸೋಲಾದರೆ ಮತ್ತೊಂದೆಡೆ ಮುಸ್ಲಿಂ ಪಾಸ್ಬಂದಿಗಳ ಪ್ರತಿರೋಧದ ಸಂಕೇತವಾಯಿತು. ಈ ಪ್ರತಿರೋಧದ ನಡುವೆ ಬಿಎಸ್‌ಪಿಯ ಫಲಿತಾಂಶವನ್ನು ನೋಡಬೇಕು. ಗೆದ್ದ ಒಟ್ಟಾರೆ 24 ಮುಸ್ಲಿಂ ಶಾಸಕರಲ್ಲಿ ಬರೇ ಐವರು ಬಿಎಎಸ್‌ಪಿಗೆ ಸೇರಿದವರು.  ಜಾತಿಯ ಉಪೇಕ್ಷೆಯೇ ಮುಸ್ಲಿಂ ರಾಜಕಾರಣದ ಸೋಲಿಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT