ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ತೀವ್ರ ಬರ: ನೀರಿನ ಸದ್ಬಳಕೆಗೆ ಸಲಹೆ

ಕೂಟಗಲ್‌: ಕೃಷಿ ಇಲಾಖೆಯಿಂದ ಫಲಾನುಭವಿಗಳಿಗೆ ನೆರವು ವಿತರಣೆ
Last Updated 13 ಏಪ್ರಿಲ್ 2017, 5:05 IST
ಅಕ್ಷರ ಗಾತ್ರ

ಕೂಟಗಲ್‌ (ರಾಮನಗರ): ‘ಬರಗಾಲ ಮತ್ತು ನೀರಿನ ಸಮಸ್ಯೆ ಎನ್ನುವುದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಈ ನಿಟ್ಟಿನಲ್ಲಿ ರೈತರು ಇರುವ ನೀರನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್. ಅಶೋಕ್‌ ಹೇಳಿದರು.

ಗ್ರಾಮದಲ್ಲಿ ಬುಧವಾರ ಕೃಷಿ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಅರ್ಹ ರೈತ ಫಲಾನುಭವಿಗಳಿಗೆ ವಿವಿಧ ಯೋಜನೆಯಡಿ ಸಹಾಯಧನದ ಚೆಕ್‌ ಮತ್ತು ಕೃಷಿ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.

‘ಇಂದು ನೀರು ಚಿನ್ನಕ್ಕಿಂತ ಶ್ರೇಷ್ಠವಾದ ವಸ್ತುವಾಗಿದೆ. ರೈತರು ತಮ್ಮ ಬೆಳೆಗಳಿಗೆ ಹನಿ ನೀರಾವರಿ, ತುಂತುರು ನೀರಾವರಿಯಂತಹ ನೂತನ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹದೇವಯ್ಯ ಮಾತನಾಡಿ ‘ಮಳೆಯ ಅಭಾವ ಮತ್ತು ನೀರಿನ ಸಮಸ್ಯೆ ಇಂದು ರೈತರ ಬದುಕನ್ನು ದುಸ್ತರವಾಗಿಸಿದೆ. ಸರ್ಕಾರ ಮೇವಿನ ಸಮಸ್ಯೆ ನೀಗಿಸಲು ಹಲವು ಕ್ರಮಗಳನ್ನು ಕೈಗೊಂಡು ಕೆ.ಜಿ.ಗೆ ₹2ರಂತೆ ಮೇವು ಮಾರಾಟ ಮಾಡುತ್ತಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ಪಿ. ಜಗದೀಶ್ ಮಾತನಾಡಿ ‘ರೈತರ ಬಗ್ಗೆ ಕೃಷಿ ಇಲಾಖೆ ಹೋಬಳಿ ಮಟ್ಟದ ರೈತರಿಗೆ ಕನಿಷ್ಠ ಮಾಹಿತಿಯನ್ನು ತಲುಪಿಸಿ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಕಾರ್ಯಕ್ರಮ ಆಯೋಜಿಸುವಲ್ಲಿ ಬೇಜವಾಬ್ದಾರಿತನ ತೋರಿಸಬಾರದು’ ಎಂದು ಅವರು ತಿಳಿಸಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ದೇವರಾಜು ಮಾತನಾಡಿ ‘ರೈತರ ಸಂಪರ್ಕ ಕೇಂದ್ರ ಕಾರ್ಯನಿರ್ವಹಣೆಗೆ ಕೂಟಗಲ್ ಗ್ರಾಮದಲ್ಲಿ ಭೂಮಿ ನೀಡಬೇಕು. ಕಣ್ವ ಜಲಾಶಯಕ್ಕೆ ವೈ.ಜಿ.ಗುಡ್ಡದಿಂದ ಗುರುತ್ವಾಕರ್ಷಣೆ ಶಕ್ತಿಯ ಮೇಲೆ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಕೃಷಿ ಅಧಿಕಾರಿ ಸೋಮಶೇಖರ್ ಮಾತನಾಡಿ ‘ಕೂಟಗಲ್ ಹೋಬಳಿ ವ್ಯಾಪ್ತಿಯ 64 ರೈತರಿಗೆ ಲಘು ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕ ನಿರ್ಮಾಣಕ್ಕೆ ಸಹಾಯಧನ, ಕೃಷಿ ಯಾಂತ್ರಿಕ ಯೋಜನೆಯಡಿ ತಲಾ ಒಬ್ಬ ಅರ್ಹ ರೈತರಿಗೆ ಮಿನಿ ಟ್ರ್ಯಾಕ್ಟರ್, ಪವರ್ ಟಿಲ್ಲರ್, ಬ್ರಷ್ ಕಟರ್, ಒಂಬತ್ತು ಹಲ್ಲಿನ ನೇಗಿಲು ನೀಡಲಾಗಿದೆ.

ಇಬ್ಬರು ರೈತ ಫಲಾನುಭವಿಗಳಿಗೆ ಛಾಪ್‌ ಕಟರ್, ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ 64 ರೈತ ಫಲಾನುಭವಿಗಳಿಗೆ ₹13.5ಲಕ್ಷ ಸಹಾಯಧನದ ಚೆಕ್ ಸೇರಿದಂತೆ ಒಟ್ಟು ₹60 ಲಕ್ಷ ಸಹಾಯಧನವನ್ನು ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.

ಕೂಟಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಜಾಲಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮತಿ, ಶಾನುಬೋಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಯ್ಯ, ಸದಸ್ಯರಾದ ಜಗದೀಶ್, ಜೋಗಿ ಶಿವರಾಮಯ್ಯ, ಮಂಚೇಗೌಡ, ಶಾರದಮ್ಮ, ಸಿದ್ದರಾಜು, ಮುಖಂಡ ಅಜಯ್‌ ದೇವೇಗೌಡ ಇತರರು ಇದ್ದರು.

ಕಾಟಾಚಾರಕ್ಕೆ ಮೇವು ವಿತರಣೆ ಆರೋಪ
‘ತಾಲ್ಲೂಕು ಆಡಳಿತವು ಕೂಟಗಲ್‌ ಹೋಬಳಿಯಲ್ಲಿ ಕಾಟಾಚಾರಕ್ಕೆ ಎಂಬಂತೆ ರೈತರಿಗೆ ಮೇವು ವಿತರಣೆ ಮಾಡಿದೆ. ಯರೇಹಳ್ಳಿಯಲ್ಲಿ ಕೇವಲ ಒಂದು ದಿನ ಮಾತ್ರ ಮೇವು ನೀಡಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ’ ಎಂದು ಗ್ರಾಮದ ರೈತರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಕೂಟಗಲ್ ಹೋಬಳಿ ಕೇಂದ್ರವಾಗಿದ್ದರೂ ಇಲ್ಲಿನ ನಾಡಕಚೇರಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಇಲ್ಲ. ಇದರಿಂದ ರೈತರಿಗೆ ತೀವ್ರ ತೊಂದರೆ ಆಗಿದೆ. ಬರ ಪರಿಹಾರಕ್ಕೆ, ನೀರಿನ ಹಕ್ಕುಪತ್ರಕ್ಕೆ ಅಲೆದಾಡುವಂತಾಗಿದೆ’ ಎಂದು ಸ್ಥಳೀಯರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT