ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈನುಗಾರಿಕೆ ಕನಸಿಗೆ ಬರೆ ಎಳೆದ ಬರ

ಒಣ ಮೇವು ದಾಸ್ತಾನು ಖಾಲಿ; ಹಸಿರು ಬೆಳೆಯಲು ವಿದ್ಯುತ್‌ ಕೊರತೆ
Last Updated 13 ಏಪ್ರಿಲ್ 2017, 5:08 IST
ಅಕ್ಷರ ಗಾತ್ರ

ರಾಮನಗರ: ಹೈನುಗಾರಿಕೆ ಮೂಲಕ ಉತ್ತಮ ಬದುಕು ರೂಪಿಸಿಕೊಳ್ಳುವ ಕನಸು ಕಂಡಿದ್ದ ಜಿಲ್ಲೆಯ ಪ್ರಗತಿಪರ ರೈತರು ರಾಸುಗಳಿಗೆ ನೀರು, ಮೇವು ಸಿಗದೇ  ಪರದಾಡುತ್ತಿದ್ದಾರೆ.

ತಾಲ್ಲೂಕಿನ ಕೈಲಾಂಚ ಹೋಬಳಿಯ ಹೊಸೂರು ದೊಡ್ಡಿಯ ರೈತ ನಾಗರಾಜು ತಮ್ಮ ಜಮೀನಿನಲ್ಲಿ 60ಕ್ಕೂ ಹೆಚ್ಚು ಹಸುಗಳನ್ನು ಸಾಕುತ್ತಿದ್ದಾರೆ. ಆದರೆ ಇವುಗಳಿಗೆ ಬೇಕಾದ ಒಣ ಮೇವಿನ ದಾಸ್ತಾನು ಮುಗಿದಿದ್ದು, ಹಸಿ ಮೇವು ಬೆಳೆದುಕೊಳ್ಳಲು ನೀರು ಸಿಗದಂತಾಗಿದೆ.

ಇರುವುದೊಂದು ಕೊಳವೆ ಬಾವಿಯಲ್ಲಿ ಜಿನುಗುವ ನೀರು ಜಾನುವಾರುಗಳಿಗೆ ಕುಡಿಯಲು ಸಾಕಾಗುತ್ತಿಲ್ಲ. ಇಷ್ಟಾದರೂ ಪಶು ಸಂಗೋಪನಾ ಇಲಾಖೆ, ತಾಲ್ಲೂಕು ಆಡಳಿತ ನೆರವಿಗೆ ಬರುತ್ತಿಲ್ಲ ಎನ್ನುವುದು ಅವರ ದೂರು.

ಗೋಶಾಲೆ ಮಾದರಿ ತೋಟ: ನಾಗರಾಜು ಈ ಹಿಂದೆ ಬೆಂಗಳೂರಿನಲ್ಲಿ ಕೆಲವು ಕಾಲ ಹಸುಗಳ ಸಾಕಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.
ಪ್ರಗತಿಪರ ಕೃಷಿಯತ್ತ ಆಸಕ್ತಿ ತಾಳಿ ಏಳು ವರ್ಷದ ಹಿಂದೆ ಹೊಸೂರಿನ ತಮ್ಮ ಆರು ಎಕರೆ ಜಮೀನಿನಲ್ಲಿ ಕುಟುಂಬದವರ ನೆರವಿನೊಂದಿಗೆ ಹೈನುಗಾರಿಕೆ ಆರಂಭಿಸಿದರು.

ಜಾನುವಾರುಗಳಿಗೆ ಬೇಕಾದ ಶೆಡ್ಡನ್ನು ಅಲ್ಪ ಖರ್ಚಿನಲ್ಲಿ ಸ್ವಂತ ಶ್ರಮದಿಂದ ನಿರ್ಮಿಸಿಕೊಂಡು ಕೃಷಿ ಮಾಡ ತೊಡಗಿದ್ದಾರೆ. ಸದ್ಯ ತಮ್ಮ ಬಳಿ 60 ಹಸುಗಳು ಇರುವುದಾಗಿ ಹೇಳುತ್ತಾರೆ. ಇದರಲ್ಲಿ ಸುಮಾರು 20ಕ್ಕೂ ಹೆಚ್ಚು ದೇಸಿ ತಳಿಯ ದನಗಳೂ ಸೇರಿವೆ. ಅಪರೂಪದ ತಳಿಯ ಹಸುಗಳನ್ನು ಅವರು ಸಲಹುತ್ತಿದ್ದಾರೆ.

ಇದಲ್ಲದೆ 20ಕ್ಕೂ ಹೆಚ್ಚು ಕುರಿ–ಮೇಕೆಗಳು, ನಾಟಿಕೋಳಿಗಳು, ಬಾತುಕೋಳಿಗಳನ್ನು ಅವರು ಸಾಕುತ್ತಿದ್ದಾರೆ. ಜಾನುವಾರುಗಳ ಸಗಣಿಯಿಂದ ಗೋಬರ್‌ ಗ್ಯಾಸ್‌ ಉತ್ಪಾದನಾ ಘಟಕ ಮಾಡಿಕೊಂಡಿದ್ದು, ಜೊತೆಗೆ ಸಾವಯವ ಗೊಬ್ಬರವೂ ಉತ್ಪಾದನೆ ಆಗುತ್ತಿದೆ.

ಕೈಕೊಟ್ಟ ಕೊಳವೆ ಬಾವಿ: ಜಮೀನಿನಲ್ಲಿ ಒಟ್ಟು ಮೂರು ಕೊಳವೆಬಾವಿ ಕೊರೆಯಿಸಿದ್ದು, ಅದರಲ್ಲಿ ಎರಡು ವಿಫಲವಾಗಿವೆ. ಒಂದು ಕೊಳವೆ ಬಾವಿಯಲ್ಲಿ ಮಾತ್ರ ತಕ್ಕ ಮಟ್ಟಿಗೆ ನೀರು ಬರುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಜೊತೆಗೆ ಅವುಗಳ ಸ್ವಚ್ಛತೆಗೆ ಈ ನೀರು ಸಾಕಾಗುತ್ತಿದೆ.

ಮನೆಯ ಹಿಂಭಾಗ ಬೃಹತ್‌ ಕೃಷಿ ಹೊಂಡ ನಿರ್ಮಾಣವಾಗಿದ್ದು. ಮಳೆಯೇ ಇಲ್ಲದ ಕಾರಣ ಸಂಪೂರ್ಣ ಬರಿದಾಗಿದೆ. ಇದಕ್ಕೆ ಹೊಂದಿಕೊಂಡಂತೆ ಒಂದು ಎಕರೆಯಷ್ಟು ಪ್ರದೇಶದಲ್ಲಿ ಹಸಿರು ಮೇವು ಬೆಳೆಯಲು ಅವರು ಪ್ರಯತ್ನಿಸಿದ್ದಾರೆ. ಆದರೆ, ನೀರಿನ ಕೊರತೆಯಿಂದಾಗಿ ಮೇವು ಒಣಗತೊಡಗಿದೆ. ಹೀಗೆ ಒಣಗುತ್ತಿರುವ ಮೇವನ್ನೇ ಕತ್ತರಿಸಿ ಜಾನುವಾರುಗಳಿಗೆ ಹಾಕತೊಡಗಿದ್ದಾರೆ.

‘ರಾಸುಗಳಿಗೆ ಒಣಮೇವಿಗಾಗಿ ಹುಡುಕಾಟ ನಡೆಸಿದ್ದು, ಬರಗಾಲದಿಂದ ಎಲ್ಲಿಯೂ ಮೇವು ಸಿಗುತ್ತಿಲ್ಲ. ತಲಕಾಡಿನವರೆಗೂ ಹೋಗಿ ಮೇವು ಹುಡುಕುತ್ತಿದ್ದೇನೆ. ಅದೂ ಬಲು ದುಬಾರಿ ಆಗುತ್ತಿದೆ. ನಮ್ಮಲ್ಲಿನ ಸಂಗ್ರಹ ಈಗಾಗಲೇ ಕರಗಿಹೋಗಿದೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕರೆಂಟು ಕೊಟ್ಟರೆ ಸಾಕು: ಸರ್ಕಾರದ ಬರ ನಿರ್ವಹಣೆ ಯೋಜನೆಗಳು, ಮೇವು ವಿತರಣೆ ಹೆಚ್ಚಿನ ರೈತರನ್ನು ತಲುಪುತ್ತಿಲ್ಲ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷರೂ ಆದ ನಾಗರಾಜು ಬೇಸರ ವ್ಯಕ್ತಪಡಿಸುತ್ತಾರೆ.

‘ದನಗಳಿಗೆ ಬೇಕಾದ ಮೇವು ಬೆಳೆದುಕೊಳ್ಳಲು ಶಕ್ತಿ ಇದೆ. ಆದರೆ ಅದಕ್ಕೆ ಬೇಕಾದ ವಿದ್ಯುತ್ ಅನ್ನು ನೀಡುತ್ತಿಲ್ಲ. ಹಗಲು ಹೊತ್ತಿನಲ್ಲಿ ಒಂದೆರಡು ತಾಸು ಮಾತ್ರ ವಿದ್ಯುತ್‌ ಸಿಗುತ್ತಿದ್ದು, ಅದರಲ್ಲಿ ನೀರು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ರಾತ್ರಿ ಹೊತ್ತು ಹೊಲದಲ್ಲಿ ಹಾವು–ಚಿರತೆ ಭಯದ ನಡುವೆಯೂ ಕೃಷಿ ಮಾಡುತ್ತಿದ್ದೇವೆ. ಆದಾಗ್ಯೂ ಮೇವಿಗೆ ತಕ್ಕ ನೀರು ಸಿಗದೆ ಪರಿತಪಿಸುವಂತಾಗಿದೆ’ ಎನ್ನುತ್ತಾರೆ ಅವರು.

ಅಧಿಕಾರಿಗಳು ನೊಂದ ರೈತರ ನೆರವಿಗೆ ಬರಬೇಕು. ಕೊಳವೆ ಬಾವಿಗಳನ್ನು ಹೊಂದಿರುವ ರೈತರು ತಮ್ಮ ಜಮೀನುಗಳಲ್ಲಿ ಕನಿಷ್ಠ ದನಗಳಿಗೆ ಮೇವು ಬೆಳೆದುಕೊಳ್ಳಲು ಹಗಲು ಹೊತ್ತಿನಲ್ಲಿ ವಿದ್ಯುತ್‌ ನೀಡಬೇಕು ಎನ್ನುವುದು ಅವರ ಆಗ್ರಹವಾಗಿದೆ.

‘ಮೇವು’ ಭರವಸೆ ಮರೀಚಿಕೆ
‘ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಮೇವು ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಮೇವು ಬ್ಯಾಂಕುಗಳು ಅಧಿಕಾರಿಗಳ ಪಾಲಿನ ‘ಮೇವು’ ಕೇಂದ್ರಗಳಾಗುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಎಂ. ರಾಮು.

‘ರಾಮನಗರ ತಾಲ್ಲೂಕಿನ ಕೂಟಗಲ್‌, ಕಸಬಾ ಹೋಬಳಿಗಳಲ್ಲಿ ಕೇವಲ ಶಾಸ್ತ್ರಕ್ಕೆ ಎಂಬಂತೆ ಮೇವು ವಿತರಿಸಿ ಅಧಿಕಾರಿಗಳು ಕೈಚೆಲ್ಲಿದ್ದಾರೆ. ರೈತರಿಗೆ ಕೆ.ಜಿ. ಗಳ ಲೆಕ್ಕದಲ್ಲಿ ಒಣ ಮೇವು ನೀಡಿದ್ದು, ಅದು ನಮ್ಮಲ್ಲಿನ ದನಗಳಿಗೆ ಒಂದು ಹೊತ್ತಿಗೂ ಸಾಲದು’ ಎಂದು ಅವರು ದೂರುತ್ತಾರೆ.

‘ಚನ್ನಪಟ್ಟಣದಲ್ಲಿ ಅಧಿಕಾರಿಗಳು ಮೇವು ಕೇಂದ್ರವನ್ನೇ ತೆರೆಯುತ್ತಿಲ್ಲ. ಕನಕಪುರ ತಾಲ್ಲೂಕಿನ ಮರಳವಾಡಿಯಲ್ಲಿ ನಿರ್ವಹಣೆ ಇಲ್ಲದೆ ಗೋಶಾಲೆಯು ಮುಚ್ಚುವ ಹಂತಕ್ಕೆ ಬಂದಿದೆ. ರೈತರ ಬಗ್ಗೆ ಇದೇ ರೀತಿ ನಿರ್ಲಕ್ಷ್ಯ ಧೋರಣೆ ಮುಂದುವರಿದಲ್ಲಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಅವರು ಎಚ್ಚರಿಸುತ್ತಾರೆ.

*
ಜಮೀನಿನಲ್ಲಿ ಮೇವು ಬೆಳೆದುಕೊಳ್ಳಲು ಹಗಲು ಹೊತ್ತಿನಲ್ಲಿ ವಿದ್ಯುತ್ ನೀಡಿದರೂ ಸಾಕು. ನಮ್ಮ ಜಾನುವಾರುಗಳಿಗೆ ಬೇಕಾಗುವಷ್ಟು ಹುಲ್ಲು ಬೆಳೆದುಕೊಳ್ಳುತ್ತೇವೆ.
-ನಾಗರಾಜು,
ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT