ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಸ್‌ಕೋರ್ಸ್‌ ವಿರುದ್ಧ ಹರಿಹಾಯ್ದ ಶಾಸಕ

Last Updated 13 ಏಪ್ರಿಲ್ 2017, 6:36 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ರೇಸ್‌ಕೋರ್ಸ್‌ಗೆ ಬುಧವಾರ ಭೇಟಿ ನೀಡಿದ ವಿಧಾನ ಮಂಡಲದ ಕಾಗದ ಪತ್ರಗಳ ಸಮಿತಿ ಸದಸ್ಯರು ರೇಸ್‌ಕೋರ್ಸ್‌ ಸಿಬ್ಬಂದಿ ವಿರುದ್ಧ ಕಿಡಿಕಾರಿದರು.ರೇಸ್‌ಕೋರ್ಸ್‌ ಅಕ್ಷರಶಃ ಕೊಳೆಗೇರಿಯಂತಾಗಿದೆ. ಇಷ್ಟೊಂದು ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಿದವರು ಯಾರು ಎಂದು ರೇಸ್‌ಕೋರ್ಸ್‌ ಅಧ್ಯಕ್ಷ ಹನುಮಾನ್ ಪ್ರಸಾದ್ ಅವರನ್ನು ಸಮಿತಿ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ರೇಸ್‌ಕೋರ್ಸ್‌ನ್ನು ಏಕೆ ಬಿಟ್ಟು ಕೊಡಬಾರದು ಎಂದು ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್ ಪ್ರಶ್ನಿಸಿದರು ಎನ್ನಲಾಗಿದೆ.ಕಳೆದೆರಡು ತಿಂಗಳ ಹಿಂದೆ ಹಕ್ಕಿ ಜ್ವರ ಕಾಣಿಸಿಕೊಂಡಾಗ ಇಡೀ ಮೃಗಾಲಯವನ್ನೇ ಮುಚ್ಚಲಾಗಿತ್ತು. ಪಕ್ಷಿಗಳಿಗೆ ಕಾಯಿಲೆ ಬಂದಿತು ಎಂದು ಪ್ರಾಣಿಗಳ ವೀಕ್ಷಣೆಯಿಂದಲೂ ಜನರನ್ನು ವಂಚಿತರನ್ನಾಗಿ ಮಾಡಲಾಯಿತು. ಇದನ್ನು ನಿವಾರಿಸಲು ರೇಸ್‌ಕೋರ್ಸ್‌ನಲ್ಲಿ ಪಕ್ಷಿಗಳಿಗಾಗಿ ಉದ್ಯಾನ ನಿರ್ಮಿಸಬಹುದು. ಒಂದು ವೇಳೆ ಪಕ್ಷಿಗಳಲ್ಲಿ ಹಕ್ಕಿಜ್ವರ ಕಾಣಿಸಿ ಕೊಂಡರೆ ಮೃಗಾಲಯ ತೆರೆದಿರುತ್ತದೆ. ನಗರದ ಅಭಿವೃದ್ಧಿ ದೃಷ್ಟಿಯಿಂದ ಈ ಪ್ರಸ್ತಾವ ಒಪ್ಪಬೇಕು ಎಂದು ವಿವರಿಸಿದರು.

ಇದಕ್ಕೆ ಹನುಮಾನ್ ಪ್ರಸಾದ್, ರೇಸ್‌ಕೋರ್ಸ್ ಪ್ರಕರಣ ನ್ಯಾಯಾಲಯ ದಲ್ಲಿದೆ ಎಂದು ಪ್ರತಿಕ್ರಿಯಿಸಿದರು.ಗುತ್ತಿಗೆ ಅವಧಿ ಮುಗಿದರೂ, ತೆರವು ಮಾಡುವಂತೆ ನೋಟಿಸ್ ನೀಡಿದರೂ ಮತ್ತೆ ಇಲ್ಲೇ ಮುಂದುವರಿಯುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಹೊಸದಾಗಿ ಕಟ್ಟಿರುವ 200 ಕುದುರೆ ಲಾಯಗಳಿಗೆ ಅನುಮತಿ ನೀಡಿದ್ದೀರಾ ಎಂದು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಅನುಮತಿ ಇಲ್ಲದೇ ಕಟ್ಟಡಗಳನ್ನು ಕಟ್ಟಲಾಗಿದೆ ಎಂದು ಪಾಲಿಕೆ ಅಧಿಕಾರಿಗಳ ಉತ್ತರಕ್ಕೆ ಕೆಂಡಾಮಂಡಲ ರಾದ ಸದಸ್ಯರು,  ಮುಂದಿನ ಬಾರಿ ಬರುವಷ್ಟರಲ್ಲಿ ಅನಧಿಕೃತ ಕಟ್ಟಡಗಳನ್ನು ಕೆಡವಿರಬೇಕು, ಇಲ್ಲದಿದ್ದರೆ ಜೆಸಿಬಿ ಮೂಲಕ ತಾವೇ ನೆಲಸಮ ಮಾಡುವುದಾಗಿ ಎಚ್ಚರಿಕೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಮನ್ವಯ ಕೊರತೆಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕಿ ಕೆ.ಕಮಲಾ ಮಧ್ಯೆ ಸಮನ್ವಯ ಕೊರತೆ ಇರುವುದನ್ನು ಪತ್ತೆ ಹಚ್ಚಿದ ಸಮಿತಿ ಅಧ್ಯಕ್ಷ ಸಾ.ರಾ.ಮಹೇಶ್, ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸ ಬೇಕು ಎಂದು ಕಿವಿಮಾತು ಹೇಳಿದರು.

ಮೃಗಾಲಯಕ್ಕೆ ಭೇಟಿ ನೀಡಿದ ಸಮಿತಿ ಸದಸ್ಯರು ಕಾಗದಪತ್ರಗಳನ್ನು ಪರಿಶೀಲಿಸಿದರು. ಕರಾರುವಾಕ್ಕಾಗಿ ಕಾಗದ ಪತ್ರಗಳನ್ನು ನಿರ್ವಹಿಸಿದ್ದೀರಿ. ಆದರೆ, ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಎಲ್ಲರೂ ಮಾಡುತ್ತಿರುವುದು ಜನರಿಗಾಗಿ. ಇದರಲ್ಲಿ ಒಣಪ್ರತಿಷ್ಠೆಗಳನ್ನು ಬದಿಗೊತ್ತಬೇಕು ಎಂದು ಹೇಳಿದರು ಎನ್ನಲಾಗಿದೆ.ಸಮಿತಿ ಸದಸ್ಯರಾದ ಎನ್.ವೈ. ಗೋಪಾಲಕೃಷ್ಣ, ಡಿ.ಜಿ.ಶಾಂತನಗೌಡ, ಎಸ್.ಮುನಿರಾಜು, ಎಂ.ಕೃಷ್ಣಾ ರೆಡ್ಡಿ, ಬಿ.ನಾಗೇಂದ್ರ, ಜೆ.ರಘು ಆಚಾರ್, ವಿವೇಕ್ ರಾವ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT