ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲುಷಿತ ವಾತಾವರಣ: ಜನರಲ್ಲಿ ಜ್ವರದ ಭೀತಿ

ಕುಟುಕನಕೇರಿ ಗ್ರಾಮದಲ್ಲಿ ರಸ್ತೆಯೆಲ್ಲ ಚರಂಡಿಗಳು: ದುರ್ಗಂಧದಲ್ಲಿಯೇ ಜೀವನ, ಪರದಾಟ
Last Updated 13 ಏಪ್ರಿಲ್ 2017, 7:25 IST
ಅಕ್ಷರ ಗಾತ್ರ

ಕುಟುಕನಕೇರಿ (ಬಾದಾಮಿ): ಗ್ರಾಮದ ಪ್ರತಿಯೊಂದು ಬೀದಿಯಲ್ಲಿ ಚರಂಡಿಗಳೆಲ್ಲ ಭರ್ತಿಯಾಗಿ ರಸ್ತೆಯಲ್ಲಿ ತುಂಬಿ ಹರಿಯುತ್ತಿವೆ. ರಸ್ತೆಯೆಲ್ಲ ಚರಂಡಿಮಯವಾಗಿವೆ. ಗ್ರಾಮದ ಇಡೀ ವಾತಾವರಣ ಕಲುಷಿತವಾಗಿ ದುರ್ಗಂಧಮಯವಾಗಿದೆ. ಜನರು ಜ್ವರದ ಭೀತಿಯಲ್ಲಿದ್ದಾರೆ.

ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗ ವಾಸಿಸುವ 2ನೇ ವಾರ್ಡಿನಲ್ಲಿ ಅಕ್ಷರಶಃ ನರಕ ಸದೃಶ್ಯ ವಾತಾವರಣವನ್ನು ಕಾಣಬಹುದು.  ಚರಂಡಿ ರಸ್ತೆಯಲ್ಲಿಯೇ ನಿವಾಸಿಗಳು ಸಂಚರಿಸಬೇಕು. ಸೊಳ್ಳೆಗಳ ಕಾಟ ಮತ್ತು ಇದೇ ದುರ್ಗಂಧದಲ್ಲಿಯೇ ಅನೇಕ ತಿಂಗಳಿಂದ ಇವರ ಬದುಕು ನಡೆದಿದೆ.

ಪರಿಶಿಷ್ಟ ಜಾತಿ ಜನಾಂಗದವರು ವಾಸಿಸುವ ವಾರ್ಡಿನಲ್ಲಿ ಚರಂಡಿಯಲ್ಲಿಯೇ ಇದ್ದ ನಳದ ಮೂಲಕ ಕುಡಿಯುವ ನೀರನ್ನು ತುಂಬುತ್ತಿರುವುದು ಬುಧವಾರ ಕಂಡು ಬಂದಿತು. ಮೂಗು, ಬಾಯಿ ಮುಚ್ಚಿಕೊಂಡು ಇಲ್ಲಿ ಸಾಗಬೇಕು.

‘ಚರಂಡಿ ಬಳಿಲಾರದಕ್ಕ ನೀರು ತುಂಬಿ ರಸ್ತಾದಾಗ ಹರಿಯಾಕಹತ್ತೈತಿ. ಚರಂಡಿ ನೀರು ಹೋಗಾಕ ದಾರಿ ಇಲ್ರಿ. ನಾವು ಕೇರ್‍್ಯಾನ ಮಂದಿ ಕೊಳಚ್ಯಾಗ ಅಡ್ಡ್ಯಾಡಬೇಕು ಎಲ್ಲಾ ಗಟಾರ ತುಂಬಿ ಬಿಟ್ಟೈತಿ. ಸೊಳ್ಳೆಗಳು ಹೆಚ್ಚಾಗ್ಯಾವ. ಚರಂಡಿಯಲ್ಲಿಯ ನಳದ ನೀರನ್ನ ನಾವು ಕುಡಿಯಬೇಕು’ ಎಂದು ಇಲ್ಲಿನ ನಿವಾಸಿ ದಾನೇಶ ಮಾದರ ನೋವಿನಿಂದ ಹೇಳಿದರು.

ಎರಡು ವರ್ಷದಿಂದ ನಾವು ಚರಂಡಿಯಲ್ಲಿದ್ದ ನಳದ ನೀರನ್ನೇ ತುಂಬುತ್ತೇವೆ. ಕುಡಿಯಾಕ ಒಂದು ಕೊಡ ನೀರು ಬೇರೆ ವಾರ್ಡಿನಲ್ಲಿ ತೆಗೆದುಕೊಂಡು ಬರುತ್ತೇವೆ. ಚರಂಡಿ ತುಂಬಿ ರಸ್ತೆಯಲ್ಲಿ ಹರಿಯುವುದರಿಂದ ಸೊಳ್ಳೆಗಳು ಹೆಚ್ಚಾಗಿ ಎಲ್ಲರಿಗೂ ಜ್ವರ ಬಂದಿದೆ.

ಎರಡು ವರ್ಷಗಳಿಂದ ನಮಗೆ ಸರಿಯಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಅನೇಕ ಬಾರಿ ಗ್ರಾಮ ಪಂಚಾಯ್ತಿಗೆ ತಿಳಿಸಿದರೂ ಯಾರೂ ಕ್ರಮವನ್ನು ಕೈಗೊಂಡಿಲ್ಲ  ಎಂದು ಮಾಗುಂಡಪ್ಪ ಮಾದರ, ಮರಿಯಪ್ಪ ಮಾದರ ಮತ್ತು ದ್ಯಾಮಣ್ಣ ಮಾದರ ಮತ್ತು ನಿಂಗಮ್ಮ ಮಾದರ ಹೇಳಿದರು.

ಗ್ರಾಮದ ಇದೇ ವಾರ್ಡಿನ ನಿವಾಸಿ ಮರಿಯಪ್ಪ ಮಾದರ ಎಂಬುವರು ಕೆಂದೂರ ಗ್ರಾಮ ಪಂಚಾಯ್ತಿಯಲ್ಲಿ  ದಿನಗೂಲಿ ಆಧಾರದ ಮೇಲೆ ಚರಂಡಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ, ಗ್ರಾಮ ಪಂಚಾಯ್ತಿ ಈ ನೌಕರನಿಗೆ 7 ತಿಂಗಳ ಸಂಬಳ ಕೊಟ್ಟಿಲ್ಲವೆಂದು ಗ್ರಾಮಸ್ಥರು ಹೇಳಿದರು.

ಕೆಂದೂರ ಗ್ರಾಮಪಂಚಾಯ್ತಿ ಕಾರ್ಯದರ್ಶಿ  ಸಂಬಳ ಕೊಟ್ಟಿಲ್ಲವಾದ್ದರಿಂದ ಚರಂಡಿಯನ್ನು ಸ್ವಚ್ಛಮಾಡಿಲ್ಲ ಎಂದು ದಿನಗೂಲಿ ನೌಕರ ಮರಿಯಪ್ಪ ಪತ್ರಿಕೆಗೆ ಹೇಳಿದರು.

ಗ್ರಾಮದ ಚರಂಡಿಯನ್ನು ಸರಿಯಾಗಿ ಸ್ವಚ್ಛ ಮಾಡಬೇಕು ಮತ್ತು ಪರಿಶಿಷ್ಟ ಜನಾಂಗದ ವಾರ್ಡಿನಲ್ಲಿ ಚರಂಡಿ  ನೀರು ಸರಿಯಾಗಿ ಹೋಗುವಂತೆ ಶಾಶ್ವತ ಕಾಮಗಾರಿ ಕೈಗೊಳ್ಳಬೇಕು ಎಂದು ಗ್ರಾಮದ ಹಿರಿಯರಾದ ಭೀಮಪ್ಪ ಕೋರಿ, ಹೂವಪ್ಪ ಕಾವಳ್ಳಿ, ಶಿವಬಸಪ್ಪ ಕಳ್ಳಿಗುಡ್ಡ, ಹನುಮಂತ ಮಂದಾಲಿ, ಅಯ್ಯಪ್ಪ ಹುಲ್ಲೂರ ಒತ್ತಾಯಿಸಿದರು.

ನಂದಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ ಗ್ರಾಮದಲ್ಲಿ ಏ. 8ರಿಂದ ಗ್ರಾಮದಲ್ಲಿ ಆರೋಗ್ಯ ತಪಾಸಣೆ ಕೈಗೊಂಡಿದೆ. 2 ವರ್ಷದ ಮಕ್ಕಳಿಂದ  85ರ ವೃದ್ಧರ ವರೆಗೆ 20 ಜನರು ವಾರದಿಂದ ಜ್ವರದಿಂದ ಬಳಲುತ್ತಿರುವ ಬಗ್ಗೆ ವರದಿ ನೀಡಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಿದೆ. ಜ್ವರದಿಂದ ಬಳಲುತ್ತಿರುವ ಕೆಲವು ರೋಗಿಗಳು ನಂದಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿ ಹೇಳಿದರು.

ನಂದಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಆರೋಗ್ಯ ತಪಾಸಣೆಗೆ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಾರೆ. ನಂದಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಎಲ್ಲ ರೋಗಿಗಳು ಮತ್ತು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವರಾಜ ಹಂಗರಗಿ ಗುಣಮುಖ ರಾಗುತ್ತಿದ್ದಾರೆ ಎಂದು ಆರೋಗ್ಯ ಕೇಂದ್ರದ ವೈದ್ಯ ಡಾ. ಆರ್‌ಸಿ. ಭಂಡಾರಿ ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಅನಂತಶಯನ ದೇಸಾಯಿ, ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿ ಡಾ. ಕವಿತಾ ಶಿವನಾಯ್ಕರ್‌, ಡಾ. ಆರ್‌.ಸಿ.ಭಂಡಾರಿ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯದ ಕುರಿತು ಜನರಿಗೆ ತಿಳಿವಳಿಕೆ ಹೇಳಿದರು. ಗ್ರಾಮದಲ್ಲಿ ಕೊಳಚೆ ನೀರಿನ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಶೀಘ್ರ ಕ್ರಮವನ್ನು ಕೈಗೊಳ್ಳಬೇಕು ಎಂದು ಡಿಎಚ್‌ಓ ತಿಳಿಸಿದ್ದಾರೆ.

*
ಕುಟಕನಕೇರಿ ಗ್ರಾಮದ ಚರಂಡಿ ಮತ್ತು ಕುಡಿಯುವ ನೀರಿನ ನಳದ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಗ್ರಾಮದ ಚರಂಡಿಯನ್ನು ಶೀಘ್ರವಾಗಿ ಸ್ವಚ್ಛಮಾಡಿಸಲಾಗುವುದು.
-ಸಿ.ಬಿ. ಮ್ಯಾಗೇರಿ,
ಇ.ಓ, ತಾಲ್ಲೂಕು ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT