ಆನೇಕಲ್– ಉತ್ಸವಕ್ಕೆ ಸಾಕ್ಷಿಯಾದ ಸಹಸ್ರಾರು ಜನತೆ

ವೈಭವದ ಕರಗ ಮಹೋತ್ಸವ

ಐತಿಹಾಸಿಕ ಹಾಗೂ ಪಾರಂಪರಿಕ ಉತ್ಸವವೆಂದೇ ಖ್ಯಾತಿ ಪಡೆದಿರುವ  ಆನೇಕಲ್ ಕರಗ ಮಹೋತ್ಸವವನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ, ಮನೆಗಳ ಮಹಡಿಗಳ ಮೇಲೆ ಜನಜಾತ್ರೆಯೇ ಜಮಾವಣೆಯಾಗಿತ್ತು. ಹಲವಾರು ವೃತ್ತಗಳಲ್ಲಿ ಮೂರು ತಾಸುಗಳಿಗೂ ಹೆಚ್ಚು ಕಾಲ ಜನರು ಕಾದಿದ್ದು ಕರಗ ಉತ್ಸವ ವೃತ್ತಕ್ಕೆ ಬಂದು ನೃತ್ಯ ಮಾಡುತ್ತಿದ್ದಂತೆ ಆ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಆನೇಕಲ್‌ ಧರ್ಮರಾಯಸ್ವಾಮಿ ದ್ರೌಪದಿ ದೇವಿ ಹಸಿ ಕರಗ ಮಹೋತ್ಸವದಲ್ಲಿ ಕಂಡುಬಂದ ಆಕರ್ಷಕ ಪಲ್ಲಕ್ಕಿಯ ನೋಟ

ಆನೇಕಲ್‌: ಪಟ್ಟಣದ ಧರ್ಮರಾಯಸ್ವಾಮಿ ದ್ರೌಪದಿ ದೇವಿ ಹಸಿ ಕರಗ ಮಹೋತ್ಸವ ಸಂಭ್ರಮ ಸಡಗರಗಳಿಂದ ನಡೆಯಿತು. ವೈಭವದ ಕರಗ ಮಹೋತ್ಸವಕ್ಕೆ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.

ಐತಿಹಾಸಿಕ ಹಾಗೂ ಪಾರಂಪರಿಕ ಉತ್ಸವವೆಂದೇ ಖ್ಯಾತಿ ಪಡೆದಿರುವ  ಆನೇಕಲ್ ಕರಗ ಮಹೋತ್ಸವವನ್ನು ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ, ಮನೆಗಳ ಮಹಡಿಗಳ ಮೇಲೆ ಜನಜಾತ್ರೆಯೇ ಜಮಾವಣೆಯಾಗಿತ್ತು. ಹಲವಾರು ವೃತ್ತಗಳಲ್ಲಿ ಮೂರು ತಾಸುಗಳಿಗೂ ಹೆಚ್ಚು ಕಾಲ ಜನರು ಕಾದಿದ್ದು ಕರಗ ಉತ್ಸವ ವೃತ್ತಕ್ಕೆ ಬಂದು ನೃತ್ಯ ಮಾಡುತ್ತಿದ್ದಂತೆ ಆ ದೃಶ್ಯವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಪಟ್ಟಣದ ಸಂತೆ ಬೀದಿಯಲ್ಲಿನ ಧರ್ಮರಾಯಸ್ವಾಮಿ ದೇವಾಲಯದಿಂದ ಬುಧವಾರ ಬೆಳಗಿನ ಜಾವ 3.15ರ ವೇಳೆಗೆ ಕರಗ  ಹೊತ್ತ ಚಂದ್ರಪ್ಪ ಅವರು ಮಂಡಿಗಾಲಿನಲ್ಲಿ ದೇವಾಲಯದ ಗರ್ಭಗುಡಿಯಿಂದ ಹೊರಬಂದರು.   ಸೇರಿದ್ದ ಭಕ್ತ ಸಮೂಹ ಜಯಘೋಷ ಮಾಡಿತು. ಗೋವಿಂದ ಗೋವಿಂದ ಎಂಬ ಘೋಷಣೆ ಮುಗಿಲು ಮುಟ್ಟಿತು.

ಕರಗವನ್ನು ಬರಮಾಡಿಕೊಂಡ ವೀರಕುಮಾರರು ಕತ್ತಿಗಳಿಂದ ಎದೆಗೆ ಹೊಡೆದುಕೊಳ್ಳುವ ಮೂಲಕ ಅಲಗು ಸೇವೆ ಸಲ್ಲಿಸಿ ಢಿಕ್‌ ಡೀ, ಢಿಕ್ ಡೀ ಎಂದು ಕೂಗುತ್ತಿದ್ದಂತೆ ವಾದ್ಯದ ತಾಳಕ್ಕೆ ಹೆಜ್ಜೆ ಹಾಕುತ್ತಾ ಕರಗವು ಮುಂದೆ ಸಾಗಿತು.

ದೇವಾಲಯ ಪ್ರದಕ್ಷಿಣೆ ಮಾಡಿದ ನಂತರ ಕರಗ ಶಂಕರಮಠಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಮಾರಮ್ಮನ ಗುಡಿಯ ಬಳಿಗೆ ಬಂದು ಗುಡಿಯ ಮುಂದೆ ನರ್ತಿಸಿ ನಂತರ ವೀರವಸಂತರಾಯನ ಮೂರ್ತಿ ಸ್ಥಾಪಿಸಿದ್ದ ಸ್ಥಳಕ್ಕೆ ತೆರಳಿತು.

ಕರಗವು ಅಲ್ಲಿಂದ ಪಟ್ಟಣದ 30ಕ್ಕೂ ಹೆಚ್ಚು ಪಲ್ಲಕ್ಕಿಗಳು ಜಮಾವಣೆಗೊಂಡಿದ್ದ ತಿಲಕ್ ವೃತ್ತಕ್ಕೆ ಬಂತು. ತಿಲಕ್ ವೃತ್ತದಲ್ಲಿ ಸಹಸ್ರಾರು ಜನರು ಜಮಾವಣೆಗೊಂಡಿದ್ದರು. ಕರಗ ನೋಡಲು ನೂಕುನುಗ್ಗಲು ಉಂಟಾಯಿತು. ಕರಗ ಬರುವುದೆಂಬ ನಿರೀಕ್ಷೆಯಲ್ಲಿ ತಾಸುಗಟ್ಟಲೇ ಕಾದಿದ್ದ ಜನರು ಕರಗವು ಪ್ರತಿಯೊಂದು ಪಲ್ಲಕ್ಕಿಯ ಬಳಿಯು ವಾದ್ಯ ತಂಡದ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಿದ್ದಂತೆ ಆ ದೃಶ್ಯವನ್ನು ಭಕ್ತರು ಕಣ್ತುಂಬಿಕೊಂಡರು.

ತಿಲಕ್ ವೃತ್ತದಲ್ಲಿ ಪಟ್ಟಣದ ಖ್ಯಾತ ಡೋಲು ವಿದ್ವಾನ್ ಮುನಿರಾಜು ಅವರು ನುಡಿಸಿದ ಮೋಡಿ ರಾಗಕ್ಕೆ ಕರಗವು ಮೋಹಕವಾಗಿ ನರ್ತನ ಮಾಡಿತು. ಮುಂದೆ ತೆರಳುತ್ತಿದ್ದ ಕರಗವು ವಾದ್ಯ ತಂಡದ ಮೋಡಿ ರಾಗದ ಸದ್ದು ಕೇಳುತ್ತಿದ್ದಂತೆ ಮತ್ತೆ ಹಿಂತಿರುಗಿ ಬಂದು ನರ್ತಿಸಲು ಪ್ರಾರಂಭಿಸಿತು. ಇದರಿಂದಾಗಿ ತಿಲಕ್ ವೃತ್ತದಲ್ಲಿ ಹೆಚ್ಚು ಕಾಲ ಕರಗದ ಉತ್ಸವ ನೋಡುವ ಅವಕಾಶ ಜನರಿಗೆ ದೊರೆಯಿತು.

ತಿಲಕ್ ಸರ್ಕಲ್‌ನಿಂದ ದೊಡ್ಡಕೆರೆ ಬಾಗಿಲು ಆಂಜನೇಯಸ್ವಾಮಿ ದೇವಾಲಯ, ವೇಣುಗೋಪಾಲಸ್ವಾಮಿ ದೇವಾಲಯ, ದೊಡ್ಡ ಬೀದಿ, ಚರ್ಚ್‌ ರಸ್ತೆ, ಪಸುವಲಪೇಟೆ, ಹುಳ್ಳಿತಿಗಳರ ಬೀದಿ, ಹೂವಾಡಿಗರ ಬೀದಿಗಳ ಮೂಲಕ ಹಾದು ಜಯಲಕ್ಷ್ಮೀ ಟಾಕೀಸ್ ವೃತ್ತ, ಯಲ್ಲಮ್ಮ ದೇವಾಲಯ, ದೇವರಕೊಂಡಪ್ಪ ವೃತ್ತದ ಬಳಿ ಬಂದಿತು. ದೇವರಕೊಂಡಪ್ಪ ವೃತ್ತದಲ್ಲಿ ಸಹ ಜನರು ಬೃಹತ್ ಸಂಖ್ಯೆಯಲ್ಲಿ ಜಮಾವಣೆ ಗೊಂಡಿದ್ದರು.

ಕೆಇಬಿ ಕಚೇರಿಯ ಬಳಿ ನರ್ತಿಸಿದ ಕರಗ ಆನೇಕಲ್‌ನ ಕೋದಂಡರಾಮ ದೇವಾಲಯವಿರುವ ಗಾಂಧಿ ವೃತ್ತದಲ್ಲಿ ಕೆಲಕಾಲ ನರ್ತಿಸಿತು. ಇಲ್ಲಿಯೂ ಹಲವಾರು ಪಲ್ಲಕ್ಕಿಗಳು ಇದ್ದುದರಿಂದ ಪ್ರತಿ ಪಲ್ಲಕ್ಕಿಯ ಬಳಿಯೂ  ಕರಗ ಕುಣಿಯಿತು. ಬೆಳಗ್ಗೆ 6.20ರ ವೇಳೆಗೆ ಮರಳಿ ಧರ್ಮರಾಯಸ್ವಾಮಿ ದೇವಾಲಯಕ್ಕೆ ತೆರಳಿತು.

ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ತಹಶೀಲ್ದಾರ್ ಆಶಾ ಪರ್ವೀನ್, ಪುರಸಭಾ ಅಧ್ಯಕ್ಷ ಲಕ್ಷ್ಮೀಕಾಂತರಾಜು, ಉಪಾಧ್ಯಕ್ಷೆ ಚಂದ್ರಿಕಾಹನುಮಂತರಾವ್, ಮಾಜಿ ಅಧ್ಯಕ್ಷ ಎನ್.ಎಸ್. ಅಶ್ವಥ್‌ನಾರಾಯಣ, ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ್, ಸದಸ್ಯರಾದ ಮುನಾವರ್, ಜಿ.ಗೋಪಾಲ್, ಶಂಕರ್‌ಕುಮಾರ್, ಎಂ. ನಾರಾಯಣ ಸ್ವಾಮಿ, ಮುಖಂಡರಾದ ರವಿಚೇತನ್, ಸಿಡಿಹೊಸಕೋಟೆ ಮುನಿರಾಜು, ಮುನಿ ವೀರಪ್ಪ, ರಾಮಯ್ಯ, ಸೋಮನಾಥ್, ಡಿವೈಎಸ್ಪಿ ಎಸ್‌.ಕೆ.ಉಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಮಾಲತೇಶ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಕೋಟೆ ಜಗಳ
ಕರಗ ಮಹೋತ್ಸವದ ಅಂಗವಾಗಿ ಗುರುವಾರ(ಏ.13) ವೀರ ಅಭಿಮನ್ಯು ಪದ್ಮವ್ಯೂಹ ಭೇದಿಸುವುದು (ಕೋಟೆ ಜಗಳ) ಕಾರ್ಯಕ್ರಮ ದೇವಾಲಯದ ಮುಂಭಾಗದ ಸಂತೆ ಮೈದಾನದಲ್ಲಿ ನಡೆಯಲಿದೆ.

ಕೃಷ್ಣ, ಧರ್ಮರಾಯಸ್ವಾಮಿ, ದ್ರೌಪತಿ ದೇವಿ, ಪಾಂಡವರು ಉತ್ಸವ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರಲಾಗುವುದು. ಕೋಟೆ ಜಗಳದ ವಿಶೇಷವೆಂದರೆ ಕಾಳೀ ವೇಷಧಾರಿಯಿಂದ ಭಕ್ತರು ಕಾಸು ಕೊಟ್ಟು ಪೊರಕೆ ಮತ್ತು ಮೊರದಿಂದ ಹೊಡೆಸಿಕೊಳ್ಳುವುದು ಇದಕ್ಕಾಗಿ ಜನರು ಮುಗಿಬೀಳುತ್ತಾರೆ.

Comments
ಈ ವಿಭಾಗದಿಂದ ಇನ್ನಷ್ಟು
ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

ದೊಡ್ಡಬಳ್ಳಾಪುರ
ಮುತ್ಯಾಲಮ್ಮ ಜಾತ್ರೆಯಲ್ಲಿ ಭಾಗವಹಿಸದಿರಲು ನಿರ್ಧಾರ

27 Mar, 2018
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

ಆನೇಕಲ್‌
ಅನಾವರಣಗೊಂಡ ಸಾಂಸ್ಕೃತಿಕ ವೈವಿಧ್ಯ

27 Mar, 2018
ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

ವಿಜಯಪುರ
ಅಭಿವೃದ್ಧಿಯಲ್ಲಿ ಹಿಂದುಳಿದ ವಿಜಯಪುರ

27 Mar, 2018

ವಿಜಯಪುರ
ಕುಡಿಯುವ ನೀರಿನ ಘಟಕ ಸ್ಥಾಪಿಸಲು ಮನವಿ

ಪ್ರತಿ ವಾರ್ಡಿಗೊಂದರಂತೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು...

24 Mar, 2018
₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

ದೊಡ್ಡಬಳ್ಳಾಪುರ
₹4.98 ಕೋಟಿ ವೆಚ್ಚದಲ್ಲಿ ನಗರಸಭೆ ಕಚೇರಿ

24 Mar, 2018