ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಪರ ಅಲೆಗೆ ಒಗ್ಗಟ್ಟಿನ ಗೆಲುವು, ನಾಡಿ ಮಿಡಿತದ ಅರಿವು; ಅಭಿವೃದ್ಧಿಗೆ ನೀಡಿದ ‘ಮತ ಕೂಲಿ’: ಸಿದ್ದರಾಮಯ್ಯ ಬಣ್ಣನೆ

Last Updated 13 ಏಪ್ರಿಲ್ 2017, 11:39 IST
ಅಕ್ಷರ ಗಾತ್ರ

ಬೆಂಗಳೂರು: ‘ಪಕ್ಷಕ್ಕೆ ಗೆಲುವು ತಂದುಕೊಟ್ಟ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಮತದಾರರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಜನ ಸರ್ಕಾರ ನೀಡಿದ ಅಭಿವೃದ್ಧಿಪರ ಕಾರ್ಯಗಳಿಗೆ ಮನ್ನಣೆ ನೀಡಿದ್ದಾರೆ’ ಎಂದರು. ಇದೇ ವೇಳೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷವನ್ನು ಮುನ್ನಡೆಸುತ್ತೇನೆ ಎಂದು ಹೇಳುವುದನ್ನು ಅವರು ಮರೆಯಲಿಲ್ಲ.

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಪಡೆದ ಬಳಿಕ ಗುರುವಾರ ಗೃಹ ಕಚೇರಿ ‘ಕೃಷ್ಣ’ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಮಾತನಾಡಿದರು. ಇದಕ್ಕೂ ಮುನ್ನ ಗೆಲುವಿನ ಸಿಹಿ ತಿಂದೇ ಅವರು ಮಾತು ಆರಂಭಿಸಿದರು. ಚುನಾವಣೆಯ ಗೆಲುವಿನ ಕುರಿತು ಸಿದ್ದರಾಮಯ್ಯ ಅವರು ಹೇಳಿದ ಪೂರ್ಣ ಮಾತುಗಳು ಇಲ್ಲಿವೆ.

‘ಉಪ ಚುನಾವಣೆಗಳು ಮುಂದಿನ ಚುನಾವಣೆಗೆ ಮಾರ್ಗದರ್ಶನ ಅಲ್ಲ. ಹಿಂದೆಯೂ ಇದನ್ನೇ ಹೇಳಿದ್ದೇನೆ. ಈಗಲೂ ನನ್ನದು ಅದೇ ಅಭಿಪ್ರಾಯ.

‘ಆದರೆ, ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವರು ಇದು ಮುಂದಿನ ಚುನಾವಣೆಗೆ ಮಾರ್ಗಸೂಚಿ ಎಂದು ಹೇಳುತ್ತಿದ್ದರು. ಮುಂದಿನ ಮುಖ್ಯಮಂತ್ರಿ ಆಗಲು ಮತ ಕೊಡಿ ಎಂದು ಸಂಸತ್‌ಗೂ ಹೋಗದೆ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಸೇರಿದಂತೆ ಮುಖಂಡರು ಅಲ್ಲೇ ಇದ್ದು, ಪ್ರಚಾರ ಮಾಡಿದರು. ಅವರು ಬಿಜೆಪಿ ಸರ್ಕಾರದ ಸಾಧನೆ ಪ್ರಸ್ತಾಪಿಸಲಿಲ್ಲ. ವೈಯಕ್ತಿಕ ಟೀಕೆ ಮಾಡಿದರು. ಅಸಂವಿಧಾನಿಕ ಮಾತು ಆಡಿದರು. ಒಣ ಜಂಬದ ಮಾತನಾಡಿದರು.

‘ನಾವು ಪಕ್ಷದ ಸಿದ್ಧಾಂತ ಹಾಗೂ ನಮ್ಮ ಕಾರ್ಯಕ್ರಮ, ಸರ್ಕಾರ ನಾಲ್ಕು ವರ್ಷ ಕೈಗೊಂಡ ಅಭಿವೃದ್ಧಿ ಕಾರ್ಯ ಪ್ರಚಾರ ಮಾಡಿದೆವು. ಐದು ಬಜೆಟ್‌ ಮೂಲಕ ಭರವಸೆಗಳನ್ನು ಈಡೇರಿಸಿರುವುದನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದೆ ಪ್ರಸ್ತಾಪಿಸಿದೆವು.

ನಾಡಿ ಮಿಡಿತ
‘ಈ ಚುನಾವಣೆ ಮಾರ್ಗಸೂಚಿ ಅಲ್ಲ. ಜನರ ಮನಸ್ಸನ್ನು ತಿಳಿಯುಲು ಒಂದು ಉತ್ತಮ ಅವಕಾಶ. ಜನರ ಮನಸ್ಸು ಮತ್ತು ಭಾವನೆ ಒಳಗೊಂಡ ಅವರ ನಾಡಿ ಮಿಡಿತ ತಿಳಿಯಲು ಸಹಾಯವಾಯಿತು.

ನಮಗೆ ಕೂಲಿ ಕೊಡಿ
‘ಎಲ್ಲಾ ಕೆಲಸ ಮಾಡಿದ್ದೇವೆ. ಮತ ನೀಡಿ ನಮಗೆ ಕೂಲಿ ಕೊಡಿ ಎಂದು ಕೇಳಿದ್ದೆ. ಜನ ನಮಗೆ ಆಶೀರ್ವದಿಸಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ.

‘ಬಿಎಸ್‌ವೈ ಸಿಎಂ ಆಗಿದ್ದಾಗ ‘ಸಿದ್ದರಾಮಯ್ಯ ಒಬ್ಬ ಅಯೋಗ್ಯ ಮುಖ್ಯಮಂತ್ರಿ’ ಎಂದು ಏಕ ವಚನದಲ್ಲೂ ಮಾತನಾಡಿದ್ದಾರೆ. ನಾನು ಪ್ರತಿಯಾಗಿ ಕೆಟ್ಟ ಪದ ಬಳಸಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ.

‘ಶ್ರೀನಿವಾಸ್ ಪ್ರಸಾದ್ ಅತ್ಯಂತ ಕೆಳಮಟ್ಟದ ಮಾತುಗಳನ್ನೂ ಅಡಿದ್ದರು. ‘ನನಗೂ ಸಿದ್ದರಾಮಯ್ಯ ಅವರಿಗೂ ನೇರವಾಗಿ ನಡೆಯುತ್ತಿರುವ ಚುನಾವಣೆ’ ಎಂದಿದ್ದರು.

ತಕ್ಕ ಉತ್ತರ
‘ಎರಡೂ ಕ್ಷೇತ್ರಗಳ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಇದು ವೈಯಕ್ತಿಯ ಚುನಾವಣೆ ಅಲ್ಲ. ಯಾರನ್ನೂ ಟೀಕೆ ಮಾಡಿಲ್ಲ. ಶ್ರೀನಿವಾಸ್‌ ಪ್ರಸಾದ್‌ ವೈಯಕ್ತಿಕ ಟೀಕೆ ಮಾಡಿದ್ದರು. ಅವರ ಹೆಸರನ್ನು ನಾನು ಎಲ್ಲೂ ಪ್ರಸ್ತಪಿಸಿಲ್ಲ. ಜನ ಪ್ರಬುದ್ಧರಾಗಿದ್ದಾರೆ.

‘ಜನ ಜಾತಿ, ಧರ್ಮ ಮೀರಿ ಮತ ನೀಡಿದ್ದಾರೆ. ಬಿಎಸ್‌ವೈ ಜಾತಿ ಧರ್ಮ ಬಿತ್ತಲು ಯತ್ನಿಸಿದರು. ನಮಗೆ ಎಲ್ಲಾ ಜಾತಿ ಧರ್ಮದವರೂ ಮತ ನೀಡಿದ್ದಾರೆ. ಜಾತಿಗೆ ಸೀಮಿತವಾಗಿದ್ದರೆ ಇಷ್ಟು ಹೆಚ್ಚಿನ ಮತ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಂಗ್ರೆಸ್‌ ಯಾವತ್ತೂ ಜಾತಿ ಧರ್ಮದ ಆಧಾರದ ಮೇಲ ಮತ ಕೇಳಲ್ಲ. ಸಿದ್ಧಾಂತ ಮತ್ತು ಕಾರ್ಯಕ್ರಮ, ಸಾಧನೆ ಮಂದಿಟ್ಟು ಮತ ಕೇಳುತ್ತೇವೆ.

ಆಡಳಿತ ಪರ ಅಲೆ
‘ಬಹಳ ಜನ ತಿಳಿದುಕೊಂಡಿದ್ದರು, ಸಿದ್ದರಾಮಯ್ಯ ಅವರ ವಿರುದ್ಧ ಆಡಳಿತ ವಿರೋಧಿ ಅಲೆ ಏಳುತ್ತದೆ ಎಂದು ಕೊಂಡಿದ್ದರು. ಆದರೆ, ಆಡಳಿತ ಪರ ಅಲೆ ಎದ್ದಿದೆ. ಇದಕ್ಕೆ ಕಾರಣ ಸರ್ಕಾರ ಮಾಡಿರುವ ಜನಪರ ಆಡಳಿತ ಎಂದರು.

‘ಜನರ ಮನಸ್ಸನ್ನು ಅರ್ಥಮಾಡಿಕೊಂಡಿದ್ದೇವೆ. ಅವರ ನಾಡಿ ಮಿಡಿತ ಅರ್ಥವಾಗಿದೆ. ಕಾರ್ಯಕರ್ತರಿಗೆ ಉತ್ಸಾಹ ಬಂದಿದೆ. ಮುಂದಿನ 2018ರ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯನ್ನು ಇಮ್ಮಡಿ ಗೊಳಿಸಿದೆ.

ಭ್ರಮನಿರಸನ
‘ಕರ್ನಾಟಕ ಜಾತ್ಯಾತೀತ ರಾಜ್ಯ. ಕಾಂಗ್ರೆಸ್‌ ಮುಕ್ತ ಕರ್ನಾಟಕ ಎಂಬ ಭ್ರಮೆಯಲ್ಲಿದ್ದವರಿಗೆ ಭ್ರಮನಿರಸನವಾಗಿದೆ. ‘ಈ ನಿಮ್ಮ ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕೆನ್ನುವುದಾದದರೆ ಮತ ನೀಡಿ‘ ಎಂದು ಭಾಷಣ ಮಾಡಿದ್ದರು. ಮತದಾರರು ಬುದ್ಧಿವಂತರಿದ್ದಾರೆ. ಸರಿಯಾದ ಆಯ್ಕೆ ಮಾಡಿದ್ದಾರೆ.

‘ಅಧಿಕಾರ ದುರುಪಯೋಗ, ಹಣ ಹಂಚಿದರು ಎಂದು ಸೋತ ಮೇಲೆ ವಿರೋಧ ಪಕ್ಷದವರು ಹೇಳುತ್ತಾರೆ. ‘ಅಪರೇಷನ್‌ ಕಮಲ’ ಮಾಡಿದರು ಈ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ ಬರಲು ಬಿಜೆಪಿ ಕಾರಣ.

‘ಹಣದಿಂದ ಗೆಲ್ಲುವುದಾಗಿದ್ದರೆ ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಅವರೇ ಇರುತ್ತಿದ್ದರು. ನಾವಾರೂ ರಾಜಕೀಯದಲ್ಲಿ ಇರಲಾಗುತ್ತಿರಲಿಲ್ಲ. ಪಕ್ಷದ ಗೆಲುವಿಗೆ ಎಲ್ಲರೂ ಮನಸ್ಸು ಮಾಡದೇ ಹೋಗಿದ್ದರೆ ಏನೂ ಮಾಡಲು ಆಗುತ್ತಿರಲಿಲ್ಲ. ಒಗ್ಗಟ್ಟಿನಿಂದ ಗೆಲುವು ಸಿಕ್ಕಿದೆ ಎಂದರು.

‘ನಂಜನಗೂಡು, ಗುಂಡ್ಲುಪೇಟೆ ದತ್ತು ಪಡೆಯುತ್ತೇವೆ ಎಂದೆಲ್ಲಾ ಹೇಳಿದ್ದರು ಎಂಟು ಕುಟುಕಿದರು.

‘ಸಂಸದ ಪ್ರತಾಪ ಸಿಂಹ ಅವರಿಗೆ ಹೆಣ್ಣುಮಗಳ ಬಗ್ಗೆ ಹೇಗೆ ಮತನಾಡಬೇಕು ಎಂಬುದು ಗೊತ್ತಿಲ್ಲ. ಯಡಿಯೂರಪ್ಪ ಅವರಿಗೆ ಸಂಯಮ ಇಲ್ಲ. ಇಬ್ಬರಿಗೂ ನಾಲಿಗೆ ಮೇಲೆ ಹಿಡಿತ ಇಲ್ಲ.

‘ಎರಡೂ ಕ್ಷೇತ್ರಗಳ ಜನರಿಗೆ ಕೋಟಿ ಕೋಟಿ ನಮನ, ಜನರೇ ಟೀಕೆ ಆರೋಪಗಳಿಗೆ ತಕ್ಕ ಉತ್ತರ ನೀಡಿದ್ದಾರೆ.

‘ಇಡೀ ಮಂತ್ರಿಮಂಡಲ ಎರಡೂ ಕ್ಷೇತ್ರಗಳಲ್ಲಿ ಕೂತಿತ್ತು ಎಂಬ ಆರೋಪ ಇದೆ. ನಮ್ಮಲ್ಲಿ ಒಗ್ಗಟ್ಟಿದೆ. ಬಿಜೆಪಿಯಲ್ಲಿ ಒಗ್ಗಟ್ಟಿಲ್ಲ, ಅಕ್ಕೆ ಇದೇ ಫಲಿತಾಂಶ ಸಾಕ್ಷಿ.
ಸಚಿವ ಸಂಪುಟ ಪುನರ್‌ ರಚನೆ ವಿಚಾರ ಬಂದಾಗ ‘ಮಾಡುತ್ತೇವೆ’ ಎಂದಷ್ಟೇ ಹೇಳಿದರು. 

ಜೆಡಿಎಸ್‌ಗೆ ಕೃತಜ್ಞತೆ
‘ಜೆಡಿಎಸ್‌ನ ಜಿಲ್ಲಾ ಘಟಕಗಳ ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ, ಪಕ್ಷದ ಹಿರಿಯರಾದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರು ಹಾಗೂ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೂ ಧನ್ಯವಾದ ಹೇಳುತ್ತೇನೆ.

‘ಬೇರೆಕಡೆ ಇವಿಎಂ ದುರುಪಯೋಗ ಎಂಬ ಆರೋಪ ಇದೆ. ಈ ಚುನಾವಣೆಯಲ್ಲಿ ಅದು ಆಗಿಲ್ಲ. ಪಕ್ಷದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರಿಗೆ ಇವಿಎಂ ತೋರಿಸಿ ಎಂದು ಚುನಾವಣಾ ಆಯುಕ್ತರಿಗೆ ಹೇಳಿದ್ದೆ.

‘ನಾಳೆ ದೆಹಲಿಗೆ ತೆರಳುವೆ ಎಂದುಕೊಂಡಿದ್ದೇನೆ. ನಾಳೆ ರಾಷ್ಟ್ರಪತಿ ಅವರು ಬರುತ್ತಿದ್ದಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ದೆಹಲಿಗೆ ತೆರಳುವೆ. ಮೂರು ತಿಂಗಳ ಮೇಲಾಯಿತು ದೆಹಲಿಗೇ ಹೋಗಿಲ್ಲ.

ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ: ಸಿಎಂ

‘ಮತ್ತೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು 2013ರಲ್ಲಿ ಹೇಳಿದ್ದೆ. ಆದರೆ, ಈಗ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನ ಮಾಡಿದ್ದೇನೆ. ಪಕ್ಷವನ್ನು ಮುನ್ನಡೆಸುತ್ತೇನೆ.

‘ಶ್ರೀನಿವಾಸ್‌ ಪ್ರಸಾದ್ ಬಗ್ಗೆ ಮಾತನಾಡುವುದಿಲ್ಲ. ಚುನಾವಣೆಯಲ್ಲೂ ಮತನಾಡಿಲ್ಲ. ಅದರ ಅಗತ್ಯವೂ ಇಲ್ಲ. ಅವರ ಮಟ್ಟಕ್ಕೆ ನಾವು ಇಳಿಯುವುದಿಲ್ಲ. ಜನರು ಪಾಠ ಕಲಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನ ಮತದಾನದ ಮೂಲಕ ಪಾಠ ಕಲಿಸಿದ್ದಾರೆ. ಇನ್ನೂ ಹೇಗೆ ಪಾಠ ಕಲಿಸುವುದು? ಎಲ್ಲಾ ಮಾತುಗಳಿಗೆ ಜನರೇ ಉತ್ತರ ನೀಡಿದ್ದಾರೆ.

‘ನಮ್ಮ ಅಭಿವೃದ್ಧಿ ಕಾರ್ಯವೇ ಮುಂದಿನ ಚುನಾವಣೆ ಮೂಲ ಮಂತ್ರ. ಬಿಜೆಪಿ ಜನರ ಭಾವನೆ ಕೆರಳಿಸಲು ಯತ್ನಿಸುತ್ತಾರೆ. ಅವೆಲ್ಲ ನಡೆಯಲ್ಲ. ಕರ್ನಾಟಕ ದಾಸರು, ಶರಣರು, ಸಂತರ ನಾಡು. ಏನು ನಡೆಯದು.

‘ಸರ್ವಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಅವರು ಹೇಳಿದ್ದಾರೆ. ಅದರಂತೆ, ನಮ್ಮ ಸರ್ಕಾರ ಸರ್ವಜನಾಂಗವನ್ನು ಪರಿಗಣಿಸಿ ಅಭಿವೃದ್ಧಿ ಕಾರ್ಯ ಮಾಡಿದೆ.

‘ಇವನಾರವ ಇವನಾರವ ಎಂದೆನಿಸಬೇಡ
ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ...
ಎನ್ನುವಂತೆ ಎಲ್ಲರೂ ನಮ್ಮವರು ಎಂದು ಕಂಡಿದ್ದೇವೆ’ ಎಂದರು

ಕೊನೆಯಲ್ಲಿ, ’ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯ ಗಾಂಧಿ, ರಾಹುಲ್‌ ಗಾಂಧಿ ಅವರಿಗೆ ಅಭಿನಂದನೆಗಳು. ಅವರು ಅಭ್ಯರ್ಥಿಗಳ ಆಯ್ಕೆಯಲ್ಲಿ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಸಿಎಂ ಹೇಳಿದರು.

‘ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಲ್ಲಾ ಸಚಿವರು ಹಾಗೂ ಮುಖಂಡರು ಸಹಕಾರ ನೀಡಿದ್ದಾರೆ, ಅವರೆಲ್ಲರಿಗೂ ಧನ್ಯವಾದಗಳು ಎಂದು ಮಾತು ಮುಗಿಸಿದರು.

ಸಿಹಿ ಸವಿದು
ಪತ್ರಿಕಾಗೋಷ್ಠಿಗೂ ಮುನ್ನ ಸಿಹಿ ಸವಿದ ಸಿಎಂ, ಸುದ್ದಿಗಾರರಿಗೆ ಸಿಹಿ, ಚಹ ವಿತರಿಸುವಂತೆ ಹೇಳಿದರು. ‘ನಿಧಾನವಾಗಿ ತಿನ್ನಿ, ನಾನೂ ಪ್ರೀಯಾಗಿದ್ದೇನೆ. ಇವತ್ತು ಯಾವುದೇ ಕಾರ್ಯಕ್ರಮ ಹಾಕಿಕೊಂಡಿರಲಿಲ್ಲ. ಫಲಿತಾಂಶ ಪ್ರಕಟಣೆ ದಿನವಾದ್ದರಿಂದ...
ಬಾಡೂಟದ ಬಗ್ಗೆ ಪ್ರಸ್ತಾಪಿಸಿದಾಗ, ‘ಎಲ್ಲರಿಗೂ ಒಳ್ಳೆ ಬಿರಿಯಾನಿ ಮಾಡಿಸಿಕೊಡಪ್ಪಾ... ಎಂದು ಸಿಎಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT