ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಫ್‌ಸಿಸಿ ಮೇಲ್ಮನವಿ ವಜಾ; ದಂಡ ತುಂಬಿ ಎಂದ ಸಿಸಿಐ

Last Updated 13 ಏಪ್ರಿಲ್ 2017, 14:22 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ಡಬ್ಬಿಂಗ್ ಸಿನಿಮಾಗಳ ಪ್ರದರ್ಶನಕ್ಕೆ ಅಡ್ಡಿ ಉಂಟುಮಾಡಿಲ್ಲ. ಆದ್ದರಿಂದ ಮಂಡಳಿಗೆ ದಂಡ ವಿಧಿಸಿದ್ದ ಆದೇಶವನ್ನು ಪರಿಶೀಲಿಸಬೇಕು ಎಂದು ಕೆಎಫ್‌ಸಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ (ಸಿಎಟಿ) ವಜಾ ಮಾಡಿದೆ.

‘ಡಬ್ಬಿಂಗ್ ಸಿನಿಮಾಗಳ ಪ್ರದರ್ಶನಕ್ಕೆ ಕೆಎಫ್‌ಸಿಸಿ ತಡೆ ಒಡ್ಡಿರುವುದು ಸ್ಪಷ್ಟವಾಗಿ ಸಾಬೀತಾಗಿದೆ. ಆದ ಕಾರಣ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಸೂಕ್ತ ರೀತಿಯಲ್ಲೇ ದಂಡ ವಿಧಿಸಿದೆ. ಆದೇಶವನ್ನು ಪರಿಶೀಲಿಸುವ ಅಗತ್ಯವಿಲ್ಲ’ ಎಂದು ಸಿಎಟಿ ಏಪ್ರಿಲ್ 10ರ ಆದೇಶದಲ್ಲಿ ತಿಳಿಸಿದೆ.

ಡಬ್ ಮಾಡಲಾದ ಟೀವಿ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂಬ ಆರೋಪದಡಿ ಸಿಸಿಎ 2015ರ ಜುಲೈನಲ್ಲಿ ಕೆಎಫ್‌ಸಿಸಿಗೆ ₹16,82,204, ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್‌ಗೆ  ₹ 1,74,293 ಮತ್ತು ಕನ್ನಡ ಚಿತ್ರ ನಿರ್ಮಾಪಕರ ಸಂಘಕ್ಕೆ ₹1,68,124 ದಂಡ ವಿಧಿಸಿ ಆದೇಶಿಸಿತ್ತು. ಸಿಸಿಎ ಆದೇಶವನ್ನು ಪರಿಶೀಲಿಸುವಂತೆ ಕೋರಿ ಕೆಎಫ್‌ಸಿಸಿ, ಸ್ಪರ್ಧಾತ್ಮಕ ಮೇಲ್ಮನವಿ ಆಯೋಗದ ಮೆಟ್ಟಿಲೇರಿತ್ತು. ಆದರೆ ಅಲ್ಲಿ ಸೂಕ್ತ ವಾದ ಮಂಡಿಸುವಲ್ಲಿ ಕೆಎಫ್‌ಸಿಸಿ ಯಶಸ್ವಿಯಾಗಿಲ್ಲ.

ಸಿಸಿಐ ತೀರ್ಪನ್ನು ಎತ್ತಿಹಿಡಿದಿರುವ ಸಿಎಟಿ, ತನ್ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಕೆಎಫ್‌ಸಿಸಿಗೆ ಅರವತ್ತು ದಿನಗಳ ಕಾಲಾವಕಾಶ ನೀಡಿದೆ.

ಡಬ್ಬಿಂಗ್‌ಗೆ ವಿರೋಧಿಸಿಲ್ಲ:
‘ಕೆಎಫ್‌ಸಿಸಿ ಮೊದಲಿನಿಂದಲೂ ಡಬ್ಬಿಂಗ್‌ಗೆ ತಡೆಯೊಡ್ಡಿಲ್ಲ. ಆದ್ದರಿಂದ ಮಂಡಳಿಗೆ ವಿಧಿಸಿದ ದಂಡವನ್ನು ಮರುಪರಿಶೀಲನೆ ಮಾಡುವಂತೆ ಕೋರಿದ್ದೆವು. ತೀರ್ಪಿನ ಅಧ್ಯಯನ ನಡೆಸುತ್ತಿದ್ದೇವೆ. ಅದಾದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಕುರಿತು ಚಿಂತನೆ ನಡೆಸುತ್ತೇವೆ’ ಎಂದು ಕೆಎಫ್‌ಸಿಸಿ ಅಧ್ಯಕ್ಷ ಸಾ.ರಾ. ಗೋವಿಂದ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT