ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶನ ಸಂಸ್ಥೆ ವಿರುದ್ಧ ಕ್ರಮ

ಸಿಬಿಎಸ್‌ಇ ಪಠ್ಯದಲ್ಲಿ ಮಹಿಳೆ ದೇಹದ ಅಳತೆ ವಿವರಣೆ: ಜಾವಡೇಕರ್‌ ಆದೇಶ
Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಖಾಸಗಿ ಪ್ರಕಾಶನ ಸಂಸ್ಥೆ  ಪ್ರಕಟಿಸಿರುವ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 12ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಪುಸ್ತಕದಲ್ಲಿ ಮಹಿಳೆಯ ಅಂಗಸೌಷ್ಠವದ ಬಗ್ಗೆ ವ್ಯಾಖ್ಯಾನಿಸಿರುವುದು ವಿವಾದ ಸೃಷ್ಟಿಸಿದೆ.
 
ಪಠ್ಯಪುಸ್ತಕದಲ್ಲಿರುವ ಅಂಶಗಳನ್ನು ಖಂಡಿಸಿರುವ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌, ಇದು ‘ಲಿಂಗತ್ವ ತಾರತಮ್ಯ’ ಎಂದು ಹೇಳಿದ್ದಾರೆ.  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೂ ಅವರು ಆದೇಶಿಸಿದ್ದಾರೆ.
 
‘ಆರೋಗ್ಯ ಮತ್ತು ದೈಹಿಕ ಶಿಕ್ಷಣ’ ಎಂಬ ಪಠ್ಯಪುಸ್ತಕವನ್ನು ವಿ.ಕೆ. ಶರ್ಮಾ ಎಂಬುವವರು ಸಿದ್ಧಪಡಿಸಿದ್ದಾರೆ. ದೆಹಲಿಯ ನ್ಯೂ ಸರಸ್ವತಿ ಹೌಸ್‌ ಇದನ್ನು ಪ್ರಕಟಿಸಿದೆ. ಸಿಬಿಎಸ್‌ಇ ಪಠ್ಯಕ್ರಮ ಬೋಧಿಸುವ ವಿವಿಧ ಶಾಲೆಗಳಲ್ಲಿ ಈ ಪಠ್ಯವನ್ನು ಬೋಧಿಸಲಾಗುತ್ತಿದೆ.
 
ವಿವಾದ ಭುಗಿಲೇಳುತ್ತಿದ್ದಂತೆಯೇ ಖಾಸಗಿ ಪ್ರಕಾಶನ ಸಂಸ್ಥೆಯು ಪಠ್ಯ ಪುಸ್ತಕದ ಮುದ್ರಣ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದೆ.
 
ಸ್ಪಷ್ಟನೆ: ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಎಸ್‌ಇ, ತನ್ನ ಶಾಲೆಗಳಲ್ಲಿ ಖಾಸಗಿ ಪ್ರಕಾಶಕರು ಪ್ರಕಟಿಸಿರುವ ಯಾವುದೇ ಪುಸ್ತಕಗಳನ್ನು ಬಳಸುವಂತೆ ತಾನು ಸಲಹೆ ನೀಡುವುದಿಲ್ಲ ಎಂದು ಹೇಳಿದೆ.
 
‘ಇದು ಲಿಂಗ ಭೇದ ಮಾಡುವಂತಹ  ಹೇಳಿಕೆ. ಇದನ್ನು ಖಂಡಿಸುತ್ತೇನೆ. ಇದು ಸಮರ್ಥನೀಯವೂ ಅಲ್ಲ, ಸ್ವೀಕಾರ್ಹವೂ ಅಲ್ಲ. ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಾವಡೇಕರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
‘ಇದು ಎನ್‌ಸಿಇಆರ್‌ಟಿ ಸಿದ್ಧಪಡಿಸಿರುವ ಪುಸ್ತಕ ಅಲ್ಲ. ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನೇ ಅನುಸರಿಸುವಂತೆ ಎಲ್ಲ ಸಿಬಿಎಸ್‌ಇ ಶಾಲೆಗಳಿಗೆ ಸೂಚಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
 
ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಕಾಶನ ಸಂಸ್ಥೆ, ‘ಪಠ್ಯಪುಸ್ತಕದ ಮುದ್ರಣ, ಮಾರಾಟ ಮತ್ತು ವಿತರಣೆಯನ್ನು ತಕ್ಷಣದಿಂದ ನಿಲ್ಲಿಸಿದ್ದೇವೆ’ ಎಂದು ಹೇಳಿದೆ.
 
‘ನಮ್ಮ ಪಠ್ಯಪುಸ್ತಕವನ್ನು ಕಾಲ ಕಾಲಕ್ಕೆ ಪರಿಶೀಲಿಸುತ್ತೇವೆ. ಆದರೆ, ಕೆಲವೆಡೆ ಕಣ್ತಪ್ಪಿನಿಂದಾಗಿ ತಪ್ಪು ಉಳಿದಿರುತ್ತದೆ. ಹಾಗಾಗಿ, ನಮ್ಮ ತಂಡ ಪುಸ್ತಕವನ್ನು ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲಿದೆ. ತಪ್ಪಿದ್ದರೆ ಅದನ್ನು ಸರಿಪಡಿಸಲಿದೆ’ ಎಂದು ಅದು ವಿವರಿಸಿದೆ.
 
ಪುಸ್ತಕದಲ್ಲಿ ಏನಿದೆ...?
‘36–24–36 ಅಳತೆ ಹೊಂದಿದ ಮಹಿಳೆಯರ ದೇಹ ಸುಂದರ ಎಂದು ಪರಿಗಣಿಸಲಾಗಿದೆ. ಹಾಗಾಗಿಯೇ ವಿಶ್ವ ಸುಂದರಿ, ಭುವನ ಸುಂದರಿ ಸ್ಪರ್ಧೆಗಳಲ್ಲಿ ಇಂತಹ ಅಂಗಸೌಷ್ಠವ ಹೊಂದಿರುವ ಮಹಿಳೆಯರನ್ನೇ ಹೊಂದಿರುವವರನ್ನೇ ಪರಿಗಣಿಸಲಾಗುತ್ತದೆ’ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ಆಕ್ರೋಶ: ಈ ನಿರ್ದಿಷ್ಟ ವಿವರಣೆ ಬುಧವಾರ  ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಜಾಲತಾಣಿಗರು ಈ ವ್ಯಾಖ್ಯಾನದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೆ, ಪಠ್ಯಪುಸ್ತಕವನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT