ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದದ ‘ಕೆಂಗುಲಾಬಿ’

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

‘ಇಂಗಳೆ ಮಾರ್ಗ’ ಸಿನಿಮಾದ ನಿರ್ಮಾಪಕ ಘನಶ್ಯಾಮ ಭಾಂಡಗೆ ಅವರು ‘ಕೆಂಗುಲಾಬಿ’ ಎಂಬ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಎರಡು ವರ್ಷದ ಹಿಂದೆ ಸುದ್ದಿಯಾಗಿತ್ತು. ಆದರೆ ಒಮ್ಮೆ ಪತ್ರಿಕಾಗೋಷ್ಠಿ ಕರೆದು ಚಿತ್ರ ಆರಂಭ ಮಾಡಿದ ಸುದ್ದಿಯನ್ನು ಹಂಚಿಕೊಂಡಿದ್ದ ಚಿತ್ರತಂಡ ಆಮೇಲೆ ಪತ್ತೆಯಿರಲಿಲ್ಲ.

ಈಗ ಎರಡು ವರ್ಷದ ನಂತರ ಚಿತ್ರೀಕರಣವನ್ನು ಮುಗಿಸಿ ಮಾಧ್ಯಮದ ಎದುರು ಹಾಜರಾಗಿದೆ. ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಆದಷ್ಟೂ ಬೇಗ ಮುಗಿಸಿ ಸಿನಿಮಾ ತೆರೆಗೆ ಮೇಲೆ ತರುವ ಉತ್ಸಾಹವನ್ನೂ ಅದು ಇಮ್ಮಡಿಸಿಕೊಂಡಿದೆ.

ಇಷ್ಟು ತಡವಾಗಲು ಕಾರಣಗಳನ್ನು ನಿರ್ಮಾಪಕ ಘನಶ್ಯಾಮ ಭಾಂಡಗೆ ಕೇಳುವ ಮೊದಲೇ ಹೇಳಿಕೊಂಡರು.

ಮೊದಲಿಗೆ ಆಯ್ಕೆಯಾಗಿದ್ದ ನಟಿ ಪಾತ್ರಕ್ಕೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಕೈಬಿಡಲಾಯಿತು. ಮತ್ತೆ ಪಾತ್ರಕ್ಕೆ ಹೊಂದುವ ನಟಿಗಾಗಿ ಐದಾರು ತಿಂಗಳ ಶೋಧನೆ ನಡೆಸಲಾಯಿತು. ಕೃತಿಕಾ ಆಯ್ಕೆಯಾದ ಮೇಲೆ ಕೆಲವು ದಿನಗಳ ಚಿತ್ರೀಕರಣ ನಡೆಸುವಷ್ಟರಲ್ಲಿ ಅವರಿಗೆ ‘ಬಿಗ್‌ ಬಾಸ್‌’ ರಿಯಾಲಿಟಿ ಷೋಗೆ ಕರೆ ಬಂತು. ನಂತರ ಸಹನಿರ್ದೇಶಕ, ನಿರ್ದೇಶಕರು ಮದುವೆಯಾದರು...

ಹೀಗೆ ತಡವಾಗಲು ಕಾರಣಗಳ ಪಟ್ಟಿ ಬೆಳೆಯುತ್ತಲೇ ಇತ್ತು. ಈ ನಡುವೆ ಎಷ್ಟೋ ಜನರು ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ ಸಿನಿಮಾವನ್ನು ‘ಕೆಂಗುಲಾಬಿ’ ಎಂದು ತಪ್ಪು ತಿಳಿದುಕೊಂಡು ಘನಶ್ಯಾಮ ಭಾಂಡಗೆ ಅವರಿಗೆ ಪ್ರತಿಕ್ರಿಯೆಯನ್ನೂ ನೀಡುತ್ತಿದ್ದರಂತೆ.

‘ಹಲವು ಕೊರತೆಗಳಿಂದ ನಮ್ಮ ಸಿನಿಮಾ ತಡವಾದದ್ದು ನಿಜ. ಆದರೆ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಇದ್ದಿದ್ದರಿಂದ ಅದ್ಭುತವಾಗಿ ಮೂಡಿಬಂದಿದೆ. ನಾನು ಬರೀ ಪ್ರಶಸ್ತಿಗಾಗಿ ಸಿನಿಮಾ ಮಾಡುವವ ಅಲ್ಲವೇ ಅಲ್ಲ. ಈ ಸಿನಿಮಾದಲ್ಲಿನ ಸಂದೇಶವನ್ನು ಜನರಿಗೆ ತಲುಪಿಸುವುದು ಮುಖ್ಯ. ಆದ್ದರಿಂದ ಅದ್ದೂರಿಯಾಗಿ ಕನಿಷ್ಠ ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ’ ಎಂದು ಮಾತು ಮುಗಿಸಿದರು ಘನಶ್ಯಾಮ ಭಾಂಡಗೆ. ಮುಂದಿನ ತಿಂಗಳು ಗೀತೆಗಳ ಧ್ವನಿಮುದ್ರಿಕೆ ಬಿಡಗಡೆ ಮಾಡಿ ಜೂನ್‌ನಲ್ಲಿ ಚಿತ್ರ ತೆರೆಗೆ ತರುವುದು ಅವರ ಯೋಜನೆ.

‘ಕೆಂಗುಲಾಬಿ’ ಹನುಮಂತ ಹಾಲಗೇರಿ ಅವರ ಕಾದಂಬರಿ ಆಧಾರಿತ ಚಿತ್ರ. ಈ ಕಾದಂಬರಿಯನ್ನು ನಿರ್ದೇಶಕ  ಶ್ರೀಧರ್‌ ಜಾವೂರ್‌ ದೃಶ್ಯರೂಪಕ್ಕೆ ಅಳವಡಿಸಿದ್ದಾರೆ. ಗೌರೀಶ್‌ ಅಕ್ಕಿ ಮತ್ತು ಕೃತಿಕಾ ಈ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸುದ್ದಿವಾಚಕ ಗೌರೀಶ್‌ ಅವರಿಗೆ ಇದು ನಾಯಕನಾಗಿ ಮೊದಲ ಸಿನಿಮಾ.

‘ಇದೊಂದು ಭಾವನಾತ್ಮಕ ಕಥೆ. ಇಡೀ ತಂಡದ ಶ್ರಮದ ಫಲ. ಕಾದಂಬರಿಯನ್ನು ಯಥಾವತ್ತಾಗಿ ಸಿನಿಮಾಕ್ಕೆ ಅಳವಡಿಸಿದ್ದೇನೆ. ಜತೆಗೆ ಹಲವು ಸಿನಿಮ್ಯಾಟಿಕ್‌ ಅಂಶಗಳನ್ನೂ ಹೆಚ್ಚುವರಿಯಾಗಿ ಸೇರಿಸಿದ್ದೇನೆ’ ಎಂದು ನಿರ್ದೇಶಕ ಶ್ರೀಧರ್‌ ಹೇಳಿದರು.

ಕೊನೆಯಲ್ಲಿ ಮಾತನಾಡಿದ ಚಿತ್ರದ ನಾಯಕಿ ಕೃತಿಕಾ, ‘ಒಬ್ಬ ನಟಿಗೆ ಇಂಥ ಪಾತ್ರ ಸಿಗುವುದು ತುಂಬ ಕಷ್ಟ. ಆ ವಿಷಯದಲ್ಲಿ ನಾನು ಅದೃಷ್ಟವಂತೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವಾರು ಶೇಡ್‌ಗಳಿವೆ. ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆ ಎಂಬ ನಂಬಿಕೆಯೂ ಇದೆ’ ಎಂದರು.

‘ಕೆಂಗುಲಾಬಿ’ಯಲ್ಲಿನ ಹಾಡುಗಳಿಗೆ ರಾಜ್‌ಕಿಶೋರ್‌ ಸಂಗೀತ ಸಂಯೋಜಿಸಿದ್ದಾರೆ. ಕುಮಾರ್‌ ಚಕ್ರವರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾದಂಬರಿಗಾರ ಹನುಮಂತ ಹಾಲಗೇರಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT