ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮದಿಪು’ ಹೊಳಪು

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

* ‘ಮದಿಪು’ಗೆ ಎರಡೆರಡು ಪ್ರಶಸ್ತಿ ದೊರೆತಿದೆ, ಹೇಗನ್ನಿಸುತ್ತಿದೆ?
ಖುಷಿಯಾಗುತ್ತಿದೆ. ಪ್ರತಿಯೊಬ್ಬ ನಿರ್ದೇಶಕನಿಗೂ ತನ್ನ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಬರಬೇಕು ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ. ಆದರೆ, ಭೂತಾರಾಧನೆ ಕುರಿತು ಚಿತ್ರ ಮಾಡುವಾಗ ಈ ಸಿನಿಮಾಕ್ಕೆ ಪ್ರಶಸ್ತಿ ಸಿಗಬಹುದು ಎಂಬ ಸಣ್ಣ ಆಸೆಯೊಂದು ನನ್ನೆದೆಯೊಳಗೆ ಹಬೆಯಾಡುತ್ತಿತ್ತು. ಅದು ಈಗ ನಿಜವಾಗಿದೆ.

* ಪ್ರಶಸ್ತಿಯ ಸಂಭ್ರಮದಲ್ಲಿ ನಿಮಗೆ ಯಾರೆಲ್ಲ ನೆನಪಾಗುತ್ತಿದ್ದಾರೆ?
ಕಲಾತ್ಮಕ ಸಿನಿಮಾಗಳಿಗೆ ಬಂಡವಾಳ ಹೂಡಲು ಮುಂದೆ ಬರುವ ನಿರ್ಮಾಪಕರ ಸಂಖ್ಯೆ ಕಡಿಮೆ. ನನ್ನಂತಹ ಹೊಸ ನಿರ್ದೇಶಕನ ಕನಸಿಗೆ ರೆಕ್ಕೆ ಕಟ್ಟುವ ನಿರ್ಮಾಪಕರಂತೂ ತೀರಾ ಅಪರೂಪ. ಕಲಾತ್ಮಕ ಸಿನಿಮಾಗಳು ಎಷ್ಟೇ ಚೆಂದವಿದ್ದರೂ, ವಿಮರ್ಶಕರಿಂದ ಮೆಚ್ಚುಗೆ ಗಳಿಸಿದರೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುವುದಿಲ್ಲ. ಇಂತಹ ಸನ್ನಿವೇಶದಲ್ಲಿ ನಿರ್ಮಾಪಕ ಸಂದೀಪ್ ಕುಮಾರ್ ನನ್ನ ಮೇಲೆ ನಂಬಿಕೆಯಿಟ್ಟು ಬಂಡವಾಳ ಹೂಡಿದ್ದರು. ಅವರು 40 ಜನ ಕಲಾವಿದರಿಗೆ ಜೀವನ ಕೊಟ್ಟಿದ್ದಾರೆ. ಇದರ ಹಿರಿಮೆ–ಗರಿಮೆ ಅವರಿಗೇ ಸಲ್ಲಬೇಕು.

* ‘ಮದಿಪು’ ಸಿನಿಮಾದ ಚಿತ್ರಕತೆ ಕೇಳಿ ಪುಳಕಗೊಂಡ ಅನೇಕ ಕಲಾವಿದರು, ತಂತ್ರಜ್ಞರು ಸಂಭಾವನೆ ಪಡೆಯದೇ ಸಿನಿಮಾಕ್ಕೆ ದುಡಿದಿದ್ದಾರೆ, ಅಲ್ಲವೇ? 
ಚಿತ್ರದಲ್ಲಿ ನಟಿಸಿದ ಪ್ರತಿಯೊಬ್ಬ ಕಲಾವಿದ ಹಾಗೂ ತಂತ್ರಜ್ಞರ ಸಹಕಾರವನ್ನು ನೆನೆಯಲೇಬೇಕು. ಸರ್ದಾರ್ ಸತ್ಯ ಕನ್ನಡದ ಕಲಾವಿದರಾದರೂ ಕೂಡ ತುಳುವನ್ನು ಕಲಿತು ಅದ್ಭುತವಾಗಿ ನಟಿಸಿದ್ದಾರೆ. ಸೀತಾ ಕೋಟೆ, ಎಂ.ಕೆ. ಮಠ, ಚೇತನ್ ರೈ ಮಾಣಿ ಎಲ್ಲರೂ ನನ್ನ ಮೇಲೆ ಅಭಿಮಾನವಿಟ್ಟು ಚಿತ್ರದಲ್ಲಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಚಿತ್ರಕತೆ ಕೇಳಿ ‘ನಾನೇ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿಕೊಡುತ್ತೇನೆ’ ಎಂದು ಮುಂದೆ ಬಂದರು. ಅವರು ಒಂದು ರೂಪಾಯಿ ಕೂಡ ಸಂಭಾವನೆ ಪಡೆಯಲಿಲ್ಲ. ಕ್ಯಾಮೆರಾಮನ್ ರಮೇಶ್ ಹೆಗ್ಡೆ ಕೈಚಳಕವನ್ನೂ ವಿಶೇಷವಾಗಿ ನೆನೆಯಬೇಕು. ಚಿತ್ರಕ್ಕೆ ದುಡಿದ ಎಲ್ಲ ತಂತ್ರಜ್ಞರು, ಕಲಾವಿದರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಹೇಳುತ್ತೇನೆ.

* ಪ್ರಶಸ್ತಿ ಪ್ರಕಟ ಆದ ನಂತರ ‘ಮದಿಪು’ ಚಿತ್ರವನ್ನು ನೋಡುವ ಕುತೂಹಲ ಅನೇಕರಲ್ಲಿ ಗರಿಗೆದರಿದೆ. ಚಿತ್ರವನ್ನು ರೀ–ರಿಲೀಸ್ ಮಾಡುವಿರಾ?
ಈ ಆಲೋಚನೆ ಇದೆ. ‘ಮದಿಪು’ ಕಲಾತ್ಮಕ ಚಿತ್ರ ಎಂಬ ಕಾರಣಕ್ಕೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿಲ್ಲ. ಈಗ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ನಿರ್ಮಾಪಕರನ್ನು ಆರ್ಥಿಕವಾಗಿ ಮೇಲೆತ್ತುವ ಉದ್ದೇಶದಿಂದ ಚಿತ್ರವನ್ನು ಮತ್ತೆ ತೆರೆಕಾಣಿಸುವ ಯೋಚನೆ ಇಟ್ಟುಕೊಂಡಿದ್ದೇವೆ. ಸದ್ಯಕ್ಕೆ ಮಂಗಳೂರು ಮತ್ತು ಬೆಂಗಳೂರಿನಲ್ಲಿ ‘ಮದಿಪು’ ತೆರೆಕಾಣಿಸಿ, ಮುಂದಿನ ದಿನಗಳಲ್ಲಿ ಅರಬ್‌ ದೇಶಗಳಲ್ಲಿ ಬಿಡುಗಡೆ ಮಾಡುವ ಗುರಿ ಇಟ್ಟುಕೊಂಡಿದ್ದೇವೆ.

* ‘ಮದಿಪು’ ಚಿತ್ರವನ್ನು ಕನ್ನಡಕ್ಕೆ ರೀಮೇಕ್‌ ಮಾಡುವಿರಾ?
ಇಲ್ಲ. ಈ ಚಿತ್ರದ ಕತೆ ಕನ್ನಡ ಅಥವಾ ಬೇರಾವುದೇ ಭಾಷೆಯ ಜಾಯಮಾನಕ್ಕೆ ಬಿಲ್‌ಕುಲ್ ಒಗ್ಗುವುದಿಲ್ಲ. ಭೂತಾರಾಧನೆ ಕುರಿತ ಸಿನಿಮಾ ತುಳು ಫ್ಲೇವರ್‌ನಲ್ಲಿ ಇದ್ದರೇನೇ ಚೆಂದ.

* ನಿಮ್ಮ ಹೊಸ ಯೋಜನೆಗಳೇನು?
ನನ್ನ ಎರಡನೇ ಸಿನಿಮಾ ‘ಚಾವಡಿ’ ಕಮರ್ಷಿಯಲ್ ಚಿತ್ರ. ಹೆಜ್ಜೆಗೆಜ್ಜೆಗಳ ಪ್ರೀತಿ ಎಂಬುದು ಚಿತ್ರದ ಟ್ಯಾಗ್‌ಲೈನ್. ಕನ್ನಡ ಮತ್ತು ತುಳು ಎರಡೂ ಭಾಷೆಯಲ್ಲಿ ತೆರೆಕಾಣಲಿರುವ ಈ ಚಿತ್ರ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿದೆ. ಅದರಲ್ಲೂ ತುಳು ಪ್ರೇಕ್ಷಕರಿಗೆ ಬೇರೆಯದೇ ಫೀಲ್‌ ಕೊಡಲಿದೆ. 

* ಪ್ರಶಸ್ತಿ ಪ್ರಕಟವಾದ ನಂತರ ಕೋಸ್ಟಲ್‌ವುಡ್‌ ಮಂದಿಯ ಪ್ರತಿಕ್ರಿಯೆ ಹೇಗಿತ್ತು?
ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಸಿ–ಟೌನ್‌’ನಲ್ಲಿ (ಕೋಸ್ಟಲ್‌ವುಡ್‌) ತೊಡಗಿಸಿಕೊಂಡಿರುವ ಪ್ರತಿಯೊಬ್ಬರಿಗೂ ಮೊದಲಿನಿಂದಲೂ ನನ್ನ ಮೇಲೆ ಅಭಿಮಾನವಿತ್ತು. ಕಲಾ ನಿರ್ದೇಶಕನಾಗಿದ್ದಾಗಿನಿಂದಲೂ ನನ್ನ ಕಸುಬುದಾರಿಕೆ ನೋಡಿದ್ದ ಅವರು ಈತ ಏನನ್ನಾದರೂ ಸಾಧಿಸುತ್ತಾನೆ ಅಂದುಕೊಂಡಿದ್ದರು. ಆದರೆ, ಇಷ್ಟು ಬೇಗ ಈ ಮಟ್ಟಕ್ಕೆ ಬೆಳೆಯುತ್ತೇನೆ ಎಂದು ಯಾರೂ ಊಹಿಸಿರಲಿಲ್ಲ. 

ಪ್ರಶಸ್ತಿ ಪ್ರಕಟವಾದ ನಂತರ ನನ್ನ ಗುರುಗಳಾದ ವಿನು ಬಳಂಜ, ಬಿ. ಸುರೇಶ್, ರವಿ ಗರಣಿ ಎಲ್ಲರೂ ಹರಸಿದರು. ಪಿ. ಶೇಷಾದ್ರಿ ಅವರು ಕರೆ ಮಾಡಿ ತುಂಬ ಖುಷಿ ವ್ಯಕ್ತಪಡಿಸಿದರು. ಹೊಸಬರ ಚಿತ್ರಗಳಿಗೆ ಪ್ರಶಸ್ತಿ ಬಂದಾಗ ಹಿರಿಯರು ಬೆನ್ನು ತಟ್ಟಿ ಉತ್ತೇಜಿಸುವುದು ತುಂಬ ಪುಳಕ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT