ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳು ಬೆಳಕಿನ ಮಸೂರ ದಾರಿ

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

1996ನೇ ಇಸವಿ. ಶಿರಸಿಯ ಮನೆಯೊಂದರಲ್ಲಿ ‘ನಮ್ಮೂರ ಮಂದಾರ ಹೂವೆ’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಬಣ್ಣಗಳತ್ತ ಆಕರ್ಷಣೆ ಹೊಂದಿದ್ದ ಯುವಕನಿಗೆ ಚಿತ್ರಕಲೆಯಂತೆಯೇ ಛಾಯಾಗ್ರಹಣವೂ ಬಗೆ ಬಗೆಯ ಅರ್ಥಗಳನ್ನು ಹೊಮ್ಮಿಸುವ ಸುಂದರ ಕಲೆ ಎಂಬ ಕಲ್ಪನೆ ಮೂಡಿಸಿದ್ದು ಆ ಚಿತ್ರದ ಛಾಯಾಗ್ರಾಹಕ ಸುಂದರನಾಥ ಸುವರ್ಣ. ನೆರಳು ಬೆಳಕಿನೊಂದಿಗೆ ಸುವರ್ಣರು ಆಡುತ್ತಿದ್ದ ರೀತಿ ಅಚ್ಚರಿಯ ಜೊತೆಗೆ ಕುತೂಹಲವನ್ನೂ ಮೂಡಿಸಿತು. ಕುಂಚದಿಂದ ಕೈಯನ್ನು ಕ್ಯಾಮೆರಾದೆಡೆಗೆ ಹೊರಳಿಸಲು ಕಾರಣವಾಗಿದ್ದು ಇದೇ ಸಿನಿಮಾ.

ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಅತ್ಯುತ್ತಮ ತುಳು ಚಿತ್ರ’ ಪ್ರಶಸ್ತಿಗೆ ಪಾತ್ರವಾದ ‘ಮದಿಪು’ವಿನಲ್ಲಿ ನೆರಳು ಬೆಳಕಿನಾಟದ ಕೌಶಲದಿಂದ ಗಮನ ಸೆಳೆದವರು ಛಾಯಾಗ್ರಾಹಕ ಗಣೇಶ್‌ ಹೆಗಡೆ.

‘ನಮ್ಮೂರ ಮಂದಾರ ಹೂವೆ’ ಚಿತ್ರದಲ್ಲಿ ಕಾಣಿಸುವ ಪ್ರಮುಖ ಮನೆಯಲ್ಲಿ ಹುಟ್ಟಿ ಬೆಳೆದವರು ಗಣೇಶ್‌ ಹೆಗಡೆ. ಆಗ ಅವರು ದಾವಣಗೆರೆಯಲ್ಲಿ ಚಿತ್ರಕಲೆಯ ಅಧ್ಯಯನ ಮಾಡುತ್ತಿದ್ದರು. ಚಿತ್ರೀಕರಣದ ಕ್ರಮಗಳನ್ನು ತದೇಕಚಿತ್ತದಿಂದ ನೋಡುತ್ತಿದ್ದ ಅವರಿಗೆ, ಹಲವು ಭಾವಗಳನ್ನು ಹೊಮ್ಮಿಸುವ ಚಿತ್ರಕಲೆ ಮತ್ತು ಛಾಯಾಗ್ರಹಣಗಳ ನಡುವೆ ಸಾಮ್ಯತೆ ಕಂಡಿತು. ಸಿನಿಮಾದಲ್ಲಿ ಭಾಗವಾಗುವ ಅವರ ಆಸೆಗೆ ಹೂಂಗುಟ್ಟಿ ಪೋಸ್ಟರ್‌ ವಿನ್ಯಾಸದ ಹೊಣೆ ನೀಡಿದವರು ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿ. ಆಗಲೇ ಸಿನಿಮಾ ಕ್ಯಾಮೆರಾ ಹಿಡಿಯುವ ಬಯಕೆ ಮೊಳೆತಿತು. ಬೆಂಗಳೂರಿನ ಹಾದಿ ಹಿಡಿದ ಅವರಿಗೆ ‘ಪ್ರೇಮ ರಾಗ ಹಾಡು ಗೆಳತಿ’ ಚಿತ್ರದ ಪೋಸ್ಟರ್‌ ವಿನ್ಯಾಸ ಮಾಡಲು ಅವಕಾಶ ನೀಡಿದ ದೇಸಾಯಿ, ಛಾಯಾಗ್ರಾಹಕರ ಸಹಾಯಕನಾಗಿ ದುಡಿಯುವ ಕೋರಿಕೆಯನ್ನೂ ಮನ್ನಿಸಿದರು. ಈ ನಡುವೆ ಚಿತ್ರಕಲೆ ಶಿಕ್ಷಣ ಕೋರ್ಸ್‌ ಮುಗಿಸಿದ ಗಣೇಶ್‌, ಛಾಯಾಗ್ರಹಣವೇ ಬದುಕಿನ ದಾರಿ ಎಂದು ನಿರ್ಧರಿಸಿದ್ದರು. ವೇಣು, ಕೃಷ್ಣಕುಮಾರ್‌ ಮುಂತಾದವರ ಬಳಿ ಕೆಲಸ ಕಲಿತರು.

ಸಿನಿಮಾಕ್ಕಿಂತಲೂ ಅವರ ಕೈಹಿಡಿದದ್ದು ಕಿರುತೆರೆ. ಅದಕ್ಕೆ ಮುನ್ನುಡಿ ಬರೆದದ್ದು ‘ಕುಂಕುಮ ಭಾಗ್ಯ’ ಧಾರಾವಾಹಿ. ‘ಕಾದಂಬರಿ’, ‘ಹೆಳವನ ಕಟ್ಟೆ ಗಿರಿಯಮ್ಮ’, ‘ಅಮೃತ ವರ್ಷಿಣಿ’, ‘ರಾಧಾ ಕಲ್ಯಾಣ’ ಮುಂತಾದ ಧಾರಾವಾಹಿಗಳಲ್ಲಿ ಸಾವಿರಾರು ಕಂತುಗಳಿಗೆ ಕ್ಯಾಮೆರಾ ಹಿಡಿದರು. ಜಾಹೀರಾತು ಸಂಸ್ಥೆಯೊಂದರಲ್ಲಿ ಹತ್ತಾರು ಜಾಹೀರಾತುಗಳನ್ನು ಮಾಡಿದರು. ಛಾಯಾಗ್ರಹಣ ವೃತ್ತಿಯಲ್ಲಿ ಅವರಿಗೆ ಸ್ಮರಣೀಯ ಅನುಭವ ನೀಡಿರುವುದು ಹಟ್ಟಿ ಚಿನ್ನದ ಗಣಿ ಕುರಿತಂತೆ ಸಿದ್ಧಪಡಿಸಿದ ಸರ್ಕಾರಿ ಸಾಕ್ಷ್ಯಚಿತ್ರ. ‘ನನಗೆ ಏನಾದರೂ ಸಮಸ್ಯೆ ಉಂಟಾದರೆ ಅದಕ್ಕೆ ನಾನೇ ಹೊಣೆ’ ಎಂದು ಬರೆದುಕೊಟ್ಟು, ಆಕ್ಸಿಜನ್‌ ಮುಖವಾಡ ತೊಟ್ಟು 4,800 ಅಡಿ ಆಳದಲ್ಲಿರುವ ಗುಂಡಿಯೊಳಗೆ ಇಳಿದಿದ್ದರು. ಅಲ್ಲಿನ ಕಾರ್ಮಿಕರ ಕೆಲಸಗಳ ಸಂಪೂರ್ಣ ಕೆಲಸಗಳನ್ನು ಸೆರೆಹಿಡಿಯಲು ನಾಲ್ಕು ದಿನ ಬೇಕಾಗಿತ್ತು. ಬೆಳಿಗ್ಗೆ ಒಳಹೊಕ್ಕರೆ ಸಂಜೆಯವರೆಗೂ ಅಲ್ಲಿಯೇ. ಊಟ ತಿಂಡಿ ಕಾರ್ಮಿಕರ ಜೊತೆಗೇ. ಜೀವಕ್ಕೇ ಸವಾಲೊಡ್ಡುವ ಕೆಲಸ ಅವರ ಪಾಲಿಗೆ ಅಚ್ಚಳಿಯದ ಅನುಭವ. ‘ಹೆಳವನ ಕಟ್ಟೆ ಗಿರಿಯಮ್ಮ’ದಲ್ಲಿ ಆಧುನಿಕ ಪ್ರಪಂಚದ ಕುರುಹು ಕಾಣದಂತೆ ಹಿಂದಿನ ಕಾಲದ ಪರಿಸರವನ್ನು ಕಟ್ಟಿಕೊಟ್ಟ ಕೆಲಸಕ್ಕೆ ದೊರೆತ ಮೆಚ್ಚುಗೆಯನ್ನು ಅವರು ನೆನಪಿಸಿಕೊಳ್ಳುತ್ತಾರೆ.

ಗಣೇಶ್‌ ಸ್ವತಂತ್ರ ಸಿನಿಮಾ ಛಾಯಾಗ್ರಹಣಕ್ಕೆ ಪದಾರ್ಪಣೆ ಮಾಡಿದ್ದು ‘ಪ್ರೀತಿ ಕಿತಾಬು’ ಚಿತ್ರದ ಮೂಲಕ. ‘ಮದಿಪು’ ಅವರಿಗೆ ಹೆಸರು ತಂದುಕೊಟ್ಟ ಚಿತ್ರ. ಕಲಾನಿರ್ದೇಶಕರಾಗಿರುವ ಚೇತನ್‌ ಮುಂಡಾಡಿ ನಿರ್ದೇಶಿಸಿದ ಮೊದಲ ಸಿನಿಮಾ ಇದು.

ಭೂತಾರಾಧನೆಯಲ್ಲಿ ಭಾಗವಹಿಸುವ ಒಂದು ಸಮುದಾಯದ ಜನರು ಆ ಸಮಯದಲ್ಲಿ ಮಾತ್ರ ಸುದ್ದಿಯಾಗುತ್ತಾರೆ. ಬಳಿಕ ಅವರ ಬದುಕು ಆಧುನಿಕ ಜೀವನದಿಂದ ದೂರ. ಈಗಲೂ ವಿದ್ಯುತ್‌ ಸಂಪರ್ಕವಿಲ್ಲದೆ, ಆಧುನಿಕತೆ ಇಲ್ಲದೆ ಆ ಸಮುದಾಯದವರು ಬದುಕುತ್ತಿದ್ದಾರೆ. ಅವರ ಬದುಕಿನ ಸೂಕ್ಷ್ಮಗಳನ್ನು ಅಧ್ಯಯನ ಮಾಡುವುದು ಮತ್ತು ಕ್ಯಾಮೆರಾ ಚೌಕಟ್ಟಿನಲ್ಲಿ ಚಿತ್ರಿಸಿವುದು ದೊಡ್ಡ ಸವಾಲಾಗಿತ್ತು ಎಂದು ಹೇಳುತ್ತಾರೆ ಗಣೇಶ್.

‘ಶಂಖನಾದ’ ಅರವಿಂದ್‌ ಅವರ ‘6 ಟು 6’ ಎಂಬ ಒಂದು ದಿನದಲ್ಲಿ ನಡೆಯುವ ಕಥೆಯ ಚಿತ್ರಕ್ಕೆ ಕೊಪ್ಪ, ಶೃಂಗೇರಿ ಸಮೀಪದ ಕಾಡಿನಲ್ಲಿ ಸತತ 40 ದಿನ ಚಿತ್ರೀಕರಣ ನಡೆಸಿದ್ದಾರೆ. ಯಕ್ಷಗಾನದ ಕುರಿತ ಕಲಾತ್ಮಕ ಚಿತ್ರವೊಂದರ ಕೆಲಸವೂ ನಡೆಯುತ್ತಿದೆ. ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ. ಸಿನಿಮಾ ಕೆಲಸದ ನಡುವೆ ಧಾರಾವಾಹಿಗಳ ಬಗ್ಗೆ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ. ಹೀಗಾಗಿ ಧಾರಾವಾಹಿಗಳ ಸಂಚಿಕೆ ನಿರ್ದೇಶನಕ್ಕೆ ಹೊಣೆಯನ್ನು ಸೀಮಿತಗೊಳಿಸಿದ್ದಾರೆ. ಎರಡೇ ಪಾತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವಂತಹ ಕಥೆಯೊಂದು ಮನದಲ್ಲಿದೆ. ಆದರೆ, ಛಾಯಾಗ್ರಹಣದಲ್ಲಿ ಇನ್ನಷ್ಟು ನುರಿತ ಬಳಿಕವೇ ನಿರ್ದೇಶನದ ಸಾಹಸಕ್ಕೆ ಕೈಹಾಕುವ ಆಲೋಚನೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT