ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಕ್ರವರ್ತಿ’ ನಾಯಕ; ದರ್ಶನ್‌ ಒಂದು ಪಾತ್ರ

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

* ‘ಚಕ್ರವರ್ತಿ’ ಸಿನಿಮಾದ ವಿಶೇಷತೆ ಏನು?
‘ಚಕ್ರವರ್ತಿ’ ಒಳ್ಳೆಯ ಫ್ಯಾಮಿಲಿ ಎಂಟರ್‌ಟೇನರ್‌. ಭೂಗತ ಜಗತ್ತಿನ ಕಥೆಯೂ ಇದರಲ್ಲಿದೆ. ಮನೆಗಿಂತ ದೇಶ ಮುಖ್ಯ ಎನ್ನುವ ಒಂದು ಸಾಲಿನ ಎಳೆಯ ಮೇಲೆ ಹೆಣೆದ ಸಿನಿಮಾ ಇದು. 80ರ ದಶಕದಲ್ಲಿ ಶುರುವಾಗುವ ಕಥೆ ಪ್ರಸ್ತುತ ಕಾಲಮಾನದವರೆಗೂ ವಿಸ್ತರಿಸಿಕೊಳ್ಳುತ್ತದೆ. ಒಂದು ಒಳ್ಳೆಯ ಜಾಗದಲ್ಲಿ ಕೂತು ಕೆಟ್ಟ ಕೆಲಸವನ್ನೂ ಮಾಡಬಹುದು. ಕೆಟ್ಟ ಜಾಗದಲ್ಲಿ ಕೂತು ಒಳ್ಳೆಯ ಕೆಲಸವನ್ನೂ ಮಾಡಬಹುದು ಎನ್ನುವುದನ್ನು ಸಿನಿಮಾದಲ್ಲಿ ಹೇಳಲಾಗಿದೆ.

* ‘ಚಕ್ರವರ್ತಿ’ ಕ್ರೇಜ್‌ ಹೇಗಿದೆ?
ತುಂಬಾ ಚೆನ್ನಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಒಳ್ಳೆಯ ಸ್ಪಂದನವಿದೆ. ಸಿನಿಮಾದ ಬಗ್ಗೆ, ನನ್ನ ವಿಭಿನ್ನ ಗೆಟಪ್‌ಗಳ ಬಗ್ಗೆ ಅವರದೇ ಆದ ರೀತಿಗಳಲ್ಲಿ ಏನೇನೋ ಊಹೆಗಳನ್ನು ಮಾಡಿಕೊಂಡು, ಕಲ್ಪಿಸಿಕೊಂಡು ಚರ್ಚಿಸುತ್ತಿದ್ದಾರೆ. ಒಂದು ಸಿನಿಮಾ ನಿಜಕ್ಕೂ ಖುಷಿಕೊಡುವುದು ಇಂಥ ಸಮಯದಲ್ಲಿಯೇ. ಸಿನಿಮಾದ ನಿಜವಾದ ಕಥೆ ಏನು ಎನ್ನುವುದನ್ನು ನಾವು ತೆರೆಯ ಮೇಲೆ ತೋರಿಸುತ್ತೇವೆ. ಆದರೆ ಪ್ರತಿಯೊಬ್ಬರೂ ಈ ಸಿನಿಮಾದ ಬಗ್ಗೆ ಮನಸ್ಸಿನಲ್ಲಿ ತಮ್ಮದೇ ಆದ ಕಥೆ ಕಟ್ಟಿಕೊಳ್ಳುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ರಾತ್ರಿ ಹನ್ನೆರಡು ಗಂಟೆಯಿಂದಲೇ ಚಿತ್ರಪ್ರದರ್ಶನಕ್ಕೆ ಏರ್ಪಾಡು ಮಾಡಲಾಗುತ್ತಿದೆ. ಬಳ್ಳಾರಿ, ಗುಲಬರ್ಗಾಗಳಲ್ಲಿ ಏಕಪರದೆಯ ಚಿತ್ರಮಂದಿರಗಳಲ್ಲೆಲ್ಲ ಹೀಗೆ ಆಗುವುದು ಸಾಮಾನ್ಯ. ಆದರೆ ಬೆಂಗಳೂರು–ಮೈಸೂರುಗಳಲ್ಲಿ, ಅದೂ ಮಲ್ಟಿಪ್ಲೆಕ್ಸ್‌ಗಳಲ್ಲಿ ನನ್ನ ಸಿನಿಮಾಗಳಿಗೆ ರಾತ್ರಿ ಹನ್ನೆರಡು ಗಂಟೆಯಿಂದಲೇ ಷೋ ಏರ್ಪಾಡು ಮಾಡುತ್ತಿರುವುದು ಇದೇ ಮೊದಲು.

* ಸಹೋದರ ದಿನಕರ್‌ ತೂಗುದೀಪ ಜತೆ ನಟಿಸುತ್ತಿರುವ ಮೊದಲ ಸಿನಿಮಾ ಇದು. ಹೇಗಿತ್ತು ಅನುಭವ?
ದಿನಕರ್‌ ಅವರನ್ನು ನಟಿಸುವುದಕ್ಕೆ ಒಪ್ಪಿಸಿದ್ದು ನಿರ್ದೇಶಕ ಎ.ವಿ. ಚಿಂತನ್‌. ಅವನನ್ನು ಖಳನಟನಾಗಿ ನೋಡಿದಾಗ ತಂದೆ ತುಂಬಾ ನೆನಪಾದರು. ಅವನು ಮೊದಲ ಬಾರಿಗೆ ನಟಿಸಿರುವುದು. ಆದ್ದರಿಂದ ಎಲ್ಲರಿಂದಲೂ ಸಲಹೆ ಸೂಚನೆಗಳನ್ನು ಸ್ವೀಕರಿಸುತ್ತಿದ್ದ.

* ಸೆನ್ಸಾರ್‌ ಈ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಕೊಟ್ಟಿದೆ. ಮಲ್ಟಿಪ್ಲೆಕ್ಸ್‌ ಪ್ರೇಕ್ಷಕವರ್ಗ ಸಿನಿಮಾಕ್ಕೆ ಬರಲು ಹಿಂದೇಟು ಹಾಕಬಹುದಲ್ಲವೇ?
ಮಲ್ಟಿಪ್ಲೆಕ್ಸ್‌ಗೆ ಅಬ್ಬಬ್ಬಾ ಎಂದರೆ ಶೇ. ಹದಿನೈದರಷ್ಟು ಪ್ರೇಕ್ಷಕರು ಬರುತ್ತಾರೆ. ಎಲ್ಲ ಪ್ರೇಕ್ಷಕರೂ ಅಲ್ಲಿಯೇ ಸಿನಿಮಾ ನೋಡುತ್ತಾರೆ ಎಂದರೆ ತಲೆಕೆಡಿಸಿಕೊಳ್ಳಬೇಕು ಅಷ್ಟೆ. ಸೆನ್ಸಾರ್‌ನವರು ಎರಡು ಮೂರು ದೃಶ್ಯಗಳನ್ನು ಕತ್ತರಿಸಿದರೆ ಯು/ಎ ಪ್ರಮಾಣಪತ್ರ ಕೊಡ್ತೀವಿ ಅಂದರು. ಆದರೆ ಆ ದೃಶ್ಯಗಳು ಬೇಕೇ ಬೇಕು, ‘ಎ’ ಪ್ರಮಾಣಪತ್ರವನ್ನೇ ಕೊಡಿ, ಪರ್ವಾಗಿಲ್ಲ ಎಂದು ಪಡೆದುಕೊಂಡಿದ್ದೇವೆ.

* ಮೂರು ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೀರಿ. ಸಿದ್ಧತೆ ಹೇಗಿತ್ತು?
ಈ ಮೂರು ಪಾತ್ರಗಳೂ ಗುಣ–ಸ್ವಭಾವ ಎಲ್ಲದರಲ್ಲಿಯೂ ಬೇರೆಯದೇ ಆಗಿರುತ್ತವೆ. ಒಂದು ಜಾಲಿ ಸ್ವಭಾವ, ಇನ್ನೊಂದು ತುಂಬಾನೆ ಅಂಡರ್‌ಪ್ಲೇ ಅಭಿನಯ, ಇನ್ನೊಂದು ಮಾತಾಡದೆಯೇ ಕಣ್ಣಿನಲ್ಲಿಯೇ ಅಭಿನಯಿಸುವ ವಿಶಿಷ್ಟ ಪಾತ್ರ. ಒಬ್ಬ ನಿರ್ದೇಶಕ ಕಥೆ ಹೇಳುವಾಗಲೇ ಒಂದು ಸ್ಕೆಚ್‌ ಕೊಟ್ಟಿರುತ್ತಾನೆ – ನನಗೆ ಈ ಪಾತ್ರದಲ್ಲಿ ಹೀಗಿದ್ದರೆ ಚೆನ್ನಾಗಿರುತ್ತದೆ ಎಂದು. ಆಗ ನಾನು ‘ಎಲ್ಲಿಗೆ ಮಾಂಸ ಜಾಸ್ತಿ ಬೇಕು? ಯಾವ ಪಾತ್ರದಲ್ಲಿ ಯಾವ ರೀತಿಯ ಭಾವಗಳು ಇರಬೇಕು’ ಎಂದು ವಿವರವಾಗಿ ಕೇಳಿಕೊಳ್ಳುತ್ತೇನೆ. ಆಗ ನಿರ್ದೇಶಕರು ಹೇಳಿದ ಸೂಚನೆಗಳ ಚೌಕಟ್ಟಿನಲ್ಲಿ ಪಾತ್ರಗಳಿಗೆ ಜೀವ ತುಂಬುತ್ತಾ ಹೋಗುತ್ತೇನೆ.

* ದೀಪಾ ಸನ್ನಿಧಿ ಅವರ ಜೊತೆ ಎರಡನೇ ಸಿನಿಮಾ ಇದು...
ಹೌದು. ನನ್ನದೇ ಎಷ್ಟೋ ಸಿನಿಮಾಗಳಲ್ಲಿ ನಾಯಕಿ ಅಂದರೆ ಬರೀ ಊಟಕ್ಕೆ ಉಪ್ಪಿನಕಾಯಿ ಅನ್ನೋ ಥರ ಇರುವುದೂ ಇದೆ. ಆದರೆ ‘ಚಕ್ರವರ್ತಿ’ಯಲ್ಲಿ ಬರೀ ಗ್ಲಾಮರ್‌ ಅಥವಾ ನೆಪಕ್ಕಾಗಿ ನಾಯಕಿ ಇಲ್ಲ. ಸಿನಿಮಾದ ಕಥೆಯೊಟ್ಟಿಗೇ ನಾಯಕಿಯ ಪಾತ್ರವೂ ಸಾಗುತ್ತಿರುತ್ತದೆ. ಆದ್ದರಿಂದಲೇ ದೀಪಾ ಕೂಡ ನನ್ನ ಹಾಗೆಯೇ ಮೂರು ಛಾಯೆಗಳಲ್ಲಿ ಕಾಣಿಸಿಕೊಂಡಿದ್ದಾರೆ.

* ನಿರ್ದೇಶಕ ಎ.ವಿ. ಚಿಂತನ್‌ ಅವರದು ಮೊದಲನೇ ಸಿನಿಮಾ. ಅವರ ಜೊತೆಗಿನ ಕೆಲಸದ ಅನುಭವ ಹೇಗಿತ್ತು?
ಚಿಂತನ್‌ ನನಗೆ ಕಥೆ ಹೇಳಿದ್ದಕ್ಕಿಂತ ಎಷ್ಟೋಪಟ್ಟು ಅದ್ಭುತವಾಗಿ ಸಿನಿಮಾ ಮಾಡಿದ್ದಾರೆ. ಅವರೊಬ್ಬ ಅತೃಪ್ತ ನಿರ್ದೇಶಕ. ಎಷ್ಟು ಶ್ರಮ ಹಾಕಿದರೂ ಕಮ್ಮಿಯಾಗಿಯೇ ಕಾಣುತ್ತದೆ ಅವರಿಗೆ. ಇನ್ನೂ ಚೆನ್ನಾಗಿ ಮಾಡಬೇಕು ಎಂಬ ಹಟವೇ ಈ ಸಿನಿಮಾ ಇಷ್ಟು ಚೆನ್ನಾಗಿ ಬರಲು ಕಾರಣವಾಗಿದೆ.

* ಈ ಸಿನಿಮಾದಲ್ಲಿನ ನಿಮ್ಮ ವಿಚಿತ್ರ ಕೇಶವಿನ್ಯಾಸದ ಬಗ್ಗೆ ಹೇಳಿ.
ಒಂದು ಛಾಯೆಯ ಪಾತ್ರ ಮುಗಿಸಿ ಇನ್ನೊಂದು ರೀತಿಯ ಪಾತ್ರದ ಚಿತ್ರೀಕರಣ ಮಾಡುವ ಮಧ್ಯ ಸ್ವಲ್ಪ ಸಮಯ ಇರುತ್ತಿತ್ತು. ಈ ಸಮಯದಲ್ಲಿ ನನ್ನನ್ನು ಕೇಶವಿನ್ಯಾಸ ಮಾಡಲಿಕ್ಕಾಗಿ ಒಂದು ಕಡೆ ಕರೆದುಕೊಂಡು ಹೋದರು. ಒಂದೆರಡು ಗಂಟೆಗಳಲ್ಲಿ ಮುಗಿಯಬಹುದು ಎಂದುಕೊಂಡಿದ್ದೆ. ಆದರೆ ಮಧ್ಯಾಹ್ನ ಮೂರು ಗಂಟೆಗೆ ಕೂತವನು ರಾತ್ರಿ ಹತ್ತು ಗಂಟೆ ಆದ್ರೂ ಓಕೆ ಆಗಲಿಲ್ಲ. ನನ್ನ ಜೀವನದಲ್ಲಿ ಯಾವತ್ತೂ ಅಷ್ಟು ಸಲ ತಲೆ ವಾಶ್‌ ಮಾಡಿಕೊಂಡಿರಲಿಲ್ಲ. ಬೇಸರವಾಗಿಬಿಟ್ಟಿತ್ತು.  ಕೊನೆಯಲ್ಲಿ ಆ ಗೆಟಪ್‌ ಚೆನ್ನಾಗಿ ಮೂಡಿಬಂತಲ್ಲ ಎಂಬ ಸಮಾಧಾನದ ಮುಂದೆ ಬೇಸರವೆಲ್ಲ ಮರೆಯಾಯಿತು.

* ಈ ಸಿನಿಮಾದಲ್ಲಿ ನಿಮ್ಮ ಜೊತೆಗೆ ಇನ್ನೂ ಹಲವು ನಾಯಕನಟರು ನಟಿಸಿದ್ದಾರೆ. ಅವರ ಜತೆಗಿನ ಅನುಭವ ಹೇಗಿತ್ತು?
ಈ ಸಿನಿಮಾದಲ್ಲಿ ನಾನು ನಾಯಕ, ಉಳಿದವರೆಲ್ಲ ಪೋಷಕ ಪಾತ್ರಗಳು ಎಂಬ ಥರ ಇಲ್ಲವೇ ಇಲ್ಲ. ‘ಚಕ್ರವರ್ತಿ’ ಎಂಬ ಹೆಸರೇ ಇಲ್ಲಿ ನಾಯಕ. ಅದರಲ್ಲಿ ದರ್ಶನ್‌ ಕೂಡ ಉಳಿದ ಪಾತ್ರಗಳಂತೆ  ಒಂದು ಪಾತ್ರ ಅಷ್ಟೆ. ಇದೇ ರೀತಿ ಸಿದ್ಧಾಂತ್‌, ಆದಿತ್ಯ, ಸೃಜನ್‌, ಕುಮಾರ್‌ ಬಂಗಾರಪ್ಪ ಎಲ್ಲರೂ ಒಂದೊಂದು ಪಾತ್ರವಾಗಿದ್ದಾರೆ.

* 80ರ ದಶಕದ ಬೆಂಗಳೂರನ್ನು ಕಟ್ಟಿಕೊಡಲು ಕಷ್ಟವಾಗಲಿಲ್ಲವೇ?
ಗ್ರಾಫಿಕ್‌ಗಳನ್ನು ಬಳಸಿಕೊಂಡಿದ್ದೇವೆ.  ಆ ಕಾಲದ ಕಾರುಗಳೇ ಸಿಗಲ್ಲ. ದಾರಿಯಲ್ಲಿ ಹೋಗುತ್ತಿರುವ ಹಳೆಯ ಕಾಲದ ವ್ಯಾನ್‌ಗಳನ್ನೆಲ್ಲ ನಿಲ್ಲಿಸಿ ಕೇಳಿಕೊಂಡು, ಚಿತ್ರೀಕರಣದಲ್ಲಿ ಬಳಸಿದ್ದೇವೆ. ಮೈಸೂರಿನಲ್ಲಿ ಗುಂಡ್ಲುಪೇಟೆಯ ಕುಟುಂಬದವರು ಹಳೆಯ ಕಾಲದ ಓಮ್ನಿಯಲ್ಲಿ ಹೋಗುತ್ತಿದ್ದರು. ನನ್ನ ಸ್ನೇಹಿತ ಅವರನ್ನು ರಸ್ತೆಯಲ್ಲಿ ನಿಲ್ಲಿಸಿ, ಅದರ ಫೋಟೊ ತೆಗೆದು ನನಗೆ ಕಳಿಸಿದ. ಅವರ ಬಳಿ ವಿನಂತಿಸಿಕೊಂಡು ಹದಿನೈದು ದಿನದ ಮಟ್ಟಿಗೆ ವಾಹನ ಬಳಸಿಕೊಂಡಿದ್ದೇವೆ. ಹೀಗೆಲ್ಲ ಕಷ್ಟಪಟ್ಟಿದ್ದೇವೆ.

* ‘ಚಕ್ರವರ್ತಿ’ಯನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಆತಂಕ ಇಲ್ಲವೇ?
ಖಂಡಿತಾ ಇಲ್ಲ. ಗೆಲುವು ಸಿಕ್ಕ ತಕ್ಷಣ ಆರಕ್ಕೇರುವುದು, ಸೋತ ತಕ್ಷಣ ಮೂರಕ್ಕೆ  ಇಳಿಯುವುದು ನನ್ನ ಸ್ವಭಾವ ಅಲ್ಲ. ನಾನು ಕನಸು ಕಾಣುವುದಕ್ಕೇ ಹೋಗುವುದಿಲ್ಲ.  ಸಿನಿಮಾ ಮಾಡ್ತೀನಿ. ಯಾವುದನ್ನೂ ‘ಅಯ್ಯೋ ಮಾಡಬೇಕಲ್ಲ’ ಎಂಬ ಬೇಸರದಿಂದಾಗಲೀ ಉದಾಸೀನದಿಂದಾಗಲೀ ಮಾಡುವುದಿಲ್ಲ. ಆ ಪಾತ್ರಕ್ಕೆ ನನ್ನಿಂದ ಏನು ಕೊಡುವುದಕ್ಕೆ ಸಾಧ್ಯವಾಗುತ್ತದೆಯೋ ಅಷ್ಟನ್ನೂ ಕೊಟ್ಟುಬಿಡುತ್ತೇನೆ. ಆಮೇಲಿನದರ ಬಗ್ಗೆ ನಿರೀಕ್ಷೆ ಇರುವುದಿಲ್ಲ.

* ಆ್ಯಕ್ಷನ್‌ ಮಾದರಿಯನ್ನು ಬಿಟ್ಟು ಬೇರೆ ರೀತಿಯ ಪ್ರಯೋಗಗಳಿಗೆ ಒಡ್ಡಿಕೊಳ್ಳಬೇಕು ಎಂದು ನಿಮಗೆ ಅನಿಸಿಲ್ಲವೇ?
ಅಂಥ ಅವಕಾಶಗಳು ನನಗೆ ಬಂದಿಲ್ಲ. ಬಂದಾಗ ಖಂಡಿತ ಮಾಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT