ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಿನ ಮನೆಗೆ ಸಜ್ಜಾಗಿ

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಎಂದರೆ ಅದು ಯಾವತ್ತಿಗೂ ಒಂದು ಬಹು ದೊಡ್ಡ ಸಂಗತಿಯೇ. ಐನೂರು ಮತ್ತು ಒಂದು ಸಾವಿರ ಮುಖಬೆಲೆಯ ನೋಟು ರದ್ದಾದ  ನಂತರ ಬಹುತೇಕ ಸ್ಥಗಿತಗೊಂಡಿದ್ದ ರಿಯಲ್‌ ಎಸ್ಟೇಟ್‌ ಉದ್ಯಮ ಇದೀಗ ಹೊಸ ಹುರುಪು ಪಡೆದು ಗರಿಗೆದರಿ ನಿಂತಿದೆ.

ಈಗಿನ ಎಲ್ಲಾ ರಿಯಲ್‌ ಎಸ್ಟೇಟ್‌ ವ್ಯವಹಾರಗಳೂ ನಗದು ರಹಿತವಾಗಿ ನಡೆಯುತ್ತಿರುವುದರಿಂದ ಉದ್ಯಮದಲ್ಲಿ ಸಾಕಷ್ಟು ಪಾರದರ್ಶಕತೆಯೂ ಮೂಡಿದೆ. ಹೀಗಾಗಿ ಇದು ಹೂಡಿಕೆಗೆ ಅತ್ಯಂತ ಸಮಂಜಸ ಸಮಯ ಎನ್ನುವುದು ತಜ್ಞರ ಅಭಿಮತ.

ಈ ಹೊಸ ಪರ್ವದಲ್ಲಿ ನೀವೂ ಸಹ ಕನಸಿನ ಮನೆಗೆ ಯೋಜಿಸುತ್ತಿದ್ದೀರಿ ಎಂದಾದರೆ ಇಲ್ಲಿರುವ ಕೆಲವು ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಉಂಟಾದ ಬದಲಾವಣೆಯಿಂದ ಕೈಗೆಟುಕುವ ದರದಲ್ಲಿ ಮನೆಗಳು ದೊರಕುತ್ತಿವೆ. ಅದರಲ್ಲೂ ಫ್ಲ್ಯಾಟ್‌ಗಳ ಬೆಲೆ ಸಾಕಷ್ಟು ಕಡಿಮೆ ಆಗಿದೆ. ವ್ಯವಹಾರ ಸುಲಭವಾಗಿದೆ ಎಂದೆನಿಸಿದರೂ ಕೆಲವು ಮುಖ್ಯ ಸಂಗತಿಗಳತ್ತ ಗಮನ ಹರಿಸಲೇಬೇಕು.

ನಮ್ಮ ಕನಸಿನ ಮನೆ  ನಮಗೆ ನೆಮ್ಮದಿ ಹಾಗೂ ಭದ್ರತೆಯನ್ನು ನೀಡುವಂತಾಗಬೇಕೇ ಹೊರತು ಆತಂಕ, ಚಿಂತೆ, ಅಭದ್ರತೆಗೆ ನಾಂದಿ ಹಾಡಬಾರದು. ಈ ಸಮಯದಲ್ಲಿ ತೆಗೆದುಕೊಳ್ಳುವ ಒಂದು ಸೂಕ್ತವಾದ ನಿರ್ಧಾರ ನಮ್ಮ ಜೀವನದ ದಿಕ್ಕನ್ನೇ ಬದಲಿಸಬಹುದು.

ಜೀವಮಾನದ ಕೂಡಿಕೆಯನ್ನೆಲ್ಲ ಬಸಿದು ಮನೆ ಕೊಳ್ಳುವ ಮುನ್ನ ಈ ಕೆಳಗಿನ ಸಂಗತಿಗಳನ್ನೊಮ್ಮೆ ಪರಿಶೀಲಿಸಬೇಕಾಗುತ್ತದೆ–

ಹಣಕಾಸು ಲೆಕ್ಕಾಚಾರ: ನಿಮ್ಮದೇ ಆದ ಒಂದು ಮನೆ ಮಾಡಿಕೊಳ್ಳಬೇಕು ಎಂದು ಆಲೋಚಿಸಿದ ತಕ್ಷಣ ನಿಮ್ಮ ಹಣಕಾಸು ಶಕ್ತಿಯನ್ನೊಮ್ಮೆ ಅವಲೋಕಿಸಿಕೊಳ್ಳಬೇಕು. ನಿಮ್ಮ ಸಂಬಳ, ಇಷ್ಟು ವರ್ಷಗಳ ಹೂಡಿಕೆ, ಹೆಚ್ಚುವರಿ ಆದಾಯ, ನಿಮಗೆ ಸಿಗಬಹುದಾದ ಸಾಲ ಎಲ್ಲವನ್ನೂ ಲೆಕ್ಕ ಹಾಕಬೇಕು. ಮತ್ತು ಅದರ ಆಧಾರದ ಮೇಲೆ ನಿಮಗೆ ಮನೆ, ನಿವೇಶನ ಅಥವಾ ಫ್ಲ್ಯಾಟ್‌ ಯಾವುದು ಸೂಕ್ತ ಎನ್ನುವುದನ್ನು ಪರಿಶೀಲಿಸಬೇಕು.

ನಿಮ್ಮ ಸಂಬಳ, ಒಟ್ಟು ವರಮಾನ, ಖರ್ಚು ಎಲ್ಲವನ್ನು ಲೆಕ್ಕ ಹಾಕಬೇಕು. ಇದರಲ್ಲಿ ನೀವು ನಿಮ್ಮ ಕನಸಿನ ಮನೆಗೆ ಎಷ್ಟು ಹಣ ಹೂಡಬಹುದು, ಎಷ್ಟು ಗೃಹಸಾಲ ಪಡೆಯಬಹುದು, ಅದಕ್ಕೆ ತಿಂಗಳ ಕಂತು ಎಷ್ಟು ಮತ್ತು ಎಷ್ಟು ವರ್ಷಕ್ಕೆ ಎಂಬುದನ್ನೆಲ್ಲ ಲೆಕ್ಕ ಹಾಕಿ ಒಂದು ನಿರ್ಧಾರಕ್ಕೆ ಬನ್ನಿ.

ಸಂಶೋಧನೆ: ಎಲ್ಲಾ ರೀತಿಯಿಂದ ಆಲೋಚಿಸಿ ಮನೆ ಕೊಳ್ಳುವ ಬಗ್ಗೆ ನಿರ್ಧಾರ ತೆಗೆದುಕೊಂಡ ನಂತರ ಎರಡನೇ ಹೆಜ್ಜೆಯಾಗಿ ನೀವು ಕೊಳ್ಳಬೇಕೆಂದಿರುವ ನಿವೇಶನ ಅಥವಾ ಮನೆಯ ಬಗ್ಗೆ ಅಗತ್ಯ ಮಾಹಿತಿಯನ್ನು ಶೋಧಿಸಬೇಕು. ಹಣಕಾಸು, ಅನುಕೂಲತೆ, ಮೂಲಸೌಕರ್ಯಗಳು ಹಾಗೂ ಅಭಿವೃದ್ಧಿಯ ಸಾಧ್ಯತೆಗಳನ್ನು ಇಲ್ಲಿ ಪರಿಗಣಿಸಬೇಕಾಗುತ್ತದೆ.

ನಿಮ್ಮ ಮನೆಯನ್ನು ಆಯ್ಕೆ ಮಾಡಿದ ನಂತರ ಆ ಬಿಲ್ಡರ್‌ನ ಹಿನ್ನೆಲೆ ಹಾಗೂ ವಸತಿ ಸಮುಚ್ಛಯದ ಬಗ್ಗೆ ಸ್ನೇಹಿತರು, ಬಂಧುಗಳು, ಸಹೋದ್ಯೋಗಗಳಿಂದ ಮಾಹಿತಿ ಪಡೆಯುವುದು ಸೂಕ್ತ. ಬಹಳ ವರ್ಷಗಳಿಂದ ಈ ಉದ್ಯಮದಲ್ಲಿ ಇರುವವರಾದರೆ ಹಾಗೂ ಅವರು ಉತ್ತಮ ಕೆಲಸಗಳಿಂದ ಹೆಸರು ಮಾಡಿರುವವರಾದರೆ ಒಳ್ಳೆಯದು.

ಬಂಡವಾಳ ಬೆಳವಣಿಗೆ: ಆಸ್ತಿ ಖರೀದಿಯ ಮೇಲೆ ಬಂಡವಾಳ ಹೂಡುವ ಮುನ್ನ ಪರಿಗಣಿಸಬೇಕಾದ ಬಹು ಮುಖ್ಯ ಸಂಗತಿ ಎಂದರೆ ಬಂಡವಾಳ ಬೆಳವಣಿಗೆ. ನೀವು ಯೋಜಿಸಿರುವ ಭಾಗಗಳಲ್ಲಿ ಸ್ಥಿರಾಸ್ತಿಯ ಬೆಲೆ ಏರುಮುಖವಾಗಿದೆಯೇ ಎನ್ನುವುದನ್ನು ನೋಡಿ. ಮುಂಬರುವ ವರ್ಷಗಳಲ್ಲಿ ಅಲ್ಲಿ ಅಭಿವೃದ್ಧಿಗೆ ಅವಕಾಶವಿದೆಯೇ, ನಿಮ್ಮ ಹೂಡಿಕೆಯ ಮೌಲ್ಯ ಹೆಚ್ಚುವ ಅವಕಾಶಗಳಿವೆಯೇ ಅಥವಾ ಇಲ್ಲವೇ ಎನ್ನುವುದನ್ನೂ ಕೂಲಂಕಷವಾಗಿ ಪರೀಕ್ಷಿಸಿ. ಅಗತ್ಯ ಬಿದ್ದರೆ ಉದ್ಯಮದ ತಜ್ಞರನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ.

ಸಂಪರ್ಕ–ಸೌಕರ್ಯ: ನೀವು ಯೋಜಿಸಿರುವ ಮನೆ ಅಥವಾ ನಿವೇಶನಕ್ಕೆ ನಗರದ ಎಲ್ಲಾ ಭಾಗಗಳಿಗೆ ಸುಲಭ ಸಂಪರ್ಕವಿದೆಯೇ ಹಾಗೂ ಮೂಲ ಸೌಕರ್ಯಗಳೆಲ್ಲವೂ ಇವೆಯೇ ಎನ್ನುವುದನ್ನೂ ನೋಡಿ. ಶಾಲೆ, ಕಾಲೇಜು, ಆಸ್ಪತ್ರೆಯಂತಹ ಸೌಲಭ್ಯಗಳೆಲ್ಲ ಹತ್ತಿರದಲ್ಲಿ ಇರಬೇಕು.

ಫ್ಲ್ಯಾಟ್‌ ಖರೀದಿಸುವವರಾದರೆ ಲಿಫ್ಟ್‌, ಆಟದ ಮೈದಾನ, ಜಿಮ್‌, ಪಾರ್ಕಿಂಗ್‌, ಗಾರ್ಡನ್‌ನಂತಹ ವ್ಯವಸ್ಥೆಗಳಿವೆಯೇ ಎನ್ನುವುದನ್ನು ನೋಡಬೇಕು.

ಮೂಲ ದಾಖಲೆಗಳ ಪರೀಕ್ಷೆ: ನೀವು ಎಲ್ಲಿ, ಯಾವ ರೀತಿಯ ಮನೆಯನ್ನು ಖರೀದಿಸಬೇಕು, ಅಲ್ಲಿರುವ ನಿಜವಾದ ಮಾರುಕಟ್ಟೆ ಮೌಲ್ಯವೇನು ಎನ್ನುವುದನ್ನೆಲ್ಲ ತಿಳಿದುಕೊಂಡು ನಿಮ್ಮ ಮನೆಯ ಒಟ್ಟು ಮೌಲ್ಯದ ಬಗ್ಗೆ ಮಾತುಕತೆ ಪೂರ್ಣಗೊಂಡ ನಂತರ ಮೂಲ ದಾಖಲೆಗಳನ್ನು ಪರೀಕ್ಷಿಸಿ. ಇದಕ್ಕೆ ಸ್ವಲ್ಪ ಹಣ ಖರ್ಚಾದರೂ ಸರಿ. ಸಂಬಂಧಪಟ್ಟ ಅಧಿಕಾರಿಗಳಿಂದ, ಇಲಾಖೆಗಳಿಂದ ಹಾಗೂ ವಕೀಲರಿಂದ ಎಲ್ಲಾ ಕಾಗದಪತ್ರಗಳನ್ನು ಪರೀಕ್ಷಿಸಿಕೊಳ್ಳಿ.

ಸಾಕಷ್ಟು ಸಮಯ ತೆಗೆದುಕೊಳ್ಳಿ: ಆಸ್ತಿ ಖರೀದಿಸುವುದು ಎಂದರೆ ಸಾಮಾನ್ಯ ವಿಷಯವಲ್ಲ. ಅದು ಸಾಕಷ್ಟು ಸಮಯ ಹಿಡಿಯುವ ಕೆಲಸ. ಅವಸರ ಮಾಡದೇ ತನ್ನದೇ ಆದ ಗತಿಯಲ್ಲಿ ಆ ಪ್ರಕ್ರಿಯೆ ಎಲ್ಲಾ ಪೂರ್ಣಗೊಳ್ಳುವವರೆಗೆ ಕಾಯಿರಿ. ಅನಗತ್ಯ ಅವಸರ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT