ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿದ್ಯಾವಿಶ್ವ’ದಿಂದ ಹೊರಗುಳಿಯದಿರಲಿ

‘ಡಾ. ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌’ ಉತ್ಕೃಷ್ಟತೆಯ ದ್ವೀಪವಾಗದಿರಲಿ
Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
l ಜ್ಯೋತ್ಸ್ನಾ ಝಾ 
ಮಾಧ್ಯಮಗಳ  ವರದಿಗಳು ಹೇಳುತ್ತಿರುವಂತೆ ಕರ್ನಾಟಕ ಸರ್ಕಾರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಮಾದರಿಯನ್ನಿಟ್ಟುಕೊಂಡು ಅಂತರರಾಷ್ಟ್ರೀಯ ಗುಣಮಟ್ಟದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯೊಂದನ್ನು ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಆರಂಭಿಸುತ್ತಿದೆ.
 
ಇದರ ಶೈಕ್ಷಣಿಕ ಚಟುವಟಿಕೆ 2017-18ರ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗಲಿದೆ. ಬೆಂಗಳೂರು ವಿಶ್ವವಿದ್ಯಾಲಯವಿರುವ ಜ್ಞಾನಭಾರತಿಯೊಳಗೇ ಇದೂ ಕಾರ್ಯನಿರ್ವಹಿಸಲಿದೆ.
 
ದೇಶವ್ಯಾಪಿಯಾಗಿ ಲಾಭದ ಉದ್ದೇಶವನ್ನಿಟ್ಟುಕೊಂಡ ಸಂಸ್ಥೆಗಳೇ ಹೆಚ್ಚಾಗುತ್ತಿರುವ ಮತ್ತು ಸಾರ್ವಜನಿಕರ ಹಣದಿಂದ ನಡೆಯುವ ವಿಶ್ವವಿದ್ಯಾಲಯಗಳನ್ನು ವ್ಯವಸ್ಥಿತವಾಗಿ ನಾಶಗೊಳಿಸುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ, ಅಂತರರಾಷ್ಟ್ರೀಯ ಗುಣಮಟ್ಟದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯೊಂದನ್ನು ಸ್ಥಾಪಿಸುತ್ತಿರುವುದು ಸ್ವಾಗತಾರ್ಹ.
 
ಆದರೆ ಇದಿಷ್ಟೇ ಎಲ್ಲವನ್ನೂ ಸಾಧ್ಯವಾಗಿಸುವುದಿಲ್ಲ. ಸಂಸ್ಥೆ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಗ್ರಹಿಸಿ ಅನುಷ್ಠಾನಗೊಳಿಸುವುದು ಬಹಳ ಮುಖ್ಯ. ಇದಕ್ಕೆ ಸಂಬಂಧಿಸಿದ ಕೆಲವು ಆಲೋಚನೆಗಳು ಇಲ್ಲಿವೆ.
 
ಉದ್ದೇಶಿತ ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ಗೆ ಒಂದು ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯಾಚೆಗಿನ ಉದ್ದೇಶಗಳಿವೆಯೇ? ಇದು ಇರಲೇ ಬೇಕೆಂದೇನೂ ಇಲ್ಲ. ಆದರೆ ಇದು ಅಂಬೇಡ್ಕರ್ ಅವರ ಹೆಸರನ್ನು ಹೊತ್ತಿರುವ ಸಂಸ್ಥೆ.
 
ಈಗ ದೇಶದಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪ್ರಾದೇಶಿಕ, ಸಾಮಾಜಿಕ, ಆರ್ಥಿಕ, ಸಾಮುದಾಯಿಕ ಅಸಮಾನತೆಗಳೆಲ್ಲವೂ ಅಂಬೇಡ್ಕರ್ ಅವರ ಪರಿಕಲ್ಪನೆಯ ಭಾರತಕ್ಕೆ ಹೊರತಾದವು. ಈ ಹೊತ್ತಿನಲ್ಲಿ ಅವರ ಹೆಸರಿನಲ್ಲಿ ಆರಂಭವಾಗುತ್ತಿರುವ ಶೈಕ್ಷಣಿಕ ಸಂಸ್ಥೆಯೊಂದು ಅವರ ಆದರ್ಶಗಳನ್ನು ಮಾರ್ಗದರ್ಶಕ ತತ್ವಗಳನ್ನಾಗಿ ಅಳವಡಿಸಿಕೊಳ್ಳುವುದು ಅಗತ್ಯ.
 
ಈ ಸಂಸ್ಥೆ ಮೊದಲನೇ ವರ್ಷದಿಂದಲೇ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲು ಹೊರಟಿದೆ. ಇಂಥದ್ದೊಂದು ಕೋರ್ಸ್ ಆರಂಭಿಸುವುದಕ್ಕೆ ಪೂರ್ವಸಿದ್ಧತೆಗಳೇನು? ಈ ಪ್ರಶ್ನೆಗೆ ಮಾಧ್ಯಮ ವರದಿಗಳಲ್ಲಿ ಉತ್ತರ ಸಿಗುವುದಿಲ್ಲ.

ಸಾಕಷ್ಟು ಪೂರ್ವಸಿದ್ಧತೆಯಿಲ್ಲದೆ ಯಾವುದೇ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವುದು ಒಳ್ಳೆಯ ಲಕ್ಷಣವಲ್ಲ. ಮಾನವಿಕ ವಿಷಯದಲ್ಲಿ ಅತ್ಯುತ್ತಮ ಸ್ನಾತಕೋತ್ತರ ಕೋರ್ಸ್‌ಗಳ ಅಗತ್ಯ ಬೆಂಗಳೂರಿಗಿದೆ.
 
ಇದನ್ನು ಒದಗಿಸುವುದಕ್ಕೆ ಬಹಳ ವಿವರವಾದ ಪಠ್ಯಕ್ರಮ, ಬೋಧನಾ ವಿಧಾನ ಮತ್ತು ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಬೇಕಿರುವ ಒಳ್ಳೆಯ ಬೋಧಕ ವರ್ಗ ಅಗತ್ಯ. ಇದರ ಜೊತೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಬಗ್ಗೆಯೂ ಒಂದು ಮಟ್ಟದ ಸ್ಪಷ್ಟತೆ ಬೇಕಾಗುತ್ತದೆ.

ವಿದ್ಯಾರ್ಥಿಗಳಲ್ಲಿ ಶೇ 30ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿರುತ್ತಾರೆ ಎಂಬ ಅಂಶವನ್ನು ಹೊರತುಪಡಿಸಿದರೆ ಇನ್ನಾವ ಸ್ಪಷ್ಟತೆಯೂ ಈ ತನಕ ಕಾಣಿಸುತ್ತಿಲ್ಲ. ಈ ವಿದ್ಯಾರ್ಥಿಗಳು ಯಾರಾಗಿರಬೇಕು ಎಂಬುದರ ಬಗ್ಗೆಯೂ ಸಂಸ್ಥೆಗೆ ಸ್ಪಷ್ಟತೆ ಇರಬೇಕು. ಇದಕ್ಕೆ ಅಗತ್ಯವಿರುವ ನೀತಿ ರೂಪುಗೊಳ್ಳಬೇಕು.
 
ಮೊದಲ ವರ್ಷ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳಬೇಕು. ಎರವಲು ಪಡೆದ ಬೋಧಕರನ್ನು ಬಳಸಿಕೊಂಡು ಅರೆಬೆಂದ ಕೋರ್ಸ್ ಆರಂಭಿಸಿ ಕೈಸುಟ್ಟುಕೊಳ್ಳುವುದಕ್ಕಿಂತ ಒಂದು ವರ್ಷ ತಡವಾಗಿ ಸಕಲ ಸಿದ್ಧತೆಗಳೊಂದಿಗೆ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸುವುದು ಒಳ್ಳೆಯದಲ್ಲವೇ?
 
ಈ ಸಂಸ್ಥೆಯ ಭೌತಿಕ ಮತ್ತು ಶೈಕ್ಷಣಿಕ ನೆಲೆಗಳೆರಡರ ಕುರಿತೂ ಆಲೋಚಿಸಬೇಕಾದ ವಿಚಾರಗಳಿವೆ. ಈಗ ತಿಳಿದುಬಂದಿರುವಂತೆ ಇದು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ಜ್ಞಾನಭಾರತಿಯ ಆವರಣದಲ್ಲಿರುತ್ತದೆ. ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅರ್ಥಾತ್ ಬೆಂಗಳೂರು ವಿ.ವಿಯ ಆಡಳಿತಾತ್ಮಕ ನಿಯಂತ್ರಣದ ಹೊರಗಿರುತ್ತದೆ.
 
ಅಂದರೆ ವಿಶ್ವವಿದ್ಯಾಲಯದ ಭಾಗವೇ ಆಗದೆ ಅದರಿಂದ ಪದವಿ ಕೊಡಿಸುವ ಮತ್ತೊಂದು ಸಂಸ್ಥೆ ಇದಾಗುತ್ತದೆ. ಇದರಿಂದಾಗಿ ಈ ಸಂಸ್ಥೆಯ ವಿದ್ಯಾರ್ಥಿಗಳು ‘ವಿದ್ಯಾವಿಶ್ವ’ದಿಂದ ಹೊರಗೇ ಉಳಿಯುತ್ತಾರೆ. ವಿಶ್ವವಿದ್ಯಾಲಯ ಎಂಬ ಪರಿಕಲ್ಪನೆಯಿರುವುದೇ ಜ್ಞಾನ ಶಿಸ್ತುಗಳ ನಡುವಣ ಹೆಣಿಗೆಯನ್ನು ಸಾಧ್ಯ ಮಾಡುವುದಕ್ಕೆ. ಇಂಥದ್ದೊಂದು ‘ವಿದ್ಯಾವಿಶ್ವ’ದಿಂದ ಸಂಸ್ಥೆಯನ್ನು ಹೊರಗುಳಿಸುವುದು ಅನಪೇಕ್ಷಣೀಯ. 
 
ಈ ವಿಷಯದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನುಸರಿಸಬಹುದಾದ ಎರಡು ಮಾದರಿಗಳನ್ನು ಇಲ್ಲಿ ಉಲ್ಲೇಖಿಸಬಹುದು. ಒಂದು ದೆಹಲಿಯ ‘ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್’ (ಡಿಎಸ್‌ಇ) ಮತ್ತೊಂದು ಬೆಂಗಳೂರಿನಲ್ಲೇ ಇರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್).
 
ಡಿಎಸ್ಇ ಆರಂಭವಾದದ್ದು ದೆಹಲಿ ವಿ.ವಿಯ ಭಾಗವಾಗಿ. ಇದು ಕಾರ್ಯನಿರ್ವಹಿಸುತ್ತಾ ಇದ್ದದ್ದೂ ಅದೇ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ. ಅಷ್ಟೇ ಅಲ್ಲದೆ, ಶೈಕ್ಷಣಿಕವಾಗಿ ಮತ್ತು ಆಡಳಿತಾತ್ಮಕವಾಗಿಯೂ ದೆಹಲಿ ವಿ.ವಿ ಭಾಗವೇ ಆಗಿದೆ.
 
ಡಿಎಸ್‌ಇ ಒಂದು ಅತ್ಯುತ್ತಮ ಉನ್ನತ ಅಧ್ಯಯನ ಸಂಸ್ಥೆಯಾಗಿ ಬೆಳೆದದ್ದು ಈಗ ಇತಿಹಾಸದ ಭಾಗ. ಈ ಬೆಳವಣಿಗೆಯ ಲಾಭ ಡಿಎಸ್‌ಇಗೆ ಆದಂತೆಯೇ ದೆಹಲಿ ವಿ.ವಿಗೂ ಆಯಿತು. ವಿ.ವಿ ಭಾಗವಾಗಿದ್ದ ಈ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಬೋಧಕರಿಗೆ ತಮ್ಮ ಬೌದ್ಧಿಕತೆಯನ್ನು ಒರೆಗೆ ಹಚ್ಚಲು ಹೊಸ ಬಗೆಯ ಅವಕಾಶಗಳು ದೊರೆತವು. ಡಿಎಸ್ಇಯ ಬೋಧಕ ವರ್ಗ ಮತ್ತು ವಿದ್ಯಾರ್ಥಿ ವರ್ಗಗಳ ಉತ್ಕೃಷ್ಟತೆಯೇ ಉಳಿದೆಲ್ಲವನ್ನೂ ಹೇಳುತ್ತಿದೆ.
 
ಬೆಂಗಳೂರಿನ ಐಸೆಕ್‌ಗೂ ಬೆಂಗಳೂರು ವಿ.ವಿಗೂ ಸಂಬಂಧ ಹೀಗಿಲ್ಲ. ಕೆಲವು ಅನೌಪಚಾರಿಕ ಸಂವಾದಗಳನ್ನು ಹೊರತುಪಡಿಸಿದರೆ ಇವರೆಡೂ ಭಿನ್ನ ದ್ವೀಪಗಳು.  ಡಿಎಸ್‌ಇ ಮತ್ತು ಐಸೆಕ್‌ಗಳೆರಡರ ಸ್ಥಾಪನೆಯಲ್ಲಿಯೂ ಬಹುಮುಖ್ಯ ಪಾತ್ರವಹಿಸಿದ್ದ ವಿ.ಕೆ.ಆರ್.ವಿ.ರಾವ್ ಅವರಿದ್ದಿದ್ದರೆ ಡಿಎಸ್‌ಇ ಮಾದರಿಯೇ ಐಸೆಕ್ ಮಾದರಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಒಪ್ಪುತ್ತಿದ್ದರು.
 
ವಿದೇಶದ ಮತ್ತು ದೇಶದೊಳಗಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ಶಕ್ತಿ ಬೆಂಗಳೂರಿಗಿರುವುದನ್ನು ಈ ಸಂಸ್ಥೆಯ ಸ್ಥಾಪನೆಯ ತರ್ಕವನ್ನಾಗಿ ಮುಂದಿಡಲಾಗುತ್ತಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗಗಳೂ ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಏರಬೇಕಾಗಿದೆ.
 
ವಿಶ್ವವಿದ್ಯಾಲಯದ ಕ್ಯಾಂಪಸ್‌ನ ಒಳಗಿರುವ ಅಂತರರಾಷ್ಟ್ರೀಯ ಗುಣಮಟ್ಟದ ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆ ಉಳಿದೆಲ್ಲ ಮಾನವಿಕ ವಿಭಾಗಗಳ ಗುಣಮಟ್ಟವನ್ನು ವಿಸ್ತರಿಸುವ ಸಾಧ್ಯತೆಯನ್ನು ತೆರೆಯುತ್ತದೆ.
 
ಕರ್ನಾಟಕ ಸರ್ಕಾರ ಹೊಸ ಆಲೋಚನೆಗಳಿಗೆ ಅವಕಾಶ ಒದಗಿಸಿ, ಲಂಡನ್ ಮತ್ತು ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಮಟ್ಟಕ್ಕೆ ಬೆಳೆಸುವ ದೂರದೃಷ್ಟಿ ಮತ್ತು ಕಾಣ್ಕೆಯ ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಬೇಕೆಂಬುದು ನನ್ನಂಥವರ ಹಾರೈಕೆ.
ಲೇಖಕಿ ಬೆಂಗಳೂರಿನ ಸೆಂಟರ್ ಫಾರ್ ಬಜೆಟ್ ಅಂಡ್ ಪಾಲಿಸಿ ಸ್ಟಡೀಸ್‌ನ ನಿರ್ದೇಶಕಿ. ಲೇಖನದ ನಿಲುವುಗಳು ವೈಯಕ್ತಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT