ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಢಿಗತ ನೆಲೆಯ ಫಲಿತಾಂಶ ಕಾಂಗ್ರೆಸ್‌ಗೆ ಸಾಂತ್ವನದ ಸಿಂಚನ

Last Updated 13 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅವಧಿ ಬರೀ ವರ್ಷವಾದರೂ ಎರಡು ರಾಷ್ಟ್ರೀಯ ಪಕ್ಷಗಳ ಪೊಳ್ಳು ಪ್ರತಿಷ್ಠೆಯಿಂದಾಗಿ ಇನ್ನಿಲ್ಲದ ಮಹತ್ವ ಪಡೆದುಕೊಂಡ ರಾಜ್ಯದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ.
 
ಈ ಚುನಾವಣೆಯನ್ನು ಸವಾಲಾಗಿ ಪರಿಗಣಿಸಿದ ಆಡಳಿತಾರೂಢ ಕಾಂಗ್ರೆಸ್‌, ಎರಡೂ ಕ್ಷೇತ್ರಗಳನ್ನು ಉಳಿಸಿಕೊಂಡಿದ್ದರಲ್ಲಿ ಅಚ್ಚರಿಪಡುವಂತಹುದು ಏನೂ ಇಲ್ಲ. ಉಪಚುನಾವಣೆಗಳ ಫಲಿತಾಂಶ ಹೆಚ್ಚಿನ ಸಂದರ್ಭಗಳಲ್ಲಿ  ಆಡಳಿತಾರೂಢ ಪಕ್ಷದ ಪರವಾಗಿ ಹೊರಹೊಮ್ಮುವುದು ಸಾಮಾನ್ಯ ಸಂಗತಿ.

ಹಾಗಾಗಿ ಉಪಚುನಾವಣೆಗಳ ಗೆಲುವನ್ನು ದಿಕ್ಸೂಚಿ ಎಂದು ಬಿಂಬಿಸಿಯೋ, ಸರ್ಕಾರದ ಕಾರ್ಯಕ್ರಮಗಳಿಗೆ  ಜನರ ಅನುಮೋದನೆಯ ಮುದ್ರೆ ಎಂದು ವಿಶ್ಲೇಷಿಸಿಯೋ  ಬೀಗಬೇಕಾದ ಅಗತ್ಯ ಇಲ್ಲ.
 
ಹಾಗೆಂದು ಭಾವಿಸಿ ಮೈಮರೆತವರು ಸಾರ್ವತ್ರಿಕ ಚುನಾವಣೆಯಲ್ಲಿ ಬೆಲೆ ತೆತ್ತ ನಿದರ್ಶನಗಳು ಬೇಕಾದಷ್ಟಿವೆ. ಹಾಗಾಗಿ ಆಡಳಿತ ಪಕ್ಷಕ್ಕೆ ಈ ಎಚ್ಚರ ಇರಬೇಕು.  ಅಧಿಕಾರದಲ್ಲಿ ಇರುವ  ಪಕ್ಷಕ್ಕೆ ಸಹಜವಾಗಿಯೇ ಅನುಕೂಲಗಳು ಹೆಚ್ಚು.
 
ಸಂಪನ್ಮೂಲ ಹಾಗೂ ಅಧಿಕಾರ ಬಲ ನಿಸ್ಸಂದೇಹವಾಗಿ ನೆರವಿಗೆ ಬರುತ್ತವೆ. ಆದರೆ ಚುನಾವಣೆ ಗೆಲ್ಲಲು ಅವಷ್ಟೇ ಸಾಕಾಗುವುದಿಲ್ಲ. ಅವುಗಳ ಹೊರತಾಗಿಯೂ ಮತದಾರರ ಒಲವು ಗಳಿಸುವುದು, ಒಳಹೊಡೆತಗಳಿಂದ ಪಾರಾಗುವುದು ಹಾಗೂ  ಆಡಳಿತ ವಿರೋಧಿ ಅಲೆ ತೊಡರಾಗಿ ಪರಿಣಮಿಸದಂತೆ ನೋಡಿಕೊಳ್ಳುವುದು ಅವಶ್ಯ.

ಅದಕ್ಕೆ ಸಂಘಟಿತ ಪ್ರಯತ್ನ, ತಂತ್ರಗಾರಿಕೆ   ಬೇಕು. ಕಾಂಗ್ರೆಸ್‌ಗೆ ಅನೇಕ ವೇಳೆ ಕೈಕೊಟ್ಟಿರುವುದೇ ಇವುಗಳಲ್ಲಿನ ಕೊರತೆ. ಈ ಉಪಚುನಾವಣೆಯಲ್ಲಿ ಅವು ಕೈಕೊಡದಂತೆ ನೋಡಿಕೊಂಡಿದ್ದೇ ಆ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣ ಎನ್ನಬಹುದು.
 
ಈ ಉಪಚುನಾವಣೆ ಫಲಿತಾಂಶಕ್ಕೆ ರಾಜಕೀಯ ಪಲ್ಲಟಗಳಿಗೆ ದಾರಿ ತೆಗೆಯುವ ಕಿಮ್ಮತ್ತು ಏನೂ ಇದ್ದಿರಲಿಲ್ಲ. ಆದರೂ ಪ್ರತಿಷ್ಠೆಯಾಗಿ ಪರಿವರ್ತಿಸಿದ್ದು ಬಾಲಿಶ ನಡೆ. ಇದಕ್ಕೆ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಸಮಪ್ರಮಾಣದಲ್ಲಿ ಹೊಣೆ ಹೊರಬೇಕು.
 
 ಈ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸದಸ್ಯರು ತಮ್ಮ ದೈನಂದಿನ ಕೆಲಸ ಕಾರ್ಯ ಬದಿಗೊತ್ತಿ ಅಲ್ಲೇ ಬೀಡುಬಿಟ್ಟರು. ಈ ಕ್ಷೇತ್ರಗಳನ್ನು ಕಾಂಗ್ರೆಸ್‌ನಿಂದ ಹೇಗಾದರೂ ಕಸಿದುಕೊಂಡು ಆ ಪಕ್ಷದ ಆತ್ಮಸ್ಥೈರ್ಯ ಕುಗ್ಗಿಸಬೇಕು ಎಂದು ಬಿಜೆಪಿ ಜಿದ್ದಿಗೆ ಬಿದ್ದಂತೆ ಅಬ್ಬರ ಮಾಡಿತು.

ಅಭಿವೃದ್ಧಿಗೆ ಸಂಬಂಧಿಸಿದ ಮಾತು ಮುನ್ನೆಲೆಗೆ ಬರಲೇ ಇಲ್ಲ. ವಿಷಯಾಧಾರಿತ ಅಥವಾ ತತ್ವಾಧಾರಿತ ಚರ್ಚೆಗೆ ತಾವಿರಲಿಲ್ಲ. ಬದಲಿಗೆ ‘ಸ್ವಾಭಿಮಾನ ಮತ್ತು ದುರಹಂಕಾರದ ನಡುವೆ ಸ್ಪರ್ಧೆ’, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವೆ ಸಮರ’... ಎಂದು ವ್ಯಕ್ತಿ ನೆಲೆಯಲ್ಲಿ ಠೇಂಕಾರದ ಮಾತು ಮೊಳಗಿದ್ದು ನಮ್ಮ ಚುನಾವಣಾ ಚರ್ಚೆಗಳು ದಿಕ್ಕು ತಪ್ಪಿರುವುದರ ಸಂಕೇತ.

ಮದಗಜಗಳ ಗುದ್ದಾಟದ ನಡುವೆ ಸಿಲುಕಿ ನಲುಗುವುದು ಬೇಡ ಎಂಬಂತೆ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದು ಜಾಣತನ ಮೆರೆಯಿತಾದರೂ ಅದರಿಂದ ಪ್ರಯೋಜನ ಪಡೆದದ್ದು ಕಾಂಗ್ರೆಸ್‌. ನಂಜನಗೂಡು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿನ ಅಂತರವೇ ಇದನ್ನು ದೃಢಪಡಿಸುತ್ತದೆ.
 
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಗೆಲುವಿನ ಉಮೇದಿನಲ್ಲಿ ತೇಲುತ್ತಿರುವ ಬಿಜೆಪಿಯ ಓಟಕ್ಕೆ ತಡೆಯೊಡ್ಡುವ ಉದ್ದೇಶದಿಂದ ಜೆಡಿಎಸ್‌ ಇಂತಹ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಗುಮಾನಿ  ರಾಜಕೀಯ ವಲಯದಲ್ಲಿ ಇದೆ.
 
ರಾಷ್ಟ್ರೀಯ ಪಕ್ಷಗಳ ‘ಜಿಗಿತ’ಕ್ಕೆ ತಡೆಹಾಕುವುದರಲ್ಲೇ ತಮ್ಮ ಅಸ್ತಿತ್ವ ಅಡಗಿದೆ ಎಂದು ಜೆಡಿಎಸ್‌ ಏನಾದರೂ ಭಾವಿಸಿದ್ದರೆ, ಅದರ ನಿಲುವಿನಲ್ಲಿ ಹುಳುಕು ಹುಡುಕುವಂತಹುದು ಏನೂ ಇಲ್ಲ. ಯಾರ ಹಿತ ಇನ್ನಾರ ಮಿತಿಯಲ್ಲಿ  ಅಡಗಿದೆಯೋ?
 
ಅನುಕೂಲದ ಅಲೆಯ ಮೇಲೆ ದಡ ಸೇರಿದ್ದರೂ ಈ ಫಲಿತಾಂಶವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಿರುವುದಂತೂ ನಿಜ. ಒಂದು ವೇಳೆ ಎರಡೂ ಕಡೆ ಸೋತಿದ್ದರೆ ಪರಿಸ್ಥಿತಿ ಬೇರೆಯೇ ಅಗಿರುತ್ತಿತ್ತು. ಪಕ್ಷದಲ್ಲಿನ ಅತೃಪ್ತರ ಅಪಸ್ವರ ಮತ್ತಷ್ಟು ಬಿಸುಪು ಪಡೆಯುತ್ತಿತ್ತು.
 
ಪಕ್ಷ ತೊರೆಯುವವರ ಸಂಖ್ಯೆ ಹೆಚ್ಚುತ್ತಿತ್ತು. ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಸೋತು ಸೊರಗಿರುವ ಪಕ್ಷಕ್ಕೆ ಸ್ಥೈರ್ಯ ತುಂಬಬಲ್ಲ ಟಾನಿಕ್‌ ಆಗಿ ಈ ಗೆಲುವು ದೊರೆತಿದೆ. ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿನ ಈ ಸೋಲು ಬಿಜೆಪಿಯ ಚುನಾವಣೋತ್ಸಾಹಕ್ಕೆ ಸ್ವಲ್ಪಮಟ್ಟಿಗೆ ಭಂಗ ತಂದಿದೆ.
 
ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯ ಒದಗಿದೆ. ಅಂತೆಯೇ ಬಿ.ಎಸ್‌. ಯಡಿಯೂರಪ್ಪ ಕಾರ್ಯಶೈಲಿ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಮುಖಂಡರಿಗೆ ಈ ಫಲಿತಾಂಶ  ಬಲ ತಂದುಕೊಟ್ಟಿದೆ.  
 
ಇವೆಲ್ಲಕ್ಕಿಂತ ಮುಖ್ಯವಾಗಿ ಎರಡೂ ರಾಷ್ಟ್ರೀಯ ಪಕ್ಷಗಳು ಕಡ ತಂದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕಾದ ದುಃಸ್ಥಿತಿ ಒದಗಿರುವುದನ್ನು  ನಂಜನಗೂಡು ಕ್ಷೇತ್ರ ಎತ್ತಿತೋರುತ್ತದೆ. ಗುಂಡ್ಲುಪೇಟೆ ದೀರ್ಘ ಅವಧಿಗೆ  ಕೆ.ಎಸ್‌. ನಾಗರತ್ನಮ್ಮ  ಅವರ ಹಿಡಿತದಲ್ಲಿ ಇದ್ದಂತಹ ಕ್ಷೇತ್ರ.

ಆ ಕ್ಷೇತ್ರ ಪುನಃ ಮಹಿಳೆಯ ತೆಕ್ಕೆಗೆ ಬಂದಿರುವುದು ಈ ಚುನಾವಣೆಯ ವಿಶೇಷ. ಉಪಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂಬ ಮಾತಿದೆ.  ಹಣ ಚೆಲ್ಲಿ ಮತ ಖರೀದಿಸುವ ಇಂಥ ಪ್ರವೃತ್ತಿ ನಮ್ಮ ಚುನಾವಣಾ ವ್ಯವಸ್ಥೆಯನ್ನೇ  ಅರ್ಥಹೀನಗೊಳಿಸುತ್ತದೆ.  ಅದಕ್ಕೆ ಕಡಿವಾಣ ಹಾಕುವುದು ಹೇಗೆ ಎಂಬುದರ ಬಗ್ಗೆ ಪ್ರತಿಯೊಬ್ಬರೂ ಚಿಂತಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT