ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತವರಿನಲ್ಲಿ ರೈಡರ್ಸ್ ಜಯಭೇರಿ

ಗಂಭೀರ್‌, ಸುನಿಲ್‌ ಅಬ್ಬರ; ಉಮೇಶ್‌ ಬೌಲಿಂಗ್‌ ಮೋಡಿ
Last Updated 13 ಏಪ್ರಿಲ್ 2017, 20:00 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಭಾರತದ ‘ಕ್ರಿಕೆಟ್‌ ಕಾಶಿ’ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಗುರುವಾರ ಅನು ಭವಿ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ (ಔಟಾಗದೆ 72; 49ಎ, 11ಬೌಂ)  ಮತ್ತು ವೇಗಿ ಉಮೇಶ್‌ ಯಾದವ್‌ (33ಕ್ಕೆ4)  ಮೋಡಿ ಮಾಡಿದರು.

ಇವರ ಅಮೋಘ ಆಟದ ಬಲದಿಂದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡ ಐಪಿಎಲ್‌ ಹತ್ತನೇ ಆವೃತ್ತಿಯ ಪಂದ್ಯದಲ್ಲಿ  8 ವಿಕೆಟ್‌ ಗಳಿಂದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಪರಾಭವಗೊಳಿಸಿತು.

ಇದರೊಂದಿಗೆ ಈ ಋತುವಿನಲ್ಲಿ ತವರಿನ ಅಂಗಳದಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗಂಭೀರ್‌ ಪಡೆ ಗೆಲುವಿನ ಸಿಹಿ ಸವಿಯಿತು. ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಾರಥ್ಯದ ಕಿಂಗ್ಸ್‌ ಇಲೆವೆನ್‌ 20 ಓವರ್‌ ಗಳಲ್ಲಿ 9 ವಿಕೆಟ್‌ಗೆ 170ರನ್‌ ಗಳಿಸಿತು. ಈ ಮೊತ್ತ ನೈಟ್‌ರೈಡರ್ಸ್‌ಗೆ ಸವಾಲೆ ನಿಸಲೇ ಇಲ್ಲ.  ಗಂಭೀರ್‌ ಸಾರಥ್ಯದ ಎರಡು ಬಾರಿಯ ಚಾಂಪಿಯನ್‌ ತಂಡ 21 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಫಲ ನೀಡಿದ ಪ್ರಯೋಗ: ಗುರಿ ಬೆನ್ನಟ್ಟಲು ನೈಟ್‌ರೈಡರ್ಸ್‌ ನಾಯಕ ಗೌತಮ್‌ ಗಂಭೀರ್‌ ಅವರು ವೆಸ್ಟ್‌ ಇಂಡೀಸ್‌ನ ಸ್ಪಿನ್ನರ್‌ ಸುನಿಲ್‌ ನಾರಾಯಣ ಅವರೊಂದಿಗೆ ಕ್ರೀಸ್‌ಗೆ ಬಂದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.

‘ಪವರ್‌ ಪ್ಲೇ’ ಓವರ್‌ಗಳ ಲಾಭ ಎತ್ತಿಕೊಂಡ ಸುನಿಲ್‌,  ಸ್ಫೋಟಕ ಆಟದ ಮೂಲಕ ‘ಸಿಟಿ ಆಫ್‌ ಜಾಯ್‌’ ಖ್ಯಾತಿಯ ಕೋಲ್ಕತ್ತದ ಅಭಿಮಾನಿಗಳನ್ನು ರಂಜಿಸಿದರು.
18 ಎಸೆತಗಳನ್ನು ಆಡಿದ ಅವರು 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 37ರನ್‌ ಗಳಿಸಿದ್ದ ವೇಳೆ ವರುಣ್‌ ಆ್ಯರನ್‌ಗೆ ವಿಕೆಟ್‌ ಒಪ್ಪಿಸಿದರು. ಅವರು ಪೆವಿಲಿಯನ್‌ ಸೇರುವ ಮುನ್ನ ನಾಯಕ ಗಂಭೀರ್‌ ಜೊತೆ ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 34 ಎಸೆತ ಗಳಲ್ಲಿ 74ರನ್‌ ಸೇರಿಸಿ ತಂಡದ ಗೆಲುವಿನ ಹಾದಿ ಸುಗಮ ಮಾಡಿದರು.

ಆ ಬಳಿಕ ಬಂದ ಕರ್ನಾಟಕದ ರಾಬಿನ್‌ ಉತ್ತಪ್ಪ (26; 16ಎ, 3ಬೌಂ, 1ಸಿ) ಕೂಡ ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.  ಹೀಗಾಗಿ  10ನೇ ಓವರ್‌ನಲ್ಲೇ ತಂಡದ ಮೊತ್ತ 115ರ ಗಡಿ ದಾಟಿತು. ಗಂಭೀರ್‌ ಆಟದ ರಂಗು: ಬಳಿಕ ನಾಯಕ ಗಂಭೀರ್‌ ತಮ್ಮ ಸುಂದರ ಆಟದ ಮೂಲಕ ಕೋಲ್ಕತ್ತದ ಅಭಿಮಾನಿಗಳ ಮನ ಗೆದ್ದರು.

ಕಿಂಗ್ಸ್‌ ಬೌಲರ್‌ಗಳನ್ನು ದಿಟ್ಟತನ ದಿಂದ ಎದುರಿಸಿದ ಅವರು ಅಂಗಳದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ತಾವೆಸೆದ 34ನೇ ಎಸೆತದಲ್ಲಿ ಒಂದು ರನ್‌ ಗಳಿಸಿ ಐಪಿಎಲ್‌ನಲ್ಲಿ 33ನೇ ಅರ್ಧ ಶತಕದ ಸಂಭ್ರಮ ಆಚ ರಿಸಿದ ಅವರು ಬಳಿಕವೂ ಆಕ್ರಮಣಕಾರಿ ಆಟ ಮುಂದುವರಿಸಿದರು.

ಗಂಭೀರ್‌ಗೆ ಕರ್ನಾಟಕದ ಮನೀಷ್‌ ಪಾಂಡೆ (ಔಟಾಗದೆ 25; 16ಎ, 2ಬೌಂ, 1ಸಿ) ಸೂಕ್ತ ಬೆಂಬಲ ನೀಡಿದರು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 55ರನ್‌ ಗಳಿಸಿ ನೈಟ್‌ರೈಡರ್ಸ್‌ ಸಂಭ್ರಮಕ್ಕೆ ಕಾರಣವಾಯಿತು.

ಉತ್ತಮ ಆರಂಭ:  ಕಿಂಗ್ಸ್‌ ತಂಡಕ್ಕೆ ಹಾಶಿಮ್‌ ಆಮ್ಲಾ (25; 27ಎ, 4ಬೌಂ) ಮತ್ತು ಮನನ್‌ ವೊಹ್ರಾ (28; 19ಎ, 4ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 31 ಎಸೆತಗಳಲ್ಲಿ 53ರನ್‌ ಗಳಿಸಿದರು. ಪೀಯೂಷ್‌ ಚಾವ್ಲಾ ಬೌಲ್‌ ಮಾಡಿದ ಆರನೇ ಓವರ್‌ನ ಮೊದಲ ಎಸೆತದಲ್ಲಿ ವೊಹ್ರಾ ಔಟಾದರೆ, 12ನೇ ಓವರ್‌ನಲ್ಲಿ ಆಮ್ಲಾ, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ಗೆ ವಿಕೆಟ್‌ ಒಪ್ಪಿಸಿದರು.

ಉಮೇಶ್‌ ಮೋಡಿ: ಆ ಬಳಿಕ ನೈಟ್‌ರೈಡರ್ಸ್‌ ವೇಗಿ ಉಮೇಶ್‌ ಯಾದವ್‌   ಮೋಡಿ ಮಾಡಿ ದರು.  ಅವರು ಗ್ಲೆನ್‌ ಮ್ಯಾಕ್ಸ್‌ವೆಲ್‌ (25), ಡೇವಿಡ್‌ ಮಿಲ್ಲರ್‌ (28), ವೃದ್ಧಿಮಾನ್‌ ಸಹಾ (25) ಮತ್ತು ಅಕ್ಷರ್‌ ಪಟೇಲ್‌ (0) ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿ  ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಕಿಂಗ್ಸ್‌ ಇಲೆವೆನ್‌ ಪಂಜಾಬ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 170 (ಹಾಶಿಮ್‌ ಆಮ್ಲಾ 25, ಮನನ್‌ ವೊಹ್ರಾ 28, ಗ್ಲೆನ್‌ ಮ್ಯಾಕ್ಸ್‌ವೆಲ್‌ 25, ಡೇವಿಡ್‌ ಮಿಲ್ಲರ್‌ 28, ವೃದ್ಧಿಮಾನ್ ಸಹಾ 25, ಮೋಹಿತ್‌ ಶರ್ಮಾ 10; ಉಮೇಶ್‌ ಯಾದವ್‌ 33ಕ್ಕೆ4, ಕ್ರಿಸ್‌ ವೋಕ್ಸ್‌ 30ಕ್ಕೆ2, ಸುನಿಲ್‌ ನಾರಾಯಣ 19ಕ್ಕೆ1, ಪೀಯೂಷ್‌ ಚಾವ್ಲಾ 36ಕ್ಕೆ1, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 15ಕ್ಕೆ1).

ಕೋಲ್ಕತ್ತ ನೈಟ್‌ರೈಡರ್ಸ್‌: 16.3 ಓವರ್‌ಗಳಲ್ಲಿ 2 ವಿಕೆಟ್‌ಗೆ 171 (ಸುನಿಲ್‌ ನಾರಾಯಣ 37, ಗೌತಮ್‌ ಗಂಭೀರ್‌ ಔಟಾಗದೆ 72, ರಾಬಿನ್‌ ಉತ್ತಪ್ಪ 26, ಮನೀಷ್‌ ಪಾಂಡೆ ಔಟಾಗದೆ 25; ವರುಣ್‌ ಆ್ಯರನ್‌ 23ಕ್ಕೆ1, ಅಕ್ಷರ್‌ ಪಟೇಲ್‌ 36ಕ್ಕೆ1).
ಫಲಿತಾಂಶ: ಕೋಲ್ಕತ್ತ ನೈಟ್‌ರೈಡರ್ಸ್‌ಗೆ 8 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT