ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡೂ ಕಡೆ ಕಾಂಗ್ರೆಸ್ ಭದ್ರ

ಉಪ ಚುನಾವಣೆ: ಕೇಶವಮೂರ್ತಿ, ಮೋಹನ್‌ಕುಮಾರಿ ಜಯಭೇರಿ
Last Updated 13 ಏಪ್ರಿಲ್ 2017, 20:38 IST
ಅಕ್ಷರ ಗಾತ್ರ

ಮೈಸೂರು: ತೀವ್ರ ಕುತೂಹಲ ಕೆರಳಿಸಿದ್ದ ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಅನುಕಂಪದ ಅಲೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲುವಿನ ದಡ ಸೇರಿಸಿದೆ.

ಸತತ ಎರಡು ಬಾರಿಯ ಸೋಲಿನ ಅನುಕಂಪ ಹಾಗೂ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್ ಅವರ ಪಕ್ಷಾಂತರ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮೋಹನ್‌ಕುಮಾರಿ ಅವರಿಗೆ ಅನುಕಂಪ ಕೈಹಿಡಿದಿದೆ. ಅವರ ಪತಿ ಮಹದೇವ ಪ್ರಸಾದ್ ನಿಧನದ ಅನುಕಂಪ ಮತಗಳಾಗಿ ಪರಿವರ್ತನೆಗೊಂಡಿದೆ.

ಪ್ರಸಾದ್ ಅವರ ‘ಸ್ವಾಭಿಮಾನ’ದ ಭಾವನಾತ್ಮಕ ವಿಚಾರದ ಎದುರು ಕೇಶವಮೂರ್ತಿ ಅವರ ಸೌಮ್ಯ ಸ್ವಭಾವ ಮತದ ಬುಟ್ಟಿಯನ್ನು ತುಂಬಿಸಿದೆ. ಆಡಳಿತಾರೂಢ ಕಾಂಗ್ರೆಸ್‌ ‘ಶಕ್ತಿ’ ಸಹ ಮತದ ಹೊಳೆ ಹರಿದುಬರುವಂತೆ ಮಾಡಿದೆ. ಜತೆಗೆ, ‘ಸಂಪನ್ಮೂಲದ’ ಹರಿವು ಗೆಲುವಿನ ಅಂತರವನ್ನು ಹೆಚ್ಚು ಮಾಡಿದೆ. ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ನೀಡಿದ್ದು, ಕಾಂಗ್ರೆಸ್– ಜೆಡಿಎಸ್ ಮತಗಳು ಒಟ್ಟುಗೂಡಿದ್ದು ಜಯದ ದಾರಿಯನ್ನು ಸುಗಮಗೊಳಿಸಿದೆ. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ‘ತಂತ್ರಗಾರಿಕೆ’ ಕಾಂಗ್ರೆಸ್‌ ಗೆಲುವನ್ನು ಸುಲಭವಾಗಿಸಿದೆ.

ಪ್ರಸಾದ್ ಅವರ ಮೇಲಿನ  ಸಿಟ್ಟು ದಿನದಿಂದ ದಿನಕ್ಕೆ ಬಲವಾಗುತ್ತಿದ್ದರೂ ಅದನ್ನು ತಣ್ಣಗೆ ಮಾಡುವ ಪ್ರಯತ್ನವನ್ನು ಯಾರೊಬ್ಬರೂ ಮಾಡಲಿಲ್ಲ. ಈ ಉಪೇಕ್ಷೆಗೆ ಈಗ ಭಾರಿ ಬೆಲೆ ತೆರಬೇಕಾಗಿದೆ. ಕ್ಷೇತ್ರದ ಜನತೆ ಕೈಬಿಡುವುದಿಲ್ಲ ಎಂಬ ಅಪಾರವಾದ ನಂಬಿಕೆ, ಗೆದ್ದೇ ಗೆಲ್ಲುತ್ತೇವೆ ಎಂಬ ಅತ್ಯುತ್ಸಾಹ ಸೋಲು ತಂದಿದೆ.
‘ಸ್ವಾಭಿಮಾನ’ದ ವಿಚಾರ ಬಂದಾಗ ದಲಿತರು ಒಟ್ಟಾಗಿ ಕೈಹಿಡಿಯುತ್ತಾರೆ ಎಂಬ ನಂಬಿಕೆ ಸಹ ಸುಳ್ಳಾಯಿತು.

ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಮತಗಳನ್ನು ತಂದುಕೊಡುತ್ತಾರೆ. ತನ್ನ ಶಕ್ತಿ ಬಳಸಿ ದಲಿತರ ಮತಗಳನ್ನು ಸೆಳೆಯಬಹುದು. ಒಟ್ಟು ಮತದಾರರಲ್ಲಿ ಸುಮಾರು ಅರ್ಧದಷ್ಟು ಇರುವ ಈ ಎರಡೂ ಸಮುದಾಯದ ಮತಗಳು ಒಗ್ಗೂಡಿದರೆ ಹಾಗೂ ಇತರ ಸಮುದಾಯದ ಸ್ವಲ್ಪಮಟ್ಟಿನ ಮತಗಳು ಬಂದರೆ ಗೆಲುವು ಕಷ್ಟಕರವಾಗಲಾರದು. ಇಂತಹ ಸಂಕಷ್ಟದ ಸಮಯದಲ್ಲಿ ಕ್ಷೇತ್ರದ ಜನತೆ ಕೈಬಿಡುವುದಿಲ್ಲ ಎಂದು ನಂಬಿದ್ದರು. ಈ ಬಾರಿಯ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಇದೊಂದು ಬಾರಿ ಗೆಲ್ಲಿಸಿಕೊಡಿ ಎಂದು ಪ್ರಸಾದ್ ಮಾಡಿದ ಮನವಿಗೂ ಮತದಾರರು ಕಿವಿಗೊಟ್ಟಿಲ್ಲ.

ಪ್ರಸಾದ್ ಅವರು ಅನಾರೋಗ್ಯದಿಂದಾಗಿ ಪ್ರಚಾರದಿಂದ ದೂರವೇ ಉಳಿದರು. ಸಾಕಷ್ಟು ಸಮಯಾವಕಾಶ ಇದ್ದರೂ ಎಲ್ಲಾ ಹಳ್ಳಿ, ಮತದಾರರನ್ನು ತಲುಪಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರು ಸತತವಾಗಿ ಮೂರು ವಾರಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಿ ಪ್ರಚಾರ ನಡೆಸಿದರು. ಆದರೆ, ಪ್ರಸಾದ್ ಅವರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿಲ್ಲ. ಪ್ರಚಾರಕ್ಕೆ ಹೋಗುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ‘ನನಗೆ ಚುನಾವಣೆ ಹೇಗೆ ಮಾಡಬೇಕು ಎಂಬುದು ಗೊತ್ತಿದೆ. ಸಾಕಷ್ಟು ಚುನಾವಣೆ ನೋಡಿದ್ದೇನೆ. ಹಿಂದಿನಿಂದ ಕ್ಷೇತ್ರದ ಜನತೆ ಓಟು ಕೊಟ್ಟಿದ್ದಾರೆ. ಈಗಲೂ ಕೊಡುತ್ತಾರೆ’ ಎಂದು ಹೇಳಿದರೇ ಹೊರತು

ಮತದಾರರನ್ನು ತಲುಪುವ ತಂತ್ರ ರೂಪಿಸಲಿಲ್ಲ. ಇಂಥ ಸಾಕಷ್ಟು ನಕಾರಾತ್ಮಕ ಅಂಶಗಳೇ ಸೋಲಿಗೆ ಕಾರಣವಾಗಿವೆ. ಹಿರಿಯ ರಾಜಕಾರಣಿ ಶ್ರೀನಿವಾಸ ಪ್ರಸಾದ್ ಹಾಗೂ ಕಳಲೆ ಕೇಶವಮೂರ್ತಿ ಅವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ ಕ್ಷೇತ್ರದ ಜನತೆಯನ್ನು ಕಾಡಿದ್ದು ಸಹಜ. ಪ್ರಸಾದ್ ಆರೋಗ್ಯ ಸರಿ ಇಲ್ಲ. ಸೋಲು– ಗೆಲುವು ಏನೇ ಇದ್ದರೂ ಅವರ ರಾಜಕಾರಣ ಮುನ್ನಡೆಯುವುದಿಲ್ಲ. ಈ ಬಾರಿ ಗೆಲ್ಲಿಸಿದರೆ ಮುಂದಿನ ಚುನಾವಣೆಗೆ ಮತ್ತೊಬ್ಬ ನಾಯಕನನ್ನು ನೋಡಿಕೊಳ್ಳಬೇಕಾಗುತ್ತದೆ. ಅದರ ಬದಲು ಈಗಲೇ ನಮ್ಮ ನಾಯಕನನ್ನು ಆಯ್ಕೆ ಮಾಡಿಕೊಂಡರೆ ಮುಂದಿನ ಅಭಿವೃದ್ಧಿ ದೃಷ್ಟಿಯಿಂದ ಸಹಕಾರಿಯಾಗುತ್ತದೆ ಎಂಬ ಮತದಾರರ ಒಲವು–ನಿಲುವುಗಳು ಫಲಿತಾಂಶದಲ್ಲಿ ವ್ಯಕ್ತವಾಗಿದೆ.

ಪ್ರಸಾದ್ ಅವರು ಸ್ವಾಭಿಮಾನಿಯಾಗಿದ್ದರೆ ಅದನ್ನು ಬೇರೆ ರೂಪದಲ್ಲಿ ತೋರ್ಪಡಿಸಬೇಕಿತ್ತು. ದಲಿತರ ಸ್ವಾಭಿಮಾನದ ಪ್ರಶ್ನೆ ಎಂದು ಹೇಳಿಕೊಂಡು ಬಿಜೆಪಿ ಸೇರುವ ಮೂಲಕ ದಲಿತ ಸಮುದಾಯದಿಂದ ದೂರ ಸರಿದರು. ಹಾಗಾಗಿ, ಸಾಕಷ್ಟು ದಲಿತರ ಮತಗಳು ಬರಲಿಲ್ಲ. ಈವರೆಗೆ ಕೈಹಿಡಿದಿದ್ದ ದಲಿತ ಮುಖಂಡರೂ ದೂರವೇ ಸರಿದರು. ಪ್ರಸಾದ್ ಅವರ ಆಯ್ಕೆ– ನಿರ್ಧಾರಗಳೇ ಸೋಲಿಗೆ ಕಾರಣವೇ ಹೊರತು, ಬೇರಾರೂ ಅಲ್ಲ ಎಂಬ ವಿಶ್ಲೇಷಣೆ ನಡೆದಿದೆ.

ಕುಟುಂಬ ರಾಜಕಾರಣ: ವಿಧಾನಸಭೆ ಮೊದಲ ಮಹಿಳಾ ಸ್ಪೀಕರ್‌ ಆಗಿದ್ದ ಕೆ.ಎಸ್‌.ನಾಗರತ್ನಮ್ಮ ಬಳಿಕ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಜಯಗಳಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೂ ಮೋಹನ್‌ಕುಮಾರಿ ಭಾಜನರಾಗಿದ್ದಾರೆ. ಮತ್ತೆ ಕುಟುಂಬ ರಾಜಕಾರಣದ ಆಧಿಪತ್ಯಕ್ಕೆ ಮುನ್ನುಡಿ ಬರೆದಿದೆ. ಬಿಜೆಪಿ ಮುಖಂಡರ ಜಾತಿಸೂತ್ರದ ಲೆಕ್ಕಾಚಾರ ತಾಳ ತಪ್ಪಿದೆ. ಯಡಿಯೂರಪ್ಪ ಅವರ ತಂತ್ರಗಾರಿಕೆಯೂ ಲಾಭ ತಂದುಕೊಟ್ಟಿಲ್ಲ.

ಯಡಿಯೂರಪ್ಪ ಅವರೇ ಪ್ರಚಾರಕ್ಕೆ ಇಳಿದಿದ್ದರಿಂದ ಅಧಿಕ ಸಂಖ್ಯೆಯಲ್ಲಿರುವ ಲಿಂಗಾಯತ ಸಮುದಾಯದ ಮತಗಳು ಬಿಜೆಪಿ ಕಡೆಗೆ ವಾಲಬಹುದು ಎಂದು ನಿರೀಕ್ಷಿಸಲಾಗಿತ್ತು. ಶ್ರೀನಿವಾಸಪ್ರಸಾದ್‌ ಬಿಜೆಪಿಗೆ ಸೇರಿದ್ದರಿಂದ ದಲಿತರ ‘ಬಲಗೈ’ ಮತಗಳು ನಿರಂಜನಕುಮಾರ್ ಗೆಲುವಿಗೆ ನೆರವಾಗಲಿವೆ ಎಂದು ಹೇಳಲಾಗುತ್ತಿತ್ತು. ಆದರೆ, ಈ ಯಾವ ಸೂತ್ರವೂ ಫಲಿಸಿಲ್ಲ.

‘ನೋಟಾ’ಗೆ 3ನೇ ಸ್ಥಾನ: ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಬಳಿಕ ಹೆಚ್ಚು ಮತ ಚಲಾವಣೆ ಆಗಿರುವುದು ‘ನೋಟಾ’ಗೆ. ಒಟ್ಟು 1,665 ಮತಗಳು ಲಭಿಸಿದ್ದು, ಪಕ್ಷೇತರ ಅಭ್ಯರ್ಥಿಗಳಿಗಿಂತ ‘ನೋಟಾ’ಗೆ (ಎನ್ಒಟಿಎ– ಮೇಲಿನವರಲ್ಲಿ ಯಾರೂ ಬೇಡ) ಅಧಿಕ ಮತ ಬಿದ್ದಿರುವುದು ವಿಶೇಷ. ಗುಂಡ್ಲುಪೇಟೆಯಲ್ಲಿ 1,596 ಮತದಾರರು ‘ನೋಟಾ’ ಚಲಾಯಿಸಿದ್ದಾರೆ.

ದೂರ ಉಳಿದ ಪ್ರಸಾದ್‌: ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಮತ ಎಣಿಕೆ ಕೇಂದ್ರದಿಂದ ದೂರವೇ ಉಳಿದರು. ನಂಜನಗೂಡು ಪಟ್ಟಣದ ಜೆಎಸ್‌ಎಸ್‌ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆ ಕೇಂದ್ರಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ್ದರು. ಮೈಸೂರಿನ ತಮ್ಮ ನಿವಾಸದಲ್ಲೇ ಉಳಿದು ಬೆಂಬಲಿಗರಿಂದ ಮಾಹಿತಿ ಪಡೆದುಕೊಂಡರು.

ಪ್ರಚಾರದ ವೇಳೆಯೂ ಶ್ರೀನಿವಾಸಪ್ರಸಾದ್‌ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. ಪ್ರಮುಖ ಸಮಾವೇಶ ಹೊರತುಪಡಿಸಿದರೆ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪ್ರಮುಖರ ನಾಯಕರ ಜತೆ ಪ್ರಚಾರದಲ್ಲಿ ಹೆಚ್ಚು ಪಾಲ್ಗೊಳ್ಳಲಿಲ್ಲ. ವಿಜೇತ ಅಭ್ಯರ್ಥಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅವರು ಮತ ಎಣಿಕೆಗೆ ಮುನ್ನವೇ ಕೇಂದ್ರಕ್ಕೆ ಬಂದು ಕೊನೆಯವರೆಗೆ ಇದ್ದರು.

ಸಾಮೂಹಿಕ ನಾಯಕತ್ವಕ್ಕೆ ಯಶಸ್ಸು: ಉಪಚುನಾವಣೆಯಲ್ಲಿನ ಪಕ್ಷದ ಯಶಸ್ಸು ಸಾಮೂಹಿಕ ನಾಯಕತ್ವದಿಂದ ದೊರೆತಿದೆ ಎಂದು ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ‌ಯಾವುದೇ ಮುಖಂಡರು, ಸಚಿವರ ಹೆಸರನ್ನು ಪ್ರಸ್ತಾಪಿಸಲು ಬಯಸುವುದಿಲ್ಲ.

ಗೆಲುವಿನ ಶ್ರೇಯಸ್ಸು ಯಾವುದೇ ಒಬ್ಬರಿಗೆ ಸಂಬಂಧಿಸಿದ್ದಲ್ಲ. ಎಲ್ಲರೂ ಒಂದಾಗಿ ಶ್ರಮಿಸಿದರೆ ಗೆಲುವು ದೊರೆಯಲಿದೆ ಎಂಬುದಕ್ಕೆ ಈ ಫಲಿತಾಂಶವೇ ನಿದರ್ಶನ. ಇದು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ ಎಂದರು. ದಕ್ಷಿಣ ಭಾರತೀಯರನ್ನು ಕಡೆಗಣಿಸುತ್ತಿರುವ ಬಿಜೆಪಿ ಮನಸ್ಥಿತಿ ಜನತೆಗೆ ಅರ್ಥವಾಗಿದೆ. ಕಾಂಗ್ರೆಸ್‌ ಪಕ್ಷ ಮತ್ತು ಪಕ್ಷದ ಮುಖಂಡರ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಈ ಫಲಿತಾಂಶ ತಕ್ಕ ಪಾಠ ಕಲಿಸಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT