ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 4ರಿಂದ ಉಪವಾಸ ಸತ್ಯಾಗ್ರಹ

ಜಿಲ್ಲೆಯ ಜನರ ಸಮಸ್ಯೆ ಈಡೇರಿಸಲು ಮುನಿಯಪ್ಪ ವಿಫಲ: ಆರೋಪ
Last Updated 14 ಏಪ್ರಿಲ್ 2017, 4:45 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿರುವ ಸಂಸದ ಕೆ.ಎಚ್.ಮುನಿಯಪ್ಪ ಅವರ ಮನೆಯ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಮೇ.4ರಿಂದ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ ತಿಳಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುನಿಯಪ್ಪ ಅವರು 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಜಿಲ್ಲೆಗೆ ನೀಡಿರುವ ಕೊಡುಗೆಯಾದರು ಏನು? ’ ಎಂದು ಪ್ರಶ್ನಿಸಿದರು. 

‘ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರೆ ಅವರು ಮೌನವಾಗಿರುತ್ತಾರೆ ಹೊರತು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಜನಪ್ರತಿನಿಧಿಗಳ ಅನುಮತಿಯಿಲ್ಲದೆ ರೈತರು ಮತ್ತು ಬಡವರ ಕೆಲಸಗಳು ಆಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಇದೆಲ್ಲಾ ಮುನಿಯಪ್ಪ ನೀಡಿರುವ ಕೊಡುಗೆಯಾಗಿದೆ’ ಎಂದು ಆರೋಪಿಸಿದರು.

‘ಭೂ ದಾಖಲೆಗಳ ಸಮಸ್ಯೆ ಸರಿಪಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಹೋದರೆ ಹಣವಿಲ್ಲದೆ ಕೆಲಸ ಅಗುತ್ತಿಲ್ಲ. ಅದೇ ಜನಪ್ರತಿನಿಧಿಗಳ ಶಿಫಾರಸಿನ ಮೇರೆಗೆ ಹೋಗಲು ಎಲ್ಲರಿಂದನೂ ಸಾಧ್ಯವಿಲ್ಲ. ಬಯಲು ಸೀಮೆ ಜಿಲ್ಲೆಗಳಲ್ಲಿ ಎದುರಾಗಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಆ ಯೋಜನೆಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಟೀಕಿಸಿದರು.

‘ಜಿಲ್ಲೆಯ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಅಧಿಕಾರಕ್ಕೆ ಬಂದಿದ್ದು ಆಸ್ತಿ ಮಾಡುವಲ್ಲಿ ನಿರತರಾಗಿದ್ದಾರೆ. ಅವರಿಗೆ ಸಾರ್ವಜನಿಕರ ಬಗ್ಗೆ ಕಾಳಜಿಯೇ ಇಲ್ಲ. ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾಗಿರುವ ಪೊಲೀಸ್ ಠಾಣೆಗಳು ಪ್ರಭಾವಿ ವ್ಯಕ್ತಿಗಳ ಅತಿಥಿ ಗೃಹಗಳಾಗಿ ಬದಲಾಗಿದೆ. ಇದಕ್ಕೆಲ್ಲಾ ಸಂಸದರ ಕುಮ್ಮಕ್ಕೇ ಕಾರಣ. ರೈತರ ಸಮಸ್ಯೆಗಳನ್ನು ಮೇ.4ರ ಒಳಗೆ ಬಗೆಹರಿಸದಿದ್ದರೆ ಅಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಮಾಲೂರು ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ್, ಪದಾಧಿಕಾರಿಗಳಾದ ಆನಂದ ಸಾಗರ್, ರಾಮುಶಿವಣ್ಣ, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT