ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ನಲ್ಲಿ ಮೆಗಾ ಡೇರಿ ಕಾರ್ಯಾರಂಭ

ಡೇರಿ ಆವರಣದಲ್ಲಿ ಕಚೇರಿ ಕಟ್ಟಡ, ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ
Last Updated 14 ಏಪ್ರಿಲ್ 2017, 5:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ವತಿಯಿಂದ ನಿರ್ಮಿಸುತ್ತಿರುವ ಮೆಗಾ ಡೇರಿ ಅಕ್ಟೋಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ’ ಎಂದು ಕೋಚಿಮುಲ್‌ ಅಧ್ಯಕ್ಷ ಎನ್.ಜಿ. ಬ್ಯಾಟಪ್ಪ ಹೇಳಿದರು.

ತಾಲ್ಲೂಕಿನ ನಂದಿ ಕ್ರಾಸ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಮೆಗಾ ಡೇರಿ ಆವರಣದಲ್ಲಿ ಗುರುವಾರ ನಡೆದ ಆಡಳಿತ ಕಚೇರಿ ಕಟ್ಟಡ ಹಾಗೂ ಎಂ.ವಿ. ಕೃಷ್ಣಪ್ಪ ಅವರ ಸ್ಮರಣಾರ್ಥ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸುಮಾರು ₹ 150 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 5 ಲಕ್ಷ ಲೀಟರ್‌ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾ ಡೇರಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಯಂತ್ರೋಪಕರಣ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಅಕ್ಟೋಬರ್‌ನಲ್ಲಿ ಡೇರಿ ಉದ್ಘಾಟಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

‘ಮೆಗಾ ಡೇರಿ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ₹ 12 ಕೋಟಿ, ರಾಜ್ಯ ಸರ್ಕಾರ ₹ 4 ಕೋಟಿ ಅನುದಾನ ನೀಡಿವೆ.  ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯಿಂದ (ಎನ್‌ಡಿಡಿಬಿ) ₹ 87 ಕೋಟಿ ಆರ್ಥಿಕ ಸಹಾಯ ಸಿಕ್ಕಿದೆ. ಜತೆಗೆ ಒಕ್ಕೂಟ ಮೂಲ ಸೌಕರ್ಯ ನಿಧಿ ಬಳಸಲಾಗುತ್ತಿದೆ’ ಎಂದರು.

‘ಈ ಡೇರಿ ಕಾರ್ಯಾರಂಭ ಮಾಡಿದರೆ ಪ್ರತಿ ದಿನ 1.5 ಲಕ್ಷ ಲೀಟರ್ ಗುಡ್‌ಲೈಫ್‌ ಹಾಲಿನ ಪ್ಯಾಕೆಟ್,  80 ಸಾವಿರ ಲೀಟರ್‌ ಫ್ಲೆಕ್ಸಿ ಪ್ಯಾಕೆಟ್‌, 6 ಟನ್ ಬೆಣ್ಣೆ ಮತ್ತು ತುಪ್ಪ ಮತ್ತು 10 ಟನ್ ಪನ್ನೀರ್‌ ತಯಾರಿಸಬಹುದಾಗಿದೆ. ಇದರಿಂದಾಗಿ ಈ ಭಾಗದ ಹೈನುಗಾರರಿಗೆ ಮತ್ತಷ್ಟು ಉತ್ತೇಜನ ದೊರೆಯಲಿದೆ’ ಎಂದರು.

ಪ್ರೋತ್ಸಾಹಧನ ನೀಡಲಿ: ‘ಕೋಚಿಮುಲ್‌ನಿಂದ ಈಗಾಗಲೇ ₹ 1 ಕೋಟಿ ವೆಚ್ಚದಲ್ಲಿ ಜೋಳದ ಮೇವಿನ ಬೀಜಗಳನ್ನು ವಿತರಿಸಲಾಗಿದೆ. ಹಸಿ ಮೇವು ಬೆಳೆದ ರೈತನಿಗೆ ಪ್ರತಿ ಎಕರೆಗೆ ₹ 3,000 ಪ್ರೋತ್ಸಾಹಧನ ನೀಡಲಾಗುತ್ತಿದೆ. ಬರದ ನಡುವೆಯೂ ರಾಸುಗಳಿಗೆ ಹಸಿ ಮೇವು ಒದಗಿಸುವ ಮೂಲಕ ಒಕ್ಕೂಟ ಸರ್ಕಾರದ ಪ್ರಶಂಸೆಗೆ ಪಾತ್ರವಾಗಿದೆ. ಜತೆಗೆ ಕಳೆದ ಮೂರು ತಿಂಗಳಿಂದ ಪ್ರತಿ ಲೀಟರ್‌ ಹಾಲಿಗೆ ₹ 1.30 ದರ ಹೆಚ್ಚಳ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಪಶು ಆಹಾರ ಒದಗಿಸಲಾಗುತ್ತಿದೆ’ ಎಂದು ತಿಳಿಸಿದರು.

ಕೋಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜ್ ಮಾತನಾಡಿ, ‘ಹೈನುಗಾರಿಕೆಯಲ್ಲಿ ಮಿಶ್ರ ತಳಿ ಹಸುಗಳನ್ನು ಪರಿಚಯಿಸಿ ಈ ಭಾಗದಲ್ಲಿ ಕ್ಷೀರಕ್ರಾಂತಿ ಉಂಟು ಮಾಡಿದ ಕೃಷ್ಣಪ್ಪ ಅವರ ಜ್ಞಾಪಕಾರ್ಥವಾಗಿ ₹ 3 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಇದಕ್ಕೆ ಹಾಲು ಮಹಾ ಮಂಡಳಿ ಕೂಡ ಸಹಾಯ ಮಾಡುತ್ತಿದೆ’ ಎಂದರು.

‘ಮೆಗಾ ಡೇರಿ ಕಾರ್ಯಾರಂಭ ಮಾಡಿದರೆ ಒಕ್ಕೂಟಕದ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಜತೆಗೆ ಹೈನುಗಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹಧನ ದೊರೆಯಲಿದೆ. ರಾಜ್ಯ ಸರ್ಕಾರ ಈ ಹಿಂದೆ ಮೆಗಾ ಡೇರಿಗೆ ಘೋಷಿಸಿದ್ದ ಹಣದ ಪೈಕಿ ಇನ್ನೂ ₹ 6 ಕೋಟಿ ಬಾಕಿ ಬಿಡುಗಡೆಯಾಗಬೇಕಿದೆ. ಸರ್ಕಾರ ಅದನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು. ಕೋಚಿಮುಲ್ ನಿರ್ದೇಶಕರಾದ ಜೆ.ಕಾಂತರಾಜು, ಜಯಸಿಂಹ ಕೃಷ್ಣಪ್ಪ, ಸುನಂದಾ, ಪಾರ್ವತಮ್ಮ, ಅಶ್ವತ್ಥರೆಡ್ಡಿ ಉಪಸ್ಥಿತರಿದ್ದರು.

*
ಬಯಲು ಸೀಮೆಯ ರೈತರು ಬೆಳೆಯುತ್ತಿರುವ ಹಸಿ ಮೇವಿಗೆ ಸರ್ಕಾರ ಪ್ರತಿ ಎಕರೆಗೆ ₹ 5,000 ಪ್ರೋತ್ಸಾಹಧನ ನೀಡುವ ಮೂಲಕ ಹೈನುಗಾರಿಕೆಗೆ ಪ್ರೋತ್ಸಾಹ ನೀಡಬೇಕು.
-ಎನ್.ಜಿ. ಬ್ಯಾಟಪ್ಪ,
ಕೋಚಿಮುಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT