ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ್ತೂರಿ ರಂಗನ್‌ ವರದಿ’ಗೆ ತೀವ್ರ ವಿರೋಧ

ಮಡಿಕೇರಿ ತಾ.ಪಂ: ತೆಕ್ಕಡೆ ಶೋಭಾ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ
Last Updated 14 ಏಪ್ರಿಲ್ 2017, 8:20 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಜನರ ತೀವ್ರ ವಿರೋಧಕ್ಕೆ ಕಾರಣವಾಗಿರುವ ಕಸ್ತೂರಿ ರಂಗನ್‌ ವರದಿ ವಿರೋಧಿಸಿ ಗುರುವಾರ ಮಡಿಕೇರಿ ತಾಲ್ಲೂಕು ಪಂಚಾಯಿತಿ ವಿಶೇಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷೆ ತೆಕ್ಕಡೆ ಶೋಭಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯರು ಸರ್ವಾನುಮತದಿಂದ ವಿರೋಧಿಸಿ ನಿರ್ಣಯ ಕೈಗೊಂಡರು. 

ಸಭೆಯ ಆರಂಭದಲ್ಲಿ ಸದಸ್ಯ ನಾಗೇಶ್‌, ವರದಿ ವಿರೋಧಿಸಿ ನಿರ್ಣಯ ಕೈಗೊಳ್ಳಬೇಕು ಎಂದು ವಿಷಯ ಪ್ರಸ್ತಾಪಿಸಿದರು. ಕಸ್ತೂರಿ ರಂಗನ್ ವರದಿಯು ಜಿಲ್ಲೆಯಲ್ಲಿ ಅನುಷ್ಠಾನ ಮಾಡಿದರೆ ಜನರಿಗೆ ಸಂಕಷ್ಟ ಬರುವುದು ಖಚಿತ. ಇಲ್ಲಿನ ಕೃಷಿಕರು ಹಾಗೂ ಜನರ ಭಾವನೆಗಳನ್ನು ಪರಿಗಣಿಸಿದೇ ಈ ವರದಿ ಅನುಷ್ಠಾನಕ್ಕೆ ತರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿ ಸಭೆಯಲ್ಲಿ ಕಸ್ತೂರಿ ರಂಗನ್‌ ವರದಿಗೆ ವಿರೋಧ ವ್ಯಕ್ತವಾಗಿದೆ. ಹಾಗೆಯೇ ತಾಲ್ಲೂಕು ಪಂಚಾಯಿತಿಯಲ್ಲಿ ಎಲ್ಲಾ ಸದಸ್ಯರು ಒಮ್ಮತದಿಂದ ವಿರೋಧ ವ್ಯಕ್ತ ಪಡಿಸುವಂತೆ ಆಗಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ, ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಗ್ರಾಮ ಪಂಚಾಯಿತಿಗಳು ಅರಣ್ಯ ಪ್ರದೇಶಗಳ ನಡುವೆ ಇದೆ. ಸೂಕ್ಮ ಪ್ರದೇಶಗಳ ಪಟ್ಟಿಯಲ್ಲಿರುವ ಗ್ರಾಮಗಳಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗಿದೆ.

ಈ ಗ್ರಾಮಗಳಿಗೆ ರಸ್ತೆ, ನೀರು ಮತ್ತಿತರ ಮೂಲ ಸೌಕರ್ಯಗಳನ್ನು ನೀಡುವುದು ಅನಿವಾರ್ಯವಾಗಿದೆ. ಆದರೆ, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಬಂದರೆ ಆ ಜನರು ಮೂಲಸೌಲಭ್ಯದಿಂದ ವಂಚಿತರಾಗಲಿದ್ದಾರೆ ಎಂದು ಹೇಳಿದರು.

ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಜನವಸತಿ ಪ್ರದೇಶವನ್ನು ಹೊರಗಿಡಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ, ಇದನ್ನು ಪರಿಗಣಿಸಿಲ್ಲ ಎಂದು ಶೋಭಾ ಅಸಮಾಧಾನ ಹೊರಹಾಕಿದರು.

ಸದಸ್ಯ ಕೊಡಪಾಲು ಗಣಪತಿ ಪ್ರತಿಕ್ರಿಯಿಸಿ, ವರದಿಯ ಬಗ್ಗೆ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡದೇ ಗ್ರಾಮಗಳನ್ನು ಆಯ್ಕೆ ಮಾಡಿರುವ ಕ್ರಮ ಸರಿಯಲ್ಲ. ಜಿಲ್ಲೆಗೆ ಕಸ್ತೂರಿ ರಂಗನ್ ವರದಿ ಬೇಡ ಎಂದು ಹೇಳಿದರು.

ಜಿಲ್ಲೆಯ ಅರ್ಧಭಾಗ ಅರಣ್ಯ ಪ್ರದೇಶಗಳಿಂದ ಆವೃತ್ತವಾಗಿದೆ. ಜಿಲ್ಲೆಯಲ್ಲಿ ಮರಗಿಡಗಳು ಇಲ್ಲದ ಪ್ರದೇಶಗಳು ಹೆಚ್ಚಿವೆ. ಅಂತಹ ಜಾಗವನ್ನು ಆಯ್ಕೆ ಮಾಡಿ ವರದಿ ಮಾಡಲಿ; ಗಿಡ ಮರಗಳು ಬೆಳೆಯಲು ಸಹಕಾರಿ ಆಗಲಿದೆ ಎಂದು ಕೋರಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬೊಳಿಯಡಿರ ಸುಬ್ರಮಣಿ, ಕಾರ್ಯ ನಿರ್ವಹಣಾಧಿಕಾರಿ ಜೀವನ್ ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರವೀಂದ್ರ, ಎಂ.ಕೆ. ಸಂಧ್ಯಾ, ವಿ.ಆರ್. ಕುಮುದಾ ಹಾಜರಿದ್ದರು.

ಜನರ ಸ್ವಾತಂತ್ರ್ಯಕ್ಕೆ ಮಾರಕ
ಕೊಡಗು: ಜಿಲ್ಲೆಯು ಗುಡ್ಡಗಾಡು ಪ್ರದೇಶ; ಇಲ್ಲಿನ ಜನರ ಸ್ವಾತಂತ್ರ್ಯದ ಬದುಕಿಗೆ ಕಸ್ತೂರಿ ರಂಗನ್ ವರದಿ ಮಾರಕ ಆಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೊಡಪಾಲು ಗಣಪತಿ ತಿಳಿಸಿದರು.

ಕೃಷಿಕರ ಭಾವನೆ ಕಡೆಗಣನೆ
ಕೊಡಗು: 
ಜಿಲ್ಲೆಯ ಕೃಷಿಕರು ಹಾಗೂ ಜನರ ಭಾವನೆಗಳನ್ನು ಪರಿಗಣಿಸಿದೆ ಕಸ್ತೂರಿ ರಂಗನ್‌ ವರದಿ ಅನುಷ್ಠಾನಕ್ಕೆ ತರುವುದು ಸರಿಯಲ್ಲ ಎಂದು  ತಾಲ್ಲೂಕು ಪಂಚಾಯಿತಿ ಸದಸ್ಯ ನಾಗೇಶ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT