ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದಕ್ಷಿಣ ಕಾಶಿ’ಯಲ್ಲಿ ‘ಕೈ’ ಬೇರು ಗಟ್ಟಿ

ಕಾಂಗ್ರೆಸ್‌ಗೆ ಭಾರಿ ಅಂತರದ ಗೆಲುವು: ಶ್ರೀನಿವಾಸಪ್ರಸಾದ್‌ ವಿರುದ್ಧ ಗೆದ್ದ ಕಳಲೆ ಕೇಶವಮೂರ್ತಿ
Last Updated 14 ಏಪ್ರಿಲ್ 2017, 8:26 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ರಾಜಕೀಯದ ದಿಕ್ಸೂಚಿ ಯೆಂದೇ ಪರಿಗಣಿಸಿದ್ದ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಈ ಮೂಲಕ ‘ದಕ್ಷಿಣ ಕಾಶಿಯಲ್ಲಿ’ ಯಲ್ಲಿ ‘ಕೈ’ ಬೇರು ಗಟ್ಟಿಗೊಂಡಿದೆ. ಗೆಲುವಿಗೆ ತೀವ್ರ ಪಯತ್ನ ನಡೆಸಿದ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕೇವಲ ಒಂದು ವರ್ಷದ ಚುಕ್ಕಾಣಿ ಗಾಗಿ ನಡೆದ ಉಪಚುನಾವಣೆಯಲ್ಲಿ ದಾಖಲೆ ಮತಗಳು ಚಲಾವಣೆ ಆಗಿದ್ದವು. ಅದರಲ್ಲಿ 86,212 ಮತ ಪಡೆದ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅವರ ಕೊರಳಿಗೆ ವಿಜಯದ ಹೂಮಾಲೆ ಬಿದ್ದಿದೆ. ಇದೇ ಮೊದಲ ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ.

ಈ ಕ್ಷೇತ್ರದಲ್ಲಿ ‘ಹ್ಯಾಟ್ರಿಕ್‌’ ಗೆಲುವಿನ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಅವರು ಪಡೆದಿದ್ದು ಕೇವಲ 64,878 ಮತ.
ಆಡಳಿತ ವಿರೋಧಿ ಅಲೆ, ಜಾತಿ ಲೆಕ್ಕಾಚಾರ, ಪ್ರಚಾರಕ್ಕೆ ನಾಯಕರ ದಂಡು, ವ್ಯಕ್ತಿಗತ ವರ್ಚಸ್ಸು, ಹಣ ಹರಿಸಿದ ಆರೋಪ, ಪ್ರತಿಷ್ಠೆ– ಸ್ವಾಭಿಮಾನದ ಸವಾಲುಗಳ ನಡು ವೆಯೇ ಕಾಂಗ್ರೆಸ್ ಗೆಲುವು ಕಂಡಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಹಾಗೂ ಇತರ ಮುಖಂಡರು ಭಾರಿ ಪ್ರಯತ್ನ ನಡೆಸಿದರೂ ಕಮಲ ಅರಳಲೇ ಇಲ್ಲ.

ಸಾಕಷ್ಟು ಕುತೂಹಲ ಕೆರಳಿಸಿದ್ದ ಉಪಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಾಗಬಹುದು ಎಂದೇ ನಿರೀಕ್ಷಿಸಲಾ ಗಿತ್ತು. ಯಾರೇ ಗೆದ್ದರೂ ಒಂದೆರಡು ಸಾವಿರ ಮತಗಳ ಅಂತರ ಇರಬಹುದು ಎಂದು ಅಂದಾಜಿಸಲಾಗಿತ್ತು.

ರಾಜಕೀಯ ಪಂಡಿತರೆಲ್ಲ ಇದೇ ಮಾದರಿಯ ವಿಶ್ಲೇಷಣೆ ನಡೆಸಿದ್ದರು. ಆದರೆ, ಎಲ್ಲಾ ನಿರೀಕ್ಷೆಗಳನ್ನೂ ಮೀರಿ 21,334 ಮತಗಳ ಗಣನೀಯ ಮುನ್ನಡೆಯೊಂದಿಗೆ ಕಾಂಗ್ರೆಸ್‌ ತನ್ನ ನೆಲೆ ಉಳಿಸಿಕೊಂಡಿದೆ.

ನಂಜನಗೂಡಿನ ಜೆಎಸ್‌ಎಸ್‌ ಕಾಲೇಜಿ ನಲ್ಲಿ ಪೊಲೀಸ್‌ ಸರ್ಪಗಾವಲಿನಲ್ಲಿ ಗುರುವಾರ ನಡೆದ ಮತ ಎಣಿಕೆಯಲ್ಲಿ ಮೊದಲ ಸುತ್ತಿನ ಲ್ಲಿಯೇ ಕೇಶವಮೂರ್ತಿ 2,101 ಮತಗಳ ಮುನ್ನಡೆ ಪಡೆದರು. ನಾಲ್ಕನೇ ಸುತ್ತಿನಲ್ಲಿ ಮುನ್ನಡೆ 10,000 ದಾಟಿತು.

ಬೆಳಿಗ್ಗೆಯೇ ತಮ್ಮ ಏಜೆಂಟ್‌ಗಳೊಂದಿಗೆ ಕೇಂದ್ರಕ್ಕೆ ಬಂದಿದ್ದ ಅವರ ಹಣೆಯ ನೆರಿಗೆಗಳಲ್ಲಿ ಖುಷಿ ಇಣುಕಿ ನೋಡುತ್ತಿತ್ತು. 6ರಿಂದ 8 ಸುತ್ತುಗಳಲ್ಲಿ ಮುನ್ನಡೆ ತುಸು ಕುಸಿದಾಗ ಅವರ ಮೊಗದಲ್ಲಿ ಆತಂಕ ಎದ್ದು ಕಾಣಿಸಿತು.

ಪಟ್ಟಣ ಪ್ರದೇಶದ ಮತ ಎಣಿಕೆ ವೇಳೆ ಮುನ್ನಡೆ ಅಂತರ ಹೆಚ್ಚಿತು. ಗ್ರಾಮಾಂತರದ ಮತದಾರರೂ ಕೈಹಿಡಿದರು. ಅಷ್ಟರಲ್ಲಿ ಕಾಂಗ್ರೆಸ್‌ ಪಾಳಯದಲ್ಲಿ ವಿಜಯೋತ್ಸವದ ವಾತಾವರಣ ನೆಲೆಸಿದ್ದರೆ, ಬಿಜೆಪಿ ಗೆಲುವಿನ ಆಸೆ ಕೈಚೆಲ್ಲಿತು.

ಪ್ರಸಾದ್‌ ಅವರು ಮತ ಎಣಿಕೆ ಕೇಂದ್ರಕ್ಕೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸಿ ದ್ದರು. ಕೊನೆಯ ಹಾಗೂ 17ನೇ ಸುತ್ತಿನ ಎಣಿಕೆಯ ಬಳಿಕ ಹೊರಗೆ ಬಂದ ಕೇಶವ ಮೂರ್ತಿ ಕಾರ್ಯಕರ್ತರತ್ತ ಕೈಬೀಸಿ ಸಂಭ್ರಮಿ ಸಿದರು. ಚುನಾವಣಾಧಿಕಾರಿ ಜಿ.ಜಗದೀಶ್‌ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿದರು. 

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದಾಗಿ ನಿಂದ ಸ್ವಾಭಿಮಾನದ ಹೆಸರಿನಲ್ಲಿ ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದ ಶ್ರೀನಿವಾಸಪ್ರಸಾದ್‌ ಅವರನ್ನು ಕ್ಷೇತ್ರದ ಮತದಾರರು ಕೈಹಿಡಿಯಲಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ನಾಲ್ಕೈದು ತಿಂಗಳಲ್ಲಿ ಕಾಂಗ್ರೆಸ್‌ ಕೈಗೊಂಡ ಅಭಿವೃದ್ಧಿ ಕಾಮಗಾರಿ ‘ಕೈ’ ಹಿಡಿದಿದೆ.

ಕೇಶವಮೂರ್ತಿ ಅವರು ಪ್ರಚಾರಕ್ಕೆ ಹೋದ ಕಡೆಯೆಲ್ಲಾ, ‘ಈ ಊರಿನ ಮಗ ನಾನು. ಎರಡೂ ಬಾರಿ ನನ್ನನ್ನು ಸೋಲಿಸಿ ದ್ದೀರಿ. ಒಂದು ವರ್ಷದ ಮಟ್ಟಿಗೆ ಮತ ನೀಡಿ. ನಿಮ್ಮ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ಬಾರಿ ಸೋಲಿಸಿಬಿಡಿ’ ಎಂದು ಕೋರಿದ್ದರು.

ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ಭರ್ಜರಿಯಾಗಿಯೇ ಪ್ರಚಾರ ನಡೆಸಿದ್ದವು. ಪ್ರಮುಖವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿ.ಎಸ್‌.ಯಡಿಯೂರಪ್ಪ ಎರಡೂ ಕ್ಷೇತ್ರಗಳಲ್ಲಿ ಸುತ್ತಾಡಿ ಮತಯಾಚಿಸಿದ್ದರು. ಕಾಂಗ್ರೆಸ್‌ನ ಡಜನ್ ಗಟ್ಟಲೆ ಸಚಿವರು ಪ್ರಚಾರ ನಡೆಸಿದ್ದರು. ಬಿಜೆಪಿ ನಾಯಕರೂ ಕಾಂಗ್ರೆಸ್‌ಗಿಂತ ಕಡಿಮೆ ಇಲ್ಲವೆಂಬಂತೆ ಪ್ರಚಾರ ಕೈಗೊಂಡಿದ್ದರು. ಎರಡೂ ಕ್ಷೇತ್ರಗಳಲ್ಲಿ ದಾಖಲೆಯ ಮತದಾನವಾಗಿತ್ತು.

ಕಾಂಗ್ರೆಸ್‌ನಲ್ಲಿದ್ದ ಪ್ರಸಾದ್‌ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರೆ, ಜೆಡಿಎಸ್‌ನಲ್ಲಿದ್ದ ಕೇಶವಮೂರ್ತಿ ಅವರು ಕಾಂಗ್ರೆಸ್‌ ಸೇರಿದ್ದರು. ಕ್ಷೇತ್ರಕ್ಕೆ ಹಳಬರಾದರೂ ಪಕ್ಷಗಳಿಗೆ ಹೊಸಬರಾಗಿದ್ದರು. ಕೇಶವಮೂರ್ತಿ ಅವರ ವಿಜಯದೊಂದಿಗೆ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಡೆದ ಮೂರೂ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಂತಾಗಿದೆ.

21 ಸಾವಿರ ಅಂತರದ ಗೆಲುವು ಕಾಂಗ್ರೆಸ್‌ ನಾಯಕರನ್ನೇ ಅಚ್ಚರಿಯಲ್ಲಿ ಮುಳುಗಿಸಿದೆ. ‘ಯಾರೂ ಇಷ್ಟೊಂದು ಅಂತರದ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಕ್ಷೇತ್ರ ಎಲ್ಲಾ ಗ್ರಾಮಗಳಲ್ಲಿ ಸಿಗುವ ಮತ, ಜಾತಿವಾರು ಮತ, ಪ್ರಚಾರ ವೇಳೆ ಲಭಿಸಿದ ಪ್ರತಿಕ್ರಿಯೆ ಗಮನಿಸಿ 2–3 ಸಾವಿರ ಅಂತರ ಬರಬಹುದು ಎಂದು ಪಕ್ಷದ ಗೌಪ್ಯ ಸಭೆಗಳಲ್ಲಿ ಅಂದಾಜಿಸಲಾಗಿತ್ತು. ಈಗ ಈ ಪರಿ ಮುನ್ನಡೆ ಲಭಿಸಿರುವುದು ವಿಸ್ಮಯ ಮೂಡಿಸಿದೆ’ ಎಂದು ಕಾಂಗ್ರೆಸ್‌ನ ಸ್ಥಳೀಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೇಶವಮೂರ್ತಿ ಸಂಬಂಧಿಯೂ ಆಗಿರುವ ಸಂಸದ ಆರ್‌. ಧ್ರುವನಾರಾಯಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ಅವರು ಮನೆಮನೆ ಗಳಿಗೆ ಭೇಟಿ ನೀಡಿ ಮತಯಾಚಿಸಿದ್ದರು. ಬಹುತೇಕ ಸಂದರ್ಭಗಳಲ್ಲಿ ಈ ಮೂವರು ಒಟ್ಟಿಗೆ ಪ್ರಚಾರ ಕಣದಲ್ಲಿರುತ್ತಿದ್ದರು. 

ಆರಂಭದಲ್ಲಿ ತುಸು ಅಸಮಾಧಾನ ಹೊಂದಿದ್ದ ಮಹದೇವಪ್ಪ ಅವರು ಮನ ವೊಲಿಕೆ ಬಳಿಕ 30 ದಿನ ಕ್ಷೇತ್ರವಿಡೀ ತಿರುಗಾ ಡಿದರು. ಮುಖ್ಯಮಂತ್ರಿ ಅಖಾಡಕ್ಕಿಳಿದ ಬಳಿಕ ಚಿತ್ರಣವೇ ಬದಲಾಯಿತು.

ಅಂಚೆ ಮತ ಇಲ್ಲ: ಉಪ ಚುನಾವಣೆಯ ಮತದಾನ ಕರ್ತವ್ಯಕ್ಕೆ ಸಂಪೂರ್ಣವಾಗಿ ಕ್ಷೇತ್ರದ ಹೊರಗಿನ ಅಧಿಕಾರಿ ಗಳು ಹಾಗೂ ಸಿಬ್ಬಂದಿ ನಿಯೋಜಿಸಿದ್ದರಿಂದ ಅಂಚೆ ಮತ ಚಲಾವಣೆ ಆಗಿಲ್ಲ. ಹೀಗಾಗಿ, ನೇರವಾಗಿ ಮಂತ್ರಯಂತ್ರಗಳ ಮತ ಎಣಿಕೆ ನಡೆಯಿತು. ಎಂಟು ಸೇವಾ ಮತದಾರರಿಗೆ ಅಂಚೆ ಮತ ಕಳುಹಿಸಲಾಗಿತ್ತು. ಆದರೆ, ವಿಳಾಸದಲ್ಲಿ ಅವರ ಇಲ್ಲದೆ ತಿರಸ್ಕೃತಗೊಂಡ ಪತ್ರಗಳು ವಾಪಸ್‌ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT