ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹನ್‌ಕುಮಾರಿ ‘ಕೈ’ ಹಿಡಿದ ಅನುಕಂಪ

ಕ್ಷೇತ್ರದಲ್ಲಿ ಮತ್ತೆ ಮೆರೆದ ಕುಟುಂಬ ರಾಜಕಾರಣ
Last Updated 14 ಏಪ್ರಿಲ್ 2017, 8:38 IST
ಅಕ್ಷರ ಗಾತ್ರ

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಅನುಕಂಪದ ಅಲೆಯು ಕಾಂಗ್ರೆಸ್‌ ಅಭ್ಯರ್ಥಿ ಎಂ.ಸಿ. ಮೋಹನ್‌ಕುಮಾರಿ ಅವರ ‘ಕೈ’ ಹಿಡಿದಿದೆ.

ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್‌ ಆಗಿದ್ದ ಕೆ.ಎಸ್‌. ನಾಗರತ್ನಮ್ಮ ಅವರ ಬಳಿಕ ಕ್ಷೇತ್ರದಲ್ಲಿ ಜಯಗಳಿಸಿದ ಎರಡನೇ ಮಹಿಳೆ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಜತೆಗೆ, ಅವರ ಗೆಲುವು ಕ್ಷೇತ್ರದಲ್ಲಿ ಮತ್ತೆ ಕುಟುಂಬ ರಾಜಕಾರಣದ ಅಧಿಪತ್ಯಕ್ಕೆ ಮುನ್ನುಡಿ ಬರೆದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ಪ್ರತಿಷ್ಠೆಯನ್ನು ಈ ಉಪ ಚುನಾವಣೆಯು ಸವಾಲಿಗೊಡ್ಡಿತ್ತು. ಕಮಲ ಪಾಳಯದ ವರಿಷ್ಠರ ಜಾತಿಸೂತ್ರದ ಲೆಕ್ಕಾಚಾರ ಬುಡಮೇಲಾಗಿದೆ. ಯಡಿಯೂರಪ್ಪ ಅವರ ತಂತ್ರಗಾರಿಕೆಯು ಬಿಜೆಪಿಗೆ ಫಲ ತಂದುಕೊಟ್ಟಿಲ್ಲ.

ಉಪ ಚುನಾವಣೆಯು ಘೋಷಣೆಯಾದ ದಿನದಿಂದಲೂ ಕಾಂಗ್ರೆಸ್‌ ಮತ್ತು ಬಿಜೆಪಿಯ ವರಿಷ್ಠರು ಅಬ್ಬರದ ಪ್ರಚಾರ ನಡೆಸಿದ್ದರು. ಜಾತಿ ಲೆಕ್ಕಾಚಾರ, ವ್ಯಕ್ತಿಗತ ನೆಲೆಯ ಆರೋಪ ಮತ್ತು ಪ್ರತ್ಯಾರೋಪ ನಡೆದಿತ್ತು. ಕೊನೆಯಲ್ಲಿ ಕ್ಷೇತ್ರದ ವ್ಯಾಪ್ತಿ ಹರಿದ ಹಣದ ಹೊಳೆಯು ಪ್ರಜ್ಞಾವಂತ ಮತದಾರರಲ್ಲಿ ಬೇಸರ ಮೂಡಿಸಿತ್ತು.

ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿದ್ದಾರೆ. ಆ ನಂತರದ ನಿರ್ಣಾಯಕ ಸ್ಥಾನದಲ್ಲಿ ಪರಿಶಿಷ್ಟ ಜಾತಿಯ ‘ಬಲಗೈ’ ಮತದಾರರ ಸಂಖ್ಯೆ ಹೆಚ್ಚಿದೆ. ಯಡಿಯೂರಪ್ಪ ಅವರು ಪ್ರಚಾರದ ಮುಂದಾಳತ್ವವಹಿಸಿದ್ದ ಪರಿಣಾಮ ಕ್ಷೇತ್ರದಲ್ಲಿರುವ ಮುಕ್ಕಾಲು ಭಾಗದಷ್ಟು ಲಿಂಗಾಯತ ಮತದಾರರು ಬಿಜೆಪಿಯತ್ತ ವಾಲುತ್ತಾರೆಂಬ ನಿರೀಕ್ಷೆ ಗರಿಗೆದರಿತ್ತು.

ಜತೆಗೆ, ವಿ. ಶ್ರೀನಿವಾಸಪ್ರಸಾದ್‌ ಅವರು ಬಿಜೆಪಿಗೆ ಸೇರ್ಪಡೆಗೊಂಡಿರುವುದರಿಂದ ‘ಬಲಗೈ’ ಮತಗಳು ಕಮಲ ಅರಳಲು ನೆರವಾಗಲಿವೆ ಎಂದು ಆ ಪಕ್ಷದ ವರಿಷ್ಠರು ಅಂದಾಜಿಸಿದ್ದರು. ಆದರೆ, ಲಿಂಗಾಯತ– ಪರಿಶಿಷ್ಟ ಜಾತಿಯ ಸೂತ್ರ ಬಿಜೆಪಿಗೆ ವರದಾನವಾಗಿಲ್ಲ.

ಮಹದೇವಪ್ರಸಾದ್‌ ಅವರು ಲಿಂಗಾಯತ ಸಮುದಾಯದ ‘ಶೆಟ್ಟಿ’ ಒಳಪಂಗಡಕ್ಕೆ ಸೇರಿದ್ದಾರೆ. ಕ್ಷೇತ್ರದಲ್ಲಿ ಈ ಒಳಪಂಗಡದ ಮತದಾರರ ಸಂಖ್ಯೆ ಅತ್ಯಲ್ಪ. ಆದರೆ, ಉಳಿದ ಒಳ ಪಂಗಡಗಳ ಮೇಲೂ ಅವರ ರಾಜಕೀಯವಾಗಿ ಪ್ರಭಾವ ಬೀರಿದ್ದರು.

ಜತೆಗೆ, ಮೈಸೂರು ಭಾಗದ ಏಕೈಕ ಲಿಂಗಾಯತ ಶಾಸಕ, ಸಚಿವರಾಗಿದ್ದರು. ತಮ್ಮ ಸಮುದಾಯದೊಂದಿಗೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತದಾರರ ಮೇಲೂ ಹಿಡಿತ ಸಾಧಿಸಿದ್ದರು. ಇದು ಅವರ ಪತ್ನಿ ಮೋಹನ್‌ಕುಮಾರಿ ಅವರ ಗೆಲುವಿಗೆ ನೆರವಾಗಿದೆ.

ಮಹದೇವಪ್ರಸಾದ್‌ ಐದು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದಾರೆ. 23 ವರ್ಷದ ಅಧಿಕಾರಾವಧಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಂಥಹ ಜನಪರ ಕಾರ್ಯಕ್ರಮಗಳು ಮೋಹನ್‌ಕುಮಾರಿ ಅವರು ತನ್ನ ಪತಿಗಿಂತಲೂ ಗೆಲುವಿನ ಅಂತರ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ.

ಕಾಂಗ್ರೆಸ್‌ ಮತ ಬ್ಯಾಂಕ್‌ ಹೆಚ್ಚಳ
ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಮತಬ್ಯಾಂಕ್‌ ಹೆಚ್ಚಳವಾಗಿದೆ.2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಎಸ್‌. ಮಹದೇವಪ್ರಸಾದ್‌ ಅವರು 73,723 ಮತ ಪಡೆದಿದ್ದರು(ಶೇ 45.42).

ಉಪ ಚುನಾವಣೆಯಲ್ಲಿ ಮೋಹನ್‌ಕುಮಾರಿ ಅವರು 90,260 ಮತ ಪಡೆದಿದ್ದಾರೆ(ಶೇ 51.59). ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 6.17ರಷ್ಟು ಮತ ಪ್ರಮಾಣ ಹೆಚ್ಚಳವಾಗಿದೆ.

2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ನಿರಂಜನ್‌ಕುಮಾರ್‌ 66,048 (ಶೇ 40.69) ಮತಗಳಿಸಿದ್ದರು. ಉಪ ಚುನಾವಣೆಯಲ್ಲಿ 79,383 ಮತ ಪಡೆದಿದ್ದಾರೆ(ಶೇ 45.37). ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ 4.68ರಷ್ಟು ಮತ ಹೆಚ್ಚಳವಾಗಿದೆ. ಆದರೆ, ಗೆಲುವು ಅವರ ಕೈಹಿಡಿದಿಲ್ಲ.

ಕಾಂಗ್ರೆಸ್‌ ಕೋಟೆ ಸುಭದ್ರ: ಎಂ.ಸಿ. ಮೋಹನ್‌ಕುಮಾರಿ ಅವರ ಗೆಲುವಿನೊಂದಿಗೆ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್‌ನ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ಎಚ್.ಎಸ್. ಮಹದೇವಪ್ರಸಾದ್‌ ಅವರ ನಿಧನದಿಂದ ಕ್ಷೇತ್ರ ತೆರವಾಗಿತ್ತು. ಉಪ ಚುನಾವಣೆಯಲ್ಲಿ ಅವರ ಪತ್ನಿ ಮೋಹನ್‌ಕುಮಾರಿ ಅವರೇ ಜಯಗಳಿಸಿದ್ದಾರೆ. ಆ ಮೂಲಕ ಪಕ್ಷದ ಅಸ್ತಿತ್ವ ಉಳಿಸಿದಂತಾಗಿದೆ.

ಬಿಜೆಪಿಯು ಕ್ಷೇತ್ರದಲ್ಲಿ ಖಾತೆ ತೆರೆಯುವ ಹಂಬಲ ಹೊಂದಿತ್ತು. ಕಮಲ ಪಾಳಯದ ಆಸೆ ಕೈಗೂಡಿಲ್ಲ. 2008 ಮತ್ತು 2013ರ ಚುನಾವಣೆಯಲ್ಲಿ ಮಹದೇವಪ್ರಸಾದ್‌ ವಿರುದ್ಧವೇ ಸೋತಿದ್ದ ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ್‌ಕುಮಾರ್‌ ಅವರಿಗೆ ಉಪ ಚುನಾವಣೆಯು ಅಗ್ನಿಪರೀಕ್ಷೆಯಾಗಿತ್ತು. ಮೂರನೇ ಬಾರಿಗೆ ಅವರು ಸೋಲು ಕಂಡಿದ್ದಾರೆ.

ಉಪ ಚುನಾವಣೆಯನ್ನು ಮುಂದಿನ ವರ್ಷದ ವಿಧಾನಸಭೆಗೆ ನಡೆಯುವ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿತ್ತು. ಹಾಗಾಗಿ, ಕಾಂಗ್ರೆಸ್‌ ಮತ್ತು ಬಿಜೆಪಿ ವರಿಷ್ಠರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದರು. ಕೊನೆಗೆ, ಕ್ಷೇತ್ರದ ಮತದಾರರು ಕಾಂಗ್ರೆಸ್‌ನ ಅಭ್ಯರ್ಥಿಯ ಕೈಹಿಡಿದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ 20 ಸಚಿವರು ಕ್ಷೇತ್ರದ ವ್ಯಾಪ್ತಿ ಪ್ರಚಾರ ನಡೆಸಿದ್ದರು. ಇದು ಮೋಹನ್‌ಕುಮಾರಿ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಜತೆಗೆ, ಸಚಿವರಾದ ಡಿ.ಕೆ. ಶಿವಕುಮಾರ್‌, ಯು.ಟಿ. ಖಾದರ್‌ ಅವರು ಕ್ಷೇತ್ರದಲ್ಲಿಯೇ ವಾಸ್ತವ್ಯ ಹೂಡಿ ಚುನಾವಣಾ ತಂತ್ರಗಾರಿಕೆ ನಡೆಸಿದ್ದರು. ಆ ಪಕ್ಷದ ಸಂಸದರು, ಶಾಸಕರು ಮತ್ತು ಕಾರ್ಯಕರ್ತರ ಒಗ್ಗಟ್ಟು ಗೆಲುವು ತಂದುಕೊಟ್ಟಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರದ ಮುಂದಾಳತ್ವವಹಿಸಿದ್ದರು. ಮುಖಂಡರಾದ ಅರವಿಂದ ಲಿಂಬಾವಳಿ, ರವಿಕುಮಾರ್‌, ತೇಜಸ್ವಿನಿಗೌಡ ಅವರು ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಪ್ರಚಾರ ನಡೆಸಿದ್ದರು. ಆದರೆ, ಮತದಾರ ಪ್ರಭುಗಳು ಬಿಜೆಪಿಗೆ ಒಲವು ತೋರಿಲ್ಲ.

45 ಅಂಚೆ ಮತಪತ್ರ ತಿರಸ್ಕೃತ
 ಉಪ ಚುನಾವಣೆಯಲ್ಲಿ 49 ಅಂಚೆ ಮತಪತ್ರಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 45 ಮತಪತ್ರಗಳು ತಿರಸ್ಕೃತಗೊಂಡಿವೆ. ಚಲಾವಣೆಗೊಂಡಿರುವ 4 ಅಂಚೆ ಮತಗಳಲ್ಲಿ ಮೋಹನ್‌ಕುಮಾರಿ ಮತ್ತು ನಿರಂಜನ್‌ಕುಮಾರ್‌ ತಲಾ 2 ಮತ ಪಡೆದಿದ್ದಾರೆ.

ತೊಂಡವಾಡಿ; ಅಕ್ರಮ ಮದ್ಯವಶ
ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿಸಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ತೊಂಡವಾಡಿ ಗ್ರಾಮದಲ್ಲಿ ರಾಜು ಎಂಬುವವರಿಂದ 900ಮಿ.ಲೀ, ಮಡಹಳ್ಳಿ ಗ್ರಾಮದಲ್ಲಿ ಶಂಕರ್ ಎಂಬುವವರಿಂದ 810ಮಿ.ಲೀ, ಹೀರಿಕಾಟಿ ಗ್ರಾಮದ ಪುಟ್ಟೇಗೌಡ ಎಂಬುವವರಿಂದ 0.720ಮಿ.ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.

ಚಾಮರಾಜನಗರ ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ಕೃಷ್ಣ, ರಂಗಶೆಟ್ಟಿ ಎಂಬುವವರಿಂದ ತಲಾ 0.360ಮಿ.ಲೀ, ಕುರುಬರಹುಂಡಿ ಗ್ರಾಮದ ರಾಜೇಂದ್ರ ಎಂಬುವವರಿಂದ 8.640ಲೀ, ಚಾಮರಾಜನಗರ ಪಟ್ಟಣದಲ್ಲಿ ಮಹೇಶ್, ಸಿದ್ದಪ್ಪ, ಮಂಜು, ನಾಗರಾಜು ಎಂಬುವವರಿಂದ ತಲಾ 0.360ಮಿ.ಲೀ. ಮದ್ಯ ವಶಪಡಿಸಿಕೊಂಡ ದೂರು ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಳಿನ್‌ಅತುಲ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT